Select Your Language

Notifications

webdunia
webdunia
webdunia
webdunia

ತಂಜಾವೂರಿನ ಬೃಹದೀಶ್ವರ ದೇವಾಲಯ

ತಂಜಾವೂರಿನ ಬೃಹದೀಶ್ವರ ದೇವಾಲಯ

ಕೆ.ಅಯ್ಯನಾಥನ್

WD
ಕಾವೇರಿ ನದಿಯ ತಟದಲ್ಲಿ ಪರ್ವತದಂತೆ ನಿಂತಿರುವ ಇದು ತಂಜಾವೂರಿನ ಬೃಹದೀಶ್ವರ ದೇವಾಲಯ. ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ, 216 ಅಡಿ ಎತ್ತರವಿರುವ ಈ ದೇವಾಲಯವನ್ನು ಅಡಿಪಾಯ ಇಲ್ಲದೆ ಕಟ್ಟಲಾಗಿದೆ.

ನೀವು ನಂಬುವಿರಾ? ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದಾಗಿರುವ ಈ ದೇವಾಲಯವು ಅದರ ಆಧ್ಯಾತ್ಮಿಕತೆ, ಕಾರಣಿಕದೊಂದಿಗೆ, ನಮ್ಮ ಹಿರಿಯರ ವಾಸ್ತುಶಿಲ್ಪ ಹಾಗೂ ಚಾತುರ್ಯದಿಂದಲೂ ದಂತಕತೆಯಾಗಿದೆ. ಕ್ರಿ.ಶ 1003ರಿಂದ 1009ರ ತನಕ ರಾಜ್ಯಭಾರ ಮಾಡಿರುವ ಚೋಳ ದೊರೆ ರಾಜರಾಜ ಕಟ್ಟಿಸಿದ ಈ ಬೃಹತ್ ದೇವಾಲಯ ಇಂದಿಗೂ ಉಳಿದಿದೆ. ಈ ದೇವಾಲಯದ ಒಳಗೆ ಪ್ರವೇಶಿಸುತ್ತಿರುವಂತೆ ಗರ್ಭಗುಡಿಯಲ್ಲಿರುವ 13 ಅಡಿ ಎತ್ತರದ ಶಿವಲಿಂಗವು ಐದು ತಲೆಯ ಸರ್ಪದ ನೆರಳಿನಲ್ಲಿ ಕಂಗೊಳಿಸುತ್ತಿರುವುದು ಕಾಣಿಸುತ್ತದೆ.

ಗರ್ಭಗುಡಿಯ ಸುತ್ತಲೂ, ಆರು ಅಡಿ ಅಂತರದಲ್ಲಿ ಎರಡು ದಪ್ಪನಾದ ಗೋಡೆಗಳಿವೆ. ಹೊರಗಿನ ಗೊಡೆಯ ತುದಿಯಲ್ಲಿ ವಿಮಾನ ಎಂದು ಕರೆಯಲಾಗುವ ಗೋಪುರವನ್ನು ರಚಿಸಲಾಗಿದೆ. ಒಂದರ ಮೇಲೊಂದರಂತೆ ಕಿರಿದಾಗುತ್ತಾ ಹೋಗುವ ವಿನ್ಯಾಸವು ಅತ್ಯಂತ ಸುಂದರ, ಮನಮೋಹಕವಾಗಿದೆ. ಇಂತಹ 14 ಅಂತಸ್ತುಗಳ ಈ ವಿನ್ಯಾಸದ ಒಳಗಡೆ ಟೊಳ್ಳಾಗಿದೆ.

ಇದು ಈ ರಚನೆಯ ಸೌಂದರ್ಯ. ಗೋಪುರದ ಮೇಲ್ಭಾಗ 216 ಅಡಿ ಎತ್ತರ ಟೊಳ್ಳಾಗಿದೆ. ಅಡಿಯಲ್ಲಿ ಅಗಲವಾಗಿದ್ದು, ಮೇಲೆಮೇಲೇರುತ್ತಾ ಅಗಲ ಕಿರಿದಾಗುತ್ತದೆ. 14ನೆ ಅಂತಸ್ತಿನ ಮೇಲೆ ಒಂದು ಬೃಹದಾಕಾರದ ಗುಮ್ಮಟವಿದೆ. 88 ಟನ್ನು ತೂಗುವ ಗುಮ್ಮಟ ಈ ಸಂಕೀರ್ಣವನ್ನು ಸಮತೋಲನದಿಂದ ಹಿಡಿದಿರಿಸಿದೆ. ಇದು ಚೋಳರ ಶಿಲ್ಪಕಲಾ ಚಾತುರ್ಯವಾಗಿದೆ.
webdunia
WD
ಈ ಟೊಳ್ಳು ವಿನ್ಯಾಸವು ಶಿಲ್ಪಕಲಾ ಸೊಬಗು ಮಾತ್ರವಲ್ಲ, ಇದು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನೂ ಹೊಂದಿದೆ. ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸುತ್ತೇವೆ. ಆಧ್ಯಾತ್ಮಿಕವಾಗಿ ಇದನ್ನು ಭಗವಂತನ 'ಅರೂಪ' ಅಂದರೆ ರೂಪವಿಲ್ಲದ ಆರಾಧನೆ ಎಂದು ಕರೆಯಲಾಗುತ್ತದೆ. ದೇವರು ಎಲ್ಲೆಲ್ಲೂ ಇದ್ದಾನೆ ಮತ್ತು ಬ್ರಹ್ಮಾಂಡದಲ್ಲಿ ಇರುವುದರಲ್ಲೆಲ್ಲ ನೆಲೆಸಿದ್ದಾನೆ ಎಂಬುದು ನಂಬುಗೆ.

ಇಂತಹ ರಚನೆ ಇಂದಿಗೂ ಸಾಧ್ಯವೇ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ, ಉತ್ತರ ಹೌದು. ಕನ್ಯಾಕುಮಾರಿಯಲ್ಲಿರುವ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನೂ ಇದೇ ವಾಸ್ತುಶಿಲ್ಪ ಕಲೆಯಾಧಾರದಲ್ಲಿ ನಿರ್ಮಿಸಲಾಗಿದೆ. ಈ ಮೂರ್ತಿಯೂ ಮಧ್ಯಭಾಗದಲ್ಲಿ ಟೊಳ್ಳಾಗಿದ್ದು ತಳಪಾಯ ರಹಿತವಾಗಿದೆ.

ಈ ವಿನ್ಯಾಸದಲ್ಲೂ ಕಲ್ಲುಗಳನ್ನು ಒಂದರ ಮೇಲೆ ಒಂದನ್ನಿರಿಸಲಾಗಿದ್ದು ತುತ್ತ ತುದಿಯಲ್ಲಿ ದೊಡ್ಡ ಕಲ್ಲನ್ನಿರಿಸಲಾಗಿದೆ. ತಿರುವಳ್ಳುವರ್ ಅವರ ಮುಖವನ್ನು ಬೃಹತ್ ಕಲ್ಲಿನ ಮೂಲಕ ಜೋಡಿಸಿದ್ದು, ಇದು ಇಡಿಯ ಪ್ರತಿಮೆಯನ್ನು ಸಮತೋಲನದಲ್ಲಿರಿಸಿದೆ. 2004ರಲ್ಲಿ ಈ ಪ್ರತಿಮೆಯ ಎತ್ತರಕ್ಕೆ ಸುನಾಮಿ ಅಪ್ಪಳಿಸಿದ್ದರೂ ಪ್ರತಿಮೆಗೆ ಏನೂ ಆಗಿಲ್ಲ!

ಸಾಮಾನ್ಯವಾಗಿ ದಕ್ಷಿಣ ಭಾರತದ ದೇವಾಲಯಗಳು ರಾಜಗೋಪುರವನ್ನು ಹೊಂದಿರುತ್ತದೆ. ಮತ್ತು ಗರ್ಭಗುಡಿಯ ಮೇಲಿರುವ ವಿಮಾನವು ಚಿಕ್ಕ ಗುಮ್ಮಟವಾಗಿರುತ್ತದೆ. ಆದರೆ ತಂಜಾವೂರಿನ ವಿಶ್ವಪ್ರಸಿದ್ಧ ಬೃಹದೀಶ್ವರ ಅಥವಾ ಪೆರಿಯ (ದೊಡ್ಡ) ದೇವಾಲಯದಲ್ಲಿ ವಿಮಾನವನ್ನು ಅತ್ಯಂತ ಎತ್ತರದಲ್ಲಿ ನಿರ್ಮಿಸಲಾಗಿರುವುದು ಇದರ ವಿಶೇಷ.
webdunia
WD


ಭಾರತವು ದೇವಾಲಯ ಮತ್ತು ಕೋಟೆ ಕೊತ್ತಲಗಳಿಗೆ ಹೆಸರುವಾಸಿಯಾಗಿದೆ. ಆದರೆ ಈ ಬೃಹತ್ ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿರುವ ವಾಸ್ತುವಿನ್ಯಾಸವು ಎಲ್ಲಾ ಊಹೆಗಳನ್ನು ಮೀರಿದ್ದಾಗಿದೆ. ಈ ದೇವಾಲಯದಲ್ಲಿ 12 ಅಡಿ ಎತ್ತರ ಹಾಗೂ ಹತ್ತೊಂಬತ್ತೂವರೆ ಅಡಿ ಅಗಲದ ಏಕಶಿಲೆಯ ನಂದಿ ವಿಗ್ರಹವಿದೆ. ಇದನ್ನು 16ನೆ ಶತಮಾನದ ವಿಜಯನಗರ ಆಳ್ವಿಕೆ ಕಾಲದಲ್ಲಿ ಸ್ಥಾಪಿಸಲಾಗಿದೆ.

ಯುನೆಸ್ಕೋದ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿರುವ ಈ ದೇವಾಲಯದ ವಾಸ್ತು ವೈಭವದ ವಿಸ್ಮಯಕ್ಕೆ ನೀವೇನನ್ನುತ್ತೀರಿ?

Share this Story:

Follow Webdunia kannada