ಭಾರತದ ಆತ್ಮವು ಗ್ರಾಮಗಳಲ್ಲಿ ಅಡಗಿದೆ. ಗ್ರಾಮಗಳು ಮೇಳಗಳು ಅಥವಾ ಜಾತ್ರೆಗಳಿಗೆ ಸುಪ್ರಸಿದ್ಧವಾಗಿವೆ. ಮೇಳಗಳು ಸಾಮಾನ್ಯವಾಗಿ ಒಂದೇ ಸ್ವರೂಪದ್ದಾಗಿರುತ್ತದೆ. ಜನರು ಮೇಳಗಳಲ್ಲಿ ಖರೀದಿಸುವಿಕೆ ಮತ್ತು ವಿವಿಧ ಬಗೆಯ ಮನರಂಜನೆಗಳಲ್ಲಿ ಸಂತೋಷಪಡುತ್ತಾರೆ. ಆದರೆ ಕೆಲವು ಮೇಳಗಳು ಮಾಮೂಲಿ ಮೇಳಗಳಿಗಿಂತ ಭಿನ್ನವಾಗಿರುತ್ತದೆ ಮತ್ತು ಜನರ ಗಮನವನ್ನು ಅಪಾರವಾಗಿ ಸೆಳೆಯುತ್ತದೆ.ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈ ಪ್ರಸಂಗದಲ್ಲಿ ನಾವು ಮೇಳಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಎಲ್ಲ ವಿನೋದಗಳ ನಡುವೆ ಭೂತಗಳು ಸಹ ಗೋಚರಿಸುವ ಮೇಳಕ್ಕೆ ನಿಮ್ಮನ್ನು ಕರೆದೊಯ್ಯಲು ಇಚ್ಛಿಸುತ್ತೇವೆ. ನಂಬುವುದು ಕಷ್ಟವೆನಿಸುತ್ತಿದೆಯೇ...ಆದರೆ ಇದು ನಿಜ. ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಚೋರವಾಡ ಗ್ರಾಮದಲ್ಲಿ ಇಂತಹ ಒಂದು ಮೇಳವನ್ನು ಆಯೋಜಿಸಲಾಗುತ್ತದೆ. ಪ್ರತಿವರ್ಷ ದತ್ತಜಯಂತಿಯ ದಿವಸ ಭೂತಗಳ ಮೇಳ ಇಲ್ಲಿ ಆಯೋಜಿಸಲಾಗುತ್ತದೆ. ದತ್ತಜಯಂತಿಯ ದಿವಸ ಪ್ರೇತಾತ್ಮದ ಪ್ರಭಾವಕ್ಕೆ ಒಳಗಾದ ಜನರು ಸ್ವಯಂಪ್ರೇರಿತರಾಗಿ ಈ ಸ್ಥಳಕ್ಕೆ ಆಗಮಿಸುತ್ತಾರೆಂಬ ನಂಬಿಕೆ ಬೇರೂರಿದೆ. ಈ ಜನರು ಇಲ್ಲಿಗೆ ಭೇಟಿ ನೀಡಿದ ಕೂಡಲೇ ಅವರನ್ನು ಹಿಡಿದ ಭೂತ ಬಿಟ್ಟುಹೋಗುತ್ತದೆ ಎಂದು ನಂಬಲಾಗಿದೆ.
ಈ ವಿಷಯವನ್ನು ಕೇಳಿದ ನಾವು ಜಲಗಾಂವ್‌ನ ಚೋರವಾಡ ಗ್ರಾಮದತ್ತ ಪ್ರಯಾಣ ಆರಂಭಿಸಿದೆವು. ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಕೆಲವು ಜನರ ಗುಂಪುಗಳು ನಮ್ಮ ಕಣ್ಣಿಗೆ ಬಿದ್ದವು. ಪ್ರತಿಯೊಂದು ಗುಂಪಿನಲ್ಲಿ ರೋಗಗ್ರಸ್ಥರಂತೆ ಕಾಣಿಸಿದ ಒಬ್ಬಿಬ್ಬರು ಜನರಿದ್ದರು. ನಾವು ಗುಂಪಿನ ಜನರನ್ನು ಮಾತಿಗೆಳೆದಾಗ ರೋಗಗ್ರಸ್ಥರು ಪ್ರೇತಾತ್ಮಗಳ ಪ್ರಭಾವಕ್ಕೆ ಒಳಗಾಗಿದ್ದು ಅವರನ್ನು ಜಾತ್ರೆಗೆ ಕರೆದೊಯ್ಯುತ್ತಿರುವುದಾಗಿ ಅವರ ಜತೆಗಾರರು ಉತ್ತರಿಸಿದರು.
ಇದು ಕೂಡ ಎಂದಿನಂತೆ ಮನರಂಜನೆಯ ಮೇಳವಾಗಿದ್ದು, ಆಹಾರದ ಮಳಿಗೆಗಳು, ದೊಡ್ಡ ಗಾತ್ರದ ಉಯ್ಯಾಲೆಗಳಿದ್ದವು ಮತ್ತು ಜನರು ಅತ್ತಿಂದಿತ್ತ ತಿರುಗಾಡುತ್ತಿದ್ದರು. ಆದರೆ ಕೆಲವು ಜನರು ಸ್ವತಃ ಹಿಂಸಿಸಿಕೊಂಡು, ಉದ್ವೇಗದಿಂದ ಕಂಪಿಸುತ್ತಿರುವ ದೃಶ್ಯವನ್ನು ಕಂಡು ನಾವು ಸ್ಥಂಭೀಭೂತರಾದೆವು. ಅವರು ಉನ್ಮಾದತೆಗೊಳಗಾದವರಂತೆ ಚೀರುತ್ತಿದ್ದರು. ಕೆಲವರು ತಮ್ಮಷ್ಟಕ್ಕೆ ತಾವೇ ಬಡಬಡಿಸುತ್ತಿದ್ದರು. ಸಮಯ ಸರಿಯುತ್ತಿದ್ದಂತೆ ಅವರ ಉನ್ಮತ್ತ ವರ್ತನೆ ಹೆಚ್ಚುತ್ತಾ ಪರಾಕಾಷ್ಠೆಯ ಸ್ಥಿತಿಯನ್ನು ಮುಟ್ಟಿ, ವಿಚಿತ್ರರೀತಿಯಲ್ಲಿ ಕೂಗಲಾರಂಭಿಸಿದರು. ಸ್ವಲ್ಪ ಸಮಯ ಕಳೆದ ಬಳಿಕ ಈ ಜನರು ಸಮತಟ್ಟಾದ ವೇದಿಕೆಯಲ್ಲಿ ತಲೆಯನ್ನು ತಗ್ಗಿಸಿ ಪ್ರಾರ್ಥಿಸುವ ದೃಶ್ಯ ಕಂಡುಬಂತು. ಈ ಘಟನೆ ಬಳಿಕ ಈ ಜನರ ವಿಚಿತ್ರ ವರ್ತನೆ ಕ್ಷೀಣಿಸುತ್ತಾ ಹೋಗಿ ಸಹಜ ಸ್ಥಿತಿಗೆ ತಲುಪಿದರು.ಈ ಜನರಿಗೆ ಪ್ರೇತಹಿಡಿದಿದ್ದು, ಕೊನೆಗೂ ಪ್ರೇತಬಾಧೆಯಿಂದ ಮುಕ್ತಿ ಸಿಕ್ಕಿತೆಂದು ಸುತ್ತಮುತ್ತಲೂ ನೆರೆದಿದ್ದ ಜನರ ನಂಬಿಕೆಯಾಗಿತ್ತು. ನಾವು ಮೇಳದಲ್ಲಿ ಎಲ್ಲ ಕಡೆ ತಿರುಗಾಡಿದಾಗ ಪ್ರೇತಬಾಧೆಯಿಂದ ನರಳುತ್ತಿದ್ದ ಅನೇಕ ಮಂದಿ ಕಣ್ಣಿಗೆ ಗೋಚರಿಸಿದರು. ನಾವು ಗಮನಿಸಿದ ಒಂದು ಮಹತ್ವದ ಸತ್ಯವೇನೆಂದರೆ ಪ್ರೇತಬಾಧೆಗೆ ಒಳಗಾದವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಿನದಾಗಿತ್ತು. ನಾವು ಕೆಲವು ಜನರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಬಳಿಕ ಇದೊಂದು ಮಾನಸಿಕ ಅಸ್ವಸ್ಥತೆಯ ಸಂಕೇತ ಎಂಬ ಅಭಿಪ್ರಾಯವನ್ನು ತಳೆದೆವು.
ಅಂತಹ ಜನರಿಗೆ ಮಾನಸಿಕ ಚಿಕಿತ್ಸೆ ನೀಡುವ ಜತೆಗೆ ಸಹಾನುಭೂತಿ ಮತ್ತು ಪ್ರೀತಿ ತೋರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟೆವು. ಆದರೆ ದೇವರನ್ನು ನಂಬುವಿರಾದರೆ ದೆವ್ವದ ಅಸ್ತಿತ್ವದ ಬಗ್ಗೆ ಕೂಡ ನೀವು ನಂಬಬೇಕು ಎಂದು ಅಲ್ಲಿ ಉಪಸ್ಥಿತರಿದ್ದ ಜನರು ನಮಗೆ ಬುದ್ಧಿ ಹೇಳಿದರು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಮಾನವನನ್ನು ಪ್ರೇತಾತ್ಮ ಆವರಿಸುವುದು ನಿಜವೋ, ಸುಳ್ಳೋ, ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇವೆ.