ಈಕೆ ಮೈಮೇಲೆ ಸಾಯಿಬಾಬಾ ಬರ್ತಾರಂತೆ!
Publish Date: Tue, 19 Aug 2008 (17:59 IST)
Updated Date: Tue, 19 Aug 2008 (17:59 IST)
ಸಾಯಿಬಾಬಾ ಅವರು ರೋಗಿಯೊಬ್ಬನ ದೇಹ ಪ್ರವೇಶಿಸಿ ನೋವು-ದುಃಖ ಶಮನ ಮಾಡುವ ಬಗ್ಗೆ ಕೇಳಿದ್ದೀರಾ? ಇದು ವಿಚಿತ್ರ ಅನಿಸಬಹುದು. ಯಾಕೆಂದರೆ ದೇವಿ ಮೈಮೇಲೆ ಬರುವುದು, ಭೂತಗಳು ಮೈಯನ್ನಾವರಿಸುವುದರ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲಿನದು ಸಾಯಿಬಾಬಾ ಅವರು ಶರೀರ ಪ್ರವೇಶಿಸುವ ಕಥನ.ಈ ಬಾರಿಯ ನೀವು ನಂಬುವಿರಾ ಸರಣಿಯಲ್ಲಿ ನಾವು ನಿಮ್ಮನ್ನು ಕರೆದೊಯ್ಯುತ್ತಿರುವುದು ಮಧ್ಯಪ್ರದೇಶದ ದೇವಾಸ್ ಎಂಬಲ್ಲಿಗೆ. ಇಲ್ಲಿನ ಸಾಯಿ ಮಂದಿರದಲ್ಲಿ ಸಾಯಿ ಬಾಬಾ ಅವರು ಆಶಾ ತುರ್ಕಾನೆ ಎಂಬ ಮಹಿಳೆಯ ಶರೀರ ಪ್ರವೇಶಿಸುತ್ತಾರಂತೆ. ಈಕೆ ಈ ಸಾಯಿ ಮಂದಿರದ ಅರ್ಚಕಿ ಇಂದುಮತಿ ಅವರ ಸೊಸೆ. ಈ ವಿಚಿತ್ರ ವಿದ್ಯಮಾನ ಕಳೆದ 15 ವರ್ಷಗಳಿಂದ ನಡೆಯುತ್ತಿದ್ದು, ಜನರ ನೋವು, ದುಃಖ ನಿವಾರಣೆಯಲ್ಲಿ ತೊಡಗಿದ್ದಾರಂತೆ.ಪ್ರತಿ ಗುರುವಾರ ಸಾಯಿಬಾಬಾ ಅವರು ಈ ಮಹಿಳೆಯ ದೇಹ ಪ್ರವೇಶಿಸುತ್ತಾರೆ. ಆಕೆಯ ಧ್ವನಿ ಬದಲಾಗುತ್ತದೆ ಮತ್ತು ಆಕೆಯ ಗಂಟಲಿನಿಂದ ಪುರುಷರ ಗಡುಸಾದ ಧ್ವನಿ ಹೊರಬರುತ್ತದೆ. ಆಕೆ ಧೂಮಪಾನವನ್ನೂ ಮಾಡಲಾರಂಭಿಸುತ್ತಾಳೆ ಮತ್ತು ಪುರುಷರಂತೆಯೇ ವರ್ತಿಸತೊಡಗುತ್ತಾಳೆ. ಆ ಬಳಿಕ, ಒಬ್ಬರಾದ ಬಳಿಕ ಮತ್ತೊಬ್ಬರಂತೆ, ಅಲ್ಲಿಗೆ ಬಂದವರ ಕಷ್ಟ ಸುಖಗಳಿಗೆ ಕಿವಿಯೊಡ್ಡುವ ಆಕೆ, ಪರಿಹಾರಗಳನ್ನೂ ಸೂಚಿಸುತ್ತಾಳೆ.
ಈ ಮಂದಿರಕ್ಕೆ ಆಗಾಗ್ಗೆ ಭೇಟಿ ನೀಡುವ ರಘುವೀರ್ ಅವರು ಹೇಳುವಂತೆ, ಅವರಿಗೆ ಸಾಯಿಬಾಬಾ ಮೇಲೆ ಅಪಾರ ಭಕ್ತಿ. ನೈಜ ಭಾವನೆಯಿಂದ ಯಾರೇ ಆದರೂ ಇಲ್ಲಿಗೆ ಬಂದರೆ ಅವರ ಇಚ್ಛೆಗಳೆಲ್ಲಾ ಈಡೇರುತ್ತವೆ ಎನ್ನುತ್ತಾರೆ ಅವರು. ಆದರೆ ಇದಕ್ಕೆ ಅತ್ಯಂತ ಮುಖ್ಯವಾಗಿ ಬೇಕಾದುದು ಎಂದರೆ ಸಾಯಿಬಾಬಾ ಮೇಲೆ ನೈಜ ಭಕ್ತಿ. 2005ರಲ್ಲೊಮ್ಮೆ ಆತ ಸೈಕಲಿನಲ್ಲಿ ಈ ಮಂದಿರಕ್ಕೆ ಬಂದಿದ್ದರಂತೆ. ಅವರ ಪ್ರಕಾರ, ಸಾಯಿ ಬಾಬಾ ಅವರದು ನಿಜವಾದ ಪವಾಡ.ಮತ್ತೊಬ್ಬ ಭಕ್ತರ ಪ್ರಕಾರ, ಕಳೆದ 10 ವರ್ಷಗಳಿಂದ ಸತತವಾಗಿ ಅವರು ಇಲ್ಲಿಗೆ ಬರುತ್ತಿದ್ದಾರೆ. ಈ ತಾಣವು ನಿಜಕ್ಕೂ ಮನಶ್ಶಾಂತಿ ನೀಡುತ್ತದೆ. ಈ ಸ್ಥಳಕ್ಕೆ ಬರುವ ಜನರಿಗೆ ಏನಾದರೂ ಲಾಭವಾಗುತ್ತದೆ ಎಂಬುದು ನಿಜ ಎನ್ನುತ್ತಾರವರು. ಇದೇ ಕಾರಣಕ್ಕೆ ನೂರಾರು ಭಕ್ತರು ಇಲ್ಲಿಗೆ ಬರುತ್ತಿರುತ್ತಾರೆ.
ಮಾನವೀಯತೆ ಬಗೆ ಸಾಯಿ ಬಾಬಾ ಹೊಂದಿದ್ದ ಅಪಾರ ಕಳಕಳಿ ವಿಶ್ವಪ್ರಸಿದ್ಧವಾದುದು ಮತ್ತು ಮಾನವರ ಏಳಿಗೆಗೆ ಅವರು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸಹೋದರತೆ, ಕೋಮು ಸೌಹಾರ್ದತೆ ಕುರಿತ ಅವರ ಬೋಧನೆಗಳು ಇಂದಿಗೂ ಪ್ರಸ್ತುತ. ಆದರೆ ಸಾಯಿ ಬಾಬಾ ಅವರು ಮತ್ತೊಬ್ಬರ ಶರೀರದಲ್ಲಿ ಬರುತ್ತಾರೆ ಎಂಬುದನ್ನು ನಂಬಬಹುದೇ? ನೀವೇನನ್ನುತ್ತೀರಿ?