ದೆವ್ವಬಾಧೆಯಿಂದ ಪೀಡಿತರಾಗಿರುವ ಮಹಿಳೆಯರು, ಈ ಮರ ಹತ್ತಿದರೆ ಅವರಿಂದ ಪೀಡೆ ದೂರವಾಗುತ್ತದೆ ಎಂಬುದು ಜನರ ನಂಬಿಕೆ. ಈ ವೃಕ್ಷವಿರುವುದು ಮುಸ್ಲಿಂ ಸಂತರೊಬ್ಬರ ಸಮಾಧಿ ಬಳಿ. ಇಲ್ಲಿನ ಬಾಬಾ ಅವರು ಕೆಸರು ನೀರಲ್ಲಿ ಸ್ನಾನ ಮಾಡುವಂತೆ ಮಹಿಳೆಯರಿಗೆ ಸೂಚಿಸುತ್ತಾರಂತೆ. ಈ ಕೊಳಚೆ ಸ್ನಾನದ ಬಳಿಕ ಅವರು ಮರ ಹತ್ತುತ್ತಾರೆ ಮತ್ತು ತಮ್ಮ ನೋವು-ದುಃಖ ವ್ಯಕ್ತಪಡಿಸಲು ಚಿತ್ರ ವಿಚಿತ್ರ ಸ್ವರಗಳನ್ನು ಹೊರಡಿಸುತ್ತಾರೆ.ಇಲ್ಲಿಗಾಗಮಿಸಿದ್ದ ಸಂತೋಷ್ ಎಂಬಾತನನ್ನು ಮಾತನಾಡಿಸಲಾಯಿತು. ತನಗಿರುವ ಸಮಸ್ಯೆಯನ್ನು ನಿವಾರಿಸಲು ವೈದ್ಯರು ವಿಫಲವಾದ ಹಿನ್ನೆಲೆಯಲ್ಲಿ ಆತ ಬಾಬಾ ಆಶೀರ್ವಾದ ಪಡೆಯಲೆಂದು ಇಲ್ಲಿಗೆ ಬಂದಿದ್ದಾನಂತೆ. ಬಾಬಾ ತಮ್ಮ ಸಮಸ್ಯೆಯನ್ನು ಆಲಿಸಿ, ತನ್ನನ್ನು ಆವರಿಸಿಕೊಂಡಿದ್ದ ಭೂತಭಾದೆಯನ್ನು ನಿವಾರಿಸಿದರಂತೆ.
ಸಾಮಾನ್ಯ ಮಹಿಳೆಯೊಬ್ಬಳಿಗೆ ಈ ಮರವೇರುವುದು ಅಷ್ಟು ಸುಲಭವಲ್ಲ. ಆದರೆ ಬಾಬಾರಿಂದ ಅನುಜ್ಞೆ ಪಡೆದು ಅವರು ಸುಲಭವಾಗಿ ಮರ ಹತ್ತಬಲ್ಲರು ಎನ್ನುತ್ತಾರೆ ಜನ. ದೆವ್ವ ಬಾಧೆ ನಿವಾರಿಸುವುದಕ್ಕಾಗಿ ಕಾಝಿಯು ಆ ವ್ಯಕ್ತಿಯ ಕೂದಲು ಕೈಯಲ್ಲಿ ಹಿಡಿದು, ಗೋಡೆಗೆ ನಿಂಬೆಹಣ್ಣಿನ ಮೂಲಕ ಮೊಳೆ ಹೊಡೆಯುತ್ತಾರೆ. ಆನಂತರ ಅವರು, ಬಾಧಿತ ವ್ಯಕ್ತಿಯ ಕೂದಲನ್ನುವ ಕತ್ತರಿಸಿ, ದುಷ್ಟ ಶಕ್ತಿಯ ಹಿಡಿತದಿಂದ ಮುಕ್ತಗೊಳಿಸುತ್ತಾರೆ. ಈ ಮೂಲಕ ಮಹಿಳೆಯು ದೆವ್ವದ ಪೀಡನೆಯಿಂದ ಮುಕ್ತಿ ಹೊಂದುತ್ತಾಳಂತೆ. ಹಳ್ಳಿಗರು ಹೇಳುವ ಪ್ರಕಾರ, ಇಂಥದ್ದೊಂದು ಪದ್ಧತಿ ಅದೆಷ್ಟೋ ವರ್ಷಗಳಿಂದ ಅನೂಚಾನವಾಗಿ ನಡೆಯುತ್ತಿದೆ.
ಈ ಧಾರ್ಮಿಕ ಕ್ಷೇತ್ರದಲ್ಲಿ ಬಾಬಾರನ್ನು ಭೇಟಿಯಾಗಲೆಂದು ಪ್ರತಿದಿನ ಭಕ್ತರ ದಂಡೇ ನೆರೆದಿರುತ್ತದೆ. ತಮಗೆ ಚಿತ್ರಹಿಂಸೆ ನೀಡುವ ದೆವ್ವಬಾಧೆ ಹೋಗಲಾಡಿಸಲು ಬಾಬಾ ಆಶೀರ್ವಾದ ನೆರವಾಗುತ್ತದೆ ಎಂಬುದು ಅವರ ನಂಬಿಕೆ. ಈ ಬಗ್ಗೆ ನಿಮಗೇನು ಅನಿಸುತ್ತದೆ? ನಮಗೆ ಬರೆದು ತಿಳಿಸಿ.