ಅತೀಂದ್ರಿಯ ಶಕ್ತಿಯ ಕಾಲಿ ಮಸ್ಜೀದ್
ಯಾವುದೇ ವ್ಯಕ್ತಿ ದುಷ್ಟಶಕ್ತಿಗಳ(ದೆವ್ವ, ಭೂತ, ಪಿಶಾಚಿ) ವಶಕ್ಕೀಡಾಗಬಹುದೇ? ಯಾವುದೇ ಮಂದಿರಕ್ಕೆ ಭೇಟಿ ನೀಡುವ ಮೂಲಕ ಅಂತಹ ವ್ಯಕ್ತಿ ಇಂತಹ ಕೆಟ್ಟ ಶಕ್ತಿಗಳಿಂದ ಮುಕ್ತಿ ಹೊಂದಬಹುದೇ? ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇಂತಹ ಒಂದು ಸ್ಥಳಕ್ಕೆ ನಿಮ್ಮನ್ನು ನಾವು ಈ ಬಾರಿಯ ನೀವುನಂಬುವಿರಾ ಸರಣಿಯಲ್ಲಿ ಕರೆದೊಯ್ಯಲಿದ್ದೇವೆ. ಈ ಜಾಗದ ಹೆಸರು ಕಾಲೀ ಮಸ್ಜಿದ್. ಅರ್ಥಾತ್ ಕಪ್ಪು ಮಸೀದಿ. ಇಲ್ಲಿಗೆ ಪ್ರತಿ ಗುರುವಾರ ಜನತೆ ದುಷ್ಟಶಕ್ತಿಗಳಿಂದ ಮುಕ್ತಿ ಹೊಂದಲು ಬರುತ್ತಿದ್ದಾರೆ.ಪ್ರಸ್ತುತ ಕಪ್ಪು ಮಸೀದಿಯು ಅನಾಮಿಕ ಸಂತನೊಬ್ಬನ ಮಂದಿರವಾಗಿದ್ದು, ಮಧ್ಯಪ್ರದೇಶದ ಇಂಧೋರ್ ಸಮೀಪದ ದೇವಾಸ್ ಎಂಬಲ್ಲಿ ಸ್ಮಶಾನವೊಂದರ ಬಳಿ ಇದೆ. ದೂರದ ಊರುಗಳಿಂದ ದೆವ್ವ ಹಿಡಿದಿದೆ ಎಂದು ನಂಬಿರುವ ಜನರು ಸಂತನ ಆಶೀರ್ವಾದ ಪಡೆದು ದೆವ್ವಬಾಧೆಯಿಂದ ಮುಕ್ತರಾಗಲು ಇಲ್ಲಿಗೆ ಬರುತ್ತಾರೆ.
ಈ ಮಂದಿರ ಕುರಿತು ಹಲವಾರು ಪ್ರಶ್ನೆಗಳಿವೆ..... ಈ ಬಾಬಾ ಯಾರು? ಆತನ ಹೆಸರೇನು? ಮತ್ತು ಈ ಮಂದಿರಕ್ಕೆ ಕಪ್ಪು ಮಸೀದಿ ಎಂಬ ಹೆಸರ್ಯಾಕೆ ಬಂತು? ಈ ಎಲ್ಲ ಪ್ರಶ್ನೆಗಳಿಗೆ ಯಾರಿಗೂ ಉತ್ತರ ಗೊತ್ತಿಲ್ಲ. ದೆವ್ವಗಳ ಕಾಟದಿಂದ ಮುಕ್ತಿಗೆ ಇತರ ಸಾಕಷ್ಟು ಸ್ಥಳಗಳಿದ್ದರೂ, ಈ ಸ್ಥಳದ ಅಪೂರ್ವತೆ ಇತರ ಯಾವುದೇ ಮಂದಿರದಲ್ಲೂ ಇಲ್ಲ ಎಂಬುದು ಇಲ್ಲಿನ ಭಕ್ತರ ನಂಬುಗೆ.ಈ ಮಸೀದಿಯ ಇತಿಹಾಸದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಕೆಲವರ ಪ್ರಕಾರ ಈ ಗೋರಿ 1,100 ವರ್ಷಗಳಷ್ಟು ಹಳೆಯದು. ಆದರೆ ಮತ್ತೆ ಕೆಲವರ ಪ್ರಕಾರ ಇದು 101 ವರ್ಷ ಹಿಂದಿನದು. ದೆವ್ವಬಾಧೆ ಮುಕ್ತಿಗಾಗಿ ಜನತೆ ಇಲ್ಲಿಗೆ ಯಾವತ್ತಿನಿಂದ ಬರಲು ಪ್ರಾರಂಭಿಸಿದರು ಎಂಬ ಕುರಿತೂ ಸ್ಪಷ್ಟ ಮಾಹಿತಿ ಇಲ್ಲ.
ಇಲ್ಲಿನ ಕುರಿತು ಹಲವಾರು ಕತೆಗಳು ಮತ್ತು ನಂಬುಗೆಗಳಿವೆ. ಇಲ್ಲಿನ ನಿವಾಸಿಗಳ ಪ್ರಕಾರ, ಈ ಮಂದಿರದ ಸಮೀಪ ನಗ್ದಾಮ್ ಎಂಬ ನದಿಯು ಹರಿಯುತ್ತಿತ್ತು ಆದರೆ ಆ ನದಿ ಈಗ ಬತ್ತಿಹೋಗಿದೆ.ಇಲ್ಲಿನ ಪೂಜಾರಿ ಅರ್ಜುನ್ ಸಿಂಗ್ ಪ್ರಕಾರ, ದೆವ್ವ ಭೂತಗಳ ಬಾಧೆಯಿಂದ ಬಳಲುವವರು ಇಲ್ಲಿಗೆ ಕನಿಷ್ಠ ಐದು ಗುರುವಾರಗಳ ಕಾಲ ನಿರಂತರ ಭೇಟಿ ನೀಡಿದರೆ, ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಈ ಭೇಟಿಗಳಿಂದ ಸಂತುಷ್ಟನಾಗುವ ಬಾಬಾ, ತನ್ನ ಭಕ್ತ ಸಹಜ ಜೀವನ ನಡೆಸುವಂತೆ ಆಶೀರ್ವಾದ ಮಾಡುತ್ತಾನೆ.ಈ ಕಪ್ಪು ಮಸೀದಿಯಲ್ಲಿ ಪ್ರತಿವರ್ಷ ಉರೂಸ್ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿನ ವಿಧಿವಿಧಾನದ ಪ್ರಕಾರ ಪ್ರಾರ್ಥನಾ ಕಾರ್ಯಕ್ರಮದ ಬಳಿಕ ಬಡಜನರಿಗೆ ಆಹಾರ ಹಂಚಲಾಗುತ್ತದೆ.ಬಾಬಾನ ಪರಮ ಭಕ್ತರಾಗಿರುವ ವಮಿಕ್ ಶೇಖ್ ಪ್ರಕಾರ, ಅವರು ತನ್ನ ಜೀವನದಲ್ಲಿ ಏನೇ ಸಮಸ್ಯೆ ಬಂದರೂ, ಈ ಮಂದಿರಕ್ಕೆ ಭೇಟಿನೀಡುತ್ತಾರೆ. ಮತ್ತು ಅವರೆಲ್ಲ ಪ್ರಾರ್ಥನೆಗಳು ನೆರವೇರಿವೆ. ಗುಣಪಡಿಸಲಾಗದ ಮಾನಸಿಕ ಮತ್ತು ದೈಹಿಕ ರೋಗಗಳೂ ಇಲ್ಲಿಗೆ ಭೇಟಿನೀಡಿದ ಬಳಿಕ ಗುಣವಾಗಿರುವುದನ್ನು ತಾನು ಕಂಡಿರುವುದಾಗಿ ಅವರು ಹೇಳುತ್ತಾರೆ.
ಈ ವೈಜ್ಞಾನಿಕ ಯುಗದಲ್ಲಿ ದೆವ್ವ, ಭೂತ, ಪಿಶಾಚಿಗಳ ಮೇಲೆ ನಂಬಿಕೆ ಇಲ್ಲ ಮತ್ತು ಇವುಗಳನ್ನು ಮೂಢನಂಬಿಕೆ ಎಂದು ಪರಿಗಣಿಸಲಾಗುತ್ತದೆ. ಇಂದಿನ ತನಕವೂ ಈ ಅತೀಂದ್ರೀಯ ಶಕ್ತಿಗಳ ಕುರಿತು ಯಾರಿಗೇ ಆದರೂ ನಿಖರ ಪುರಾವೆ ಎಂಬುದು ಇಲ್ಲ. ಆದರೂ ಕಾಲೀ ಮಸೀದಿಯಂತಹ ಸ್ಥಳಗಳಿಗೆ ಜನತೆ ಯಾಕೆ ಭೇಟಿ ನೀಡುತ್ತಾರೆ? ಆವರುಗಳು ನಿಜವಾಗಿಯೂ ಗುಣ ಹೊಂದುತ್ತಾರೆಯೋ? ಈ ಪ್ರಶ್ನೆಗಳನ್ನು ನಿಮ್ಮ ಮುಂದಿರಿಸಿದ್ದೇವೆ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ....