ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನ ಬಾಕಿಯಿದ್ದು, ಈ ವರ್ಷದ ದೀಪಾವಳಿ ಹಬ್ಬ ಯಾವಾಗ ಯಾವ ದಿನ ಆಚರಿಸಬೇಕು, ಮುಹೂರ್ತ ಯಾವಾಗ ಎಂಬ ವಿವರ ಇಲ್ಲಿದೆ ನೋಡಿ.
ದೀಪಾವಳಿ ಹಬ್ಬ ಸಾಮಾನ್ಯವಾಗಿ ಮೂರು ದಿನ ಆಚರಿಸಲಾಗುತ್ತದೆ. ಆದರೆ ಪ್ರತೀ ಬಾರಿಯೂ ಯಾವ ದಿನ ಯಾವುದನ್ನು ಆಚರಿಸಬೇಕೆಂಬ ಗೊಂದಲ ಎಲ್ಲರಲ್ಲಿರುತ್ತದೆ. ಈ ಬಾರಿ ಅಕ್ಟೋಬರ್ 30 ರ ಬುಧವಾರದಿಂದ ಪ್ರಾರಂಭವಾಗಿ ನವಂಬರ್ 2 ರ ಶನಿವಾರದವರೆಗೆ ದೀಪಾವಳಿ ಹಬ್ಬವಿದೆ.
ಮೊದಲ ದಿನ ಅಂದರೆ ಬುಧವಾರದಂದು ನೀರು ತುಂಬಿಸುವುದು. ಇದು ಹಿರಿಯರ ಹಬ್ಬ. ದೀಪಾವಳಿ ಹಬ್ಬಕ್ಕೆ ಎಣ್ಣೆ ಸ್ನಾನ ಮಾಡಲು ಹಿಂದಿನ ದಿನವೇ ನೀರು ತುಂಬುವ ಶಾಸ್ತ್ರ ಮಾಡಲಾಗುತ್ತದೆ. ಅಕ್ಟೋಬರ್ 31 ರಂದು ಅಂದರೆ ಗುರುವಾರ ನರಕ ಚತುರ್ದಶಿಯಾಗಿದ್ದು, ಆ ದಿನ ಎಣ್ಣೆ ಹಚ್ಚಿ ಸ್ನಾನ ಮಾಡಬೇಕು. ಇದಕ್ಕೆ ಬೆಳಿಗ್ಗೆ 5.15 ಕ್ಕೆ ಮುಹೂರ್ತವಿದೆ.
ಆ ದಿನ ಸಂಜೆ ದೀಪಾವಳಿ, ಲಕ್ಷ್ಮೀ ಪೂಜೆ. ಕೆಲವೆಡೆ ಕರಾವಳಿ ಭಾಗಗಳಲ್ಲಿ ಬಲೀಂದ್ರ ಪೂಜೆ ಮಾಡುವ ಸಂಪ್ರದಾಯವಿದೆ. ಮರುದಿನ ಅಂದರೆ ನವಂಬರ್ 1 ರಂದು ಅಮವಾಸ್ಯೆಯಾಗಿದ್ದು ಸಂಜೆ ಸುಮಾರು 6 ಗಂಟೆಯವರೆಗೆ ಮಾತ್ರ ಹಬ್ಬ ಆಚರಣೆ ಮಾಡಬಹುದು. ಶನಿವಾರ ಬಲಿಪಾಡ್ಯವಾಗಿದ್ದು ಅಂದು ಗೋವುಗಳಿಗೆ ಪೂಜೆ ಮಾಡಲಾಗುತ್ತ.ದೆ. ಇದರೊಂದಿಗೆ ದೀಪಾವಳಿ ಹಬ್ಬ ಮುಕ್ತಾಯವಾಗುತ್ತದೆ.