Select Your Language

Notifications

webdunia
webdunia
webdunia
webdunia

ಇಳಿ ಹರೆಯದಲ್ಲಿ ಏರುವ ಭಾರ

ಇಳಿ ಹರೆಯದಲ್ಲಿ ಏರುವ ಭಾರ

ಇಳಯರಾಜ

PTI
ಮೂವತ್ತು ಕಳೆಯಿತೆಂದರೆ ಮಹಿಳೆಯರಿಗೆ ಸೊಂಟದ ಸುತ್ತಳತೆ ಹೆಚ್ಚುತ್ತದೆ. ಮುಖದ ರೂಪ ಬದಲುತ್ತದೆ. ಆಕೃತಿಯಲ್ಲಿ ಏರುಪೇರಾಗುತ್ತದೆ. ಆದರೆ, ಒಂದಷ್ಟು ಕಾಳಜಿ ವಹಿಸಿದರೆ, 48ರ ಹರೆಯದಲ್ಲೂ 28ರಂತೆ ಕಾಣಬಹುದು.

ಮೊದಲನೆಯದಾಗಿ ದೇಹ ಹಾಗೂ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುವುದು. ಆರೋಗ್ಯಕರ ಚಟುವಟಿಕೆಗಳು, ಸಣ್ಣಪುಟ್ಟ ವ್ಯಾಯಾಮ ಮತ್ತು ಸೂಕ್ತ ಸಮಯಕ್ಕೆ ಸರಿಯಾಗಿ ಸಮತೂಕದ ಆಹಾರ ಸೇವನೆ- ಇಷ್ಟನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅರ್ಧ ಸಮಸ್ಯೆ ಬಗೆಹರಿದಂತೆ.

ಮಾನಸಿಕ ಒತ್ತಡ ಹಾಗೂ ವಿಷಣ್ಣತೆಗಳು ಬಳಿಗೆ ಸುಳಿಯದಂತೆ ಜಾಗೃತೆ ವಹಿಸಬೇಕು. ಮುಖವು ಮನಸ್ಸಿನ ಕನ್ನಡಿ ಇದ್ದಂತೆ. ಮಾನಸಿಕ ಅನಾರೋಗ್ಯ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದೇ ಅನೇಕ ಸಮಸ್ಯೆಗಳಿಗೆ ರಹದಾರಿಯಾಗುವ ಅಪಾಯವೂ ಇದೆ.

ಆದಷ್ಟೂ ಜಂಕ್ ಫುಡ್, ಮಾಂಸಾಹಾರ ಹಾಗೂ ಬೊಜ್ಜು ಹೆಚ್ಚುವಂತಹ ಆಹಾರಗಳಿಂದ ದೂರವಿದ್ದರೆ ಒಳಿತು. ಹಸಿರು ತರಕಾರಿಗಳು, ಸೊಪ್ಪು, ತಾಜಾ ಹಣ್ಣುಗಳು, ಮೊಳಕೆ ಕಾಳುಗಳು ಆಹಾರದಲ್ಲಿ ಹೆಚ್ಚಾಗಿ ಇದ್ದರೆ ಅದರ ಪರಿಣಾಮವೇ ಬೇರೆ. ಬೆಣ್ಣೆ ತೆಗೆದ ಮಜ್ಜಿಗೆಯಲ್ಲೂ ಔಷಧೀಯ ಗುಣಗಳಿರುತ್ತವೆ. ಸಾಧ್ಯವಿರುವಷ್ಟು ಮನೆ ಆಹಾರವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ದಿನನಿತ್ಯ ಕನಿಷ್ಠಪಕ್ಷ ಐದು ಲೀಟರ್ ಶುದ್ಧವಾದ ನೀರು ಕುಡಿಯಬೇಕು. ಇದು ತ್ವಚೆಯ ಆರೋಗ್ಯಕ್ಕೆ ಅತ್ಯಗತ್ಯ. ಆರೋಗ್ಯಕರ ದೇಹಕ್ಕೆ ನಿದ್ರೆಯೂ ಅಷ್ಟೆ ಅವಶ್ಯಕ. ಮಿತಿಗಿಂತ ಕಡಿಮೆ ಹಾಗೂ ಮಿತಿಗಿಂತ ಹೆಚ್ಚಿನ ನಿದ್ರೆಯೂ ಆರೋಗ್ಯಕ್ಕೆ ಒಳ್ಳೆಯದಲ್ಲ.

ಮಧ್ಯಾಹ್ನದ ವೇಳೆ ಗಂಟೆಗಟ್ಟಲೆ ಗೊರಕೆಹೊಡೆದರೆ ಇದು ಬೊಜ್ಜನ್ನು ಹೆಚ್ಚಿಸುತ್ತದೆ. ಆದರೆ 15 ಅಥವಾ 30 ನಿಮಿಷಗಳ ಕಾಲದ ಒಂದು ಕೋಳಿ ನಿದ್ರೆ ಆರೋಗ್ಯಕ್ಕೂ ಒಳ್ಳೆಯದು ಮತ್ತು ಇದು ಆಯಾಸ ಪರಿಹರಿಸಿ ಪ್ರಶಾಂತ ಮುಖಭಾವ ಒದಗಿಸುತ್ತದೆ.

ಅಂದ ಹಾಗೆ ಬೇಗ ಮಲಗಿ, ಬೇಗ ಏಳುವ ಅಭ್ಯಾಸ ರೂಢಿಸಿಕೊಂಡರೆ ಇನ್ನೂ ಒಳಿತು. ಆದಷ್ಟೂ ಮನದಲ್ಲಿ ಉತ್ತಮ ಭಾವನೆಗಳೇ ಸರಿದಾಡುವಂತೆ ನೋಡಿಕೊಳ್ಳಬೇಕು. ಶಾಂತ ಮನಸ್ಸೂ ಆರೋಗ್ಯಕರ ದೇಹಕ್ಕೆ ಅಷ್ಟೇ ಅಗತ್ಯ.

ಆರೋಗ್ಯವಂತ ಜೀವನಕ್ಕೆ ನಿಯಮಿತ ಆಹಾರ, ನಿದ್ರೆ ಹಾಗೂ ವಿಸರ್ಜನೆಗಳು ಬಹಳ ಅಗತ್ಯ.

(* ಸ್ನೇಹಾ)

Share this Story:

Follow Webdunia kannada