ಅಲಂಕಾರಕ್ಕೆ ಮೂರು ವರ್ಷ ವ್ಯರ್ಥ
ಲಂಡನ್ , ಸೋಮವಾರ, 26 ನವೆಂಬರ್ 2007 (16:05 IST)
ಮಹಿಳೆಯರು ಸಾಮಾನ್ಯವಾಗಿ ಹೊರಗೆ ತಿರುಗಾಡಲು ಹೋಗುವಾಗ ಚೆನ್ನಾಗಿ ಕಾಣಬೇಕೆಂದು ಬಯಸುವುದು ಸಹಜ. ಅದಕ್ಕಾಗಿ ಅವರು ತಮ್ಮ ಸೌಂದರ್ಯ ವೃದ್ಧಿಗೆ ಹೆಚ್ಚುಗಮನ ನೀಡುವುದು ಅತ್ಯಗತ್ಯವೆನಿಸಿದೆ. ಆದರೆ ಸೌಂದರ್ಯವೃದ್ಧಿಗೆ ತಮ್ಮ ಅಮೂಲ್ಯ ಸಮಯವನ್ನು ಸಿಕ್ಕಾಪಟ್ಟೆ ವ್ಯರ್ಥಮಾಡದೇ ಸಮಯವನ್ನು ಮಿತ್ಯವ್ಯಯವಾಗಿ ಬಳಸುವುದನ್ನು ಈಗ ಮಹಿಳೆಯರು ಕಲಿಯಬೇಕಾಗಿದೆ. ಏಕೆಂದರೆ ಹೊಸ ಸಮೀಕ್ಷೆಯೊಂದರ ಅಧ್ಯಯನದ ವರದಿಯಲ್ಲಿ ತಮ್ಮ ಅಮೂಲ್ಯವಾದ ಮೂರು ವರ್ಷಗಳನ್ನು ಮನೆಯಿಂದ ಹೊರಗೆ ಹೋಗುವಾಗ ಅಲಂಕಾರ ಮಾಡಿಕೊಳ್ಳುವುದರಲ್ಲೇ ಮಹಿಳೆಯರು ಕಳೆಯುತ್ತಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ.ಪ್ರತಿ ಬಾರಿ ಮನೆಯಿಂದ ಹೊರಗೆ ತೆರಳುವಾಗಲೂ ಒಂದು ಗಂಟೆ 12 ನಿಮಿಷಗಳ ಸಮಯವನ್ನು ವ್ಯರ್ಥಮಾಡುವುದರಿಂದ ಜೀವಿತಾವಧಿಯಲ್ಲಿ ಮೂರು ವರ್ಷಗಳನ್ನು ವ್ಯರ್ಥಮಾಡುತ್ತಾರೆಂದು ವರದಿ ತಿಳಿಸಿದೆ. ಕೊನೆಯ ಗಳಿಗೆಯಲ್ಲಿ ಉಡುಪು ಬದಲಾವಣೆ, ಕನ್ನಡಿಯ ಮುಂದೆ ನಿಂತು ಓರೆಕೋರೆ ತಿದ್ದುವುದು ಮತ್ತು ಹ್ಯಾಂಡ್‌ಬ್ಯಾಗ್‌ನಲ್ಲಿ ಚೆಲ್ಲಾಪಿಲ್ಲಿ ಮಾಡುತ್ತಾ ಹುಡುಕುವುದರಲ್ಲೇ ಒಂದು ಗಂಟೆ 12 ನಿಮಿಷಗಳ ಸರಾಸರಿ ಸಮಯ ಬೇಕಾಗುತ್ತದೆ.ರಾತ್ರಿ ಸಮಾರಂಭಕ್ಕೆ ಅಥವಾ ಮೋಜಿನ ಕೂಟಕ್ಕೆ ತಯಾರಿ ನಡೆಸುವಾಗ ಮಹಿಳೆಯರು ತಮ್ಮ ಕಾಲುಗಳ ಕೂದಲು ತೆಗೆಯುವುದಕ್ಕೆ 22 ನಿಮಿಷ, ತಮ್ಮ ಕೇಶವಿನ್ಯಾಸಕ್ಕೆ 23 ನಿಮಿಷ, ಮೇಕಪ್ ಮಾಡಲು 14 ನಿಮಿಷ, ಉಡುಪು ಬದಲಿಸಲು 6 ನಿಮಿಷ ಹಿಡಿಯುತ್ತದೆ.ಪ್ರತಿದಿನ ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮುಂಚೆ 40 ನಿಮಿಷಗಳನ್ನು ಕಳೆಯುವುದು ಸೇರಿದಂತೆ ಜೀವಿತಾವಧಿಯಲ್ಲಿ 2 ವರ್ಷ, 9 ತಿಂಗಳು ವ್ಯರ್ಥವಾಗಿರುತ್ತದೆ. ಪುರುಷರಿಗೆ ಕಹಿಸುದ್ದಿ ಏನೆಂದರೆ ಅವರು ತಮ್ಮ ಪತ್ನಿ ಅಥವಾ ಗೆಳತಿಯರು ಹ್ಯಾಂಡ್‌ಬ್ಯಾಗ್ ಆಯ್ಕೆ ಮಾಡಿಕೊಳ್ಳುವುದಕ್ಕೆ ಅಥವಾ ಕೊನೆಯ ಜೊತೆ ಪಾದರಕ್ಷೆ ಬದಲಿಸಲು ಒಟ್ಟು ಸುಮಾರು 3 ತಿಂಗಳ ಕಾಲ ಕಾಯುತ್ತಾರೆ.ಮಹಿಳೆಯರು ಅಂಗಡಿಗಳಿಗೆ ಹೋದಾಗಲೂ ಅದೇ ಕಥೆ. ಪುರುಷರು ಪ್ರತಿಬಾರಿ ಹೊರಗೆ ನಿಂತು ಶತಪಥ ತಿರುಗುವುದು ಸರ್ವೇಸಾಮಾನ್ಯ ಸಂಗತಿಯಾಗಿದೆ. ಸತತವಾಗಿ ಕಾದು ಮೂರನೇ ಎರಡರಷ್ಟು ಪುರುಷರಿಗೆ ಬೇಸರ ಬಂದಿದ್ದರೆ 10ರಲ್ಲಿ ಒಬ್ಬರು ಇದೇ ಕಾರಣಕ್ಕಾಗಿ ವಿಚ್ಛೇದನವನ್ನೂ ನೀಡಿದ್ದಾರೆಂದು ಸಮೀಕ್ಷೆ ಬಹಿರಂಗಪಡಿಸಿದೆ.