ಬೆರಳು ಉಗುರುಗಳ ಆರೈಕೆ-ಮ್ಯಾನಿಕ್ಯೂರ್
ನಿಮ್ಮ ಮುಖದಷ್ಟೇ ಕೈ, ಉಗುರುಗಳಿಗೂ ಪ್ರಾಮುಖ್ಯತೆ ನೀಡುವುದು ಸೌಂದರ್ಯದ ದೃಷ್ಠಿಯಿಂದಲೂ ಆರೋಗ್ಯದ ದೃಷ್ಠಿಯಿಂದಲೂ ಅಗತ್ಯ. ಇದಲ್ಲದೇ ದಣಿದ ಕೈಗಳಿಗೆ ಒಂದಿಷ್ಟು ಆರೈಕೆ, ಮಾಲೀಸು ಕೈಗಳಿಗೆ ಮತ್ತು ಉಗುರಿಗೆ ಆರಾಮ ನೀಡುತ್ತದೆ.ಇದು ವೇಗದ ಜಗತ್ತು. ಸದಾಕಾಲ ಒಂದಿಲ್ಲೊಂದು ಕಾರ್ಯದಲ್ಲಿ ನಿರತರಾಗಿರುವ ಕಾರಣ ಆಧುನಿಕ ಮಹಿಳೆಗೆ ಸೌಂದರ್ಯಗಾರಗಳಿಗೆ ತೆರಳಲು ಸಮಯದ್ದೇ ಸಮಸ್ಯೆ.ಅಂತಹ ಮಹಿಳೆಯರು ಮನೆಯಲ್ಲೇ ಕಡಿಮೆ ವೆಚ್ಚದಲ್ಲಿ ಸ್ವಯಂ ಮ್ಯಾನಿಕ್ಯೂರ್ ಮಾಡಿಕೊಳ್ಳಬಹುದು. ಮನೆಯಲ್ಲೆ ಮ್ಯಾನಿಕ್ಯೂರ್ ಮಾಡುವ ವಿಧಾನ ಹೀಗಿದೆ.ಮೊದಲಿಗೆ ಉಗುರಿನಲ್ಲಿರುವ ನೇಲ್‌ಪಾಲಿಶನ್ನು ಹತ್ತಿ ಉಂಡೆಗಳು ಹಾಗೂ ನೇಲ್ ಪಾಲಿಶ್ ರಿಮೂವರ್ ಬಳಸಿ ತೆಗೆಯಿರಿ.ಉಗುರನ್ನು ಬೇಕಿರುವ ಆಕಾರಕ್ಕೆ ಕತ್ತರಿಸಿ ನೈಲ್ ಫೈಲ್ ಅಥವಾ ಶಾರ್ಪನರ್ ಬಳಸಿ ಶೇಪ್ ಕೊಡಿ.ಒಂದು ಅಗಲವಾದ ಟಬ್‌ನಲ್ಲಿ ಕೈ ಮುಳುಗಿಸಲು ಸಾಧ್ಯವಿರುವಷ್ಟು ಬಿಸಿನೀರು ತೆಗೆದುಕೊಳ್ಳಿ. ನೀರಿಗೆ ಒಂದು ಚಮಚ ಉಪ್ಪು, ಸ್ವಲ್ಪ ಶಾಂಪೂ, ಒಂದೆರಡು ತೊಟ್ಟು ಡೆಟ್ಟಾಲ್, ಚಿಟಿಕೆ ಫೇಸ್ ಬ್ಲೀಚ್ ಪೌಡರ್, ಮೂರ್ನಾಲ್ಕು ತೊಟ್ಟು ನಿಂಬೆ ರಸ ಸೇರಿಸಿ ಎರಡೂ ಕೈಯನ್ನು ಹತ್ತು ನಿಮಿಷಗಳ ಕಾಲ ಮುಳುಗಿಸಿಡಿ. ನೀರು ತಣ್ಣಗಾಗುತ್ತಲೇ, ಮಧ್ಯೆ ಎರಡು ಬಾರಿ ಬಿಸಿನೀರು ಸೇರಿಸಿ. ಕೈಯನ್ನು ಮ್ಯಾನಿಕ್ಯೂರ್ ಬ್ರಶ್ ಬಳಸಿ ಹಗುರವಾಗಿ ತಿಕ್ಕಿ ತೊಳೆಯಿರಿ. ಉಗುರುಗಳನ್ನು ಶುಚಿಗೊಳಿಸಿ. ನೀರಿನಿಂದ ಕೈ ತೆಗೆದು ಶುಚಿಯಾದ ಟವೆಲಿನಲ್ಲಿ ಒದ್ದೆ ತೆಗೆಯಿರಿ. ಬಳಿಕ ಉಗುರುಗಳಿಗೆ ಕ್ಯುಟಿಕಲ್ ರಿಮೂವರ್ ಕ್ರೀಮ್ ಹಚ್ಚಿರಿ. ದಡ್ಡುಕಟ್ಟಿದ ಚರ್ಮವನ್ನು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಈ ಚರ್ಮವನ್ನು ಕತ್ತರಿಸಬೇಡಿ. ಬಳಿಕ ಹ್ಯಾಂಡ್ ಲೋಷನ್ ಬಳಸಿ ಇನ್ನೊಂದು ಕೈಯಿಂದ ಅಂಗೈಗಳು, ಹಿಂಭಾಗ ಸೇರಿದಂತೆ ಮುಂಗೈ ತನಕ ಮೃದುವಾಗಿ ಮಸಾಜ್ ಮಾಡಿ. ಇದು ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ. ಬಳಿಕ ಬಿಸಿ ನೀರಿನಲ್ಲಿ ಟವೆಲೊಂದನ್ನು ಮುಳುಗಿಸಿ ಹಬೆ ಕೊಡಿ. ಎರಡೂ ಕೈಗಳಿಗೂ ಈ ವಿಧಾನವನ್ನೇ ಅನುಸರಿಸಿ. ಬಳಿಕ ಉಗುರುಗಳಲ್ಲಿ ಮೆತ್ತಿರುವ ಕ್ರೀಮ್ ಅಥವಾ ಲೋಶನ್ ಅನ್ನು ಹತ್ತಿಯ ಉಂಡೆಗಳಿಂದ ಶುಚಿಗೊಳಿಸಿ. ನೇಲ್ ಪಾಲಿಶ್ ರಿಮೂವರ್‌ನಿಂದ ಮತ್ತೊಮ್ಮೆ ಉಗುರನ್ನು ಶುಚಿಗೊಳಿಸಿ ಬೇಕಾದ ಬಣ್ಣದ ನೇಲ್ ಪಾಲಿಶ್ ಹಚ್ಚಿ. ನೇಲ್ ಪಾಲಿಶ್ ಹಚ್ಚುವಾಗ ಮೊದಲಿಗೆ ಉಗುರಿನ ನಡುವಿಗೆ ಉದ್ದಕ್ಕೆ ಹಚ್ಚಿ ಬಳಿಕ ಬದಿಗಳನ್ನು ತುಂಬಿ. ಒಂದು ಕೋಟ್ ಹಚ್ಚಿ ಒಣಗಿದ ಬಳಿಕ ನಂತರದ ಕೋಟ್ ಹಚ್ಚಿ. ಮೂರು ಕೋಟ್ ಹಚ್ಚಿದರೆ ಚೆನ್ನಾಗಿರುತ್ತದೆ.ನೇಲ್ ಪಾಲಿಶ್‌ಗಳನ್ನು ಫ್ರಿಜ್‌ನಲ್ಲಿ ಇರಿಸಿ. ಬಾಟಲಿಯ ಮುಚ್ಚಳ ಅಂಟಿಕೊಳ್ಳುವುದನ್ನು ತಪ್ಪಿಸಲು ಅದರ ಸುತ್ತ ಸ್ವಲ್ಪ ವ್ಯಾಸ್‌ಲೀನ್ ಹಚ್ಚಿಡಿ.ಹದಿನೈದು ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ನಿಮ್ಮ ಕೈಗಳಿಗೆ ಒಂದಿಷ್ಟು ಆರೈಕೆ ನೀಡಿ.(-'
ಸ್ನೇಹಾ')