Webdunia - Bharat's app for daily news and videos

Install App

ಕೂದಲಿನ ಸಮಸ್ಯೆಗಳು ಮತ್ತು ಆರೈಕೆ

Webdunia
ರಶ್ಮಿ.ಪೈ

ನಮ್ಮ ಶರೀರ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಕೂದಲುಗಳು ಹೆಚ್ಚಿನ ಪಾತ್ರವನ್ನು ವಹಿಸುತ್ತವೆ. ತಲೆಗೂದಲು ಅಥವಾ ಜಡೆಗಳೆಂದು ಕರೆಯಲ್ಪಡುವ ಇವುಗಳು ಲಲನೆಯರ ಉದ್ದ ಜಡೆಯಾಗಿ ನಾಗವೇಣಿ,ಕೃಷ್ಣವೇಣಿ ಎಂದೂ, ಪ್ರೇಮಕಾವ್ಯಗಳಲ್ಲಿ ಕವಿಯ ಪ್ರೇಮ ನಿವೇದನೆಗೆ ನಾಚಿ ತೇಲಾಡುವ ಮುಂಗುರಳು..ಅಲೆಯಂತೆ ತೇಲಾಡುವ ದಟ್ಟಗೂದಲು..ಗಿಡ್ಡ ಕೂದಲು..ಗಂಡಸರ ಜಿಗಿಯುವ ಕೂದಲು, ಹಾರುವ ಕೂದಲು..ಹೀಗೆ ನಾನಾ ವಿಧಗಳಲ್ಲಿ ವರ್ಣಿಸುವ ಕೂದಲಿನ ಆರೈಕೆ ಚೆನ್ನಾಗಿದ್ದರೆ ಮಾತ್ರ ಕೂದಲಿನ ಅಂದವನ್ನು ರಕ್ಷಿಸಬಹುದು.

ಕೂದಲಿನ ಸಮಸ್ಯೆಗಳತ್ತ ಮಾತ್ರ ದೃಷ್ಟಿ ಹರಿಸಿದರೆ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುತ್ತಿರುವುದನ್ನು ಕಾಣಬಹುದು. ಅವುಗಳಲ್ಲಿ ಪ್ರಧಾನವಾದುವುಗಳೆಂದರೆ ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಕೂದಲಿನ ತುದಿಗಳ ಸೀಳು, ಹೇನು ಮೊದಲಾದವುಗಳಾಗಿವೆ.

ಕೂದಲು ಉದುರುವಿಕೆ
ಕೂದಲು ಉದುರುವಿಕೆಯ ಸಾಮಾನ್ಯವಾಗಿ ಬಹುತೇಕ ಮಂದಿಯ ಸಮಸ್ಯೆಯಾಗಿದ್ದು ದೈನಂದಿನ ದಿನಚರಿಯಲ್ಲಿ ಬದಲಾವಣೆಗಳನ್ನು ಕಂಡುಕೊಂಡು ಉತ್ತಮವಾದ ಆಹಾರಗಳ ಸೇವನೆ ಮತ್ತು ಕೂದಲಿನ ಶುಚಿತ್ವವನ್ನು ಕಾಪಾಡುವುದರ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

ಸಾಮಾನ್ಯವಾಗಿ ನಮಗರಿಯದಂತೆ ಪ್ರತಿದಿನ 20 ರಿಂದ 100 ಕೂದಲುಗಳು ಉದುರುತ್ತವೆ. ಕೂದಲುಗಳ ಬೆಳವಣಿಗೆಗೆ ಮನುಷ್ಯ ಶರೀರದಲ್ಲಿರುವ ಹಾರ್ಮೋನುಗಳಾದ ಟೆಸ್ಟೋಸ್ಟೆರೋನ್ ಮತ್ತು ಸ್ತ್ರೀ ಹಾರ್ಮೋನ್ ಆದ ಈಸ್ಟ್ರೋಜನ್‌ಗಳು ಸಹಾಯ ಮಾಡುತ್ತವೆ. ಇವುಗಳ ಉತ್ಪಾದನಾ ಮಟ್ಟವು ಕಡಿಮೆಯಾದಲ್ಲಿ ಕೂದಲುದುರುವಿಕೆಯು ಸಂಭವಿಸುತ್ತದೆ.

ಸಮತೂಕದ ಆಹಾರವನ್ನು ಸೇವಿಸುವುದರಿಂದ ಅಂದರೆ ತಮ್ಮ ಆಹಾರಗಳಲ್ಲಿ ಹಸುರೆಲೆ ತರಕಾರಿಗಳು,ಮೂಲಂಗಿ, ಸೋಯಾಬೀನ್, ಮಾವು,ಸಕ್ಕರೆ ಬಾದಾಮಿ, ದ್ವಿದಳ ಧಾನ್ಯಗಳು, ಹಾಲು,ಮೊಸರು,ಬೆಣ್ಣೆ, ಬೇಳೆ ಕಾಳುಗಳನ್ನು ಯಥೇಚ್ಛವಾಗಿ ಸೇವಿಸುವುದರಿಂದ ಇಂತಹ ಸಮಸ್ಯೆಯನ್ನು ಪರಿಹರಿಸಬಹುದು.

ಉತ್ತಮವಾದ ಆಹಾರದ ಸೇವನೆಯೊಂದಿಗೆ ವ್ಯಾಯಾಮ, ಬಿಸಿಲಿನಿಂದ ಕೂದಲನ್ನು ರಕ್ಷಿಸುವುದು,ಶುದ್ಧವಾದ ನೀರಿನಿಂದ ತೊಳೆಯುವುದು, ಬಾಚಣಿಗೆ,ಟವಲ್ ಮೊದಲಾದವುಗಳ್ನು ಶುಚಿಯಾಗಿರಿಸುವುದರಿಂದಲೂ ಕೂದಲು ಉದುರುವುದನ್ನು ತಡೆಗಟ್ಟಬಹುದು.

ಶರೀರಕ್ಕೆ ಆಹಾರ, ವ್ಯಾಯಾಮ ಇವುಗಳ ಜೊತೆಗೆ ನಿದ್ರೆಯೂ ಅತ್ಯಗತ್ಯ. ಸರಾಸರಿ ಎಂಟು ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.ರಾತ್ರಿ ಮಲಗುವ ವೇಳೆ ತೆಂಗಿನೆಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿ ನಿದ್ದೆ ಹೋಗುವುದರಿಂದ ಚೆನ್ನಾಗಿ ನಿದ್ದೆ ಆವರಿಸುವುದು ಮಾತ್ರವಲ್ಲದೆ ಕೂದಲಿನ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ.

ಹಗಲಲ್ಲಿ ಕೂದಲಿಗೆ ಎಣ್ಣೆ ಹಚ್ಚಿ ತಿರುಗಾಡುವುದರಿಂದ ವಾತಾವರಣದಲ್ಲಿರುವ ಧೂಳು ಮತ್ತಿನ್ನಿತರ ಹಾನಿಕಾರಕ ಕಣಗಳು ಎಣ್ಣೆಯುಕ್ತ ಕೂದಲಿಗೆ ಅಂಟಿಕೊಳ್ಳುತ್ತವೆ. ಆದುದರಿಂದ ಹೊರಗೆ ಹೋಗುವಾಗ ಕೂದಲಿಗೆ ಎಣ್ಣೆ ಹಚ್ಚದಿರುವುದು ಒಳ್ಳೆಯದು.

ಕೂದಲು ಉದುರುವಿಕೆಯು ಅತಿಯಾಗಿದ್ದರೆ ಒಂದು ಟೀ ಚಮಚ ಮೆಂತ್ಯವನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರಸಿ ಏಳು ದಿನಗಳಕಾಲ ಬಿಸಿಲಿನಲ್ಲಿಡಿ ನಂತರ ದಿನಾ ಅದನ್ನು ಹಚ್ಚುತ್ತಿದ್ದರೆ ಕೂದಲು ಉದುರುವಿಕೆಯು ಕ್ರಮೇಣ ಕಡಿಮೆಯಾಗುತ್ತದೆ.ವಿವಿಧ ಶ್ಯಾಂಪೂಗಳನ್ನು ಉಪಯೋಗಿಸುತ್ತಾ ಬಂದರೆ ಕೂದಲು ಉದುರುವಿಕೆ ಸಾಮಾನ್ಯ.

ಕೂದಲು ತೊಳೆಯಲು ಶ್ಯಾಂಪೂವಿನ ಬದಲು ದಾಸವಾಳದ ಎಲೆ, ಹೂಗಳನ್ನು ನೀರಿನಲ್ಲಿ ಹಾಕಿ,ಹಿಚುಕಿ ರಸ ತೆಗೆದು ಅದರಲ್ಲಿ ಕೂದಲು ತೊಳೆದರೆ ಶ್ಯಾಂಪೂವಿನಿಂದ ತೊಳೆದಂತೆ ನಯವಾಗಿರುವುದು. ಕೂದಲಿನೆಡೆಯಲ್ಲಿರುವ ಕೊಳೆಯನ್ನು ತೊಳೆಯಲು ಎಂದೂ ಸಾಬೂನನ್ನು ಬಳಸಲೇ ಬೇಡಿ ಇದರ ಬದಲು ಕಡಲೆ ಹುಡಿ ಅಥವಾ ದಾಸವಾಳದ ಹುಡಿಯನ್ನು ಬಳಸುವುದು ಉತ್ತಮ.ಕೂದಲಿಗೆ ಬಣ್ಣವನ್ನು ನೀಡಬೇಕೆಂದಾದರೆ ಮದರಂಗಿ ಉತ್ತಮವಾದದ್ದು, ಇದರಿಂದಾಗಿ ಕೂದಲಿಗೆ ಬಣ್ಣದೊಂದಿಗೆ ಹೊಳಪು ದೊರೆಯುತ್ತದೆ.

ತಲೆಹೊಟ್ಟು
ತಲೆಯಲ್ಲಿರುವ ಚರ್ಮವು ಅತಿಯಾಗಿ ಶುಷ್ಕವಾಗಿರುವುದರಿಂದ ತಲೆಹೊಟ್ಟು ತಲೆದೋರುತ್ತದೆ. ತಲೆಯ ಚರ್ಮದಲ್ಲಿ ಎಣ್ಣೆಯ ಅಂಶದ ಕೊರತೆ, ನಿದ್ರಾಹೀನತೆ, ಮಾನಸಿಕ ಒತ್ತಡ, ಕ್ರಮಾತೀತವಾದ ಜೀವನ ಶೈಲಿ, ಅಧಿಕವಾಗಿ ಶ್ಯಾಂಪೂ, ಕಂಡೀಶನರ್, ಬಣ್ಣ ಮೊದಲಾದವುಗಳು ತಲೆಹೊಟ್ಟು ಉಂಟಾಗುವಂತೆ ಮಾಡುತ್ತವೆ.

ಉತ್ತಮವಾದ ಆಹಾರ ಸೇವನೆಯೊಂದಿಗೆ ಹಿತ ಮಿತವಾದ ವ್ಯಾಯಾಮ ಮತ್ತು ನಿದ್ರೆ, ತಲೆಗೂದಲಿಗೆ ಎಣ್ಣೆ ಸವರಿ ಬೆರಳುಗಳಿಂದ ಮೆದುವಾಗಿ ಮಸಾಜ್ ಮಾಡುವುದರಿಂದ ಮತ್ತು ರಾಸಾಯನಿಕ ಪದಾರ್ಥಗಳ ಬಳಕೆಯನ್ನು ವರ್ಜಿಸುವುದರಿಂದ ತಲೆಹೊಟ್ಟನ್ನು ನಿಯಂತ್ರಣಕ್ಕೆ ತರಬಹುದು.

ಆಹಾರ ಸೇವನೆಯಲ್ಲಿ ಬಹುಪಾಲು ಹಸುರೆಲೆ ತರಕಾರಿ,ಧಾನ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಇದು ನಿಯಂತ್ರಣಕ್ಕೆ ಬರುವುದು. ತಲೆಹೊಟ್ಟು ಅಧಿಕವಾಗಿದೆಯೆಂದು ತಲೆಹೊಟ್ಟು ನಿವಾರಕ ಶ್ಯಾಂಪೂಗಳನ್ನು ಬಳಸುವುದು ಬೇಡ ಯಾಕೆಂದರೆ ಇವುಗಳು ಹಚ್ಚಿನ ರಾಸಾಯನಿಕಗಳನ್ನು ಒಳಗೊಂಡಿರುವುದರಿಂದ ಶರೀರಕ್ಕೆ ಹಾನಿಕಾರಕ.

ತಲೆಹೊಟ್ಟು ತಲೆತುರಿಕೆಯನ್ನುಂಟು ಮಾಡುತ್ತದೆ ಕೆಲವೊಮ್ಮೆ ಉಗುರುಗಳಿಂದ ತುರಿಸಿಕೊಂಡು ಗಾಯಗಳಾಗುವ ಸಾಧ್ಯತೆ ಹೆಚ್ಚು, ನೆತ್ತಿಯಲ್ಲುಂಟಾಗುವ ಗಾಯಗಳು ಬೇಗನೆ ಇತರ ರೋಗಗಳಿಗೆ ಆಹ್ವಾನ ನೀಡುತ್ತವೆ ಆದುದರಿಂದ ತಲೆಹೊಟ್ಟನ್ನು ತುರಿಸಲು ಹೋಗಬೇಡಿ.

ತಲೆಹೊಟ್ಟು ಇದ್ದರೆ ಕೊಬ್ಬರಿ ಎಣ್ಣೆಯಿಂದ ಕೂದಲಿನ ಬುಡಕ್ಕೆ ಹತ್ತು ನಿಮಿಷಗಳ ಕಾಲ ಬೆರಳಿನಿಂದ ಚೆನ್ನಾಗಿ ಮಸಾಜ್ ಮಾಡಬೇಕು. ಲಿಂಬೆ ರಸವನ್ನು ಹಚ್ಚುವುದರಿಂದ ತಲೆಹೊಟ್ಟನ್ನು ನಿಯಂತ್ರಿಸಬಹುದು.ತಲೆಹೊಟ್ಟಿನ ನಿವಾರಣೆಗೆ ಅತೀ ಪರಿಣಾಮಕಾರಿ ಚಿಕಿತ್ಸೆಯೆಂದರೆ ಪಂಚಕರ್ಮ ಚಿಕಿತ್ಸೆ, ಯಾಕೆಂದರೆ ಇದರಿಂದಾಗಿ ತಲೆಹೊಟ್ಟು ಮತ್ತೆ ಮರುಕಳಿಸುವುದಿಲ್ಲ.

ಕೂದಲಿನ ತುದಿಯ ಸೀಳುವಿಕೆ
ಕೂದಲು ಉದ್ದವಾಗಿದ್ದರೂ ಗಿಡ್ಡವಾಗಿದ್ದರೂ ಕೂದಲಿನ ತುದಿಗಳಲ್ಲಿ ಸೀಳುಗಳು ಕಂಡು ಬಂದರೆ ಕೂದಲು ಬೆಳೆಯುವುದಿಲ್ಲ.ಇದಕ್ಕೆ ಕಾರಣ ಪೋಷಕಾಂಶಗಳ ಕೊರತೆ ಮತ್ತು ತಲೆಕೂದಲು ಸರಿಯಾಗಿ ಒಣಗದಿರುವುದಾಗಿದೆ.
ತಲೆಕೂದಲಿನಲ್ಲಿ ಧೂಳು ಅಥವಾ ಇನ್ಯಾವುದೇ ರಾಸಾಯನಿಕ ಪದಾರ್ಥಗಳು ಉಳಿದುಕೊಂಡರೆ, ಕೂದಲು ತೊಳೆದ ನಂತರ ಸರಿಯಾಗಿ ಒಣಗದೇ ಇದ್ದರೆ, ಒದ್ದೆ ಕೂದಲನ್ನು ಬಿಗಿಯಾಗಿ ಹೆಣೆಯುವುದರಿಂದಲೂ, ತೈಲಾಂಶ ಕಡಿಮೆಯಿದ್ದರೂ ಕೂದಲಿನ ಸೀಳು ತಲೆದೋರುತ್ತದೆ.

ಕೂದಲು ತೊಳೆದ ನಂತರ ಚೆನ್ನಾಗಿ ನಯವಾದ ಬಟ್ಟೆಯಿಂದ ಉಜ್ಜಿ, ಗಾಳಿಯಲ್ಲಿ ಒಣಗಿಸಬೇಕು.ಕೂದಲನ್ನು ಒಣಗಿಸಲು ಹೇರ್ ಡ್ರೈಯರ್ ಬಳಸುವುದು ಒಳ್ಳೆಯದಲ್ಲ. ಒದ್ದೆ ಕೂದಲನ್ನು ಬಾಚುವುದಾಗಲೀ ಗಟ್ಟಿಯಾಗಿ ಹೆಣೆಯುವುದಾಗಲೀ ಮಾಡಬಾರದು.ಒದ್ದೆ ಕೂದಲನ್ನು ಬಾಚುವುದರಿಂದ ಕೂದಲುಗಳು ಬೇಗನೆ ತುಂಡಾಗುತ್ತವೆ.ಆದುದರಿಂದ ಕೂದಲೆಳೆಗಳನ್ನು ಬೆರಳಿನಿಂದಲೇ ಬಿಡಿಸಿ, ಗಾಳಿಯಲ್ಲಿ ಒಣಗಿಸುವುದು ಉತ್ತಮ.

ಶ್ಯಾಂಪೂ ಬಳಸಿದ ನಂತರ ಕಂಡೀಷನರ್ ಬಳಸುವುದರಿಂದ ಕೂದಲಿಗೆ ಹೆಚ್ಚಿನ ಹೊಳಪು ಸಿಗುತ್ತದೆ. ಅಧಿಕ ರಾಸಾಯನಿಕಯುಕ್ತವಾದ ಶ್ಯಾಂಪೂಗಳನ್ನು ಬಳಸುವುದರಿಂದ ಕೂದಲಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಆದುದರಿಂದ ಆಯುರ್ವೇದ ಶ್ಯಾಂಪೂಗಳನ್ನು ಅಥವಾ ಮನೆಯಲ್ಲಿ ತಯಾರಿಸಿದ ಶ್ಯಾಂಪೂಗಳನ್ನು ಕೂದಲು ತೊಳೆಯಲು ಉಪಯೋಗಿಸಬಹುದು.

ಕೂದಲಿನ ತುದಿ ಸೀಳುವಿಕೆ ಕಂಡಕೂಡಲೇ ತುದಿ ಕತ್ತರಿಸುವುದು ಒಳ್ಳೆಯದು, ಯಾಕೆಂದರೆ ಸೀಳಗೂದಲುಗಳು ಬೆಳವಣಿಗೆಯನ್ನು ಮೊಟಕುಗೊಳಿಸುತ್ತವೆ. ಕೂದಲಿಗೆ ಎಣ್ಣೆ ಹಚ್ಚುವಾಗ ಅದರ ತುದಿಭಾಗಕ್ಕೂ ಹಚ್ಚುವುದರಿಂದ ಸೀಳುಗಳನ್ನು ಕಡಿಮೆ ಮಾಡಬಹುದು.

ಹೇನು
ದಟ್ಟವಾದ ಕೂದಲಿನಲ್ಲಿ ಹೇನುಗಳು ಬೇಗನೆ ವಂಶಾಭಿವೃದ್ಧಿಯಾಗುತ್ತವೆ. ಹೇನುಗಳ ಅಭಿವೃದ್ಧಿಗೆ ಪ್ರಧಾನ ಕಾರಣ ಶುಚಿತ್ವದ ಕೊರತೆಯಾಗಿದೆ. ಕೂದಲಿನಲ್ಲಿ ಕೊಳೆ ತಂಗಿದ್ದರೆ ಹೇನುಗಳು ಉಂಟಾಗುತ್ತವೆ. ತಲೆಯಿಂದ ತಲೆಗೆ, ಬಾಚಣಿಕೆ, ಟವಲ್ ಮುಂತಾದವುಗಳಂದಾಗಿಯೂ ಒಬ್ಬರಿಂದೊಬ್ಬರಿಗೆ ಹೇನುಗಳು ಹರಡಬಹುದು.

ಹೇನುಗಳನ್ನು ನಾಶಗೊಳಿಸಲು ಮೊದಲನೆಯದಾಗಿ ಶುಚಿತ್ವವನ್ನು ಕಾಪಾಡಬೇಕು. ಇತರರ ಟವೆಲ್, ಬಾಚಣಿಗೆಗಳನ್ನು ಬಳಸಬಾರದು. ಹೇನುಗಳನ್ನು ನಾಶಮಾಡಲು ಹೇನು ನಾಶಿನಿಗಳನ್ನು ಬಳಸುವುದಕ್ಕಿಂತ, ಸಾಧ್ಯವಾದಷ್ಟು ಬಾರಿ ಬಾಚಣಿಗೆಯಿಂದ ಬಾಚಿ ಹೇನು ತೆಗೆಯುವುದು ಉತ್ತಮ ಮತ್ತು ಹೇನಿನ ಮೊಟ್ಟೆಗಳನ್ನು ಆದಷ್ಟು ಕಡಿಮೆ ಮಾಡಲು ಜಾಗ್ರತೆ ವಹಿಸಬೇಕು.ಕೂದಲನ್ನು ವಾರಕ್ಕೆರಡು ಬಾರಿ ಚೆನ್ನಾಗಿ ತೊಳೆಯಬೇಕು.

ಹೇನು ಅತಿಯಾಗಿದ್ದಲ್ಲಿ ವಾರಕ್ಕೆ ನಾಲ್ಕು ಬಾರಿ ಕೂದಲು ತೊಳೆಯುವುದು ಒಳ್ಳೆಯದು.ಆಹಾರದಲ್ಲಿ ಪೋಷಕಾಂಶದ ಕೊರತೆಯು ಹೇನಿಗೆ ಕಾರಣವಾಗುತ್ತದೆ. ಅಧಿಕವಾದ ಹೇನಿನಿಂದಾಗಿ ರಕ್ತ ಹೀನತೆ, ತಲೆಹುಣ್ಣು ಮೊದಲಾದ ರೋಗಗಳು ಬರಲು ಸಾಧ್ಯತೆ ಹೆಚ್ಚು. ಕೊಬ್ಬರಿ ಎಣ್ಣೆ ಮತ್ತು ಸೀಮೆ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ತಲೆಗೆ ಹಚ್ಚಿ ಐದು ನಿಮಿಷಗಳ ನಂತರ ಶ್ಯಾಂಪೂ ಬಳಸಿ ಸ್ನಾನ ಮಾಡುವುದರಿಂದ ಹೇನು ನಿವಾರಣೆಯಾಗುತ್ತದೆ.

ಬಿಸಿ ನೀರಿನಲ್ಲಿ ಹತ್ತಿ ಬಟ್ಟೆಯನ್ನು ಮುಳುಗಿಸಿ, ಅದನ್ನು ಹಿಂಡಿ ಆ ಬಟ್ಟೆಯನ್ನು ತಲೆಗೆ ಸುತ್ತುವುದರಿಂದಲೂ ಹೇನಿನ ಬೆಳವಣಿಗೆಯನ್ನು ತಡೆಯಬಹುದು.ಕೊಬ್ಬರಿ ಎಣ್ಣೆಯನ್ನು ಕಾಯಿಸಿ ಅದಕ್ಕೆ ನಾಲ್ಕು ಎಲೆ ತುಳಸಿಯನ್ನು ಹಾಕಿ ಆ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಹೇನನ್ನು ನಿಯಂತ್ರಣಕ್ಕೆ ತರಬಹುದು. ತುಳಸಿ ಹೂ ಅಥವಾ ಎಲೆಗಳನ್ನು ಮುಡಿಯುವುದರಿಂದ ಹೇನಿನ ಮೊಟ್ಟೆಗಳು ಉತ್ಪತ್ತಿಯಾಗುವುದಿಲ್ಲ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ ಈ ಕೆಲಸ ಮಾಡಬೇಡಿ

ಅಂಗಡಿಯಿಂದ ತಂದ ತುಪ್ಪ ಅಸಲಿಯೋ, ನಕಲಿಯೋ ಎಂದು ಪತ್ತೆ ಹಚ್ಚಲು ಹೀಗೆ ಮಾಡಿ