ಈ ವರ್ಷ ಮೇ ತಿಂಗಳಲ್ಲಿ ವಿವಾಹ ಮುಹೂರ್ತವಿಲ್ಲವೆಂಬ ವಂದತಿ ಬಹಳವಾಗಿದೆ. ಇದು ಅವೈಜ್ಞಾನಿಕ ಮತ್ತು ಅಶಾಸ್ತ್ರೀಯ ಸಂಗತಿಯಾಗಿದೆ. ಯಾವುದೇ ಶಾಸ್ತ್ರಗಳು ಮನುಷ್ಯನ ಪ್ರಗತಿಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು. ಶಾಸ್ತ್ರ ಈ ರೀತಿ ನಿರ್ಬಂದ ಹೇರಿದರೆ, ಸಾಮಾಜಿಕವಾಗಿ ಬೇರೆ ವಿಧದ ಸಂಬಂಧಗಳಿಗೆ ದಾರಿಯಾಗಿ ಮತ್ತೊಂದು ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ.
ಮುಹೂರ್ತವಿಲ್ಲವೆನ್ನವುದಕ್ಕೆ ಕಾರಣ ಗುರು ಅಸ್ತವಾಗುವುದು ಮತ್ತು ಶುಕ್ರ ಅಸ್ತವಾಗುವುದು. ಇದು ಪ್ರಮುಖ ಕಾರಣವಲ್ಲ. ವೈಜ್ಞಾನಿಕ ದೃಷ್ಠಿಯಿಂದ ನೋಡಬೇಕಾಗುತ್ತದೆ. ಗುರು ಪಂಚಾಂಗಗಳ ಪ್ರಕಾರ ಮೇ 1 ರಂದು ಸಂಜೆ 6.38 ಗಂಟೆಗೆ ಅಸ್ತವಾಗಿ ಮೇ 29 ರಂದು ಬೆಳಿಗ್ಗೆ 11.54 ಗಂಟೆಗೆ ಉದಯವಾಗುತ್ತದೆ. ಒಟ್ಟು 28 ದಿವಸಗಳ ಅಸ್ತನಾಗುತ್ತಾನೆ. ಇದೇ ರೀತಿ ಶುಕ್ರನು ಜೂನ್ 2 ರಂದು ಬೆಳಿಗ್ಗೆ 10.59 ಗಂಟೆಗೆ ಅಸ್ತವಾಗಿ ಜೂನ್ 11 ರಂದು ಬೆಳಗಿನ ಜಾವ 4.41 ಕ್ಕೆ ಉದಯವಾಗುತ್ತದೆ. ಒಟ್ಟು 8 ದಿವಸಗಳು ಅಸ್ತವಾಗಿರುತ್ತಾನೆ.
ವೈಜ್ಞಾನಿಕವಾಗಿ ಪರಿಶೀಲಿಸಿದಾಗ, ರವಿಯಿರುವ ರೇಖಾಂಶ ಡಿಗ್ರಿಗೆ ಗುರು 110 ಪರಿಧಿಯನ್ನು ಪ್ರವೇಶಿಸಿದಾಗ ಅಸ್ತವಾಗುತ್ತಾನೆ. ಇದೇ 110 ಪರಿಧಿಯನ್ನು ದಾಟಿದಾಗ ಉದಯವಾಗುತ್ತದೆ. ಶುಕ್ರನು 100 ರವಿಯ ರೇಖಾಂಶ ಪರಿಧಿಗೆ ಪ್ರವೇಶಿಸಿದಾಗ ಅಸ್ತವಾಗಿ 100 ರೇಖಾಂಶ ಪರಿಧಿದಾಟಿದಾಗ ಶುಕ್ರ ಉದಯವಾಗುತ್ತದೆ. ಇದು ಸಾಮಾನ್ಯವಾಗಿ ನಿಯಮದಂತೆ ನಡೆಯುತ್ತಾ ಬಂದಿದೆ. ಕೆಲವು ಪಂಚಾಂಗಗಳಲ್ಲಿ ಈ ಅವಧಿಯಲ್ಲಿ ಮುಹೂರ್ತ ನಮೂದಿಸಿರುವುದಿಲ್ಲ.
ಮುಹೂರ್ತವಿಲ್ಲವೆನ್ನುವುದು ಸರಿಯಲ್ಲ ಹೇಗೆ ವಾರ, ತಿಥಿ, ನಕ್ಷತ್ರ ಯೋಗ, ಕರಣಗಳಿವೆಯೋ ಹಾಗೆಯೇ ಪ್ರತಿದಿವಸವೂ ಮುಹೂರ್ತಗಳಿರುತ್ತವೆ. ಹಗಲು 15 ಮುಹೂರ್ತಗಳು ರಾತ್ರಿ 15 ಮುಹೂರ್ತಗಳು, ಒಂದು ದಿವಸಕ್ಕೆ ಒಟ್ಟು 30 ಮುಹೂರ್ತ ಇದ್ದೇ ಇರುತ್ತವೆ. ಸಾಮಾನ್ಯವಾಗಿ ಮುಹೂರ್ತದ ಅವಧಿ 48 ನಿಮಿಷಗಳು ಮುಹೂರ್ತದ ಅವಧಿ, ಹಗಲಿನ ಪ್ರಮಾಣದಂತೆ ಅವಧಿಯಲ್ಲಿ ವ್ಯತ್ಯಾಸವಾಗುತ್ತಿರುತ್ತದೆ.
ಮುಹೂರ್ತ ಗ್ರಂಥ ಕಾಲ ಪ್ರಕಾಶಿಕದಲ್ಲಿ ಹಾಗೂ ಇತರೆ ಮುಹೂರ್ತ ಗ್ರಂಥಗಳಲ್ಲಿ ಗುರು ಅಸ್ತವಾದ ಅವಧಿಯಲ್ಲಿ. ಮುಹೂರ್ತ ಲಗ್ನದ ಕೇಂದ್ರದಲ್ಲಿ ಶುಕ್ರನಿದ್ದರೆ ಗುರುವಿನ ಅಸ್ತದೋಷ ಬರುವುದಿಲ್ಲ. ಶುಭಕಾರ್ಯಗಳನ್ನು ಮಾಡಬಹುದೆಂದು ಕಾಲ ಪ್ರಕಾಶಿಕ ಗ್ರಂಥದ ಅಧ್ಯಾಯ 34 ರಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಇದೇ ರೀತಿ ಶುಕ್ರನು ಅಸ್ತನಾದಾಗ ಮುಹೂರ್ತ ಲಗ್ನದಲ್ಲಿ ಗುರುವಿದ್ದು, 3, 6, 11ರಲ್ಲಿ ಅಶುಭ ಗ್ರಹಗಳಿದ್ದರೆ ಶುಕ್ರನ ಅಸ್ತದೋಷ ಬರುವುದಿಲ್ಲವೆಂದೂ ಸ್ಪಷ್ಟೀಕರಿಸಿದ್ದಾರೆ. ಇನ್ನೊಂದು ವಿವರಣೆ ಗುರು ಮತ್ತು ಶುಕ್ರರಿಬ್ಬರೂ ಅಸ್ತವಾದಾಗ ಮಾತ್ರ ಶುಭ ಕಾರ್ಯ ಮಾಡಬಾರದೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಆದ್ದರಿಂದ ಮೇ ಮತ್ತು ಜೂನ್ ತಿಂಗಳಲ್ಲಿ ಸಮಂಜಸ ಮುಹೂರ್ತಗಳಲ್ಲಿ ಎಲ್ಲಾ ಶುಭ ಕಾರ್ಯಗಳನ್ನು ಮಾಡಬಹುದಾಗಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ.
ಶುಭಕಾರ್ಯಗಳನ್ನು ಮಾಡಬೇಕಾದವರು ಅಪಪ್ರಚಾರಕರ ಮಾತುಗಳಿಗೆ ಗಮನ ಕೊಡದೆ, ಒಳ್ಳೆಯ ಜ್ಯೋತಿಷಿಗಳನ್ನು ಸಂಪರ್ಕಿಸಿ ಅವರ ಸಲಹೆ ಮೇರೆಗೆ, ವಿವಾಹ, ಗೃಹ ಪ್ರವೇಶ ಇತರೆ ಶುಭ ಕಾರ್ಯಗಳನ್ನು ಮಾಡಬಹುದಾಗಿದೆ.
ಆರ್. ಸೀತಾರಾಮಯ್ಯ,
ಜೋತೀಷ್ಕರು,
ಕಮಲ, 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ - 577 201
ಮೋ: 94490 48340
ಪೋನ್: 08182-227344