Select Your Language

Notifications

webdunia
webdunia
webdunia
webdunia

ತುಲಾ ರಾಶಿಯಲ್ಲಿ ಶನಿ: ನಿಮ್ಮ ಮೇಲೇನು ಪರಿಣಾಮ?

ತುಲಾ ರಾಶಿಯಲ್ಲಿ ಶನಿ: ನಿಮ್ಮ ಮೇಲೇನು ಪರಿಣಾಮ?
ಬೆಂಗಳೂರು , ಗುರುವಾರ, 30 ನವೆಂಬರ್ 2017 (15:48 IST)
ಗ್ರಹಗಳ ಸಂಚಾರದ ಆಧಾರದ ಮೇಲೆ ಆಯಾ ಕಾಲದಲ್ಲಿ ಉಂಟಾಗುವ ಶುಭ ಫಲ ಹಾಗೂ ಅಶುಭಫಲಗಳ ವಿಶ್ಲೇಷಣೆಯೇ ಗೋಚಾರಫಲ. ಈ ಪ್ರಕ್ರಿಯೆಯಲ್ಲಿ ಬಹುತೇಕ ಒಂದೇ ರಾಶಿಯಲ್ಲಿ ದೀರ್ಘ ಕಾಲ ಸಂಚರಿಸುವ ಶನಿ, ಗುರು, ರಾಹು-ಕೇತು ಗ್ರಹಗಳ ಸ್ಥಾನಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಶನಿ ಮತ್ತು ಗುರು ಗ್ರಹಗಳು ನಮ್ಮ ಬದುಕಿನ ಪಥಗಳನ್ನೇ ಬದಲಾಯಿಸುವ ಗ್ರಹಗಳಾಗಿರುವುದರಿಂದ ಈ ಗ್ರಹಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. 
 
ಗುರು ಒಂದು ರಾಶಿಯಲ್ಲಿ ಸುಮಾರು 1 ವರ್ಷ ಸಂಚರಿಸಿದರೆ, ಶನಿ ಒಂದು ರಾಶಿಯಲ್ಲಿ ಸುಮಾರು 2½ ವರ್ಷ ಸಂಚರಿಸುತ್ತಾನೆ. ಈ ಶನಿ ಮತ್ತು ಗುರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗೋಚಾರದಲ್ಲಿ ಈ ಎರಡೂ ಗ್ರಹಗಳು ಶುಭ ಸ್ಥಾನಗಳಲ್ಲಿ ಬಂದಾಗ, ಹೆಚ್ಚಿನ ಶುಭ ಫಲಗಳನ್ನು ಮತ್ತು ಅಶುಭ ಸ್ಥಾನಗಳಲ್ಲಿ ಬಂದಾಗ ಹೆಚ್ಚಿನ ಅಶುಭ ಫಲಗಳನ್ನು ಕೊಡುತ್ತಾರೆ. ಶನಿಯು ಯಾವಾಗ ಆಶೀರ್ವಾದಿಸುವನೋ ಆಗ ಗುರು ಶುಭಫಲವನ್ನು ನೀಡುತ್ತಾನೆ. ಶನಿಯು ಯಾವಾಗ ಅಸಮ್ಮತಿ ಸೂಚಿಸುವನೋ ಆಗ ಗುರು ರಕ್ಷಿಸುತ್ತಾನೆ. ಶನಿಯು ಯಾವಾಗ ಮಾನಸಿಕ ದೈಹಿಕ ಯಾತನೆ ನೀಡುವನೋ ಆಗ ಗುರು ರಕ್ಷಣೆಯನ್ನು ಹಿಂತೆಗೆದುಕೊಳ್ಳುತ್ತಾನೆ. ಗುರು ಮತ್ತು ಶನಿ ಯಾವಾಗ ಸಂಯೋಗ ಉಂಟಾಗುತ್ತದೋ ಆಗ ಹೆಚ್ಚಿನ ತೊಂದರೆ ಉಂಟಾಗುತ್ತದೆ.
 
ಸಾಡೇಸಾತಿ ಎಂದರೆ. 7½ ವರ್ಷಗಳು. ಶನಿಯು ಜನ್ಮರಾಶಿಯಿಂದ 12ನೇ ರಾಶಿಗೆ ಪ್ರವೇಶಿಸಿದಾಗ, ಶನಿಯ ಸಾಡೇಸಾತಿ ಪ್ರಾರಂಭವಾಗುತ್ತದೆ ಈ 12ನೇ ರಾಶಿಯಲ್ಲಿ 2½ ವರ್ಷ ಸಂಚರಿಸಿ ಜನ್ಮ ರಾಶಿಗೆ ಶನಿ ಪ್ರವೇಶಿಸುತ್ತಾನೆ. ಜನ್ಮರಾಶಿಯಲ್ಲಿ 2½ ವರ್ಷಗಳು ಸಂಚರಿಸಿ ನಂತರ 2ನೇ ರಾಶಿಗೆ ಪ್ರವೇಶಿಸುತ್ತಾನೆ. ಈ ರಾಶಿಯಲ್ಲಿ 2½ ವರ್ಷಗಳು ಸಂಚರಿಸಿ, ಮುಂದಿನ ರಾಶಿಗೆ ಹೋಗುತ್ತಾನೆ. ಒಟ್ಟು ಈ 7½ ವರ್ಷಗಳ ಸಂಚಾರವನ್ನು ಸಾಡೇಸಾತಿ ಎಂದು ಕರೆಯುತ್ತೇವೆ.
 
ಶನಿಯು ಜನ್ಮರಾಶಿಯಿಂದ 12ನೇ ರಾಶಿಗೆ ಪ್ರವೇಶಿಸಿದಾಗ, ಇದನ್ನು ಸಾಡೇಸಾತಿಯ ಮೊದಲನೇ ಹಂತವೆಂದು ಕರೆಯುತ್ತೇವೆ. ಜನ್ಮ ರಾಶಿಗೆ ಶನಿ ಪ್ರವೇಶಿಸಿದಾಗ ಸಾಡೇಸಾತಿಯ ಎರಡನೇ ಹಂತವೆಂದೂ ಮತ್ತು 2ನೇ ರಾಶಿಗೆ ಶನಿ ಪ್ರವೇಶಿಸಿದಾಗ ಸಾಡೇಸಾತಿಯ ಮೂರನೇ ಹಂತವೆಂದು ಕರೆಯುತ್ತೇವೆ.
 
ಶನಿಯ ಸಾಡೇಸಾತಿ ಮೊದಲನೇ ಹಂತದ ಗೋಚಾರ ಫಲಗಳನ್ನು ಎರಡು ವಿಧದ ಘಟನಾವಳಿಗಳು ಸಂಭವಿಸುತ್ತವೆ. ಸ್ಥಾನ, ಸ್ಥಿತಿ ಮತ್ತು ವೃತ್ತಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಹೊಸ ಉದ್ಯೋಗ, ಹೊಸಜೀವನ, ಹೊಸ ಸ್ಥಳಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು, ಮದುವೆ ಕಾರ್ಯಗಳೂ ಸಹಾ ಜರುಗುತ್ತವೆ. ಕೆಲವು ಸಲ ದಿಗ್ಭ್ತ್ರಮೆ, ಒತ್ತಡ, ನಿಸ್ಸಹಾಯಕತೆ, ಆಯಾಸ ಉಂಟಾಗುತ್ತದೆ. ಇಷ್ಟವಿಲ್ಲದಿದ್ದರೂ ಬಲವಂತ ನಿರ್ಧಾರಕ್ಕೆ ಮಣಿಯಬೇಕಾಗುತ್ತದೆ. ದೈಹಿಕ ಮತ್ತು ಮಾನಸಿಕ ಶ್ರಮ, ಕುಟುಂಬದಲ್ಲಿ ಅನಾರೋಗ್ಯ, ಶಕ್ತಿ ಕುಂದುವಿಕೆ, ನಿದ್ರಾಭಂಗ, ಅನಾವಶ್ಯಕ ಹಣಕಾಸಿನ ವೆಚ್ಚ ಉಂಟಾಗುತ್ತದೆ.
 
ಸಾಡೇ ಸಾತಿಯ 2ನೇ ಹಂತದ ಗೋಚಾರಫಲದಲ್ಲಿ ನೆಮ್ಮದಿಗೆ ಭಂಗ, ಉಸಿರಾಟದ ಹಾಗೂ ಹೃದಯದ ತೊಂದರೆಗಳು, ಸಂದಿಗ್ಧತೆಗಳು ಎದುರಾಗುತ್ತವೆ. ನಿರಾಶದಾಯಕ, ನಿರ್ಧಾರಗಳ ಬದಲಾವಣೆಗಳು. ಮನೆ ಇಬ್ಬಾಗ, ತೀರಾ ಹತ್ತಿರದ ಸ್ನೇಹಿತರಿಂದ, ಬಂಧುಗಳಿಂದ ಬೇರ್ಪಡುವುದು. ಯಾವುದೇ ಉದ್ದೇಶಗಳಿಗೆ ಏಕಾಗ್ರತೆಯಿರುವುದಿಲ್ಲ. ಆಕಸ್ಮಿಕ ಘಟನೆಗಳಿಗೆ ಹೊಣೆಗಾರರಾಗಬೇಕಾಗುತ್ತದೆ. ಪ್ರಗತಿಯ ಹಿನ್ನಡೆ ಉಂಟಾಗುತ್ತದೆ.
 
ಸಾಡೇ ಸಾತಿಯ 3ನೇ ಹಂತದ ಗೋಚಾರಫಲದಲ್ಲಿ, ಯಾವುದೇ ಸಂಘ ಸಂಸ್ಥೆಯೊಂದಿಗೆ. ಪಂಗಡದೊಂದಿಗೆ, ಸೇರಲು ಸಾಧ್ಯವಾಗದೆ ಇರುವುದು, ಅಲೆದಾಟ, ಇಷ್ಟವಿಲ್ಲದ ಸ್ಥಳಗಳಿಗೆ ವರ್ಗಾವಣೆ, ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಇರುವುದು ಬಲತ್ಕಾರದ ನಿರ್ಬಂಧ ಉಂಟಾಗುತ್ತದೆ.
 
ಇದು ಸಾಡೇಸಾತಿಯ ಮೂರು ಹಂತಗಳ ಗೋಚಾರಫಲವಾಗಿರುತ್ತದೆ.
 
ಶನಿಯು ಕನ್ಯಾ ರಾಶಿಯಿಂದ, ತುಲಾ ರಾಶಿಗೆ 15 ನವೆಂಬರ್ 2011ರ ಬುಧವಾರ ಬೆಳಿಗ್ಗೆ 10 ಗಂಟೆ, 11 ನಿಮಿಷಕ್ಕೆ ಪ್ರವೇಶಿಸುತ್ತಾನೆ. ತುಲ ರಾಶಿಯ ಅಧಿಪತಿ ಶುಕ್ರ, ಶನಿ ತುಲಾರಾಶಿಯಲ್ಲಿ ಉಚ್ಚ ಸ್ಥಾನ ಹೊಂದುತ್ತಾನೆ ಹಾಗೂ ಶುಭ ಫಲ ನೀಡುತ್ತಾನೆ. 7 ಫೆಬ್ರವರಿ 2012 ರಂದು ಶನಿಯು ವಕ್ರಿಯಾಗಿದ್ದು, 25 ಜೂನ್ 2012 ರಂದು ಋಜುಮಾರ್ಗ ಹೊಂದುತ್ತಾನೆ. ಶನಿಯು ಚಿತ್ತಾ ನಕ್ಷತ್ರದಲ್ಲಿದ್ದು ನಂತರ 11 ಅಕ್ಟೋಬರ್ 2012 ರಂದು 1 ಗಂಟೆ 9 ನಿಮಿಷಕ್ಕೆ ಸ್ವಾತಿ ನಕ್ಷತ್ರದಲ್ಲಿ ಸಂಚರಿಸುತ್ತಾನೆ. 4 ನವೆಂಬರ್ 2013 ರವರೆಗೆ ಸ್ವಾತಿ ನಕ್ಷತ್ರದಲ್ಲಿದ್ದು ನಂತರ ವಿಶಾಖ ನಕ್ಷತ್ರ 1, 2, 3 ನೇ ಪಾದಗಳಲ್ಲಿ ಸಂಚರಿಸಿ 2 ನವೆಂಬರ್ 2014 ರಂದು ರಾತ್ರಿ 11 ಗಂಟೆ 34 ನಿಮಿಷಕ್ಕೆ ಶನಿಯು ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ.
 
ಶನಿಯು ತುಲಾರಾಶಿಯಲ್ಲಿ ವಕ್ರಿಯಾಗಿದ್ದಾಗ (07.02.2012 ರಿಂದ 25.06.2012) ಅಶುಭ ಫಲ ಹೆಚ್ಚಾಗುತ್ತದೆ. ಕಾಯಿಲೆಗಳು ಉಲ್ಬಣಗೊಳ್ಳುತ್ತವೆ. ಕಿಡ್ನಿ ಮತ್ತು ರಕ್ತನಾಳ ತೊಂದರೆಯಿರುವವರಿಗೆ ರೋಗ ಉಲ್ಬಣಗೊಂಡು ನರಳುತ್ತಾರೆ. ಇದು ಶನಿಯ ಮೂರನೇ ಪರಿಭ್ರಮಣೆಯಾಗಿದ್ದರೆ. ಹೆಚ್ಚಿನ ಚಿಕಿತ್ಸೆಗೆ ಒಳಪಡುತ್ತಾರೆ. ಪಾಲುಗಾರಿಕೆ ವ್ಯವಹಾರಸ್ಥರು ಈ ವೇಳೆಯಲ್ಲಿ ತಮ್ಮ ಚಿತ್ತವನ್ನು ಕಳೆದುಕೊಳ್ಳುತ್ತಾರೆ. ಚಿತ್ತಾ ನಕ್ಷತ್ರದವರಿಗೆ ಇದು ಹೆಚ್ಚಾಗಿರುತ್ತದೆ. ಗೃಹ ನಿರ್ಮಾಣ ಕಂಟ್ರಾಕ್ಟರ್‌ಗಳು ಅತೀ ಹೆಚ್ಚಿನ ಹಣ ತೊಡಗಿಸಬೇಕಾಗುತ್ತದೆ. ಆಟೋಮೊಬೈಲ್ ವ್ಯಾಪಾರಸ್ಥರಿಗೆ ವ್ಯವಹಾರ ಮಾಡುವಲ್ಲಿ ಎಡವುತ್ತಾರೆ. ಮಾನಸಿಕ ನೆಮ್ಮದಿಯಿರುವುದಿಲ್ಲ.
 
ತುಲಾ ರಾಶಿಯು ಚಿತ್ತ 2 ಪಾದಗಳು, ಸ್ವಾತಿ 4 ಪಾದಗಳು ಮತ್ತು ವಿಶಾಖದ 3 ಪಾದಗಳನ್ನು ಒಳಗೊಂಡಿರುತ್ತದೆ. ಸ್ವಾತಿಯ 4ನೇ ನವಾಂಶ ಮತ್ತು ವಿಶಾಖ ನಕ್ಷತ್ರದ 2ನೇ ನವಾಂಶವು ಪುಷ್ಕರ ನವಾಂಶವಾಗಿದ್ದು, ಶನಿಯು ಇದರಲ್ಲಿ ಪರಿಭ್ರಮಣೆ ಮಾಡುವಾಗ ಶುಭ ಫಲವನ್ನು ನೀಡುತ್ತಾನೆ.
 
ಶನಿಯು ಪೂರ್ವ ಜನ್ಮದ ಕರ್ಮಗಳನ್ನು ಆಧರಿಸಿ ಬರುವ ಫಲಗಳಿಗೆ ಸೇತುವಾಗಿದ್ದಾನೆ. ಅವನು ಕರ್ಮಕ್ಕನುಸಾರವಾಗಿ ನಿರ್ದಾಕ್ಷಿಣ್ಯವಾಗಿ ನ್ಯಾಯ ನೀಡುತ್ತಾನೆ. ತುಲಾ ರಾಶಿಯು ತಕ್ಕಡಿಯ ಚಿಹ್ನೆಯಾಗಿದ್ದು, ಇಲ್ಲಿ ಶನಿಯು ಪರಿಭ್ರಮಿಸುವಾಗ ನ್ಯಾಯವನ್ನು ಸಮನಾಗಿ ತೂಗಿ ಫಲ ನೀಡುತ್ತಾನೆ.
 
ಶನಿಯು ತುಲಾ ರಾಶಿದಲ್ಲಿ ಸಂಚರಿಸುವಾಗ ಗುರುವು ಮೇಷದಲ್ಲಿದ್ದು ಪರಸ್ಪರ 7ನೇ ದೃಷ್ಟಿ ಹೊಂದುತ್ತದೆ. ಗುರುವು ದೈವಿ ಹಾಗೂ ಕಾನುನುಬದ್ಧ ಗ್ರಹವಾಗಿದ್ದು, ಗುರು ಕಾನೂನು ಹಾಗೂ ಶನಿ ನ್ಯಾಯವನ್ನು ನೀಡುತ್ತಾರೆ. ಹಾಗಾಗಿ ಈ ಅವಧಿಯಲ್ಲಿ ತಪ್ಪಿತಸ್ಥರೆಲ್ಲರೂ ಶಿಕ್ಷಿಸಲ್ಪಡುತ್ತಾರೆ. ಶನಿಯು ಸೆರೆವಾಸವನ್ನು ತೋರಿಸುತ್ತದಾದ್ದರಿಂದ ಅನ್ಯಾಯ ಹಾಗೂ ಅಧರ್ಮದಲ್ಲಿ ನಡೆಯುವವರಿಗೆ ಶಿಕ್ಷೆಯಾಗುತ್ತದೆ.
 
ಭಾರತೀಯ ಜ್ಯೋತಿಷ್ಯದ ಪ್ರಕಾರ ಗೋಚಾರದ ಫಲಗಳನ್ನು ಚಂದ್ರನಿಂದ ನೋಡಲಾಗುತ್ತದೆ. ಶನಿಯು ತುಲಾ ರಾಶಿಯಲ್ಲಿ ಪರಿಭ್ರಮಣೆಯ ಪರಿಣಾಮಗಳು ಈ ಕೆಳಕಂಡಂತಿವೆ.
 
ಶನಿಯು ಮೂಲತಃ ಅಗಲಿಕೆ ಹಾಗೂ ವೈಮನಸ್ಸನ್ನು ವ್ಯಕ್ತಿಗಳ ಮಧ್ಯೆ ಹುಟ್ಟಿಸುತ್ತಾನೆ. ಶನಿ ಗ್ರಹವು ಚಂದ್ರನಿಂದ 3, 6 ಮತ್ತು 11ನೇ ರಾಶಿಗೆ ಬಂದಾಗ ಉತ್ತಮ ಫಲಗಳನ್ನು ನೀಡುತ್ತಾನೆ. ಬೇರೆಡೆ ಅಷ್ಟು ಉತ್ತಮ ಫಲಗಳು ಸಿಗುವುದಿಲ್ಲ. ಶನಿಯು ಸಂಚಾರದಲ್ಲಿ 5 ಹಾಗೂ 8ನೇ ರಾಶಿ ಯಲ್ಲಿ ಕೇವಲ ಅಶುಭ ಫಲಗಳನ್ನೇ ನೀಡುತ್ತಾನೆ. ಪಂಚಮದಲ್ಲಿದ್ದಾಗ ವ್ಯಕ್ತಿಗೆ ಮಾನಸಿಕ ಕ್ಲೇಶ, ಮಕ್ಕಳಿಂದ ದುಃಖ, ಬಾಂಧವ್ಯಗಳಲ್ಲಿ ಬಿರುಕು, ಅನಾರೋಗ್ಯ, ಗಾಯಗಳನ್ನು ನೀಡುತ್ತಾನೆ. ಪಂಚಮದಿಂದ 3ನೇ ದೃಷ್ಟಿ ಅಂದರೆ ಚಂದ್ರನಿಂದ 7ನೇ ರಾಶಿ ದಾಂಪತ್ಯದಲ್ಲಿ ವಿರಸ ನೀಡುತ್ತಾನೆ. ಶನಿಯು 7ನೇ ದೃಷ್ಟಿ ಅಂದರೆ ಚಂದ್ರನಿಂದ 11ನೇ ರಾಶಿ ಲಾಭ ಸ್ಥಾನವಾಗಿದ್ದು, ಶನಿಯು ಪಂಚಮದಿಂದ ನೋಡಿದಾಗ ಆದಾಯವು ಕುಂಠಿತವಾಗುತ್ತದೆ. ಶನಿಯ 10ನೇ ದೃಷ್ಟಿ - ಚಂದ್ರನಿಂದ ದ್ವಿತೀಯ ಧನ ಸ್ಥಾನವಾಗಿದ್ದು, ಶನಿಯ ದೃಷ್ಟಿಯಿಂದ ಧನವೆಲ್ಲಾ ಕರಗಿ ಹೋಗುತ್ತದೆ.
 
 
ಶನಿಯು ಅಷ್ಟಮಕ್ಕೆ ಬಂದಾಗ, ಅಪಘಾತಗಳು ಮತ್ತು ರೋಗ, ರುಜಿನಗಳು ಕಾಡುತ್ತದೆ. ಶನಿಯ 3ನೇ ದೃಷ್ಟಿ ಅಂದರೆ ಚಂದ್ರನಿಂದ 10ನೇ ಮನೆ, ವೃತ್ತಿಯಲ್ಲಿ ಹಿನ್ನೆಡೆ ಉಂಟಾಗುತ್ತದೆ. ಶನಿಯ 7ನೇ ದೃಷ್ಟಿ ಅಂದರೆ ಚಂದ್ರನಿಂದ ದ್ವಿತೀಯ ಸ್ಥಾನ ಕೂಡಿಟ್ಟ ಹಣವು ಕರಗಿ ಹೋಗುತ್ತದೆ. ಕೊನೆಯದಾಗಿ ಶನಿಯ 10ನೇ ದೃಷ್ಟಿ ಅಂದರೆ ಚಂದ್ರನಿಂದ ಪಂಚಮ ರಾಶಿಯಾಗಿದ್ದು, ಮಕ್ಕಳಿಂದ ದುಃಖವನ್ನು ನೀಡುತ್ತದೆ. ಶನಿಯು ಪಂಚಮ ಹಾಗೂ ಅಷ್ಟಮ ಪರಿಭ್ರಮಣವನ್ನು ಶಿಕಂಟಕ ಶನಿಷಿ ಎಂದು ಕರೆಯುತ್ತಾರೆ.
 
ಪುಷ್ಯ, ಅನುರಾಧ, ಉತ್ತಾರಬಾದ್ರ ನಕ್ಷತ್ರಗಳಲ್ಲಿ ಜನಿಸಿದವರಿಗೆ, ಎಲ್ಲಾ ಸಮಸ್ಯೆಗಳಿಂದ ಹೊರಬಂದು, ಸಮಾಧಾನ ಪಡೆಯುತ್ತಾರೆ. ಶನಿದಶೆ ನಡೆಯುತ್ತಿರುವವರು ಮತ್ತು ಮಕರ, ಕುಂಭ ಅಥವಾ ತುಲಾ ರಾಶಿಯಲ್ಲಿ ಶನಿಯು ಇದ್ದಾಗ, ಕುಜ, ರಾಹು ಅಥವಾ ಕೇತುವಿನ ಸಂಯೋಗ ಅಥವಾ ದೃಷ್ಟಿ ಇಲ್ಲದಿದ್ದರೆ ಅವರು ಆರೋಗ್ಯ, ವೃತ್ತಿ ಮತ್ತು ಹಣಕಾಸು ವ್ಯವಹಾರಗಳಲ್ಲಿ ಪ್ರಗತಿ ಹೊಂದುತ್ತಾರೆ.
 
1. ಶನಿಯು ಜನ್ಮರಾಶಿ ತುಲಾರಾಶಿಯನ್ನು ಪ್ರವೇಶಿಸಿದಾಗ (ಚಿತ್ತಾ 3, 4 ಸ್ವಾತಿ 1, 2, 3, 4 ಮತ್ತು ವಿಶಾಖ 1, 2, 3) ಆರೋಗ್ಯದಲ್ಲಿ ಸಮಸ್ಯೆಗಳು ಉಲ್ಬಣ, ಸಣ್ಣ ಮತ್ತು ಸರಳವಾದ ವಿಚಾರಗಳು ಸಹಾ ದೊಡ್ಡ ಸಮಸ್ಯೆಯಾಗಿ ತೊಂದರೆ ನೀಡುತ್ತದೆ. ಉದ್ವೇಗ ಹಾಗೂ ಅಸಂಬದ್ಧ ತೀರ್ಮಾನಗಳು, ಮುಖ್ಯವಾದ ವಿಚಾರಗಳಲ್ಲಿ ತೆಗೆದುಕೊಳ್ಳುತ್ತಾರೆ. ಕಾನೂನಿನ ಇಕ್ಕಟ್ಟಿನಲ್ಲಿ ಸಿಕ್ಕಿಕೊಳ್ಳುತ್ತಾರೆ. ಇಲ್ಲಿ ಶನಿ ಉಚ್ಚನಾಗಿರುವುದರಿಂದ ಈ ಎಲ್ಲಾ ತೊಂದರೆಗಳನ್ನು ಪರಿಹರಿಸಿಕೊಳ್ಳಬಹುದು.
 
2.ಶನಿಯು ಕನ್ಯಾರಾಶಿಯಿಂದ 2ನೇ ರಾಶಿಗೆ ಪ್ರವೇಶಿಸಿದಾಗ ಜಾತಕನ ಒಳಿತನ್ನು ಬಯಸುವವರ ಜೊತೆ ದ್ವೇಷವನ್ನು ಕೊಡುತ್ತದೆ. ಕೈಗೊಂಡ ಕೆಲಸಗಳಲ್ಲಿ ವಿಫಲ ಅನುಭವಿಸುತ್ತಾರೆ. ಕೆಲವರು ಯಾವುದೇ ಲಾಭವಿಲ್ಲದೆ ವೃಥಾ ಸಂಚಾರ ಮಾಡುತ್ತಾರೆ. ಕೆಲವರು ತಮ್ಮ ಕೆಟ್ಟ ಕೆಲಸ ಕಾರ್ಯಗಳಿಂದ ಸಮಾಜ ಮತ್ತು ಮನೆಯಿಂದ ತೊಂದರೆ ಒಳಪಡುತ್ತಾರೆ.
 
3. ಶನಿಯು ಸಿಂಹರಾಶಿಯಿಂದ 3ನೇ ರಾಶಿಗೆ ಪ್ರವೇಶಿಸಿದಾಗ ವಿರುದ್ಧ ಲಿಂಗದವರೊಡನೆ ಆಸಕ್ತಿ ಹೊಂದಿ ಸಮಾಜದ ಅಗೌರವಕ್ಕೆ ಪಾತ್ರರಾಗುತ್ತಾರೆ. ತಮ್ಮ ಉದ್ವೇಗಭರಿತ ಒಪ್ಪಂದಗಳಿಂದ ಮಾನಸಿಕ ನೆಮ್ಮದಿ ಇಲ್ಲವಾಗುತ್ತದೆ. ಒಳ್ಳೆಯ ದಶೆಯು ನಡೆಯುತ್ತಿದ್ದರೆ ಸ್ವಂತ ಮನೆ ಮತ್ತು ಉತ್ತಮ ಹಾಗೂ ಲಾಭದಾಯಕ ವೃತ್ತಿಗೆ ಹಣವನ್ನು ತೊಡಗಿಸುತ್ತಾನೆ. ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಗತಿ (ಶನಿಯ 2ನೇ ಪರಿಭ್ರಮಣೆಯಾಗಿದ್ದಲ್ಲಿ) ಮತ್ತು ಒಳ್ಳೆಯ ಆರೋಗ್ಯ ಹೊಂದುತ್ತಾರೆ.
 
4. ಶನಿಯು ಕಟಕ ರಾಶಿಯಿಂದ 4ನೇ ರಾಶಿಗೆ ಪ್ರವೇಶಿಸಿದಾಗ ಕೆಲವು ತಪ್ಪುಗಳಿಂದ ತುಂಬಲಾರದ ನಷ್ಟ ಅನುಭವಿಸುತ್ತಾರೆ. ಹಿಂದೆ ಮಾಡಿದ ಒಪ್ಪಂದಗಳಿಂದ ಹಣಕಾಸು ವ್ಯವಹಾರದಲ್ಲಿ ಒತ್ತಡ, ಅತಿ ವೆಚ್ಚ, ಮಾನಸಿಕ ಅಸಮಾಧಾನಗಳು ಉಂಟಾಗುತ್ತದೆ, ಆರೋಗ್ಯ ಸಮಸ್ಯೆಯಿಂದ ಬಹಳ ಖರ್ಚು ಉಂಟಾಗುತ್ತದೆ. ಯಾರು ತಮ್ಮ ಜಾತಕದಲ್ಲಿ ಶನಿಯು ರವಿ ಅಥವಾ ರಾಹು ಅಥವಾ ಕೇತುವಿನೊಡನೆ ಇದ್ದು ಲಗ್ನದಿಂದ 4ನೇ ಮನೆ, 7ನೇ ಮನೆ, 9ನೇ ಮನೆ ಮತ್ತು 10ನೇ ಮನೆಯಲ್ಲಿದ್ದಾಗ (ಮಕರ ಲಗ್ನ ಬಿಟ್ಟು) ಸಮಸ್ಯೆಗಳು ಪರಿಹಾರವಾಗುತ್ತದೆ ಮತ್ತು ಮನೆಯಲ್ಲಿ ಹೊಸ ಮಗುವಿನ ಬರುವಿಕೆಯನ್ನು ನೋಡಬಹುದು ಆದರೂ ಮನೆಯಲ್ಲಿ ಅಶಾಂತಿ ತಲೆದೋರುತ್ತದೆ.
 
5. ಶನಿಯು ಮಿಥುನರಾಶಿಯಿಂದ, 5ನೇ ರಾಶಿಯನ್ನು ಪ್ರವೇಶಿಸಿದಾಗ ಹೊಸ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ತಮ್ಮ ಸಹೋದ್ಯೋಗಿಗಳ ಜೊತೆ ಮಾತನಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಹೆಚ್ಚು ಖರ್ಚುಗಳನ್ನು ತಡೆಯಬೇಕು. ಅನಾವಶ್ಯಕ ವಾದ-ವಿವಾಗಳು ಉಂಟಾಗುತ್ತದೆ. ಕೆಲವರು ಮಾನಸಿಕ ಒತ್ತಡದಿಂದ ಬೇಸರ ಹೊಂದುತ್ತಾರೆ.
 
6. ಶನಿಯು ವೃಷಭರಾಶಿಯಿಂದ 6ನೇ ರಾಶಿಯನ್ನು ಪ್ರವೇಶಿಸಿದಾಗ ಹಿಂದೆ ಅನುಭವಿಸಿದ ಕಷ್ಟಗಳಿಂದ ಮುಕ್ತಿ ಪಡೆದು ಸಮಾಧಾನ ನೀಡುತ್ತದೆ. ಕೆಲಸದಲ್ಲಿ ಪ್ರಗತಿ, ಹಣದ ಸಂಪಾದನೆ, ಹೊಸ ಉದ್ಯೋಗದ ವಾತಾವರಣ ದೊಡ್ಡ ಜವಾಬ್ದಾರಿಗಳು, ಒಪ್ಪಂದಗಳನ್ನು ಪೂರ್ತಿ ಮಾಡುತ್ತಾರೆ. ಪ್ರಗತಿ ಹಾಗೂ ಮನೆಯಲ್ಲಿ ಸಂತೋಷ ವಾತಾವರಣ ಉತ್ತಮ ಬದುಕು ಸಾಗಿಸಲು ಬದಲಾವಣೆ, ಸಂಗಾತಿಯ ಜೊತೆಗೆ ಸಂತೋಷ, ಮನೆಯಲ್ಲಿ ಮದುವೆಯಂತಹ ಶುಭಕಾರ್ಯಗಳು ನಡೆಯುತ್ತದೆ. ಬೆಳವಣಿಗೆಯು ಈ ಹಂತದಲ್ಲಿ ಉತ್ತಮವಾಗಿರುತ್ತದೆ.
 
7. ಶನಿಯು ಮೇಷರಾಶಿಯಿಂದ 7ನೇ ರಾಶಿಯನ್ನು ಪ್ರವೇಶಿಸಿದಾಗ ಅನಾವಶ್ಯಕ ತೊಂದರೆಗಳು, ಅನಗತ್ಯ ಘಟನೆಗಳಿಂದ ಮಾನಸಿಕ ಕ್ಲೇಶ, ಹತ್ತಿರವಿರುವವರು ದೂರವಾಗಿ ಆಶ್ಚರ್ಯ ಮೂಡಿಸುತ್ತಾರೆ. ದೈಹಿಕ ತೊಂದರೆಗಳು, ಅನಗತ್ಯ ಖರ್ಚುಗಳು ಅನಾವಶ್ಯಕ ಪ್ರಯಾಣ ಮತ್ತು ಪ್ರಗತಿ ಕ್ಷೀಣ ಕಂಡುಬರುತ್ತದೆ. ಒಟ್ಟಾರೆ ಈ ಸಮಯವು ಒಳ್ಳೆಯ ಸಮಾಧಾನಕರವಾಗಿಲ್ಲ ಉದ್ಯೋಗ ಸಲುವಾಗಿ ಹೊರದೇಶ ಪ್ರಯಾಣ ಉತ್ತಮ, ಉದ್ಯೋಗ ಹುಡುಕುತ್ತಿರುವವರಿಗೆ ಉದ್ಯೋಗದ ಅವಕಾಶ.
 
8. ಶನಿಯು ಮೀನ ರಾಶಿಯಿಂದ 8ನೇ ರಾಶಿಯನ್ನು ಪ್ರವೇಶಿಸಿದಾಗ ಹಿಡಿದ ಕಾರ್ಯಗಳಲ್ಲಿ ತೊಡಕುಗಳು ಉಂಟಾಗುತ್ತದೆ. ಶನಿಯು ತುಲಾ ರಾಶಿಗೆ ಪ್ರವೇಶಿಸುವ ಮುನ್ನ ಅನಾರೋಗ್ಯ ಪೀಡಿತರಾಗಿದ್ದವರು, ಈಗ ಖಾಯಿಲೆಗಳು ಉಲ್ಬಣಗೊಳ್ಳುತ್ತವೆ. ಶನಿಯ 3ನೇ ಪರಿಭ್ರಮಣವಾಗಿದ್ದರೆ. ಆರೋಗ್ಯ ಹಾಗೂ ಖರ್ಚುಗಳಲ್ಲಿ ಹಿಡಿತ ಮಾಡಬೇಕು. ಕೆಲವರು ಶಸ್ತ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಾರೆ. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನವಹಿಸಬೇಕು.
 
9. ಶನಿಯು ಕುಂಭ ರಾಶಿಯಿಂದ 9ನೇ ರಾಶಿಗೆ ಪ್ರವೇಶಿಸಿದಾಗ ಹಣಕಾಸಿನ ಲಾಭ, ವೃತ್ತಿಯಲ್ಲಿ ಗೌರವ, ಹೊಸ ರೀತಿಯ ವೃತ್ತಿ ಮತ್ತು ಸಂಪಾದನೆ. ಸಂಬಂಧಿಕರಲ್ಲಿ ಅನಾರೋಗ್ಯ ಹೊಂದಿ ಹಣಕಾಸಿನ ಖರ್ಚು ಹೆಚ್ಚಾಗುತ್ತದೆ.
 
10. ಶನಿಯು ಮಕರ ರಾಶಿಯಿಂದ 10ನೇ ರಾಶಿಗೆ ಪ್ರವೇಶಿಸಿದಾಗ ಮಾನಸಿಕ ಅಸಮಾಧಾನ ಕಡಿಮೆಯಾಗುತ್ತದೆ. ಹಿಂದಿನ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಒತ್ತಡವಾದಾಗ ಹಣದ ಸಹಾಯ ದೊರೆಯುತ್ತದೆ. ಹೊಸ ಒಪ್ಪಂದಗಳು ಮನಸ್ಸಿಗೆ ಒತ್ತಡ ತರುತ್ತದೆ. ಅನಗತ್ಯ ಜನರು ಮನೆಗೆ ಬರುವುದರಿಂದ ಸಂಬಂಧಗಳಲ್ಲಿ ಅಸಮಾಧಾನ ಉಂಟಾಗುತ್ತದೆ.
 
11. ಶನಿಯು ಧನಸ್ಸು ರಾಶಿಯಿಂದ 11ನೇ ರಾಶಿಗೆ ಪ್ರವೇಶಿಸಿದಾಗ ಆಕಸ್ಮಿಕ ಹಣಕಾಸಿನ ಪ್ರಗತಿ, ಉದ್ಯೋಗದ ವಾತಾವರಣದಲ್ಲಿ ಗೌರವ ಸಿಗುತ್ತದೆ. ಅವಶ್ಯಕತೆ ಇದ್ದಾಗ ಹೊಸ ಸ್ನೇಹಿತರಿಂದ ಸಹಾಯ ಸಿಗುತ್ತದೆ. ಹೊಸ ಉದ್ಯೋಗಗಳಲ್ಲಿ ಪ್ರಗತಿ ಉತ್ತಮ ವಾತಾವರಣವು ದೊರೆಯುತ್ತದೆ. ಸಂಗಾತಿಯಿಂದ ಸಂತೋಷ ಸಿಗುತ್ತದೆ.
 
12. ಶನಿಯು ವೃಶ್ಚಿಕ ರಾಶಿಯಿಂದ 12ನೇ ರಾಶಿಗೆ ಪ್ರವೇಶಿಸಿದಾಗ ಅನಾವಶ್ಯಕ ಹಾಗೂ ಅನಗತ್ಯ ಮಾನಸಿಕ ಒತ್ತಡ ಅನುಭವಿಸುತ್ತಾರೆ. ಸಮಸ್ಯೆಗಳನ್ನು ಎದುರಿಸುವುದಕ್ಕೆ ಹಿಂಜರಿಯುತ್ತಾರೆ. ಖರ್ಚುಗಳಿಂದ ಹಣಕಾಸಿನ ಸಮಸ್ಯೆ, ಸಂಬಂಧಿಕರಿಂದ ಅಸಮಾಧಾನ ಉಂಟಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

2018ರ ಭವಿಷ್ಯ-ನಿಮ್ಮ ರಾಶಿಗಳ ಮೇಲೆ ಏನು ಪ್ರಭಾವ?