21
ಡಿಸೆಂಬರ್ 2010ರಂದು ಹಗಲು ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 125ನೆಯದಾಗಿದ್ದು, 72 ಗ್ರಹಣಗಳಲ್ಲಿ ಇದು 48ನೇ ಪೂರ್ಣ ಚಂದ್ರ ಗ್ರಹಣವಾಗಿರುತ್ತದೆ.
ಈ ಗ್ರಹಣವು ಭೂಮಿಯ ಉತ್ತರಾರ್ಧ ಗೋಳದಲ್ಲಿ ಗೋಚರಿಸುತ್ತದೆ. ಗ್ರಹಣವು ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾದ ಪಶ್ಚಿಮ ಭಾಗಗಳಲ್ಲಿ ಗ್ರಹಣದ ಎಲ್ಲಾ ಹಂತಗಳು ಗೋಚರಿಸುತ್ತವೆ. ದಕ್ಷಿಣ ಅಮೆರಿಕಾದ ಪೂರ್ವ ಕರಾವಳಿ ಭಾಗಗಳಲ್ಲಿ ಹಾಗೂ ಯೂರೋಪ್ ಮತ್ತು ಆಫ್ರಿಕಾ ಖಂಡಗಳಲ್ಲಿ ಗ್ರಹಣದ ಕೊನೆಯ ಹಂತ ಗೋಚರಿಸುವುದಿಲ್ಲ. ಈ ಸ್ಥಳಗಳಲ್ಲಿ ಗ್ರಹಣದೊಂದಿಗೆ ಚಂದ್ರ ಮುಳುಗುತ್ತಾನೆ. ಯೂರೋಪ್‌ನ ಸ್ಕ್ಯಾಂಡಿನೇವಿಯದಲ್ಲಿ ಚಂದ್ರಗ್ರಹಣದ ಎಲ್ಲಾ ಹಂತಗಳನ್ನು ನೋಡಬಹುದು. ಪೂರ್ವ ಏಷ್ಯ ಭಾಗಗಳಲ್ಲಿ ಗ್ರಸ್ತೋದಿತ ಚಂದ್ರ ಗ್ರಹಣವನ್ನು ನೋಡಬಹುದು ಆಫ್ರಿಕಾದ ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ, ಮಧ್ಯ ಏಷ್ಯಾ, ದಕ್ಷಿಣ ಏಷ್ಯಾಗಳಲ್ಲಿ ಗ್ರಹಣ ಗೋಚರಿಸುವುದಿಲ್ಲ. ಅಂದರೆ ಭಾರತದಲ್ಲೂ ಚಂದ್ರ ಗ್ರಹಣ ಗೋಚರಿಸುವುದಿಲ್ಲ.
ಈ ಗ್ರಹಣದ ವಿಶೇಷವೇನೆಂದರೆ, ಗ್ರಹಣದ ಪ್ರಾರಂಭದಲ್ಲಿ ಚಂದ್ರನು ಬೂದು ಬಣ್ಣದಲ್ಲಿ ಕಂಡುಬಂದು ಕ್ರಮೇಣ ಕಪ್ಪಗಾಗುತ್ತಾನೆ. ಗ್ರಹಣದ ಪರಿಪೂರ್ಣತೆಯ ಅವಧಿಯಲ್ಲಿ ತಾಮ್ರ ಮತ್ತು ಕಿತ್ತಲೆ ಬಣ್ಣವಾಗಿ ಕಂಡುಬರುತ್ತದೆ. ಚಂದ್ರ ಗ್ರಹಣದಲ್ಲಿ ಸೂರ್ಯನ ಬೆಳಕನ್ನು ಚಂದ್ರನಿಗೆ ತಲುಪದಂತೆ, ಭೂಮಿ ತಡೆಯುತ್ತದೆ. ಸೂರ್ಯನ ಬೆಳಕನ್ನು ಭೂಮಿಯ ವಾತಾವರಣವು ಚದುರಿಸಿದಾಗ ಕೆಂಪು ಬಣ್ಣದ ಬೆಳಕು ಮಾತ್ರ ಚಂದ್ರನನ್ನು ತಲುಪಿ ಪೂರ್ಣ ಗ್ರಹಣದ ವೇಳೆಯಲ್ಲಿ ಚಂದ್ರ ಕೆಂಪು ಬಣ್ಣವಾಗಿ ಗೋಚರಿಸುತ್ತದೆ.
ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆ 2 ನಿಮಿಷಕ್ಕೆ ಗ್ರಹಣ ಸ್ಪರ್ಶ ಉಂಟಾಗುತ್ತದೆ. ಗ್ರಹಣದ ಮಧ್ಯ ಕಾಲ ಮಧ್ಯಾಹ್ನ 1 ಗಂಟೆ 47 ನಿಮಿಷವಾಗಿರುತ್ತದೆ. ಮಧ್ಯಾಹ್ನ 3 ಗಂಟೆ 32 ನಿಮಿಷಕ್ಕೆ ಗ್ರಹಣದ ಮೋಕ್ಷಕಾಲ. ಗ್ರಹಣದ ಒಟ್ಟು ಕಾಲ 3 ಗಂಟೆ 30 ನಿಮಿಷ. ಗ್ರಾಸ ಪ್ರಮಾಣ 1.261ರಷ್ಟಿರುತ್ತದೆ. ಗ್ರಹಣದ ಪರಿಪೂರ್ಣತೆಯ ಅವಧಿ 72 ನಿಮಿಷಗಳು. ಈ ಚಂದ್ರಗ್ರಹಣ ಹಗಲಿನಲ್ಲಿ ಸಂಭವಿಸುವುದರಿಂದ ಭಾರತದಲ್ಲಿ ಕಂಡುಬರುವುದಿಲ್ಲ. ಗ್ರಹಣಾಚರಣೆಯೂ ಇರುವುದಿಲ್ಲ.
ಆರ್. ಸೀತಾರಾಮಯ್ಯ,
ಜ್ಯೋತಿಷ್ಕರು,
'ಕಮಲ', 5ನೇ ತಿರುವು
ಬಸವನಗುಡಿ
ಶಿವಮೊಗ್ಗ - 577 201
ಪೋನ್: 08182-227344