Webdunia - Bharat's app for daily news and videos

Install App

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 9- ಯುದ್ಧಕಾಲದ ಅಭಾವಗಳ ಬಿಸಿ

Webdunia
[ ಕರಾವಳಿಯ ಅದ್ಭುತ ಕಲೆ ಯಕ್ಷಗಾನ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಪ.ಗೋ. ನಿರೂಪಿಸಿದ ಶಾಸ್ತ್ರಿಗಳ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸ ಂ]

[ ಕಳೆದ ವಾರದಿಂದ ಮುಂದುವರಿದುದ ು]


WD
" ಈ ವರ್ಷವಾದರೂ ನಮ್ಮ ಮೇಳಕ್ಕೆ ಬನ್ನಿ." ಶೆಟ್ಟರು ಮನೆಗೆ ಬಂದ ಕಾರಣ ನನಗೆ ಅರ್ಥವಾಯಿತು.

" ನಿಮ್ಮಂತಹ ಕಲಾವಿದರು ಹೀಗೆ ಸುಮ್ಮನಿರುವುದು ಸರಿಯಲ್ಲ. ನೀವು ಮೇಳದಲ್ಲಿದ್ದರೆ ಉಳಿದವರಿಗೂ ಮಾರ್ಗದರ್ಶನ ಆದೀತು."

ನಾನು ಮೇಳದ ತಿರುಗಾಟಕ್ಕೆ ಹೋಗುವುದನ್ನು ನಿಲ್ಲಿಸಿದ ಕಾರಣವನ್ನು ಅವರಿಗೆ ವಿವರಿಸಲೇ ಬೇಕಾಯಿತು. ಆದರೆ, ಆ ತಲೆನೋವಿಗೂ ಅವರು ಚಿಕಿತ್ಸೆ ಬಲ್ಲವರಾಗಿದ್ದರು.

" ನಾನು ಈ ವರ್ಷ ಎರಡು ಮೇಳಗಳನ್ನು ನಡೆಸಬೇಕೆಂದಿದ್ದೇನೆ. ಒಂದು ಮೇಳಕ್ಕಂತೂ ಸರಿಯಾದ ವ್ಯವಸ್ಥಾಪಕನ ಅಗತ್ಯವಿದೆಯಲ್ಲ!" ಎಂದರವರು.

" ಅಂದರೆ?"

" ಅಂದರೆ, ಒಂದು ಮೇಳದ ವ್ಯವಸ್ಥಾಪಕನ ಕೆಲಸವನ್ನು ನೀವು ವಹಿಸಿಕೊಳ್ಳಿ. ಲಾಭ ನಷ್ಟಕ್ಕೆ ಮಾತ್ರ ನಾನು. ಉಳಿದ ಎಲ್ಲ ವಿಚಾರಗಳಿಗೂ ನೀವೇ ಅದರ ಯಜಮಾನರಾಗಿ. ನಿಮ್ಮ ಮನಸ್ಸಿನಂತೆ ಆಟಗಳನ್ನು ಆಡಿ ಪ್ರದರ್ಶಿಸುವ ಅನುಕೂಲ; ನನಗೆ ಒಬ್ಬ ವ್ಯವಸ್ಥಾಪಕನ ಸೌಕರ್ಯ. ನೀವೇ ಹೊಸ ಮೇಳವನ್ನು ನಡೆಸಿರಿ. ಆಗದೇ?"

ವ್ಯವಹಾರಶೂನ್ಯನಾದ ನನ್ನನ್ನು ನಂಬಿ ಸಾವಿರಾರು ರೂ.ಗಳನ್ನು ಸುರಿಯುವುದೆ? ನನ್ನ ಅಸಮರ್ಥತೆಯನ್ನು ಸ್ಪಷ್ಟವಾಗಿ ಹೇಳಿದೆ.

" ಮೊದಲೇ ಹೇಳಿದೆನಲ್ಲ. ನಷ್ಟವಾದರೆ ನನಗೇ ಇರಲಿ."

" ಆಗಲಿ ನೋಡೋಣ."

ಹಾರಿಕೆಯ ಮಾತಿನಿಂದ ಅವರು ತೃಪ್ತರಾಗಲಿಲ್ಲ.

" ಹಾರಿಕೆಯ ಮಾತು ಸಾಲದು. ನಿಮ್ಮನ್ನು ಒಪ್ಪಿಸುವುದಕ್ಕೆಂದೇ ನಾನು ಈಗ ಬಂದುದು. ನೀವು ಒಬ್ಬರೇ ಹೀಗೆ ಇದ್ದು ಮರೆದರೆ ಸಾಲದು. ನಿಮ್ಮಂತಹವರು ಇನ್ನೂ ಕೆಲವರು ಮುಂದೆ ಬರಬೇಕೆಂಬ ಆಸೆ ನಿಮಗಿದೆಯಲ್ಲವೇ? ಈ ಕೆಲಸವೂ ಆಗುತ್ತದೆ. ನಿಮ್ಮ ಗೆಳೆಯನಿಗೆ ಉಪಕಾರವೂ ಆಗುತ್ತದೆ. ಆ ದೃಷ್ಟಿಯಿಂದಲಾದರೂ ಒಪ್ಪಿಕೊಳ್ಳಿ" ಎಂದುದಲ್ಲದೆ, "ನೀವು ಕರೆದಲ್ಲಿಗೆ ಮಾತ್ರ ಹೋಗಿ ವೇಷ ಹಾಕಿದರೆ, ಯಕ್ಷಗಾನ ಕಲೆಯ ಉದ್ಧಾರವಾಗಲಾರದು. ಇತರರನ್ನೂ ಅಣಿಗೊಳಿಸಿದರೆ ಮಾತ್ರವೇ ಅದು ಸಾಧ್ಯವಾಗಬಹುದು" ಎಂದೂ ಹೇಳಿದರು.

ಆ 'ದೊಡ್ಡ ಮಾತು' ಅವರಿಂದ ಬಂದಾಗ ನಾನು ತಲೆ ಬಾಗಲೇ ಬೇಕಾಯಿತು.

ಅಲ್ಲಿಂದ ಮುಂದಿನ ಕೆಲಸ ದೊಡ್ಡದು. ಆದರೆ, ಹೇಳುವ ವಿಚಾರಗಳು ಹೆಚ್ಚಿರಲಿಲ್ಲ. ಹೊಸದಾಗಿ ಒಂದು ಸಂಸ್ಥೆಯನ್ನು ಕಟ್ಟಲು ಯಾವ ರೀತಿಯ ಓಡಾಟವೆಲ್ಲ ಆಗಬೇಕಾಯಿತೋ, ಅದು ಆಯಿತು.

ಬೇಕಾದ ವೇಷಧಾರಿಗಳನ್ನು ಹುಡುಕಿ, ಅವರಿಗೆ ಮುಂಗಡ ತೆತ್ತು, ಅವರನ್ನು ಒಟ್ಟು ಗೂಡಿಸುವುದರ ಜತೆಗೆ ಅಗತ್ಯವಾಗಿದ್ದ ವೇಷ- ಭೂಷಣಗಳನ್ನು ಜೋಡಿಸುವ ಕೆಲಸವೂ ಆಯಿತು.

ಕಂಬಗಳ ರಂಗಸ್ಥಳ
ಹಾಗೆ, ಆ ವರ್ಷದಲ್ಲಿ ಹಣದ ಹೊಣೆಗಲ್ಲದಿದ್ದರೂ, ಉಳಿದೆಲ್ಲ ವಿಷಯಗಳಲ್ಲಿ ನಾನು ಇರಾ ಶ್ರೀ ಸೋಮನಾಥೇಶ್ವರ ಮೇಳದ ಯಜಮಾನನೆನಿಸಿಕೊಂಡೆ. ನನ್ನ ಮನಸ್ಸಿಗೆ ಆಗ ತೋರಿಬಂದಂತೆ ಕೆಲವು ಮಾರ್ಪಾಡುಗಳನ್ನು ಮಾಡುವ ಸಾಹಸಕ್ಕೆ ಕೈಯಿಕ್ಕಿದೆ.

ಮಹಾಯುದ್ಧದ ಬಿಸಿಯಲ್ಲಿ, ಸಿಗಬೇಕಾದ ಅಗತ್ಯ ವಸ್ತುಗಳು ಸಿಗದಾಗಿ, ಜನರ ಕೈಯಲ್ಲಿ ಹಣ ಮಾತ್ರವೇ ಓಡಾಡುವಂತೆ ಆಗತೊಡಗಿದ ಸಮಯ ಅದು.

ದಕ್ಷಿಣ ಕನ್ನಡದ ಪ್ರಮುಖ ಕಲೆಯಾದ ಯಕ್ಷಗಾನ ಬಯಲಾಟದ ಮೇಳಗಳೆಲ್ಲ ಸುಸಂಘಟಿತ ಮನರಂಜನಾ ಸಂಸ್ಥೆಗಳಾಗಿ ಪರಿವರ್ತನೆಗೊಂಡಿರಲಿಲ್ಲ. ಜನರೂ, "ಹೋದರಾಯಿತು-ಟಿಕೇಟು ಕೊಂಡರಾಯಿತು" ಎಂಬ ಹಂತಕ್ಕೆ ಬಂದಿರಲಿಲ್ಲ. ಊರೂರುಗಳಿಗೆ ಭೇಟಿ ಕೊಟ್ಟು, ಗಣ್ಯರ ನೆರವು ಪಡೆದು, ಅವರಿಂದ ವೀಳ್ಯ ದೊರಕಿಸಿ, ಗದ್ದೆಗಳಲ್ಲೂ, ಶಾಲೆಗಳ ಆಟದ ಬಯಲುಗಳಲ್ಲೂ, ನಾಲ್ಕು ಕಂಬಗಳ 'ರಂಗಸ್ಥಳ' ಹಾಕಿ ಆಟವಾಡಬೇಕಷ್ಟೆ. ಸ್ವಂತದ ನೆಲೆ ಎಂದು ಹೇಗೂ ಹೇಳಿಕೊಳ್ಳುವಂತೆ ಇಲ್ಲದೆ, ಆರು ತಿಂಗಳ ಕಾಲ ಪರಾಶ್ರಯದಲ್ಲಿ ಪಡೆದ ಹಣದಲ್ಲಿ ವೇಷಧಾರಿಗಳಿಗೆ ವೇತನ ವಿತರಣೆ ಇತ್ಯಾದಿಗಳು ಆಗಬೇಕಾಗಿದ್ದುವು.

ವೀಳ್ಯಗಳ ಆಟ ನಿಶ್ಚಯವಾಗಿದ್ದ ದಿನಗಳಲ್ಲೇನೋ ಹೆಚ್ಚು ತೊಂದರೆಯಾಗುತ್ತಿರಲಿಲ್ಲ. ಯುದ್ಧಕಾಲದ ಅಭಾವಗಳ ಬಿಸಿಗೆ ಸಿಕ್ಕಿ, ಅಕ್ಕಿ ಮತ್ತು ಸೀಮೆಎಣ್ಣೆ ಇವುಗಳು ಮಾತ್ರ ಇಲ್ಲವಾಗಿದ್ದುವು. ಮೂವತ್ತಕ್ಕೂ ಹೆಚ್ಚು ಮಂದಿಗೆ ಅಕ್ಕಿಯೊದಗಿಸಬೇಕು; 10-15 ಪೆಟ್ರೋಮಾಕ್ಸ್‌ಗಳಿಗೆ ಸೀಮೆಎಣ್ಣೆ ತುಂಬಿಸಬೇಕು. ಕೆಲವು ಊರುಗಳಲ್ಲಿ ಅದು ಅವನ್ನು ನಿಶ್ಚಯಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನ ಪ್ರಯಾಸ ತಂದೊಡ್ಡುತ್ತಿತ್ತು. ನಾವು ನಿಂತಲ್ಲಿ ನಿಲ್ಲದೆ ತಿರುಗುವವರಾದ ಕಾರಣ, ನಮಗಾಗಿ ರೇಷನ್ ಕಾರ್ಡುಗಳ ವ್ಯವಸ್ಥೆ ಮಾಡಿಕೊಳ್ಳುವ ದಾರಿಯೂ ಇರಲಿಲ್ಲ.

ಮೊದಲೇ ನಿಶ್ಚಯವಾಗಿಲ್ಲದ (ವೀಳ್ಯ ಸಿಗದಿದ್ದ) ಆಟಗಳು ಇಲ್ಲದ ದಿನಗಳಿಗೆ ಏನು ಮಾಡಲಿ ಎಂದು ಯೋಚಿಸುವ ತಾಪತ್ರಯ ನನಗೊಬ್ಬನಿಗೆ ಮಾತ್ರ ಬೀಳುತ್ತಿತ್ತು. ನಮ್ಮ ಮೇಳ ಆ ವರ್ಷವಷ್ಟೇ ರೂಪುಗೊಂಡಿತ್ತಾದ ಕಾರಣ, ಮೇಳದ ಖ್ಯಾತಿಯಿಂದ ಕರೆಯುವವರು ಯಾರೂ ಇರಲಿಲ್ಲ.

ಇಲ್ಲದ ದಿನಗಳಿಗಾಗಿ, ಬಂಧುಗಳ ಮತ್ತು ಸ್ನೇಹಿತರ ಮನೆ ಬಾಗಿಲುಗಳಿಗೆ ಅಲೆದು "ಈ ದಿನಕ್ಕೆ ನಮಗೆ ಬೇರೆಲ್ಲಿಯೂ ಆಟವಿಲ್ಲ. ನಿಮ್ಮ ಹೆಸರಿನಲ್ಲಿ ಒಂದು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಿ" ಎಂದು ಕಾಡಿ ಬೇಡಿ ಒತ್ತಾಯದಿಂದ ಪ್ರದರ್ಶನ ಮಾಡುವಂತಾಗುತ್ತಿತ್ತು. ಆ ವರ್ಷ ಸ್ನೇಹದ ಕಾಟಾಚಾರಕ್ಕಾಗಿಯೇ 25 ಆಟಗಳಾದರೂ ಆಗಿದ್ದುವೆಂದರೆ ಹೆಚ್ಚಲ್ಲ.

ಮೇಳದೊಳಗೇ ಗುಂಪು
WD
ಅಂತಹ ಕಿರುಕುಳ, ಸಮಸ್ಯೆಗಳಿಂದಾಗಿ ನಾನೆಣಿಸಿಕೊಂಡಿದ್ದಂತೆ ಮಾಡಬೇಕೆಂದು ಭಾವಿಸಿದ ಪ್ರಯೋಗಗಳಲ್ಲಿ ಹೆಚ್ಚಿನವು ತಲೆಯಲ್ಲೇ ಉಳಿದುಕೊಂಡುವು. ಇತರರ ತರಬೇತಿ ಮಾಡಿಕೊಳ್ಳುವ ಅವಕಾಶ ಬಹಳ ಕಡಿಮೆಯಾಯಿತು. ಏನಿದ್ದರೂ, ನನ್ನ ವೇಷಗಳ ಕಡೆಗಷ್ಟೇ ಗಮನ ಕೊಡಲು ಸಾಧ್ಯವಾಯಿತಷ್ಟೆ. ಇತರರನ್ನು ಹಗಲು ಒಟ್ಟುಗೂಡಿಸಿ, ಏನನ್ನಾದರೂ ಚರ್ಚಿಸಿ ತಿಳಿ ಹೇಳಲು, (ಇತರರಿಗೆ ಸಮಯ ಸಿಗಬಹುದಿತ್ತಾದರೂ ನಾನು ಸಮಯದ ಅಭಾವದಿಂದ ತೊಳಲುತ್ತಿದ್ದ ಕಾರಣ) ಅಸಾಧ್ಯವೇ ಎನಿಸಿತು.

ವೀಳ್ಯವಿಲ್ಲದ ಕಾರಣ ಆಟವಾಡಲಿಲ್ಲ ಎಂದರೆ ವರಮಾನ ಇಲ್ಲದಾದರೂ ತುಂಬಿಸಿಕೊಡಲು ಒಪ್ಪಿದವರು ಇದ್ದರು ನಿಜ. ಆದರೆ ಸ್ನೇಹದ ದುರುಪಯೋಗವನ್ನು ಮಾಡಲು ನಾನು ಅಷ್ಟು ಸುಲಭವಾಗಿ ಮುಂದುವರಿಯಬಾರದು ಎಂದುಕೊಂಡಿದ್ದೆ. ಆದರೆ, ನಾನು ಕೆಟ್ಟವನು ಎಂದು ಸಾರುವ ಅವಕಾಶ ಸಿಗಬೇಕು ಎಂದು ಕಾಯುವವರ ಸಣ್ಣದೊಂದು ಗುಂಪು ಮೇಳದ ಒಳಗೇ ಬೆಳೆಯತೊಡಗಿತು.

ಅದಕ್ಕೆ, ಬರಿಯ ಸೂತ್ರಚಾಲನೆಯ ಕೆಲಸವನ್ನು ಮಾತ್ರವೇ ಮಾಡದೆ, ನನ್ನ ಸ್ವಭಾವದಂತೆ ವೇಷಗಳನ್ನು ಧರಿಸಲೂ ನಾನು ಆಸಕ್ತಿ ತೋರುತ್ತಿದ್ದುದೂ ಕಾರಣ ಎಂದು ಈಗ ಅನಿಸುತ್ತಾ ಇದೆ.

ಮಾಡಿದ ವೇಷ ಸರಿಯಾಗಿರಬೇಕು; ಯಾರೂ ಕುಂದು ಹೇಳುವಂತಿರಬಾರದು ಎಂದೇ ನನ್ನ ವಾದ. ಅಂಗೈಯಲ್ಲಿ ಬಣ್ಣವನ್ನು ಕಲಸಿ ಹಿಡಿದು, ಬೆರಳುಗಳಿಂದ ಅದನ್ನು ಮುಖಕ್ಕೆ ಉಜ್ಜುವ ಧೈರ್ಯ ಬಂದ ಮೇಲೆ, ರಾಮಾಯಣದ ರಾಮ ನಾನೇ ಆಗಬಹುದಿತ್ತು. ಕರ್ಣಪರ್ವದ ಕರ್ಣನ ಪಾತ್ರ ನನಗೇ ಸಿಗಬೇಕು, ವಾಲಿ ಸಂಹಾರದಲ್ಲಿ ನಾನೇ ವಾಲಿಯಾದರೆ ಭಲೆ-ಭೇಷ್ ಎನಿಸುತ್ತಿದ್ದೆ- ಎಂದು ಹೇಳಿಕೊಳ್ಳುವ ಕಲಾವಿದರು ಎಲ್ಲ ಮೇಳಗಳಲ್ಲೂ ಇದ್ದರು. ನಮ್ಮಲ್ಲೂ ಇದ್ದರು.

ಅವರ ಬಯಕೆಯ ಪೂರೈಕೆಗಾಗಿ ಎಲ್ಲಾದರೂ ಅವರು ಬಯಸಿದ ವೇಷವನ್ನೇ ಅವರಿಗಿತ್ತರೆ, ಮರುದಿನ ನಾನು ಮುಖ ತಗ್ಗಿಸುವಂತಾಗುತ್ತಿತ್ತು.

ನಾಟ್ಯದಲ್ಲಿ ಅನುಭವವಿದೆ ಎಂದು ಆಯ್ಕೆ ಮಾಡಿದ ಪಾತ್ರಧಾರಿ- ಮುಖ್ಯವಾದ ವೇಷ ದೊರೆತಾಗ, ನಾಟ್ಯದಿಂದಲೇ ತನ್ನ ಚಾತುರ್ಯವನ್ನು ತೋರಿಸುವುದರ ಬದಲು ಎಂದೂ ಇಲ್ಲದ ಪಾಂಡಿತ್ಯದಿಂದ ಮೈಲುಗಟ್ಟಲೆ ಮಾತನಾಡಲು ಹೊರಡುತ್ತಿದ್ದ. ಅಲ್ಪಪ್ರಾಣ- ಮಹಾಪ್ರಾಣಗಳ ಭೇದವನ್ನೂ ಮರೆತುಬಿಡುತ್ತಿದ್ದ. ಕಥಾ ಸಂದರ್ಭ ಕೂಡಾ ಮನಸ್ಸಿನಿಂದ ಮರೆಯಾಗಿ "ಪಂಚವಟಿಯಲ್ಲಿದ್ದ ರಾಮನ ಕೀರ್ತಿ ಆಸೇತು ಹಿಮಾಚಲ ಪರ್ಯಂತ" ಹರಡಿ ಹೋಗುತ್ತಿತ್ತು. ಅರ್ಥವೇ ತಿಳಿಯದ ಸಂಸ್ಕೃತ ಶ್ಲೋಕಗಳ ಉರುಳಿಕೆ ನಡೆದು, ತಿಳಿದ ಮಹನೀಯರಿಂದ ಮುಂಜಾನೆ (ನಾನು) ಬೈಸಿಕೊಳ್ಳಬೇಕಾಗುತ್ತಿತ್ತು.

ನಾಲಿಗೆ ನಯವಾಗಿದೆ- ಪದ ಹೇಳುವಾಗ ಗೊಂಬೆಯ ಹಾಗೆ ನಿಂತರೂ, ಅರ್ಥದಲ್ಲಿ ಏನಾದರೂ ಮಾತನಾಡಿ, ಪಾತ್ರ ನಿರ್ವಹಿಸಬಲ್ಲ ಎಂದು ಇನ್ನೊಬ್ಬನ ಆಯ್ಕೆ ಆದಾಗ, ಕುಣಿಯಲಾರದ ಕಾಲುಗಳನ್ನು ಕುಣಿಸಹೋಗಿ ಅವನ ಅಪಹಾಸ್ಯವೂ ಆದುದೂ ಇತ್ತು.

ಅಂತಹ ಘಟನೆಗಳಾದಾಗ, ನನ್ನ ಕೋಪವನ್ನು ತಡೆದಿಟ್ಟುಕೊಳ್ಳುತ್ತಿದ್ದೆ. ಇನ್ನೊಂದು ಬಾರಿ ನನಗೇ ಆ ವೇಷ ಬೇಕು ಎಂದವರೊಡನೆ "ಈ ದಿನ ಬೇಡ. ಇನ್ನೊಮ್ಮೆ ನೋಡೋಣ" ಎನ್ನುತ್ತಿದ್ದೆ.

ಗುಂಪು ಬೆಳೆಯಲು ಅದೊಂದು ಕಾರಣ ಮುಖ್ಯವಾಗಿತ್ತು. ಪ್ರಾಮುಖ್ಯವಲ್ಲದ ಇತರ ಕೆಲವು ಕಾರಣಗಳೂ ಸೇರಿಕೊಂಡು ನನ್ನ 'ಗರ್ವ'ವನ್ನು ಮುರಿದು ಬಗ್ಗುಬಡಿಯಬೇಕು ಎನ್ನುವವರೂ ಸಿದ್ಧರಾದರು.

ಆ ವರ್ಷದ ಮೇ ತಿಂಗಳಲ್ಲಿ ಹಲವಾರು ಕಡೆಯ ಆಟಗಳಿಗೆ ಮೊದಲಾಗಿಯೇ ವೀಳ್ಯ ಪಡೆದಿದ್ದೆ. ಇನ್ನೇನು, ಅದೊಂದು ತಿಂಗಳು ನಿಶ್ಚಿಂತೆಯಿಂದ ಸಾಗುತ್ತದೆ ಎಂದಿರುವಾಗ ಮುಂಗಾರು ಮಳೆ ಬೇಗನೆ ಆರಂಭವಾಯಿತು. ಪ್ರತಿ ರಾತ್ರೆಯೂ ಮಳೆ ಸುರಿದು ನಿಶ್ಚಯಿಸಿದ್ದ ಆಟದ ಕಾರ್ಯಕ್ರಮಗಳೆಲ್ಲ ಒಂದೊಂದಾಗಿ ಕೈ ಬಿಡತೊಡಗಿದುವು. ಅದರೊಂದಿಗೇ ಮೇಳದಲ್ಲಿ (ವೇಷ-ಭೂಷಣಗಳ) ಪೆಟ್ಟಿಗೆಗಳನ್ನು ಹೊರುತ್ತಿದ್ದ 3-4 ಮಂದಿ ಕೂಲಿಯಾಳುಗಳು ಒಂದು ದಿನ ಹೇಳದೆ ಕೇಳದೆ ಪರಾರಿಯಾದರು.

15 ಮೈಲು ದೂರದ ಮುಂದಿನ 'ಕ್ಯಾಂಪಿ'ಗೆ ಪೆಟ್ಟಿಗೆಗಳು ಕೆಲವನ್ನು ಸೈಕಲಿನಲ್ಲಿ ಕಟ್ಟಿ ಸಾಗಿಸಬೇಕಾದ ಪರಿಸ್ಥಿತಿ ಬಂದಿತು.

ಅನಂತರ ಪತ್ತನಾಜೆಗೆ 10 ದಿನವಿದೆ ಎನ್ನುವಾಗ, ಎಲ್ಲೂ ವೀಳ್ಯ ನಿಶ್ಚಯವಾದ ಆಟಗಳು ಇಲ್ಲ ಎಂಬಂತಾಯಿತು. ಮಳೆ ಬರುವ ಭಯವಿದ್ದ ಕಾರಣ ಆಟ ಆಡಿಸಲೆಂದು ಮುಂದೆ ಬರುವ ಮನಸ್ಸಿದ್ದವರೂ ಹಿಂಜರಿಯುತ್ತಿದ್ದರು. ಹುಡುಕಿ ಹೋಗಿ ಕೇಳಿದವರು ಕೂಡಾ ಏನಾದರೊಂದು ಕುಂಟುನೆಪ ಹೇಳಿ ತಪ್ಪಿಸಿಕೊಂಡರು.

ಮೇಳವನ್ನು ನಿಲ್ಲಿಸಿದ್ದರೆ, ಯಾರೂ ಬೇಡವೆನ್ನುತ್ತಿರಲಿಲ್ಲವೆಂಬುದು ನಿಜವಾದರೂ 'ಪತ್ತನಾಜೆಗೆ ಮೊದಲೇ ಗೆಜ್ಜೆ ಬಿಚ್ಚಿದರಂತೆ' ಎಂಬ ಕುಹಕ ನುಡಿ ಸಾಯುವವರೆಗೂ ಕೇಳುತ್ತಲಿರಬೇಕಾಗಬಹುದೆಂಬ ಭಯವಿತ್ತು. ಅಂತಹ ಅಗೌರವದ ಹೆಜ್ಜೆಯನ್ನು ಇಡಲು ಮನಸ್ಸು ಹಿಂಜರಿಯುತ್ತಿತ್ತು.

ಅದದ್ದಾಗಲಿ ಎಂದುಕೊಂಡು ಎಲ್ಲರನ್ನೂ ಕರೆದುಕೊಂಡು ಊರಿಗೇ ಬಂದೆ. ಮನೆಯ ಸಮೀಪದ ಕುರುಡಪದವಿನಲ್ಲೇ ಆಟದ ರಂಗಸ್ಥಳದ ಕಂಬಗಳನ್ನು ಊರಿಸಿದೆ. ಎಡೆಬಿಡದೆ ಕೆಲವು ದಿನಗಳ ಆಟ ನಡೆಯುವುದು ಎಂತಹ ಸಹಿಷ್ಣುವಿಗಾದರೂ ತಾಳ್ಮೆ ಕೆಡಿಸುವ ರೀತಿಯ ಖರ್ಚಿಗೆ ದಾರಿ. ಆದರೆ ಊರಿನವರೆಲ್ಲ ತುಂಬು ಮನಸ್ಸಿನಿಂದ ಸಹಕರಿಸಿದರು.

ಆಟಗಳಲ್ಲಿ ಕೆಲವು ಸಂತೆ ಅಂಗಡಿಗಳನ್ನು ಇಡುವುದು ಕ್ರಮ. ಕಾಫಿ ಹೋಟಲಂತೂ ಅಗತ್ಯವಾಗಿ ಬೇಕಾಗುತ್ತದೆ. ಇತರ, ಬೀಡಾ, ಬೀಡಿ ಮೊದಲಾದುವುಗಳೂ ಮಲ್ಲಿಗೆ ಹೂವೂ ಮಾರಾಟವಾಗುತ್ತದೆ.

ಕುರುಡಪದವಿನಲ್ಲಿ ಅವುಗಳೆಲ್ಲವನ್ನೂ ನನ್ನ ಲೆಕ್ಕದಲ್ಲೇ ಇರಿಸಿದೆ. ಅವುಗಳಿಂದ ದೊರೆತ ಲಾಭವೂ ಮೇಳದ ಖರ್ಚಿಗೆ ಬಿದ್ದಿತು.

ಅಂತೂ ಇಂತೂ ಮೇ 24ರ ವರೆಗೂ ಊರಿನಲ್ಲೇ ಎಳೆದು ಪತ್ತನಾಜೆಯ ದಿನ ಮೇಳವನ್ನು ಇರಾ ಶ್ರೀ ಸೋಮನಾಥೇಶ್ವರ ದೇವರ ಸನ್ನಿಧಿಯಲ್ಲಿ ಬಿಡಿಸಿಕೊಂಡು (ಅಂದರೆ ಸೇವೆಯ ಆಟವಾಡಿ) ಶೆಟ್ಟರ ಶುಭಾಕಾಂಕ್ಷೆಗಳೊಂದಿಗೆ ಮನೆಗೆ ಮರಳಿದೆ.

ಅದೇ ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಮಂಡಳಿ ಆ ಬಳಿಕವೂ ಶ್ರೀ ಕಲ್ಲಾಡಿ ಕೊರಗಪ್ಪ ಶೆಟ್ಟಿಯವರ ಆಡಳಿತದಲ್ಲೇ ಇತ್ತು. ಆ ಹೆಸರನ್ನು ಜ್ಞಾಪಿಸಿಕೊಂಡಾಗಲೆಲ್ಲಾ ನನ್ನ- ಅವರ ಸ್ನೇಹದ ಸವಿನೆನಪುಗಳೂ ಉಂಟಾಗುತ್ತವೆ.

ಮನಸ್ಸಿಗೆ ಒಂದಷ್ಟು ವಿಶ್ರಾಂತಿ ಅಗತ್ಯ ಎನಿಸಿತ್ತು. ಈ ವರ್ಷವಂತೂ 'ಮೇಳಕ್ಕೆ ಹೋಗುವುದಿಲ್ಲ' ಎಂದು ತೀರ್ಮಾನಿಸಿಯೇ ಮನೆಯಲ್ಲಿ ಉಳಿದೆ.

ಆದರೆ ದೀಪಾವಳಿಯ ನಂತರ ಮೇಳಗಳ ತಿರುಗಾಟ ಪ್ರಾರಂಭವಾದಾಗ ಕರೆಗಳು ಬರತೊಡಗಿದವು. ಒಲ್ಲೆ ಎನ್ನಲಾಗಲಿಲ್ಲ.

ಇರಾ ಶ್ರೀ ಸೋಮನಾಥೇಶ್ವರ ಮೇಳದ ಆಡಳಿತವನ್ನು ಶ್ರೀ ಶೆಟ್ಟರೇ ನೋಡಿಕೊಳ್ಳುತ್ತಿದ್ದರಾದ ಕಾರಣ ಆ ದಿಸೆಯ ಯೋಚನೆಯನ್ನು ಮಾಡಬೇಕಾಗಿರಲಿಲ್ಲ.

ತಿರುಗಾಟದ ಅವಧಿಯೆಲ್ಲ ಹೆಚ್ಚಾಗಿ, ಕರೆ ಕಳುಹಿಸಿದ ಕಟೀಲು ಮತ್ತು ಧರ್ಮಸ್ಥಳ ಮೇಳಗಳಲ್ಲಿ ಆಗಾಗ ವೇಷಗಳನ್ನು ನಿರ್ವಹಿಸಿಯೇ ಕಳೆಯಿತು. ಶ್ರೀ ಧರ್ಮಸ್ಥಳಕ್ಕೆ ಮಂಜುನಾಥ ಸ್ವಾಮಿಯ ದರ್ಶನಕ್ಕೆ, ಯಕ್ಷಗಾನ ಕಲಾವಿದನಾಗಿಯೇ-ಹೋಗುವ ಸುಸಂದರ್ಭವೂ ಆ ವರ್ಷ ದೊರೆತಿತ್ತು.

ಆ ವರ್ಷ ಧರ್ಮಸ್ಥಳ ಮೇಳದ ಸಂಚಾಲಕರಾಗಿದ್ದ ಪಟೇಲ್ ಶ್ರೀ ಸೋಮನಾಥಯ್ಯನವರ ವಿಶೇಷ ಆಹ್ವಾನದ ಮೇಲೆ ಬೆಳ್ತಂಗಡಿಯಲ್ಲಿ ಅವರ ಥಿಯೇಟರ್ ಕಟ್ಟಿಸಿ ಟಿಕೇಟ್ ಇಟ್ಟು ಆಡಿಸಿದ ಎಲ್ಲ ಆಟಗಳಲ್ಲೂ ಭಾಗವಹಿಸಿದೆ. (ಆಗಲೇ ಶ್ರೀ ಧರ್ಮಸ್ಥಳಕ್ಕೆ ಹೋಗಿ ಬಂದುದು) ಮಳೆಗಾಲದಲ್ಲಿ ಕನ್ಯಾನದ ಯಕ್ಷಗಾನ ಕೂಟಗಳನ್ನು ಸಂಘಟಿಸುವುದರಲ್ಲೇ ಸಮಯ ಕಳೆಯಿತು.

ಪ್ರತಿ ಆದಿತ್ಯವಾರದ ಕೂಟಗಳನ್ನು ಏರ್ಪಡಿಸುವುದರಲ್ಲಿ ಮಳೆಗಾಲವೂ ಮೆಲ್ಲ ಮೆಲ್ಲನೆ ಸರಿಯಿತು.

ನವರಾತ್ರಿ ಹೊತ್ತಿಗೆ, ಶ್ರೀ ಧರ್ಮಸ್ಥಳಕ್ಕೆ ಬರುವಂತೆ ಶ್ರೀ ಕುಂಜಾರು ರಾಮಕೃಷ್ಣಯ್ಯನವರು ಪ್ರೋತ್ಸಾಹಿಸಿದರು. ಪ್ರತಿ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ಧರ್ಮಸ್ಥಳದಲ್ಲಿ ನಡೆಯುವ ಕ್ರಮ ಅದಾಗಲೇ ಪ್ರಾರಂಭವಾಗಿ ಕೆಲವು ವರ್ಷಗಳ ಸಂದಿದ್ದುವು. ನವರಾತ್ರಿಯಲ್ಲಿ 4-5 ದಿನಗಳಲ್ಲಿ ಬಯಲಾಟಗಳೂ ಜರುಗುತ್ತಿದ್ದವು. ಕಲಾವಿದರ ಪ್ರೋತ್ಸಾಹ- ಕಲೆಗಳ ಆಶ್ರಯದ ಬೀಡಾಗಿದ್ದ ಶ್ರೀ ಧರ್ಮಸ್ಥಳದಲ್ಲಿ ಕಲಾವಿದನೆನಿಸಿಕೊಂಡವನು ಕಾರ್ಯಕ್ರಮಗಳಲ್ಲಿ ಭಾಗವಹಿಸಲು- ಮನಸ್ಸಿದ್ದರೆ, ಕಷ್ಟವಾಗುತ್ತಿರಲಿಲ್ಲ. ಅವೆಲ್ಲ ಕಾರಣಗಳಿಂದಲೇ ಶ್ರೀ ರಾಮಕೃಷ್ಣಯ್ಯನವರು ನನ್ನನ್ನು "ಧರ್ಮಸ್ಥಳಕ್ಕೆ ಬಾ" ಎಂದುದು.

ಧರ್ಮಸ್ಥಳದಲ್ಲಿ...
ಆ ನವರಾತ್ರಿಯ ಐದು ಆಟಗಳಲ್ಲೂ ಭಾಗವಹಿಸಲು ನನಗೆ ಅವಕಾಶ ಸಿಕ್ಕಿತು. ಕ್ಷೇತ್ರಪಾಲರಾಗಿದ್ದ ಮಾತನಾಡುವ ಮಂಜುನಾಥ ಶ್ರೀ ಮಂಜಯ್ಯ ಹೆಗ್ಗಡೆಯವರ ದರ್ಶನ ಲಾಭವೂ ಆಯಿತು.

ನನಗೆ ಭೇಟಿ ನೀಡಿದ ಶ್ರೀ ಹೆಗ್ಗಡೆಯವರು ಕಲಾವಿದರ ದೃಷ್ಟಿಯಿಂದ ಅತ್ಯಂತ ಪ್ರಾಮುಖ್ಯವೆನಿಸಿದ ವಿಷಯಗಳನ್ನು ಕುರಿತು ಪ್ರಸ್ತಾಪಿಸಿದರು; ಚರ್ಚಿಸಿದರು. ಎಲ್ಲ ಮನ್ನಣೆಯಿತ್ತು ಗೌರವದಿಂದ ಕಳುಹಿಸಿಕೊಟ್ಟರು.

ಇದ್ದ ನಾಲ್ಕು ದಿನಗಳಲ್ಲೇ ನನಗೆ ಧರ್ಮಸ್ಥಳ ಕ್ಷೇತ್ರದ ಮೇಲೆ ಅತೀವ ಭಕ್ತಿ ಮೂಡಿತ್ತು. ಕಲೋಪಾಸಕರಿಗೆ ಆಶ್ರಯ ಪಡೆಯಲು ಇದು ಪ್ರಶಸ್ತ ಸ್ಥಳ ಎನಿಸಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ಶ್ರೀ ಹೆಗ್ಗಡೆಯವರಂತಹ ಕಲೆಯ ಪ್ರೋತ್ಸಾಹಕರು ಇನ್ನೆಲ್ಲೂ ಇರಲಾರರು ಎಂಬ ನಂಬಿಕೆ ಬಂದಿತ್ತು. ಅವರ ಮೇಲಿನ ಅಭಿಮಾನ ಹಾಗೂ ಪೂಜ್ಯ ಭಾವನೆಗಳೇ ಬೆಳೆದು, ಅವರ ಆಶ್ರಯದ ಮೇಳದಲ್ಲಿ ಒಂದು ಬಾರಿ-ಮೇಳವನ್ನೇ ವಹಿಸಿಕೊಂಡು, ತಿರುಗಾಟ ಮಾಡಿದರೆ ಆಗದೆ? ಎಂಬ ಆಸೆಯೂ ಅಂಕುರಿಸಿತ್ತು.

ಹಿಂದೆ ಮೇಳದ ಸಂಚಾಲಕತ್ವವನ್ನು ನಿರ್ವಹಿಸಿದ್ದ ಶ್ರೀ ಸೋಮನಾಥಯ್ಯನವರು ಆ ವರ್ಷ ಮೇಳ ಕಟ್ಟುವುದಿಲ್ಲವೆಂಬ ವದಂತಿ ಹಬ್ಬಿದುದೂ ಆ ಆಸೆಗೆ ಒಂದು ಕಾರಣ.

ಮನೆಗೆ ಬಂದವನು, ನನ್ನಲ್ಲೇ ಸಾಕಷ್ಟು ಯೋಚಿಸಿದ ತರುವಾಯ ಆ ದಾರಿಯಲ್ಲಿ ಮುಂದುವರಿಯುವುದೇ ಸರಿ. ಮಾಡದೇ ಕೇಳದೆ ಯಾವುದಾದರೂ ತಿಳಿಯುವುದು ಹೇಗೆ? ಒಂದು ವೇಳೆ ಮೇಳ ನನಗೆ ಸಿಗುವ ಅವಕಾಶವಿಲ್ಲ ಎಂದೇ ಆದರೆ, ಶ್ರೀ ಸ್ಥಳದವರೆಗೆ ಇನ್ನೊಂದು ಯಾತ್ರೆಯಾದರೂ ಆದಂತಾಯಿತು ಎಂದುಕೊಂಡೇ ಮನೆಯಿಂದ ಪುತ್ತೂರಿಗೆ ಪಯಣ ಬೆಳೆಸಿದೆ. ಅಣ್ಣ ಶ್ರೀ ಸಿ. ಎಸ್. ಶಾಸ್ತ್ರಿಗಳಲ್ಲಿ ನನ್ನ 'ಯಾತ್ರೆ'ಯ ವಿಷಯ ಪ್ರಸ್ತಾಪವೆತ್ತಿದೆ.

[ ಮುಂದಿನ ವಾರಕ್ಕ ೆ]
ನಿರೂಪಣೆ: ಪದ್ಯಾಣ ಗೋಪಾಲಕೃಷ್ಣ ( ಪ.ಗೋ. 1928 -1997)

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments