Webdunia - Bharat's app for daily news and videos

Install App

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 7- ಗುರುವಿಗಾಗಿ ನಾಟ್ಯಶಾಲೆ

Webdunia
[ ಕರಾವಳಿಯ ಅದ್ಭುತ ಕಲೆ ಯಕ್ಷಗಾನ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಪ.ಗೋ. ನಿರೂಪಿಸಿದ ಶಾಸ್ತ್ರಿಗಳ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸ ಂ]

[ ಕಳೆದ ವಾರದಿಂದ ಮುಂದುವರಿದುದ ು]


ರಂಗ ಪ್ರವೇಶದ ಪ್ರಥಮ ವರ್ಷದ ಸಂಪೂರ್ಣ ಕಥೆಯನ್ನು ದಿನ ದಿನಗಳ ಅನುಭವದ ವಿವರಗಳೊಂದಿಗೆ ಹೇಳುತ್ತಾ ಹೋಗಬೇಕೆನ್ನುವುದು ನನ್ನ ಉದ್ದೇಶವಲ್ಲ. ಆದರೆ ಮೊದಲಿನ ಎರಡು ದಿನಗಳ ಅನುಭವವನ್ನು ಅನಿವಾರ್ಯವಾಗಿ ಹೇಳಬೇಕಾಗುತ್ತದೆ. ಎರಡನೇ ಆಟ ಕಟೀಲಿನ ಬಳಿಯ ಶಿಬರೂರಿನಲ್ಲಿ ಆಗಿತ್ತು.

WD
ಅಂದಿನದು 'ಪಟ್ಟಾಭಿಷೇಕ' (ಪಾದುಕಾ ಪಟ್ಟಾಭಿಷೇಕದ ಕಥೆ.) ಅನುಭವದಲ್ಲಿ ನನಗೆ ಅಣ್ಣನಾದ ಅಳಿಕೆ ರಾಮಯ ರೈಗಳು ತಾನು ಭರತನ ಪಾತ್ರವಹಿಸಿ, ನನಗೆ ರಾಮನ ಪಾತ್ರವನ್ನೇ ತೆಗೆಸಿಕೊಟ್ಟಿದ್ದರು.

ರಾಮಯ ರೈಗಳು ನಾಟ್ಯಪ್ರವೀಣ. ಮಾತುಗಾರಿಕೆಯಲ್ಲೂ ಮುಂದು. ವ್ಯಾಸಂಗ ಮಾಡುತ್ತಲೇ ಇರುವುದು ಅವರ ಅಭ್ಯಾಸ.

ನಾಟ್ಯ ಬಲ್ಲ ಅವರೆಡೆಯಲ್ಲಿ ನಾನೆಲ್ಲಿ? ಎಂಬುದೇ ನನ್ನ ಕೊರಗು. ಆದರೆ, ಅವರೇ ನನಗೆದುರಾಗಿ ರಂಗದಲ್ಲಿ ಬಂದಾಗ ಆ ಕೊರಗು ಅದಾವ ಮಾಯದಿಂದಲೋ ಕಾಣದಾಯಿತು. ಚಿತ್ರಕೂಟದ ರಾಮ ಭರತರ ಸಮಾಗಮ ಅತ್ಯುದ್ಭುತವೆನಿಸಿತು. ನನಗೆ ಬಂದ ಆ ಸನ್ನಿವೇಶದ ಸಹಜ ಸ್ಫೂರ್ತಿ ಅದಕ್ಕೆ ಎಷ್ಟರ ಮಟ್ಟಿಗೆ ಕಾರಣವೋ, ಅಷ್ಟೇ ಪರಿಮಾಣದಲ್ಲಿ ರಾಮಯ ರೈಗಳ ಪಾತ್ರ ಸ್ಫೂರ್ತಿಯೂ ಕಾರಣ.

ಮರುದಿನ ಶ್ರೀ ಶೆಟ್ಟರು ವೇತನದ ವಿಷಯ ಪ್ರಸ್ತಾಪ ಮಾಡಿದರು.

ಅವರಿಗೆ ಕೊಡಬಹುದಾದ ಸೂಕ್ತ ಉತ್ತರ ನನ್ನಲ್ಲಿ ಇರಲಿಲ್ಲ.

ಕಲೆಯಲ್ಲಿ ನಾನು ಆಗ ತಾನೇ ಅಂಬೆಕಾಲಿಟ್ಟಿದ್ದ ಕೂಸು. ಕಲೆಯ ಮೇಲಿನ ಪ್ರೀತಿಯೇ ನನ್ನನ್ನು ಮೇಳದವನಾಗಲು ಪ್ರೇರೇಪಿಸಿತಲ್ಲದೆ, ಹೊಟ್ಟೆಪಾಡಿನ ಹೋರಾಟವಲ್ಲ. ಅಲ್ಲದೆ, ವೇತನ ಪಡೆಯಬೇಕೆಂದರೆ ಅದಕ್ಕೆ ತಕ್ಕ ಅರ್ಹತೆಯೂ ಬೇಡವೆ?

" ಸಂಪಾದನೆಯ ದೃಷ್ಟಿ ನನಗಿಲ್ಲ. ಕಲಿಯಬೇಕೆಂಬ ಆಸೆ ಮಾತ್ರ ತುಂಬಾ ಇದೆ. ಅದಕ್ಕೆ ನೀವು ಸಹಕರಿಸಿದರೆ, ಅದುವೇ ನನ್ನ ಸಂಬಳವಾಗುತ್ತದೆ. ನಿಮಗೆ ಕೊಡಬೇಕೆನಿಸಿದಷ್ಟು-ಕೊಡಲು ಅನುಕೂಲವಾದಷ್ಟು ಕೊಡಿ. ನನ್ನ ಖರ್ಚಿಗೆ ಕಡಿಮೆಯಾಗುವುದಾದರೆ ಮನೆಯಿಂದ ಬೇಕಾದರೂ ತರಿಸಿಕೊಳ್ಳಬಹುದು" ಎಂದೆ.

ನನ್ನ ಮಾತು ಕೇಳಿ ಅವರಿಗೇನನ್ನಿಸಿತ್ತು ಎಂದು ಇದುವರೆಗೂ ನನಗೆ ತಿಳಿಯಲು ಆಗಲಿಲ್ಲ.

ಅಂದಿನಿಂದ ಅವರು ನನ್ನ ವೆಚ್ಚಕ್ಕೆ (ಅದು ಕಡಿಮೆಯೇನೂ ಆಗಿರಲಿಲ್ಲ) ಯಾವ ಕೊರತೆಯೂ ಬಾರದಂತೆ ನೋಡಿಕೊಂಡರು.

ಅವರ ವಿಶ್ವಾಸವನ್ನು ಉಳಿಸಿಕೊಂಡೇ ಆ ವರ್ಷದ "ಪತ್ತನಾಜೆ"ಗೆ (ವೃಷಭ ಮಾಸ ಹತ್ತರಂದು) ಗೆಜ್ಜೆ ಬಿಚ್ಚುವ ದಿನದ ಸೇವೆಯಾಟವಾಡಿ ಮನೆಗೆ ಬಂದೆ...

' ನಾನೂ ವೇಷಧಾರಿಯಾಗಬೇಕು.'

' ನಾಟ್ಯವಿಲ್ಲದ ವೇಷ-ವೇಷವೇ ಅಲ್ಲ!'

' ನನ್ನಲ್ಲಿ ನಾಟ್ಯವಿಲ್ಲ- ನಾನು ವೇಷಧಾರಿ ಆಗುವುದು ಹೇಗೆ?'

ಯಕ್ಷಗಾನಕ್ಕಾಗಿ 'ಕಲಾಮಂಡಲಿ'ಗಳು ಆಗ ಇರಲಿಲ್ಲ (ಈಗಲೂ ಇಲ್ಲ). ತಿಳಿದವರಲ್ಲಿ ಹೋಗಿ ಇದ್ದು ಕಲಿಯಲು ಪರಿಸ್ಥಿತಿ ಅನುಕೂಲವಾಗಿರಲಿಲ್ಲ.

ಸಮಸ್ಯೆಯನ್ನು ಗೆಳೆಯ ಕೆ. ಪಿ. ಗೋಪಾಲಕೃಷ್ಣರಲ್ಲಿ ಚರ್ಚಿಸಿದೆ.

" ತಿಳಿದಿರುವವರಲ್ಲಿಗೆ ಹೋಗುವುದೇಕೆ? ತಿಳಿದವರನ್ನು ಇಲ್ಲಿಗೆ ಕರೆಸಿದರಾಗದೆ?" ಎಂದರವರು.

" ನನ್ನೊಬ್ಬನಿಂದಲೇ ಅದು ಸಾಧ್ಯವಾಗುವ ಕೆಲಸವೆ?"

" ಬೇಡ. ಯಕ್ಷಗಾನ ಶಿಕ್ಷಣಕ್ಕಾಗಿ ಒಂದು ಶಾಲೆಯನ್ನು ತೆರೆಯೋಣ" ಎಂದರು. ಅಂದೇ ಪರಿಚಿತರ ಮಳಿಗೆಯೊಂದು ಖಾಲಿ ಇದ್ದುದನ್ನು ತಿಳಿದು ಅಲ್ಲಿ ನಮ್ಮ ಶಾಲೆಯನ್ನು (ಕನ್ಯಾನದಲ್ಲಿ) ತೆರೆಯಲು ನಿರ್ಧರಿಸಿದೆವು. ಹಾಡುಗಾರಿಕೆ, ಮೃದಂಗ-ಚೆಂಡೆಗಳ ವಾದನ, ಇವುಗಳನ್ನು ಕಲಿಯ ಬಯಸುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಕಲಿಸಿ ಕೊಡಲೂ ಮುಂದಾಗುವವರಿದ್ದರು. ಆದರೆ, ನಾಟ್ಯ ಕಲಿಯಲಂತೂ ನಾವಿದ್ದೆವು. ಕಲಿಸುವವರು ಬೇಕಲ್ಲ?

ಯಕ್ಷಗಾನ ಕಲಾವಿದರೂ, ವರ್ಷದ ಆರು ತಿಂಗಳು ಜೀವನೋಪಾಯಕ್ಕೆ ಬೇರೆ ದಾರಿ ಹುಡುಕಬೇಕಾಗುತ್ತಿತ್ತು. ಹೆಚ್ಚಿನವರು ಬೇಸಾಯ ಮಾಡುವವರು.

ಮಳೆಗಾಲದ ಅವಧಿಯಲ್ಲಿ ಪ್ರಾರಂಭವಾದ ನಮ್ಮ ಶಾಲೆಗೆ ಬರಲು ಸಾಧ್ಯವಿರುವವರಾದರೂ ಯಾರು?

ಕೇಳಿದವರು ಕೆಲವರು ಸ್ಪಷ್ಟವಾಗಿ "ಬರಲಾರೆ"ವೆಂದರು. ಇನ್ನು ಕೆಲವರು- ಬರಲಾರೆವೆಂದು ನೇರವಾಗಿ ಹೇಳುವ ಬದಲು -ನಮ್ಮೆಲ್ಲರ ತಲೆಗೂ ಮೀರಿದ ಸಂಭಾವನೆ ಬೇಕೆಂದರು.

ಶಾಲೆಯ ಉದ್ಘಾಟನೆಯ ಬೆನ್ನಲ್ಲೇ ಮುಕ್ತಾಯವನ್ನೂ ಮಾಡಬೇಕಾಗುವುದೆ? ಎಂದು ನಾವು ಕಂಗೆಟ್ಟಾಗ, ಸಮೀಪದ ಕುಂಬಳೆಯಲ್ಲಿರುವ ಕಾವುಗೋಳಿ ಕಣ್ಣನವರ ಸುದ್ದಿಯನ್ನು ನಮಗೆ ಯಾರೋ ತಿಳಿಸಿದರು.

ಕುರುಡು ಧೈರ್ಯ
ಶ್ರೀ ಕಣ್ಣನವರ ವೇಷಗಳ ವೈಭವವನ್ನು ನಾನು ಕೇಳಿ ತಿಳಿದಿದ್ದೆ. ಮಸುಕು ನೆನಪಿನಿಂದಲಾದರೂ ಕಂಡಿದ್ದೆ. ಅವರ ನಾಟ್ಯಕ್ಕೆ ಮಿಕ್ಕಿದ್ದು ಇನ್ನಿಲ್ಲವೆಂದು ಹಲವರು ಆಡಿಕೊಂಡಿದ್ದುದೂ ನೆನಪಿತ್ತು. ಯಕ್ಷಗಾನದ ವಿಶಿಷ್ಟ ವಿನ್ಯಾಸಗಳೆನಿಸಿದ ರಂಗಪ್ರವೇಶದ ಕೆಲವು ನೃತ್ಯಗಳ ಪರಂಪರೆಯನ್ನೇ ಅವರು ತನ್ನೊಳಗೆ ಸೆರೆ ಹಿಡಿದುಕೊಂಡವರು ಎಂದಿದ್ದರು ಅನುಭವಿಗಳು.

ಯಾವುದೋ ಕುರುಡು ಧೈರ್ಯ ತಳೆದು, ಅವರಲ್ಲಿಗೆ ನಾವಿಬ್ಬರೂ ಹೋದೆವು. ನಮ್ಮ ಆಸೆಯನ್ನು ತೋಡಿಕೊಂಡೆವು.

" ಈ ಕಾಲದಲ್ಲಿ ಇಂತಹ ಆಸೆಯೆ? ನಮ್ಮ ಕಾಲದ ನಂತರ ಯಕ್ಷಗಾನದ ಶಾಸ್ತ್ರೀಯಂತೆ ಅಳಿಯುವುದಲ್ಲಾ ಎಂಬ ಬೇಸರ ನನಗಿತ್ತು. ನಾಟ್ಯ ಕಲಿಯಬೇಕು ಎನ್ನುವವರೇ ಈಗ ಅತಿ ವಿರಳ. ಉತ್ಸಾಹದಿಂದ ಮುಂದೆ ಬಂದಿದ್ದೀರಿ. ಕಲಿಸಲು ಬರುವುದಿಲ್ಲ ಎಂದರೆ ದೇವರು ಮೆಚ್ಚಿಯಾನೆ?" ಎಂದು ನುಡಿದು, ನಾವು ಕಣ್ಣೊರಸಿಕೊಳ್ಳುವಂತೆ ಮಾಡಿದರು.

ನಾಟ್ಯಯಾತ್ರೆ
" ವಿದ್ಯೆ"ಯ ಮಟ್ಟ ಅವರಲ್ಲಿ ಕಡಿಮೆ ಆಗಿರಬಹುದು. ಆದರೆ ಅವರದು ಸಂಸ್ಕೃತಿ ಇರುವ ಜೀವ.

ಶ್ರೀ ಕಣ್ಣನವರು ನಮ್ಮೆಡೆಗೆ ಬಂದರು. ತಮ್ಮಲ್ಲಿ ಇದ್ದುದೆಲ್ಲವನ್ನೂ ನಮಗೆ (ಮುಖ್ಯವಾಗಿ ನನಗೆ) ಧಾರೆಯೆರೆಯುವ ಹಂಬಲದಿಂದ ಕನ್ಯಾನದಲ್ಲಿ ನಿಂತರು.

ಆ ಮಳೆಗಾಲ, ವರುಣನ ನಾಟ್ಯ ಇಂದ್ರನ ನಿರ್ದೇಶನದಲ್ಲಿ ನಡೆಯುತ್ತಿತ್ತು. ನನ್ನ ನಾಟ್ಯಯಾತ್ರೆ ಸಾಗುತ್ತಿತ್ತು.

ಬೆಳಗ್ಗೆ ಎದ್ದು ಜಡಿ ಮಳೆಯಲ್ಲಿ 3 ಮೈಲುಗಳ ನಡಿಗೆ. ರಸ್ತೆಯ ಸಮೀಪಕ್ಕೆ ಬಂದ ತರುವಾಯ ಕನ್ಯಾನದವರೆಗಿನ ಕೆಲವು ಮೈಲುಗಳ ಸೈಕಲ್ ಸವಾರಿ.

ಗುರುಗಳು ಹೇಳಿಕೊಟ್ಟುದನ್ನು ಗಟ್ಟಿ ಮಾಡಿಕೊಂಡು, ಅವರು ಬಯಸಿದಷ್ಟು ಬಾರಿ ಕುಣಿದು, ಮುಂದಿನ ಹೆಜ್ಜೆಗಳನ್ನು ಗುರುತಿಸಿಕೊಂಡು ಕತ್ತಲಾಗುವ ಹೊತ್ತಿಗೆ ಮನೆಗೆ ಪಯಣ.

ಮನೆಯಲ್ಲೂ ರಾತ್ರಿ ಬಾಯಿ ತಾಳಗಳ ಹಿಮ್ಮೇಳಕ್ಕೆ 'ಏಕಲವ್ಯನ ಅಭ್ಯಾಸ'.

ತಾಳಗಳೆಲ್ಲ- ಚಿಕ್ಕಂದಿನಿಂದಲೂ ಕೇಳಿ ಕೇಳಿ 'ಕರ್ಣಗತ'ವಾಗಿದ್ದುವು. ಲಯಜ್ಞಾನದ ತಿಳಿವು ಮೊದಲೇ ಮೂಡಿತ್ತು. ಹೇಳಿಕೊಟ್ಟಿದ್ದ ಹೆಜ್ಜೆಗಳನ್ನು ನೆನಪಿಲ್ಲಿಟ್ಟುಕೊಂಡರೆ, ಕಾಲಿನ ಸ್ನಾಯುಗಳನ್ನು ಬೇಕಾದಂತೆ ಮಣಿಸುವ ಕೆಲಸ ಅಷ್ಟೊಂದು ಪ್ರಯಾಸದ್ದಾಗಿ ಕಾಣಿಸಲಿಲ್ಲ.

ಪರಂಪರೆಯಲ್ಲಿ ಅವರ ಕೈಗೆ ಬಂದಿದ್ದ ಎಲ್ಲ ನೃತ್ಯಗತಿಗಳನ್ನೂ ಕಣ್ಣನವರು ನನಗೆ ಹೇಳಿಕೊಟ್ಟರು. ಕಲಿಯಲೂ ಉತ್ಸಾಹ, ಕಲಿತುದನ್ನು ಉಳಿಸಿಕೊಳ್ಳಲೂ ಲವಲವಿಕೆಯನ್ನು ತೋರಿದ ಕಾರಣ ಮೂರೇ ತಿಂಗಳ ಅವಧಿಯಲ್ಲಿ "ಇನ್ನು ಸಾಕು" ಎಂದರು.

ಅವರನ್ನು ಬೀಳ್ಕೊಡುವ ದಿನವೇ- ಈ ಕಲೆಗೆ ಕೊನೆಯವರೆಗೂ ನನ್ನಿಂದ-ನಾನು ತಿಳಿದು ಅಪಚಾರವಾಗಬಾರದು ಎಂದು ನಿರ್ಧರಿಸಿದೆ.

ಆಟದ ಪೀಕಲಾಟ
WD
ಅಲ್ಲಿ ಇಲ್ಲಿ ಕೆಲವು ದಿನ ವಿರಾಮದ ಭೇಟಿಗಳಲ್ಲಿ ಕಳೆದು 'ಯಕ್ಷಗಾನ ರಂಗದಲ್ಲಿ ವೇಷಧಾರಿಯಾಗಿ ಕೆಲಸ ಮಾಡಬಲ್ಲೆ'ನೆಂಬ ಧೈರ್ಯದಿಂದ ಮನೆಗೆ ಮರಳಿದಾಗಲೇ- ಆಟದ ಒಂದು ಪೀಕಲಾಟ ಕಾದಿತ್ತು. ವೇಷ ಹಾಕುವ ಮೊದಲು ಹೇಳದೆ ಹೊರಟು ಬಂದಿದ್ದವನು ನಾನು. 'ನನ್ನ ಮಗನೂ ಆಟದಲ್ಲಿ ವೇಷ ಹಾಕುತ್ತಾನಂತೆ' ಎಂಬ ಸುದ್ದಿ ಕೇಳಿ ತಿಳಿದ ನನ್ನ ತಂದೆಯವರು ನನ್ನನ್ನು ಮನೆಗೆ ಕರೆಸಿ ಛೀಮಾರಿ ಹಾಕಿದ್ದರು. ಅವರನ್ನು ಹೇಗಾದರೂ ಮನವೊಲಿಸಿ, ನಮ್ಮ ಮನೆತನಕ್ಕೆ ಹೆಸರು ಕೆಡದಂತೆ ನೋಡಿಕೊಳ್ಳುವ ಭರವಸೆಯನ್ನಿತ್ತು, ತಿರುಗಿ ಆಟದ ಸ್ಥಳಕ್ಕೆ ಓಡಿದ್ದೆ. ಅದರೊಂದಿಗೇ ಶ್ರೀ ಕೊರಗಪ್ಪ ಶೆಟ್ಟಿ ಅವರ ಮೇಳದಲ್ಲಿ ನಾನಿರುವುದಾದ ಕಾರಣ, ಅವರ ವ್ಯಕ್ತಿತ್ವದ ಪರಿಚಯ ತಂದೆಯವರಿಗೂ ಇದ್ದುದರಿಂದ, ಮೊದಲ ಒಪ್ಪಿಗೆಯ ನಂತರದ ದಾರಿ ಸುಗಮವಾಗಿತ್ತು.

ಒಮ್ಮೆ ಆಶೀರ್ವಾದವಿತ್ತ ನಂತರ, ಕಲಾಪೇಕ್ಷೆ ನನ್ನಲ್ಲಿ ಸಂಪೂರ್ಣವಾಗಿ ವಿಕಾಸಗೊಳ್ಳಬೇಕೆಂದು ತಂದೆಯವರೂ ಬಯಸಿದ್ದರು. ಮಗನ ಹೆಸರು ಕೆಲವರ ಬಾಯಲ್ಲಿ ಕೇಳಿ ಬರತೊಡಗಿದೆ ಎಂದಾಗ ಸಂತೋಷಗೊಂಡಿದ್ದರು.

" .... ಮೇಳದ....ಯರು ನಿನ್ನೆ ಬಂದಿದ್ದರು ಮಗು."

ಆ ಮಹನೀಯರೂ ತಂದೆಯವರೂ ಸ್ನೇಹಿತರು ಎಂಬುದನ್ನು ನಾನು ತಿಳಿದಿದ್ದೆ.

" ಏಕಂತೆ?" ಎಂದೆ.

" ನೀನು ಈ ವರ್ಷ ಅವರ ಮೇಳಕ್ಕೆ ಹೋಗಬೇಕಂತೆ. ಕಳುಹಿಸಿಕೊಡು ಎಂದು ನನ್ನಲ್ಲಿ ಹೇಳಿದ್ದಾರೆ."

" ನೀವೇನು ಹೇಳಿದಿರಿ?"

" ಖಚಿತವಾಗಿ ಅಲ್ಲವಾದರೂ ಆಗಲಿ ಎಂಬ ಅರ್ಥ ಬರುವ ಉತ್ತರವನ್ನೇ ಕೊಟ್ಟೆ."

" ಛೇ!"

ಹೊಸ ಯೋಚನೆ
ಪತ್ತನಾಜೆಯಂದು ಹೊರಡುವಾಗಲೇ, ಮುಂದಿನ ವರ್ಷವೂ ಮೇಳಕ್ಕೆ ಬರುವುದಾಗಿ ಕೊರಗಪ್ಪ ಶೆಟ್ಟಿಯವರಿಗೆ ಮಾತು ಕೊಟ್ಟಿದ್ದೆ.

ಆತ್ಮ ಸ್ನೇಹಿತನಂತೆ ನೋಡಿಕೊಂಡ ಅವರನ್ನು ಅಷ್ಟು ಸುಲಭವಾಗಿ ಬಿಡಲಾಗುವುದೆ?

ಇರುವ ವಿಷಯವನ್ನು ಅವರಲ್ಲಿ ವಿವೇಚಿಸಿದೆ. ಹಾಗಾದರೆ ಇನ್ನೇನು ದಾರಿ? ಎಂದು ಇಬ್ಬರೂ ಯೋಚಿಸಿದೆವು.

ಬಹಳ ಹೊತ್ತಿನ ಯೋಚನೆಯ ತರುವಾಯ, ಇಬ್ಬರಿಂದಲೂ ಬಗೆಹರಿಯದ ಈ ಸಮಸ್ಯೆಯನ್ನು ಮೂರನೆಯವರ ಬಳಿಗೇ ಕೊಂಡೊಯ್ಯುವುದು ಕ್ಷೇಮ ಎನಿಸಿತು.

ಹಾಗೆ, ಮರುದಿನ ಎರಡೂ ಮೇಳಗಳ ಯಜಮಾನರೂ ಮಾತು ಕೇಳಬಹುದಾದ ಶ್ರೀ ಎನ್. ಎಸ್. ಕಿಲ್ಲೆಯವರಿದ್ದ ಮಂಗಳೂರಿಗೆ ಓಡಿದೆ. ಅವರಲ್ಲಿ ನನ್ನ ಸಂದಿಗ್ಧ ಸ್ಥಿತಿಯನ್ನು ನಿವೇದಿಸಿ, ನೀವೇ ಯಾವುದಾದರೂ ದಾರಿ ತೋರಿಸಿ ಎಂದೆ.

ಅವರು ಇಬ್ಬರನ್ನೂ ಕರೆಸಿ, ಅವರೊಡನೆ ಮಾತನಾಡಿ, ಇಬ್ಬರಿಗೂ ನೋವಾಗದ ಒಂದು ಪರಿಹಾರ ತೋರಿಸಿಕೊಟ್ಟರು. ಅವರ ಪರಿಹಾರದ ಫಲರೂಪವಾಗಿ ನಾನು ಆ ವರ್ಷವೂ ಕಟೀಲು ಮೇಳಕ್ಕೆ ಹೋಗುವಂತಾಗಿ, ನನ್ನ ಮಾತು ಉಳಿದುಕೊಂಡಿತು. ಷಷ್ಠಿಯ ಸಮಯಕ್ಕೆ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ ಆಟವಾಡಿದ ತರುವಾಯ ನನ್ನ ಕೆಲವು ಆಸೆ-ಆಕಾಂಕ್ಷೆಗಳನ್ನು ಶ್ರೀ ಶೆಟ್ಟಿಯವರಲ್ಲಿ ಹೇಳಿಕೊಂಡೆ.

ಅರ್ಥ ನಿರೂಪಣೆಯಲ್ಲಿ ಬರುವ ಕೆಲವೊಂದು ದೋಷಗಳನ್ನು ಹೇಗಾದರೂ ತಿದ್ದಬೇಕೆಂಬುದು, ಆಸೆಗಳಲ್ಲಿ ಒಂದು. ಯಕ್ಷಗಾನದಲ್ಲಿ ಪಾತ್ರ ವಹಿಸುವವರು ಹೆಚ್ಚಿನವರ ಮನೆಮಾತು ಕನ್ನಡವಾಗಿರುವುದಿಲ್ಲ (ನಾನು ಪ್ರಸ್ತಾಪಿಸುತ್ತಿರುವುದು ತೆಂಕುತಿಟ್ಟಿನ ಯಕ್ಷಗಾನವನ್ನು ಮಾತ್ರ. ಬಡಗುತಿಟ್ಟಿನ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲ ಅರ್ಹತೆಯನ್ನು ನಾನು ಇನ್ನೂ ಪಡೆದಿಲ್ಲ.) ಅದುವಲ್ಲದೆ, ವಿದ್ಯಾ ವ್ಯಾಸಂಗವನ್ನೂ ಆಗಿನ ವೇಷಧಾರಿಗಳಲ್ಲಿ ಹೆಚ್ಚಿನವರು ಮಾಡಿರಲಿಲ್ಲ. ಹೇಳಿ ಕೊಟ್ಟಿದ್ದುದನ್ನು ಕಲಿತಿರುವುದಕ್ಕಿಂತಲೂ, ಕೇಳಿ ಕಲಿತುದನ್ನು ಕೆಡಿಸುವ ಬುದ್ಧಿಯೂ ಹೆಚ್ಚು ಇತ್ತು. ಅದಕ್ಕಿಂತಲೂ ಹೆಚ್ಚಾಗಿ ತಮಗಿಚ್ಛೆ ಬಂದಂತೆ- ಬೇಡದಲ್ಲೂ- ಅಪ್ರಾಸಂಗಿಕ ಮಾತುಗಳನ್ನು ಸೇರಿಸಿಕೊಳ್ಳುವ ಅಭ್ಯಾಸ ಹೆಚ್ಚಿತ್ತು.

ಎಲ್ಲಕ್ಕಿಂತಲೂ ಹೆಚ್ಚು ತಲೆನೋವು ತರುತ್ತಿದ್ದ ವಿಷಯವೆಂದರೆ, ಮಿತಿ ಮೀರಿದ ಆಶ್ಲೀಲ ನುಡಿಗಳು.

ಮಾತುಗಾರಿಕೆಯ ಮಟ್ಟವನ್ನು ಉನ್ನತಗೊಳಿಸಬೇಕು; ಹೇಗಾದರೂ ಮಾಡಿ 'ನಮ್ಮವರ ಮಾತು ಶುದ್ಧ' ಎನಿಸಬೇಕು ಎಂದು ಶೆಟ್ಟರಲ್ಲಿ ಹೇಳಿದೆ.

" ಅದಕ್ಕೆ ಏನಾಗಬೇಕು, ಮಾಡಿ" ಎಂದೇ ಅವರು ಅಪ್ಪಣೆ ಇತ್ತರು.

ಮಾತಿನ ಪರಿಶುದ್ಧತೆಯನ್ನು ಕಾಪಾಡಬೇಕಾದುದು ಅಗತ್ಯ ಎಂದು, ಮೊದಲಾಗಿ ನನ್ನ ಜೊತೆಯವರಲ್ಲಿ ಕೇಳಿಕೊಂಡೆ. ಅವರ ಒಪ್ಪಿಗೆ ದೊರೆತ ತರುವಾಯ ಕಿರಿಯರಲ್ಲೂ ಹೇಳಿದೆ. ಅವರು ಕೂಡಾ, ಸೂಚನೆಗೆ ಅನುಮೋದನೆಯನ್ನೇ ಇತ್ತರು.

ಅಂತೆಯೇ, ಆ ವರ್ಷದ ತಿರುಗಾಟದಲ್ಲಿ ಬ್ರಾಹ್ಮಣರ ಹಾಸ್ಯ, ಅರ್ಧನಾರೀಶ್ವರ (ಸಭಾ ಲಕ್ಷಣದಲ್ಲಿ) ಇವುಗಳಲ್ಲೂ, ದೂತರಾಗಿ ಬರುವವರ ಮಾತುಗಳಲ್ಲೂ ಅಶ್ಲೀಲ ಸ್ವಲ್ಪ ಸ್ವಲ್ಪವಾಗಿ ಕಾಣದಾಗುತ್ತಾ ಬಂತು.

ಮರ್ಯಾದೆಯ ಮನೆವಂದಿಗರು ಹೆಂಗಸರನ್ನು ಕರೆದುಕೊಂಡು ಆಟಕ್ಕೆ ಬಂದರೆ, ಮುಖ ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ತಪ್ಪಿಹೋಯಿತು.

ವೇಷ ವಿಪರ್ಯಾಸ
ಯಜಮಾನರಿಂದ ಸಾಕಷ್ಟು ಸ್ವಾತಂತ್ರ್ಯ ಪಡೆದ ನಾನು, ಮನಸ್ಸಿನಲ್ಲಿದ್ದ ಇನ್ನೊಂದು 'ಸುಧಾರಣೆ'ಯ ಕಡೆಗೂ ಗಮನ ಕೊಟ್ಟೆ. ಪಾತ್ರಗಳು ಯಾವಾಗಲೂ ಪದ್ಧತಿಯ ವೇಷ ಭೂಷಣಗಳಿಂದಲೇ ಅಲಂಕೃತರಾಗಿ ರಂಗಸ್ಥಳಕ್ಕೆ ಬರುತ್ತಾ ಇದ್ದುದು ಮೊದಲಿನಿಂದಲೂ ಬಂದ ರೂಢಿ ಎನಿಸಿತ್ತು. ಕೆಲವೊಂದು ಸನ್ನಿವೇಶಗಳಲ್ಲಿ, ಭಾಗವತರ ಬಾಯಿಂದ ಪದ್ಯಗಳಲ್ಲಿ ಕೇಳಿ ಬರುವ ವರ್ಣನೆಗಳಿಗೂ ದೃಶ್ಯದಲ್ಲಿ ಕಾಣಬರುವ ವೇಷಕ್ಕೂ ಏನೇನೂ ಸಾಮ್ಯವಿಲ್ಲದಾಗಿ ವಿಪರ್ಯಾಸವಾಗುತ್ತಿತ್ತು.

WD
ಜಟಾವಲ್ಕಲಧಾರಿಗಳಾಗಿ ರಾಮಲಕ್ಷ್ಮಣರು ಕಾಡಿಗೆ ಹೊರಟರು ಎಂದು ಕವಿ ನುಡಿದಾಗ, ರಾಮ-ಲಕ್ಷ್ಮಣ ಇವರಿಬ್ಬರೂ ರಾಜಯೋಗ್ಯವಾದ ಉಡುಗೆ-ತೊಡುಗೆಗಳಿಂದಲೇ ಮೆರೆಯುತ್ತಿದ್ದರು. ಇಬ್ಬರ ತಲೆಯಲ್ಲೂ ಕಿರೀಟಗಳು ಇರುತ್ತಿದ್ದವು.

ಅಂತಹ ಪ್ರಸಂಗಗಳಲ್ಲಿ ರಾಮಲಕ್ಷ್ಮಣರು ವನವಾಸ ಮಾಡುವವರಂತೆಯೇ ಇರಬೇಕು ಎಂದೆ.

ಯಜಮಾನರು 'ಅಸ್ತು' ಎಂದರು. ಉಳಿದವರು ತಲೆ ಬಾಗಿದರು.

ಆಂಜನೇಯನ ವೇಷ, ಅವನಿಗಾಗಿಯೇ ಇರುವ ಒಂದು ವಿಶಿಷ್ಟ ಕಿರೀಟದಿಂದ ಮಾತ್ರವೇ ಗುರುತಿಸುವಂತೆ ಇರುತ್ತಿತ್ತು. ಉಳಿದ ವೇಷ-ಭೂಷಣಗಳೆಲ್ಲ, ರಾಕ್ಷಸ ಪಾತ್ರಗಳವು. ಆ ಕಿರೀಟದಿಂದಲೂ, ಆ ಕಪಿಚೇಷ್ಟೆಗಳಿಂದಲೂ (ಕೆಲವೊಮ್ಮೆ ಮಾತಿನಿಂದಲೂ) ಅವನು ಹನುಮಂತ ಎಂದು ತಿಳಿಯುವ ಪರಿಸ್ಥಿತಿ ಇತ್ತು.

ಅದನ್ನೂ ಬದಲಾಯಿಸಬೇಕು. ಹನುಮಂತ ವಾನರ ವೀರನೆಂದಾದರೆ, ಅವನ ವೇಷವೂ ಅಂತೆಯೇ ಇರಬೇಕು ಎಂದು ಬಯಸಿದೆ.

" ನೀನೇ ಮಾಡಿ ತೋರಿಸು" ಎಂದರು ಶ್ರೀ ಶೆಟ್ಟರು.

ಹೊಸ ಮಾರುತಿ
ಮಾರುತಿಯ ಮೈಯನ್ನೇ ಹೋಲುವ ಕೃತಕ ರೋಮಗಳಿಂದ ಅಂಗಿಯೊಂದನ್ನು ತಯಾರಿಸಿದೆ. ಅಂಗಿಯ ಬಣ್ಣವನ್ನೇ ಹೋಲುವಂತೆ ಮುಖದ ಬಣ್ಣವನ್ನೂ ಬದಲಾಯಿಸಬೇಕು ಎಂದುಕೊಂಡೆ. ಚಿತ್ರಣವಂತೂ ಮನಸ್ಸಿನಲ್ಲಿ ಸ್ಪಷ್ಟವಾಗಿತ್ತು.

ಇರಾ ಎಂಬ ಊರಿನಲ್ಲಿ ನಿಶ್ಚಯಿಸಿದ ಆಟಕ್ಕೆ (ಹನುಮಂತನ ಪ್ರಥಮ ಪ್ರಯೋಗಕ್ಕಾಗಿಯೇ ಎಂದರೂ ಹೆಚ್ಚಲ್ಲ) "ಚೂಡಾಮಣಿ" ಪ್ರಸಂಗವನ್ನು ಆಯ್ದುಕೊಂಡೆವು.

ಹನುಮಂತನ ಪಾತ್ರಕ್ಕಾಗಿಯೇ ಸಿದ್ಧಪಡಿಸಿಕೊಂಡಿದ್ದ ನಾಟ್ಯದ ಹೆಜ್ಜೆಗಳೊಂದಿಗೆ ರಂಗಸ್ಥಳವನ್ನು ಪ್ರವೇಶಿಸಿದಾಗ ಜನ ಸಮೂಹದ ಕೈ ಚಪ್ಪಾಳೆಯೇ ನನ್ನನ್ನು ಸ್ವಾಗತಿಸಿತು.

ಅಷ್ಟೊಂದು ಹುರುಪು ಬಾರದೆ, ಜನರು ಪ್ರಥಮ ಪ್ರವೇಶದಲ್ಲಿಯೇ ಯಾರನ್ನೂ ಮೆಚ್ಚಲಾರರು. ಪ್ರಯೋಗ ಫಲಕಾರಿಯಾಗಬಹುದು ಎಂಬ ಧೈರ್ಯ ಬಂದಿತು.

ಅಂದು ಅಶೋಕವನದ ಸೀತೆಯಿಂದ ಹನುಮ ಚೂಡಾಮಣಿಯನ್ನು ಪಡೆದು ರಾಮನ ಬಳಿಗೊಯ್ದಾಗ, ಯಕ್ಷಗಾನ ಕಲಾಮಾತೆಯಿಂದ ಸುಧಾರಣೆಯ ಆಶೀರ್ವಾದದ ಮಣಿಯನ್ನು ಪಡೆದು ರಸಿಕ ರಾಮರೆಡೆಗೆ ಒಯ್ಯುತ್ತಲಿದ್ದೇನೆ ಎಂದೇ ನನ್ನ ಭಾವನೆಯಾಗಿತ್ತು.

ಹಿಂದೆ, ರಂಗಸ್ಥಳಕ್ಕೆ ಬೀಳುತ್ತಲಿದ್ದ ದೀವಟಿಗೆಯ ಬೆಳಕಿನಲ್ಲಿ ಸುಸ್ಪಷ್ಟವಾಗಿ ಕಾಣುವ ರೀತಿಯ ಬಣ್ಣಗಾರಿಕೆ ಇದ್ದಿತು. ಅನಂತರ ಪೆಟ್ರೋಮ್ಯಾಕ್ಸ್ ದಿನಗಳು ಕಾಲಿಟ್ಟಾಗ, ಆ ಬಿಳಿಯ ಬೆಳಕಿಗೂ, ಬಳಿವ ಬಣ್ಣಕ್ಕೂ ಹೊಂದಿಕೆಯಾಗುವುದೆ? ಎಂದು ಯಾರೂ ಪರಿಶೀಲಿಸಿ ನೋಡುವ ತಾಳ್ಮೆ ತೆಗೆದುಕೊಂಡಿರಲಿಲ್ಲ.

ಮುಖವರ್ಣಿಕೆ- ವೇಷಭೂಷಣಗಳು- ಹತ್ತಿರಕ್ಕೂ, ದೂರಕ್ಕೂ ಒಂದೇ ಬಗೆಯಾಗಿ ಕಾಣುವಂತಹ ವೇಷ ವೈವಿಧ್ಯಗಳ ಕುರಿತು ಯೋಚಿಸಿದ್ದೆ. ಅವುಗಳನ್ನೆಲ್ಲ ಒಂದೊಂದಾಗಿ ಮಾಡಿ ನೋಡುವ ಅವಕಾಶ ಒದಗುತ್ತಾ ಬಂದಿತು.

ಇಂದಿಗೆ, ಹನುಮಂತನ ವೇಷಕ್ಕೆ ಬಣ್ಣಗಾರಿಕೆ ಹೇಗೆ? ವೇಷಭೂಷಣಗಳು ಯಾವುವು? ಎಂದು ಯಾರಾದರೂ ಪ್ರಶ್ನಿಸಿದರೆ 'ಚೂಡಾಮಣಿ'ಯಲ್ಲಿ ಕಂಡುಬರುವ ಹನುಮಂತನ ವರ್ಣನೆಯನ್ನೇ ಮಾಡುವವರು ಹೆಚ್ಚು.

ಹಿಂದೆ ಇದ್ದ ಹನುಮಂತನ ವೇಷ ಹಿಂದಿನ ಆಟಗಳನ್ನು ನೋಡಿದ್ದೇವೆ-ಎನ್ನುವವರಿಗೂ, ಬಹಳ ಹಿಂದಿನಿಂದಲೇ ಪಾತ್ರ ವಹಿಸುತ್ತಲಿದ್ದವರಿಗೂ ನೆನಪಿರಬಹುದು.
WD
ಅವರಲ್ಲೂ ಕೆಲವರು "ಅದು ಹೇಗಿತ್ತು ಎಂದು ನನಗೆ ಸರಿಯಾಗಿ ನೆನಪಿಲ್ಲ" ಎಂದರೂ ಆಶ್ಚರ್ಯಪಡಬೇಕಾಗಿಲ್ಲ.

ನಾನು ಮಾಡಿದುದು ತಪ್ಪಾಯಿತೆ? ಪರಂಪರೆಯನ್ನು ಹಾಗೆ ಬದಲಾಯಿಸಬಹುದಿತ್ತೆ? ಎಂದು ನನ್ನನ್ನು ನಾನೇ ಕೇಳಿಕೊಳ್ಳುವ ಕಾಲ ಆಗ ಬಂದಿರಲಿಲ್ಲ.

ನಿರೂಪಣೆ: ಪದ್ಯಾಣ ಗೋಪಾಲಕೃಷ್ಣ ( ಪ.ಗೋ. 1928 -1997)

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments