Webdunia - Bharat's app for daily news and videos

Install App

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 6- ಕುಣಿಯಲು ಕಲಿತವರೇ ವೇಷಧಾರಿಗಳು

Webdunia
[ ಕರಾವಳಿಯ ಅದ್ಭುತ ಕಲೆ ಯಕ್ಷಗಾನ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸಂ ]

[ ಕಳೆದ ವಾರದಿಂದ ಮುಂದುವರಿದುದ ು]

WD
ನನ್ನ ಇನ್ನೊಬ್ಬ ಗೆಳೆಯರಾದ ಕೆ.ಪಿ. ಗೋಪಾಲಕೃಷ್ಣ ಭಟ್ಟರು ಸಲಹೆ ನೀಡುವವರೆಗೂ ಮೇಳಕ್ಕೆ ಸೇರಿ ವೃತ್ತಿಪರ ಕಲಾವಿದನಾಗುವ ಯೋಚನೆ ನನ್ನ ತಲೆಯಲ್ಲೇ ಸುಳಿದಿರಲಿಲ್ಲ.

ಕೆಲವೊಂದು ಕಡೆ ಆಟಗಳಿಂದ ಆಕರ್ಷಿತನಾದಾಗ, ಒಂದೆರಡು ವೇಷಗಳು ನನ್ನ ಮೇಲೆ ಪ್ರಭಾವ ಬೀರಿದಾಗ 'ನಾನು ಹಾಗೆ ಕುಣಿಯಲಾಗುತ್ತಿದ್ದರೆ?' ಎಂದುಕೊಂಡಿದ್ದೆಯೇ ಹೊರತು, ಆರು ತಿಂಗಳ ಕಾಲ ಎಡೆಬಿಡದೆ ಪ್ರತಿ ರಾತ್ರೆಯೂ ಗೆಜ್ಜೆ ಕಟ್ಟುವ ಯೋಚನೆ ಮಾಡಿರಲಿಲ್ಲ.

ಮೇಳಗಳ ನೇರ ಸಂಪರ್ಕವಿರಲಿಲ್ಲವಾದರೂ, ವೇಷ ಹಾಕುವವರು ಕೆಲವರ ಗುರುತಿತ್ತು. ವೇಷಧಾರಿಗಳ ಜೀವನದ 'ಸೊಗಸು' ಕಾಣಿಸಿತ್ತು.

ಅವರು ಯಾವ ದೇವಿಯ ವರಪ್ರಸಾದದಿಂದಾಗಿಯೇ ಕಲಾವಿದರಾಗಿರಲಿ, ಬೇರೇನೂ ಉದ್ಯೋಗ ದೊರೆಯದೆಯೇ ಆಟದ ಮೇಳ ಸೇರಲು ಬಂದವರು ಎನ್ನುವ ಭಾವನೆ ಜನರಲ್ಲಿ ಬೇರೂರಿತ್ತು. ಕೆಲವರಂತೂ, ಆ ಭಾವನೆಯನ್ನು ಮತ್ತೂ ಬೆಳೆಸಲು ಸಹಕರಿಸಿದ್ದರೆಂದರೆ ಹೆಚ್ಚಲ್ಲ.

ಆಟವಾಡುವ ರಾತ್ರಿಯ ಒಂದು ದಿನದ ಮಟ್ಟಿಗೆ, ಒಂದಷ್ಟು ಅನ್ನ ಬೇಯಿಸಿ ತಿಂದು, ಸಾಧ್ಯವಿದ್ದರೆ ಕೆಲವು ಗಂಟೆಗಳ ಕಾಲ ಮಲಗಿ ನಿದ್ರಿಸಲು ಒಂದು 'ಬಿಡಾರ'ಕ್ಕೆ ಅವಕಾಶ ಕೊಡಬೇಕಾದರೆ, ಊರ ಜನ ಹಿಂದುಮುಂದು ನೋಡುವುದಿತ್ತು.

ವಾಹನ ವ್ಯವಸ್ಥೆಯೂ, ರಸ್ತೆ ದಾರಿಗಳೂ ಸರಿಯಾಗಿ ಇಲ್ಲದ ಆ ಕಾಲದಲ್ಲಿ ಒಂದು ಆಟವಾದ ನಂತರ ಇನ್ನೊಂದು ಆಗಬೇಕಾದರೆ 15-20 ಮೈಲುಗಳ ಕಾಲ್ನಡಿಗೆಯ ಪ್ರವಾಸವೂ ಮಾಡಬೇಕಾದ ಸಂದರ್ಭಗಳು.

ಮೇಳಗಳನ್ನು ವಹಿಸಿಕೊಂಡ ಭಾಗವತರನ್ನು ಬಿಟ್ಟರೆ, ಉಳಿದವರು ಹೆಚ್ಚಿನವರ ವಿದ್ಯೆ- ಸಂಸ್ಕಾರಗಳು ಪ್ರಶ್ನಾರ್ಹ.

ಒಬ್ಬಿಬ್ಬರು ವಿದ್ವಾಂಸರು ಕೂಡಾ, ಯಾವುದೋ ಆವ್ಯಕ್ತ ಆಕರ್ಷಣೆಯಿಂದ ವೇಷಗಳನ್ನು ಹಾಕುತ್ತಿದ್ದರಾದರೂ, ಆಟ ಆಡಿಸುವವರಿಗೆ ಬೇಕೆಂದಾದರೆ ಅವರನ್ನು ಕರೆಸಿಕೊಳ್ಳಬೇಕಾಗಿತ್ತು. ಅವರಾಗಿ ಯಾವ ಕಡೆಗೂ, ಕೆಲಸವನ್ನು ಅರಸಿಕೊಂಡು ಹೋಗುತ್ತಿರಲಿಲ್ಲ.

ನಿಕೃಷ್ಟ ಸ್ಥಿತಿಯ ಪರಮಾವಧಿಯಲ್ಲಿದ್ದ ಆ ಬದುಕನ್ನು ನೆನೆದೇ ನಾನು 'ಹಾಂ!' ಎಂದುದು.

'' ಆ ಕುರಿತು ನೀನೇನೂ ಭಯ ಪಡಬೇಕಾಗಿಲ್ಲ. ನೀನು ಮಾಡಬೇಕಾದುದನ್ನು ಒಳ್ಳೆಯದಾಗಿ, ಒಳ್ಳೆಯವನಾಗಿ ಮಾಡು. ತಾನು ಒಳ್ಳೆಯವನಾದರೆ ಲೋಕವನ್ನೇ ಒಳ್ಳೆಯದಾಗಿಸಲು ಸಾಧ್ಯವಿದೆ'' ಎಂದರು ಆ ಗೆಳೆಯರು.

ಆಟದ ಪೇಚಾಟವನ್ನು ಸರಿಯಾಗಿ ತಿಳಿದಿದ್ದ ತಂದೆಯವರನ್ನು ನೆನಪು ಮಾಡಿಕೊಂಡು-''ಮನೆಯಲ್ಲಿ?'' ಎಂದೆ.

'' ಮನೆಯ ಮಟ್ಟಿಗೆ ನೀನೇನೂ ಯೋಚನೆ ಮಾಡಬೇಡ. ಮೊದಲು ಯಾವುದಾದರೂ ಮೇಳಕ್ಕೆ ಸೇರಿಕೋ. ಸೇರಿಕೊಂಡ ನಂತರ ಅರ್ಧದಲ್ಲಿ ಬಿಡುವಂತಾದರೆ ಮರ್ಯಾದೆಗೆ ಕುಂದು ಎಂಬ ಮಾತೂ ಬರುತ್ತದೆ. ಅದೂ ಅಲ್ಲವಾದರೆ, ತಂದೆಯವರ ಕೈ ಕಾಲು ಹಿಡಿದಾದರೂ ನಾನು ಒಪ್ಪಿಸುತ್ತೇನೆ'' ಎಂದು ಅವರು ಮತ್ತೂ ಹುರಿದುಂಬಿಸಿದರು.

ಕನ್ಯಾನದಿಂದ ಮುಂದೆ ನಾಲ್ಕು ಮೈಲುಗಳ ದೂರದವರೆಗೂ ಇದೇ ರೀತಿ ಮಾತು.

ಆರಂಭದಲ್ಲಿದ್ದ ಅಂಜಿಕೆ ಮಾಯವಾಗತೊಡಗಿತ್ತು. ಕೆಡುಕು ಇದ್ದರೇನಂತೆ? ಕೆಟ್ಟದನ್ನು ಒಳ್ಳೆಯದಾಗಿ ಮಾಡುವ ನಿಷ್ಠೆ ನಮ್ಮಲ್ಲಿ ಇದ್ದರೆ ಸಾಲದೆ? ಉಳಿದವರು ಹೇಗಿದ್ದರೂ ನಾವು ನಿಸ್ಪೃಹರಾಗಬಾರದು ಎಂದಿದೆಯೆ? ಎಂದಾಯಿತು ನನ್ನ ಮನೋಸ್ಥಿತಿ.

'' ಆಗಲಿ, ಯಾವುದಾದರೊಂದು ಮೇಳವನ್ನು ಸೇರುತ್ತೇನೆ'' ಎಂದು ಅವರನ್ನು ಬೀಳ್ಕೊಂಡೆ.

ಯಾವ ಮೇಳಕ್ಕೆ ಸೇರಬಹುದು? ಎಂಬುದು ಮುಂದಿನ ಪ್ರಶ್ನೆ.

ಜನರು ಬರಲು ಹೇಸುತ್ತಿದ್ದರೂ, ದಶಾವತಾರ ಮೇಳಕ್ಕೆ ಕಲಾವಿದನಾಗಿಯೇ ಪ್ರವೇಶ ದೊರಕಿಸಿಕೊಳ್ಳುವ ಕೆಲಸ ಅಷ್ಟು ಸುಲಭವಾಗಿರಲಿಲ್ಲ.

ಸಣ್ಣ ಹುಡುಗರಾಗಿರುವಾಗ, ಮನೆಯಿಂದ ಹೇಳದೆ ಓಡಿ ಬಂದು, ಮೇಳದಲ್ಲಿ ಜೀತದಾಳುಗಳಂತೆ ಸೇರಿಕೊಳ್ಳಲು ಸಾಧ್ಯವಿರುತ್ತಿತ್ತು - ಅಷ್ಟೆ. ಪ್ರಾಯ ಬಂದವರಿಗೆ, ಅದೂ ಕಲೆಯ ಗಂಧ ಒಂದಷ್ಟು ಮೈ ಪೂಸಿದೆ ಎನ್ನುವವರಿಗೆ ಅವಕಾಶ ನಾಸ್ತಿಯಾಗಿರುತ್ತಿತ್ತು.

ಏನೂ ತಿಳಿಯದವರಿಗಾದರೆ, ಬಿಟ್ಟಿ ದುಡಿತದ ಮಹಿಮೆ ಗೊತ್ತಿರುವುದಿಲ್ಲ ಎಂಬುದೂ ಅದಕ್ಕೊಂದು ಕಾರಣವಾಗಿರಬೇಕು. ಆಗ ನನಗದು ಗೊತ್ತಿರಲಿಲ್ಲವೆನ್ನಿ.

ಅದೇ ಗುಂಗಿನಲ್ಲಿ, ಯೋಚಿಸುತ್ತಾ ಬರುತ್ತಿದ್ದಾಗ, ಮೇಳಗಳು ತಮ್ಮ ತಿರುಗಾಟವನ್ನು ಮರುದಿನವೇ ಪ್ರಾರಂಭ ಮಾಡಲಿವೆ ಎಂಬುದು ನೆನಪಿಗೆ ಬಂತು.

'' ಕೂಡ್ಲು, ಕಟೀಲು, ಕದ್ರಿ....'' ಎಂದು ಒಂದೊಂದಾಗಿ ಮೇಳಗಳ ಹೆಸರನ್ನು ಜ್ಞಾಪಿಸಿಕೊಳ್ಳುತ್ತಾ, ಮೇಳಗಳನ್ನು ವಹಿಸಿಕೊಂಡವರು ಯಾರು? ಎಂದು ನೆನಪು ಮಾಡಿಕೊಳ್ಳತೊಡಗಿದೆ.

ಕೂಡ್ಲು- ಶ್ರೀ ಪುತ್ತಿಗೆ ರಾಮಕೃಷ್ಣ ಜೋಯಿಸರಿಗೆ ಸೇರಿತ್ತು. ಕಟೀಲು? [ಮುಂದಿನ ಪುಟಕ್ಕ ೆ]

ಕಲ್ಪನೆಯೇ ಆಹಾರ
ಕಟೀಲು ಮೇಳವನ್ನು ವಹಿಸಿಕೊಂಡ ಶ್ರೀ ಕಲ್ಲಾಡಿ ಕೊರಗಪ್ಪ ಶೆಟ್ಟಿಯವರ ಹೆಸರು ಮನಃಪಟಲದಲ್ಲಿ ಸುಳಿದ ಕೂಡಲೇ-

ಅವರನ್ನು ಕಾಣಬೇಕು, ಕೂಡಲೇ ಕಂಡು ಮಾತನಾಡಬೇಕು ಎಂದೇ ನಿರ್ಧರಿಸಿದೆ. ತಂದೆಯವರ ನಾಟಕ ಮಂಡಳಿಯಿಂದಾಗಿ ಅವರಿಗೆ ನನ್ನ ಮುಖ ಪರಿಚಯ ಆ ಮೊದಲೇ ಆಗಿತ್ತು. ನಿಮ್ಮ ಮೇಳವನ್ನು ಸೇರಿಕೊಳ್ಳುತ್ತೇನೆ ಎಂದರೆ 'ಬೇಡ' ಎನ್ನಲಾರರು ಎಂಬ ಧೈರ್ಯವೂ ಬಂದಿತ್ತು.

ರಸ್ತೆಯ ಬದಿಯಲ್ಲಿದ್ದ ಆನೆಕಲ್ಲಿನಲ್ಲೇ ಸಂಜೆಯವರೆಗೂ ಕಾದು, ಬಂದ ಬಸ್ಸನ್ನು ಏರಿ ಹೊರಟೆ.

ಅಷ್ಟರವರೆಗೂ, ನನ್ನನ್ನು ಸಾಕಷ್ಟು ಒದ್ದಾಡಿಸಿದ್ದ ಕಲ್ಪನೆಯೇ ನನ್ನ ಅಂದಿನ ಆಹಾರ.

ನಾಲ್ಕೂ ಸುತ್ತಿನಲ್ಲಿ ನದಿಯ ನೀರಿನಿಂದ ಕಾಲು ತೊಳೆಯಿಸಿಕೊಳ್ಳುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಮುಂಭಾಗದಲ್ಲಿ ಬಸ್ಸಿನಿಂದ ಇಳಿದೆ. ಶ್ರೀ ದೇವಿಯ ಗರ್ಭಗುಡಿಗೆ ಪ್ರದಕ್ಷಿಣೆ ಬಂದ ತರುವಾಯ, ನಮ್ಮೂರಿನ ಸಮೀಪದವರೇ ಆಗಿದ್ದ ಆಗಲೇ ಪ್ರಸಿದ್ಧರೆನಿಸಿದ್ದ ಮಿತ್ರ ಶ್ರೀ ಅಳಿಕೆ ರಾಮಯ ರೈಗಳನ್ನು ಹುಡುಕಿಕೊಂಡು ಹೊರಟೆ.

ಅವರನ್ನು ಕಂಡು, ನಾನು ಅಲ್ಲಿಯವರೆಗೆ ಬಂದ ಕಾರಣವನ್ನು ಹೇಳಿದಾಗ- ಅವರು ಸ್ವಲ್ಪ ಹೊತ್ತು ಮೌನವಾಗಿಯೇ ಇದ್ದರು. ಆದರೆ, ಏಕೆ ? ಏನು? ಎಂಬ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಮೇಳದ ವ್ಯವಸ್ಥಾಪಕ ಶ್ರೀ ಕಲ್ಲಾಡಿ ಕೊರಗಪ್ಪ ಶೆಟ್ಟಿಯವರಿದ್ದಲ್ಲಿಗೆ ಕರೆದೊಯ್ದರು; ಶೆಟ್ಟರಿಗೆ ನನ್ನ ಪರಿಚಯ ಮಾಡಿಸಿದರು.

ನನ್ನ ಹೆಸರು ಅವರಿಗೆ ಗೊತ್ತಿತ್ತಾದರೂ ಬಣ್ಣ ಬಳಿಯದೆ ಇದ್ದ ಮುಖವನ್ನು ಅಷ್ಟು ಸಮೀಪದಿಂದ ಅವರು ನೋಡಿದುದು ಅದೇ ಮೊದಲಾಗಿರಬೇಕು.

ಉಪಚಾರ- ಉಪಾಹಾರ ಇತ್ಯಾದಿಗಳು ಕಳೆದ ಮೇಲೆ, ನನ್ನ ಮನದ ಬಯಕೆಯನ್ನು ಅವರಿಗೆ ತಿಳಿಸಿದೆ.

'' ನಮ್ಮೊಂದಿಗೆ ಬರುತ್ತೀರಾ? ಆಗತ್ಯವಾಗಿ ಬನ್ನಿ'' ಎಂದರು ಅವರು. ಕಷ್ಟಕಾರ್ಪಣ್ಯದ ಮಾತೆತ್ತಿ ನನ್ನನ್ನು ನಿರುತ್ಸಾಹಗೊಳಿಸಲಿಲ್ಲ. ಯಾವುದೇ ವಿಘ್ನವಿಡ್ಡೂರದ ಸುಳಿವು ಕೊಡಲಿಲ್ಲ. ನನ್ನ ನಾಟಕದ ಪಾತ್ರಗಳನ್ನು ಕಂಡಿದ್ದು, ಅವುಗಳಿಂದ ಆಕರ್ಷಿತರಾಗಿದ್ದುದಷ್ಟನ್ನೇ ಹೇಳಿದರು. ಅವರ ಯಕ್ಷಗಾನ ಮಂಡಳಿಗೆ ನಾನು ಬರುವುದಕ್ಕೆ ಸ್ವಾಗತವೆಂದರು.

ನನಗೆ ಬೇಕಾದ ಸೌಕರ್ಯಗಳನ್ನು ಒದಗಿಸಿಕೊಡುವಂತೆ ತನ್ನವರಿಗೆ ಆದೇಶವಿತ್ತರು.

ಕುಣಿತವಿರಲಿ- ಬಿಡಲಿ, ವೇಷಧಾರಿ ಎಂದ ಮೇಲೆ ಪ್ರತಿಯೊಬ್ಬನೂ ಯಕ್ಷಗಾನದಲ್ಲಿ ಕಾಲಿಗೆ ಗೆಜ್ಜೆ ಕಟ್ಟಲೇಬೇಕು. ಕುಣಿಯಲು ಕಲಿತವರೇ ಮೇಳಕ್ಕೆ ವೇಷಧಾರಿಗಳಾಗಿ ಬರುವವರು, ನಾನೊಬ್ಬ ಆ ನಿಯಮಕ್ಕೆ ಅಪವಾದವಾಗಿ ಬಂದಿದ್ದರೆ, ನನಗಾಗಿ ಆ ನಿಯಮವನ್ನು ಮುರಿಯಬೇಕಾಗಿ ಬರಲಿಲ್ಲ. ಗೆಜ್ಜೆಯನ್ನೆತ್ತಿಕೊಳ್ಳಲು ನಾನೇ ಮುಂದಾಗಿದ್ದೆ.

ಶ್ರೀ ದೇವಿಯ ಸನ್ನಿಧಿಯಲ್ಲಿ - ಸಂಪ್ರದಾಯದಂತೆ ಅಂದು ಆಟದ ಸೇವೆ. ಚೌಕಿಯಲ್ಲಿ ಕುಳಿತು ಬಣ್ಣ ಬಳಿಯುವವರೆಲ್ಲ, ಬಣ್ಣಗಾರಿಕೆ ಆರಂಭಿಸುವಾಗ ಗೆಜ್ಜೆಗಳಿಗೆ ನಮಸ್ಕಾರ ಮಾಡಿ ಅವುಗಳನ್ನು ಎತ್ತಿಕೊಳ್ಳುವ ರೂಢಿ. ಕಣ್ಣು ಮುಚ್ಚಿ ದೇವರನ್ನು ಧ್ಯಾನಿಸುತ್ತಾ ಅವುಗಳನ್ನು ಕೈಗಳಲ್ಲಿ ಹಿಡಿದುಕೊಳ್ಳುವುದೂ ಇದೆ- ಒಂದೆರಡು ನಿಮಿಷ.

ನಾನಂತೂ, ವಿಶೇಷ ಪ್ರಾರ್ಥನೆ ಸಲ್ಲಿಸಿಯೇ ಗೆಜ್ಜೆಗಳನ್ನು ಎತ್ತಿಕೊಂಡಿದ್ದೆ.

ಸೇವೆಯಾಟದ ದಿನದ ಪ್ರಸಂಗ ''ಅಶ್ವಮೇಧ'' (ಜೈಮಿನಿ ಭಾರತದ ಪಾಂಡವಾಶ್ವಮೇಧದ ಕಥಾನಕ) ಎಂದು ಆ ಮೊದಲೇ ನಿಶ್ಚಯವಾಗಿತ್ತು.

ಗೆಳೆಯರಾದ ಅಳಿಕೆ ರಾಮಯ ರೈ ಅವರ ಮಾತಿನ ಮೇಲೆ ವಿಶ್ವಾಸವಿಟ್ಟು ನನಗೆ ಕೃಷ್ಣನ ಪಾತ್ರವನ್ನು ಕೊರಗಪ್ಪ ಶೆಟ್ಟಿಯವರು ಇತ್ತಿದ್ದರು. ಯಕ್ಷಗಾನ ನಾಟಕದ ಕೃಷ್ಣನಾಗಿ ಅವರೆದುರು ಸುಳಿದಿದ್ದುದೂ ಅವರ ಆಯ್ಕೆಗೆ ಒಂದು ಕಾರಣವಾಗಿದ್ದಿರಬಹುದು.

ಅಂತೂ, ಅವರ ಅಂದಿನ ಆಯ್ಕೆಯಿಂದಾಗಿ, ಯಕ್ಷಗಾನದಲ್ಲಿ ಹೊಸದೊಂದು ಪ್ರಯೋಗವನ್ನು ಮಾಡಿ ನೋಡುವ ಅವಕಾಶ, ನನಗೆ ಸುಲಭವಾಗಿ ದೊರೆಯಿತು.

ಆ ಪ್ರಯೋಗ, ವೇಷಭೂಷಣಕ್ಕೆ ಸಂಬಂಧಿಸಿದುದು.

ಹಳೆಯ ಪದ್ಧತಿಯ ಕೆಲವಂಶ ಅಳಿಯುತ್ತಾ ಬಂದಿದ್ದು, ಹೊಸತೆಂಬುದು ಇನ್ನೂ ಬಲವಾಗದಿದ್ದ ದಿನಗಳು ಅವು. ಬದಲುತ್ತಿದ್ದ ಕೆಲವೊಂದು ಪದ್ಧತಿಗಳನ್ನು ಇಲ್ಲಿ ಪ್ರಸ್ತಾಪಿಸುವುದು ಅಗತ್ಯವೆನಿಸುತ್ತದೆ. ಆಟಗಳಲ್ಲಿ ಸೂತ್ರಧಾರಿಗಳೆನಿಸಿದ ಭಾಗವತರು, ಪ್ರಸಂಗದ ಪೀಠಿಕೆಯಾದೊಡನೆ ರಂಗದ ಬಳಿ ಬಂದವರು, ಮುಂಜಾನೆಯ ಮಂಗಳದವರೆಗೂ ಅಲ್ಲೇ ಉಳಿಯಬೇಕು. ಉಳಿಯುವುದು ಮಾತ್ರವೇ ಅಲ್ಲದೆ, ರಾತ್ರಿಯ ಹದಿನೆಂಟು ಘಳಿಗೆಯ ಕಾಲವೂ ನಿಂತೇ ಇರಬೇಕಾಗುತ್ತಿತ್ತು.

ಕೈಯಲ್ಲೊಂದು ಜಾಗಟೆಯನ್ನು ಮಾತ್ರವೇ ಹಿಡಿದು ನಿಂತಿರುವ ಅವರಿಗೆ ಅನ್ವಯಿಸುವ ನಿಯಮವೇ ಮದ್ದಳೆ-ಚೆಂಡೆಗಳನ್ನು ಕೊರಳಿನಿಂದ ಇಳಿಬಿಟ್ಟು, ನಿಲ್ಲಬೇಕಾದ ಮೃದಂಗವಾದಕರಿಗೂ ಚೆಂಡೆಗಾರರಿಗೂ ಅನ್ವಯಿಸುತ್ತಿತ್ತು. [ಮುಂದಿನ ಪುಟಕ್ಕೆ]

ಭಾಗವತರಿಗೆ ಸಿಂಹಾಸನ
WD
ಅದು ಹಿಂದಿನ ಮಾತು.

ನಾನು ವೇಷ ಹಾಕಲೆಂದು ಹೋಗುವ ದಿನಕ್ಕೆ ಈ ನಿಯಮದಲ್ಲಿ ತಕ್ಕಷ್ಟು ಬದಲಾವಣೆಯಾಗಿತ್ತು.

ಹಿಂದೆ ಒಬ್ಬರು ಭಾಗವತರು ತನ್ನ ವೈಯಕ್ತಿಕ (ಆರೋಗ್ಯದ) ಕಾರಣದಿಂದಾಗಿ ನಿಂತುಕೊಂಡೇ ರಾತ್ರಿಯೆಲ್ಲಾ ಪದ ಹೇಳಲು ತನಗೆ ಅಸಾಧ್ಯವಾಗಬಹುದು ಎಂದಾಗ- ವೇಷಧಾರಿಗಳ ಸಿಂಹಾಸನವಾಗಿಯೂ, ಸನ್ನಿವೇಶಕ್ಕೆ ತಕ್ಕಂತೆ ರಥವಾಗಿಯೂ ಉಪಯೋಗವಾಗುತ್ತಿದ್ದ ನಾಲ್ಕು ಕಾಲುಗಳಿಗೂ ಚಕ್ರ ಜೋಡಿಸಿದ 'ರಥ'ವನ್ನು ಅವರು ಕುಳಿತುಕೊಳ್ಳಲೆಂದು ಕೊಡಲಾಯಿತಂತೆ.

( ಆಗಿನ ರಥಗಳೆಂದರೆ ಹಲವು ಬಿಡಿ ಹಲಗೆಗಳನ್ನು ಒಟ್ಟಾಗಿ ಜೋಡಿಸಿ ಹಗ್ಗದಿಂದ ಕಟ್ಟಲಾಗುತ್ತಿತ್ತು. ರಥವನ್ನು ಕಟ್ಟುವ ಕೆಲಸವೂ ಕೆಲವರಿಗೆ ಮಾತ್ರ ಸಾಧಿಸಿದ್ದ ಕಲೆಯಾಗಿತ್ತು. ಒಯ್ಯವ ಅನುಕೂಲಕ್ಕಾಗಿಯೂ ಹಾಗೆ ಮಾಡಿರಬಹುದು ಎನಿಸುತ್ತದೆ.)

ವೇಷಧಾರಿಗಳಿಗೆ 'ಸಿಂಹಾಸನ'ದ ಆಗತ್ಯ ಬಿದ್ದಾಗ, ರಥವನ್ನೇರಿ ಹೋಗುವ ಸನ್ನಿವೇಶಗಳಿಗೆ ಅವಶ್ಯವಾದಾಗ, ಭಾಗವತರು ತನ್ನ ಆಸನವನ್ನೇ ಬಿಟ್ಟುಕೊಡಬೇಕಾಗುತ್ತಿತ್ತು.

ಒಂದೆರಡು ವರುಷಗಳ ತರುವಾಯ ಹಾಗೆ 'ಉಠ್-ಬೈಸ್' ಮಾಡಿಸುವ ತಾಪತ್ರಯ ಬೇಡವೆಂದು, ರಥದ ಹಿಂಭಾಗದಲ್ಲಿ (ಎಲ್ಲಿಂದಲಾದರೂ ಬೇಡಿ ತಂದ) ಒಂದು ಮೇಜನ್ನು ಇರಿಸಿ, ಅದರ ಮೇಲೆಯೇ ಭಾಗವತರು ವಿರಾಜಮಾನರಾಗತೊಡಗಿದರು. ಅವರ ಬಲಕ್ಕೆ ಉಳಿದ ಖಾಲಿ ಜಾಗವನ್ನು ಅಂತೆಯೇ ಬಿಡಬಾರದೆಂದು, ಮೃದಂಗವಾದಕರು, ತನ್ನ ಮದ್ದಳೆಯನ್ನು ಅಲ್ಲಿ ಇರಿಸತೊಡಗಿದರು. (ಮೊದಲು ಮದ್ದಳೆ ಮಾತ್ರ ಮೇಜಿನ ಮೇಲೆ ಬರುತ್ತಿತ್ತು. ಅನಂತರ ಮದ್ದಳೆಗಾರರೂ ಬರತೊಡಗಿದರು.) ಅಷ್ಟು ಹೊತ್ತಿಗಾಗಲೇ, ಭಾಗವತರಿಗೆ ಶ್ರುತಿಯನ್ನು ಒದಗಿಸುತ್ತಿದ್ದ 'ಶ್ರುತಿ ಬುರುಡೆ' ಮಾಯವಾಗಿತ್ತು. ಅದರ ಬದಲಿಗೆ 'ಪ್ಯಾರಿಸ್ ರೀಡ್ಸ್'-'ಜರ್ಮನ್ ರೀಡ್ಸ್' ಹಾರ್ಮೋನಿಯಮ್‌ಗಳು ಬಂದಿದ್ದುವು.

ಅವುಗಳಿಗೂ ಸ್ಥಳ ಬೇಕಲ್ಲ! ಅವು ಭಾಗವತರ ಹಿಂಬದಿಯ ಸ್ಥಳವನ್ನು ಆಕ್ರಮಿಸಿಕೊಂಡವು.

ಅಂದಿನಿಂದ ಇಂದಿನವರೆಗೂ ''ಕುಳಿತು ಬಾರಿಸಲು'' ಸಾಧ್ಯವಾಗದವರೆಂದರೆ ಚೆಂಡೆಯವರು ಮಾತ್ರವೇ. ಆದ್ದರಿಂದ ಅವರ ಸ್ಥಾನ ಭಾಗವತರ ಎಡಕ್ಕಾಯಿತು. ಅವರಿಂದ ಒಂದು ಮಾರು ದೂರವಾಗಿಯೇ ಇದ್ದು, ರಂಗಸ್ಥಳದ ಒಂದು ಕಂಬಕ್ಕೆ ಬೆನ್ನು ತಗಲಿಸಿಕೊಂಡು, ಕೊರಳಿಗೇರಿಸಿದ್ದ ಚೆಂಡೆಯನ್ನು ಅವರು ಬಾರಿಸುತ್ತಲೇ ಇರಬೇಕಾಯಿತು.

ಚೆಂಡೆಯ ಉಪಯೋಗ ಎಲ್ಲ ಪದ್ಯಗಳಿಗೂ ಇಲ್ಲದಿರುವ ಕಾರಣ, ಅದನ್ನು ಕತ್ತಿನಿಂದ ಕೆಳಗೆ ಇಳಿಸಿ ಆಗಾಗ ವಿಶ್ರಾಂತಿ ಪಡೆಯಲು ಅವರಿಗೆ ತೊಂದರೆಯಾಗುತ್ತಿರಲಿಲ್ಲ.

ಇದೇ ರೀತಿ, ಮೊದಲು ದೀವಟಿಗೆ (ಹಿಲಾಲು)ಗಳ ಬೆಳಕಿನಲ್ಲಿ ಆಡಲಾಗುತ್ತಿದ್ದ ಆಟ, ಆಧುನಿಕ ಸಂಶೋಧನೆಯ ಉಪಯೋಗ ಪಡೆದುಕೊಂಡು 'ಗ್ಯಾಸ್ ಲೈಟ್' (ಪೆಟ್ರೋಮ್ಯಾಕ್ಸ್)ಗಳ ಬೆಳಕನ್ನು ರಂಗಕ್ಕೆ ತರತೊಡಗಿತ್ತು.

ಬಣ್ಣಗಾರಿಕೆಗಾಗಿ ಉಪಯೋಗವಾಗುತ್ತಿದ್ದ ವಸ್ತುಗಳಲ್ಲೂ ಹಾಗೆಯೇ ಕೆಲವೊಂದು ಬದಲಾವಣೆಗಳು ಕಾಣಿಸಿಕೊಳ್ಳಲೆ? ಎಂದು ಕೇಳುತ್ತಿದ್ದವು.

ನನ್ನ ಕೃಷ್ಣ ಯಾವ ರೀತಿಯಾಗಿ ಕಾಣಿಸಿಕೊಳ್ಳಬೇಕು? ಪದ್ಧತಿಯ ಪಗಡಿಯನ್ನಿರಿಸಿ ಬಯಲಾಟದಂತೆಯೇ ದೊಗಲೆ ಪೈಜಾಮ ಹಾಕಿಕೊಂಡು, ಇತರ ಎಲ್ಲಾ ವೇಷಭೂಷಣಗಳೊಂದಿಗೆ ಇರಬೇಕೆ?

ಕೃಷ್ಣನ ವೇಷ
WD
ಸಂಗೀತ ನಾಟಕದ ಕೃಷ್ಣನಂತೆ (ಅಥವಾ ರವಿವರ್ಮನ ಚಿತ್ರದಂತೆ) ಶ್ಯಾಮಲಕಾಯನಾಗಿ, ಪೀತಾಂಬರಧಾರಿಯಾಗಿ, ವೇಣುವಾದಕನಾಗಿ ಕಾಣಿಸಿಕೊಳ್ಳಬೇಕೆ?

ಸ್ವಲ್ಪ ಹೊತ್ತು ಆ ರೀತಿಯ ಜಿಜ್ಞಾಸೆ ನಡೆಯಿತು.

ಕೊನೆಗೆ- ಕುಣಿತ ಹೇಗಾದರೂ ಇಲ್ಲ. ಕುಣಿತಕ್ಕೇ ಹೆಚ್ಚು ಅನುಕೂಲ ತೋರುವ, ನನಗೆ ಅಪರಿಚಿತವೇ ಆಗಿರುವ, ಆಟದ ವೇಷವೇಕೆ ? ನನ್ನ ಭಾವ ಪ್ರದರ್ಶನಕ್ಕೆ ಅವಕಾಶವೀಯುವ, ನೋಡಲೂ ಅಂದವಾಗಿ ಕಾಣುವ ನಾಟಕದ ವೇಷವೇ ಆಗಲಿ ಎಂದುಕೊಂಡೆ. ಒಂದು ವೇಳೆ ವ್ಯವಸ್ಥಾಪಕರು ಆ ವೇಷವನ್ನು ಒಪ್ಪದಿದ್ದರೂ ಅಂದಿನ ದಿನ ಕಳೆದ ತರುವಾಯ ತಾನೆ ಆ ಮಾತು! ಎಂಬ ಹುಸಿ ಧೈರ್ಯವೂ ಬಂದಿತು.

ನಾಟಕದ ಕೃಷ್ಣನಾಗಿಯೇ ರಂಗಸ್ಥಳಕ್ಕೆಕಾಲಿಟ್ಟೆ.

' ಇದು ಯಾವ ಹೊಸ ಮುಖ?' ಎಂಬ ಕುತೂಹಲದಿಂದ ಪ್ರೇಕ್ಷಕರು ನನ್ನನ್ನೇ ಹೆಚ್ಚಾಗಿ ಗಮನಿಸತೊಡಗಿದರು.

ಹಿಂದೆ ಎಷ್ಟೋ ಬಾರಿ 'ಸಾವಿರ ಕಣ್ಣುಗಳ ನೋಟ'ಗಳನ್ನು ಎದುರಿಸಿದ್ದರಿಂದ, ಮನಸ್ಸಿನಲ್ಲಿ ಇದ್ದ ಅಳುಕನ್ನು ಹೊರಗೆ ತೋರಿಸದೆ ಇರಲು ಸಾಧ್ಯವಾಯಿತು. ಆದರೆ ನನ್ನ ಬಂಡವಾಳ ಉಳಿದವರಿಗೆ ಗೊತ್ತಿಲ್ಲವೆ!

ಮೇಳದಲ್ಲಿ ಪ್ರಸಿದ್ಧ ವೇಷಧಾರಿಗಳಾದ ಸರ್ವಶ್ರೀ ಅಳಿಕೆ ಮೋನಪ್ಪ ರೈ ಅವರ ಮಗ ರಾಮಯ ರೈ, (ಬಣ್ಣದ) ಕುಟ್ಯಪ್ಪನವರು, (ಸ್ತ್ರೀ ವೇಷದ) ಪುರುಷೋತ್ತಮ ಭಟ್ಟರು ಇವರೆಲ್ಲಾ ಇದ್ದರು. ಅವರೆದುರಲ್ಲೇ ಆ ಕಲಾಸಾಗರದಲ್ಲಿ ಈಜುವುದಾದರೂ ಹೇಗೆ?

ಅವರಲ್ಲಿ ಯಾರೂ ಟೀಕಿಸುವವರಲ್ಲ, ನಿಜ. ಆದರೆ, ನನ್ನ ಕೊರತೆಯನ್ನು ನನಗೇ ಕಂಡುಕೊಳ್ಳಲು ಸಾಧ್ಯವಿರುವಾಗ ಟೀಕಾಕಾರರಾದೂ ಏತಕ್ಕೆ?

ಶ್ರೀ ಕಾರಂತರು ಕೊಟ್ಟಿದ್ದ ತರಬೇತಿಯಿಂದಾಗಿ, ಅಂಗಾಭಿನಯ ನನಗೆ ಅಷ್ಟೊಂದು ಕಷ್ಟಕರವಾಗಿ ಕಾಣಲಿಲ್ಲ. ಕಣ್ಣು, ಮೂಗು, ಹುಬ್ಬು ಇತ್ಯಾದಿ ಪ್ರತಿಯೊಂದು ಅಂಗಗಳೂ (ಸಾಧ್ಯವಾದಲ್ಲೆಲ್ಲ ತಾಳಬದ್ಧವಾಗಿ) ಬಾವಪ್ರದರ್ಶನಕ್ಕೆ ಸಹಕರಿಸಿದುವು.

ಭಾಗವತರು ಪದ್ಯವನ್ನು ಹೇಳಿ 'ಬಿಡಿತ'ಕ್ಕೆ ಜಾಗಟೆ ಎತ್ತಿದಾಗ, ಸಂವಾದದ ಸನ್ನಿವೇಶಗಳು ಬಂದಾಗ, ನಾಟ್ಯಶಾಸ್ತ್ರಿಯಲ್ಲದ ನನ್ನ ಕೊರತೆ ನನಗೇ ಸರಿಯಾಗಿ ಕಾಣಿಸಿಕೊಂಡಿತು. ಪದ್ಯದ ಮುಕ್ತಾಯದಲ್ಲೂ ಮೂರು ಹೆಜ್ಜೆ ಹಾಕಲಾರದ ನಾನು ''ವೇಷಧಾರಿ'' ಎಂದು ಕರೆಸಿಕೊಳ್ಳಲಾರೆ ಎನಿಸಿತು.

ಅಂದು, ಆ ರಂಗಸ್ಥಳದಲ್ಲೇ, ದಶಾವತಾರ ಆಟಕ್ಕೆ ನಾಟ್ಯವಿಲ್ಲದ ವೇಷವೆಂದರೆ ''ಎಲ್ಲ ರುಚಿ ಸೇರಿದ್ದರೂ ಉಪ್ಪು ಇಲ್ಲದ ಅಡುಗೆ'' ಎಂಬ ಅಭಿಪ್ರಾಯಕ್ಕೆ ಬಂದೆ. (ಆ ಅಭಿಪ್ರಾಯ ಇಂದಿಗೂ ಉಳಿದಿದೆ.)

ಕುಣಿತವೂ ಇದ್ದಿದ್ದರೆ...
ಅಂದಿನ ಆಟದಲ್ಲಿ ಮಯೂರಧ್ವಜನನ್ನು ಕೃಷ್ಣ ಗರಗಸದಿಂದ ಕೊಯಿಸಿದ್ದ. ಕೊಯಿಸಿದಾಗಲೂ ''ಕಣ್ಣೀರೇಕೆ?'' ಎಂದು ಕೆಣಕಿದ್ದ. ಕೃಷ್ಣನ ವೇಷ ಹಾಕಿದ್ದವನು ತನ್ನನ್ನು ತಾನೇ ಅತೃಪ್ತಿಯ ಗರಗಸದಿಂದ ಕೊಯಿಸಿಕೊಳ್ಳತೊಡಗಿದ. ಸೀಳಿದರೂ ಕಣ್ಣೀರು ಸುರಿಸುವಂತಿಲ್ಲ ಎಂದು ತಿಳಿದುಕೊಂಡ.

ಆಟ ಮುಗಿದ ತರುವಾಯ, ಪ್ರೇಕ್ಷಕರು ಕೆಲವರ ಪ್ರತಿಕ್ರಿಯೆಯನ್ನು ನಾನೂ ಸಂಗ್ರಹಿಸಿದೆ. ನನ್ನಷ್ಟೇ ಕುತೂಹಲವಿದ್ದ ವ್ಯವಸ್ಥಾಪಕರೂ ಸಂಗ್ರಹಿಸಿದ್ದರು.

ಮಾತನಾಡಿದವರೆಲ್ಲರ ಕೈಯಲ್ಲೂ ಕೇಳಲಾಗುತ್ತಿದ್ದ ಒಂದು ಮುಖ್ಯ ಪ್ರಶ್ನೆ- ಕುಣಿತದ ಅಭಾವಕ್ಕೆ ಸಂಬಂಧಿಸಿದುದು ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ.

'' ಕುಣಿತ ನಿಮಗೆ ಗೊತ್ತಿಲ್ಲವೆಂದು ನಾವು ಯಾರೂ ಹೇಳುವಂತಿರಲಿಲ್ಲ'' ಎಂದವರು ಒಬ್ಬಿಬ್ಬರು.

WD
ಅವರಂತೆ, ''ನಿಮ್ಮ ಕಾಲುಗಳ ಕಡೆಗೆ ನಮ್ಮ ಗಮನ ಹೋಗಲೇ ಇಲ್ಲ. ನೀವು ಕುಣಿಯುತ್ತಿದ್ದೀರೆಂದೇ- ನಿಮ್ಮ ದೇಹ ಚಲನೆಯನ್ನು ನೋಡಿ ನಾವು ಭಾವಿಸಿದ್ದೆವು'' ಎಂದವರು ಕೆಲವರು. [ಮುಂದಿನ ವಾರಕ್ಕ ೆ]

ನಿರೂಪಣೆ: ಪದ್ಯಾಣ ಗೋಪಾಲಕೃಷ್ಣ ( ಪ.ಗೋ. 1928 -1997)

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?