Webdunia - Bharat's app for daily news and videos

Install App

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 3- ನಜ್ಜು ಗುಜ್ಜಾಗುವ ಪ್ರಹ್ಲಾದ...

Webdunia
[ ಕರಾವಳಿಯ ಅದ್ಭುತ ಕಲೆ ಯಕ್ಷಗಾನ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸ ಂ]

( ಹಿಂದಿನ ವಾರದಿಂದ ಮುಂದುವರಿದಿದೆ)

ಮನೆಯಲ್ಲೊಂದು ದಿನ ಯಾವುದೋ ಶುಭಕಾರ್ಯ ನಿಮಿತ್ತ ನೆರೆಕರೆಯವರು ಸೇರಿದ್ದರು. ನಮ್ಮ ಊರಿನತ್ತ ಯಾವುದೇ ಕಾರ್ಯಕ್ಕಾಗಿ ಭೇಟಿ ಕೊಟ್ಟರೆ 'ಉಂಡೊಡನೆ ಊರು ಬಿಡುವ' ಕ್ರಮವಿರುವುದಿಲ್ಲ.

WD
ಆ ದಿನ ಸಂಜೆಯ ಹೊತ್ತಿಗೆ ತೆರಳುವವರು ತೆರಳಿದ ತರುವಾಯವೂ, ಕೆಲವರು ಸಮೀಪದವರು ಉಳಿದಿದ್ದರು. ಬಂಧುಗಳೂ ಇದ್ದರು.

ಊರಿನ ಹಲವು ಸಮಸ್ಯೆಗಳ, ಜನರ ನಡೆನುಡಿಯ ವಿಚಾರಗಳ ಚರ್ಚೆ ಮಾತುಕತೆಗಳಲ್ಲಿ ಆಗುತ್ತಿತ್ತು. ಅಂತೆಯೇ ಮಾತು ಮುಂದುವರಿದು ತಾಳಮದ್ದಳೆಯ ಕಡೆಗೂ ತಿರುಗಿತು. ಬರಿಯ ಮಾತಿನಿಂದ ಪಾತ್ರ ಪೋಷಣೆಯಾಗುವುದಿಲ್ಲ, ಸಜೀವ ಚಿತ್ರಣವಾಗುವುದಿಲ್ಲ ಎಂದು ಒಬ್ಬರು ಹೇಳಿದರು.

'' ಪಾತ್ರ ಚಿತ್ರಣ ಬೇಕಾದರೆ ಬಯಲಾಟವನ್ನೇ ನೋಡಬೇಕು'' ಎಂದರು ಇನ್ನೊಬ್ಬರು.

ಮಳೆಗಾಲ ಕಳೆದಿದ್ದು, ಮೇಳಗಳು ಹೊರಡುವುದಕ್ಕೆ ಇನ್ನೂ ಸಮಯವಿದ್ದುದಾಗಿ ನನ್ನ ನೆನಪು.

'' ಅದಕ್ಕೆ ಬಯಲಾಟವೇ ಆಗಬೇಕೆಂದು ಏನು? ಅಭಿನಯದ ಸಾಮರ್ಥ್ಯವಿದ್ದರೆ, ಅತ್ಯುತ್ತಮ ಪಾತ್ರ ನಿರೂಪಣೆ ನಮ್ಮ ಕೈಯಿಂದಲೂ ಸಾಧ್ಯವಿದೆ!'' ಎಂದರು ತಂದೆಯವರು.

WD
'' ಅದು ಹೇಗೆ?''

'' ನಾನು ಎಣಿಸಿರುವ ಪ್ರಯೋಗಗಳನ್ನು ಇಂದು ಮಾಡಿ ನೋಡೋಣ'' ಎಂಬ ಉತ್ತರ ಅವರಿಂದ ಬಂದಿತು.

ಅಂದಿನ ರಾತ್ರಿಯೇ, ಇದು ಸುಧಾರಣೆಯ ಒಂದು ಕ್ರಮವೆಂದು ಹೇಳಿಸಿಕೊಳ್ಳುವ 'ಯಕ್ಷಗಾನ ನಾಟಕ'ದ ಮೊದಲ ಪ್ರಯೋಗ ನಮ್ಮಲ್ಲಾಯಿತು.

ನೆಲದಿಂದ ಮೂರಡಿ ಎತ್ತರಕ್ಕಿರುವ- ಸುಮಾರು ಐವತ್ತು ಅಡಿ ಉದ್ದ, ಆರು ಅಡಿ ಅಗಲದ- ನಮ್ಮ ಮನೆಯ ಜಗಲಿ, ಅಂದಿನ ನಾಟಕ ಶಾಲೆಯಾಯಿತು. ಸೀರೆಗಳ ಸಂಗ್ರಹದಿಂದ ಪರದೆಗಳು ತಯಾರಾದುವು.

ಪ್ರಸಂಗದ ಆಯ್ಕೆ, ಪಾತ್ರ ವಿತರಣೆಗಳೂ, ಮನೆಗೆ ಬಂದು ಉಳಿದಿದ್ದ ಸಾಕಷ್ಟು ಮಂದಿ ಕಲಾಸಕ್ತರಿಂದಾಗಿ ಸುಲಭದಲ್ಲೇ ಆದುವು. ಮೃದಂಗ-ಚೆಂಡೆ-ಜಾಗಟೆಗಳನ್ನು ಒದಗಿಸಿಕೊಳ್ಳುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ.

ವೇಷಭೂಷಣಗಳಿಗಾಗಿ ನಮ್ಮೆಲ್ಲ ಬುದ್ಧಿಶಕ್ತಿಯನ್ನು ವೆಚ್ಚ ಮಾಡಬೇಕಾದ ಸಂದರ್ಭ ಬರಲಿಲ್ಲವೆನ್ನಿ. ಸೀತಾಪಹಾರದ ಕಥಾನಕವನ್ನೊಳಗೊಂಡಿದ್ದ (ಪಾರ್ತಿಸುಬ್ಬನವರ) ''ಪಂಚವಟಿ'' ಪ್ರಸಂಗವಾದ ಕಾರಣ, ರಾವಣನ ಪಾತ್ರಕ್ಕೆ ಕೂಡಾ ವೇಷಭೂಷಣಗಳ ಅರಸುವಿಕೆ ಅಗತ್ಯವಾಗಲಿಲ್ಲ.

ದೇಹ ಗಾತ್ರದಲ್ಲಿ ಕುಳ್ಳನಾಗಿದ್ದ ನನ್ನ ಪಾಲಿಗೆ ಸೀತೆಯ ಪಾತ್ರ ಬಂದಿತು.

ನಾವೆಲ್ಲ ಪಾತ್ರಧಾರಿಗಳೂ, ಸಂಪ್ರದಾಯಕ್ಕೆ ಅನುಗುಣವಾಗಿ ಶಿಖೆಯನ್ನು ಧರಿಸಿದ್ದವರು. ನನ್ನ ಕೂದಲು ತುರುಬು ಬಿಡಲಾಗುವಷ್ಟು ಇತ್ತು. ಸ್ತ್ರೀ ಪಾತ್ರ ನಿರ್ವಹಣೆ ಕಷ್ಟವಾಗಿರಲಿಲ್ಲ. ಜಟಾವಲ್ಕಲಧಾರಿಗಳಾದ ರಾಮ ಲಕ್ಷ್ಮಣರಿಗೂ 'ಟೋಪನ್' ಅಗತ್ಯ ಬೀಳಲಿಲ್ಲ.

ಅದುವರೆಗೂ, ತಾಳಮದ್ದಳೆಗಳಲ್ಲಿ ಮಾತು ಸರಾಗವಾಗಿ ಬಂದರೆ ಸಾಕಾಗಿತ್ತು. ಉಳಿದ ಅಂಗಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಬೇಕಾಗಿರಲಿಲ್ಲ. ಆದರೆ ಅಂದು, ಅಡಿಯಿಂದ ಮುಡಿಯವರೆಗೂ ನನ್ನ ಅಂಗಾಂಗಗಳನ್ನು ನಿಯಂತ್ರಿಸಿ - ಸಭೆಗೆ ಬೆನ್ನು ತೋರಬಾರದು ಎಂಬಿತ್ಯಾದಿ ನಾಟಕದ ನಿಯಮಗಳನ್ನು ನೆನಪಿನಲ್ಲಿಟ್ಟುಕೊಂಡು, ನನ್ನಿಂದಲೂ ಹಿರಿಯರಾದ ರಾಮನ ಪಾತ್ರಧಾರಿಯ ಎದುರು ಅಪಚಾರವಾಗದಂತೆ ಅಭಿನಯಿಸಲು ನನ್ನೆಲ್ಲ ಸಾಹಸವನ್ನೂ ಉಪಯೋಗಿಸಬೇಕಾಯಿತು. ಮನೆಯಂಗಳದಲ್ಲಿ ಹಾಕಲಾಗಿದ್ದ ತೆಂಗಿನ ಸೋಗೆ, ಚಾಪೆಗಳ ಮೇಲೆ ಕುಳಿತಿದ್ದವರೆಲ್ಲ ಪರಿಚಿತರು. ಆದುದರಿಂದ ಹೊಸ ಸಭೆಯ ಅಳುಕಿನ, ಜನ ಸಮೂಹದ ಸಭಾಕಂಪನದ ಬೆದರಿಕೆ ಇರಲಿಲ್ಲ. ಆದರೆ, ಸೇರಿದ ಸಮೀಪದವರಲ್ಲೇ ಪ್ರತಿ ವಾಕ್ಯದ ಒಂದೊಂದು ಸನ್ನಿವೇಶದ ವಿಮರ್ಶೆಯನ್ನು ಎಳೆಎಳೆಯಾಗಿ ಮಾಡಬಲ್ಲವರೂ ಇದ್ದ ಕಾರಣ ನಾನೆಲ್ಲೂ ಎಚ್ಚರ ತಪ್ಪುವಂತಿರಲಿಲ್ಲ.

ಹೊಸ ಪ್ರಯೋಗ
.. ಅಂದಿನ ಪ್ರಸಂಗ, ಕಥಾಭಾಗದ ದೃಷ್ಟಿಯಿಂದ ಸಂಕ್ಷಿಪ್ತಗೊಳಿಸಿದ್ದುದೇ ಆದರೂ, ಬೆಳಗು ಮುಂಜಾನೆಯವರೆಗೂ ಯಶಸ್ವಿಯಾಗಿಯೇ ನಡೆಯಿತು. ಸೀತೆಯ ಪಾತ್ರ ''ಚೆನ್ನಿತ್ತು'' ಎಂದು ಯಕ್ಷಗಾನ ನಾಟಕವನ್ನು ನೋಡಿದವರು ಹೇಳಿದರು.

ಭಾಗವತರ ಹಾಡುಗಾರಿಕೆಯ ಹೊತ್ತಿನಲ್ಲಿ ನರ್ತನವಿಲ್ಲದೆ ಭಾವಪೂರ್ಣ ಅಭಿನಯದಿಂದ 'ಪದ'ದ ಸನ್ನಿವೇಶವನ್ನು ವಿವರಿಸಿ, ತಿರುಗಿ ಅರ್ಥ ಹೇಳುವಾಗ ಸರಸ ಶೈಲಿಯ ಸಂಭಾಷಣೆಯಿಂದ ಅದನ್ನು ಚಿತ್ರಿಸುವುದು ಒಂದು ಉತ್ತಮ ಪ್ರಯೋಗವೆಂದೇ ನಮಗನಿಸಿತು. ಪ್ರಯೋಗದ ನಿರ್ದೇಶನವನ್ನು ವಹಿಸಿದ್ದ ತಂದೆಯವರಂತೂ ಬೆಳಗಿನ ಹೊತ್ತಿಗೆ ಆ ಪ್ರಯೋಗದ ಮುಂದಿನ ಹೆಜ್ಜೆಯ ಕನಸು ಕಾಣತೊಡಗಿದ್ದರು.

ನಮ್ಮ ಪ್ರಯೋಗ ನಡೆದ ಕೆಲವೇ ದಿನಗಳಲ್ಲಿ ನಮ್ಮದೇ ಆದ ಯಕ್ಷಗಾನ ಮಂಡಳಿಗಾಗಿ ಸಿದ್ಧತೆ ಪ್ರಾರಂಭವಾಯಿತು.

ನೃತ್ಯವಿಲ್ಲದ ಕಾರಣ, ದೃಶ್ಯಾವಳಿಗೆ ರಂಗಪರಿಕರಗಳು ಅಗತ್ಯವೆನಿಸಿದುದರಿಂದ ನಮ್ಮ ಪ್ರಯೋಗ ''ನಾಟಕ'' ಎನಿಸಿಕೊಂಡಿತು. ಸಂಗೀತ ನಾಟಕಗಳಲ್ಲಿರುವ ಸಂಗೀತ, ಭಾಗವತರ ಹಾಡುಗಾರಿಕೆಯಿಂದ ಮಾತ್ರವೆ ಒದಗುವ ಕಾರಣ ಇದು ''ಯಕ್ಷಗಾನ ನಾಟಕ '' ಎನಿಸಿತು.

ಇತರ ನಾಟಕ ಕಂಪೆನಿಗಳ ಕಲಾಕುಶಲಿಗಳ ಸಹಾಯವನ್ನು ನಾವು ಯಾಚಿಸುವಂತಿರಲಿಲ್ಲ. ಅವರು ನಮ್ಮೂರಿಗೆ ಸಮೀಪ ಇರಲೂ ಇರಲಿಲ್ಲ. ಆದುದರಿಂದ, ತಂದೆಯವರು ನಮ್ಮೂರಿಗೆ ಸಮೀಪದಲ್ಲಿದ್ದ 'ಎಲೆ ಮರೆಯ ಕಾಯಿ'ಯಾದ ಕಲಾವಿದರೊಬ್ಬರ ನೆರವು ಪಡೆದು ಪರದೆ ಇತ್ಯಾದಿಗಳನ್ನು ಸಿದ್ಧಗೊಳಿಸಿದರು. ಸಾವಿರಾರು ರೂಪಾಯಿಗಳನ್ನು ಸುರಿದು ವೇಷ ಭೂಷಣಗಳೂ ಸಿದ್ಧವಾದುವು. ನಾವಾಡುವ ನಾಟಕಗಳೆಲ್ಲ ಪೌರಾಣಿಕ ಪ್ರಸಂಗಗಳಿಂದಲೇ ಆದ ಕಾರಣ, ವೆಚ್ಚದಲ್ಲಿ ಕೈ ಬಿಗಿತ ತೋರುವಂತಿರಲಿಲ್ಲ.

ನಮ್ಮ ಸಂಸ್ಥೆ
ಊರಿನ ದೇವರಾದ ಶಂಕರನಾರಾಯಣನ ಹೆಸರು ಹೇಳಿ ನಮ್ಮ ಸಂಸ್ಥೆ ''ಶ್ರೀ ಶಂಕರ ನಾರಾಯಣ ಪ್ರಸಾದಿತ ಯಕ್ಷಗಾನ ಮಂಡಳಿ, ಕೋಳ್ಯೂರು'' ಎಂಬ ನಾಮಧೇಯವನ್ನು ಹೊತ್ತುಕೊಂಡು ಒಂದು ಶುಭದಿನದಂದು ಪ್ರಾರಂಭ ಆಯಿತು.

ಮೊದಲನೆಯ ಪ್ರದರ್ಶನ ಕೋಳ್ಯೂರಿನಲ್ಲೇ. ಹೆಸರು ಕೊಟ್ಟ ದೇವರ ಸನ್ನಿಧಿಯಲ್ಲೇ ಪ್ರಾರಂಭಿಕ ಕಾರ್ಯಕ್ರಮ ನಡೆಯುವುದೂ ಯಕ್ಷಗಾನದ ರೂಢಿ. ಹಾಗೆ, ರಾಮಾಯಣದ ಪ್ರಾರಂಭದಲ್ಲಿನ ''ಪುತ್ರಕಾಮೇಷ್ಟಿ- ಸೀತಾ ಸ್ವಯಂವರ''ದ ವರೆಗಿನ ಕಥಾಭಾಗವನ್ನು ಅಂದಿಗೆ ಆರಿಸಿಕೊಳ್ಳಲಾಯಿತು.

ಶಿವಧನುಸ್ಸನ್ನು ಮುರಿದ ರಾಮನನ್ನು ಲಜ್ಜೆಯಿಂದ ಬಾಗಿ ಬಳುಕಿ ಮಾಲೆ ಹಾಕಿ ವರಿಸಿದ ಅಂದಿನ ಸೀತೆ ನಾನು. ರಾಮನ ಕೈಹಿಡಿದ ಸೀತೆಯಂತೆ ಕೊನೆಯವರೆಗೂ ಅಶಾಂತಿಯ ಜೀವನವನ್ನೇ ಅನುಭವಿಸುವ ಅದೃಷ್ಟ ನನ್ನದಾಗುವುದೆಂದು ಅಂದು ಕನಸು ಕಂಡಿರಲಿಲ್ಲ. ಬಣ್ಣ ಬಳಿವ ಬದುಕನ್ನು ಮಾತ್ರ ವರಿಸಿದೆ ಎಂದುಕೊಂಡಿದ್ದೆ.

ಸಂಘ ಹುಟ್ಟಿ, ಕಟ್ಟಿದ ಊರಿನಲ್ಲಿ ಕೆಲವು ಪ್ರದರ್ಶನಗಳು ನಡೆದ ತರುವಾಯ ನಮ್ಮ ನಾಟಕ ಮಂಡಳಿ ಊರಿನಿಂದ ಹೊರಗೆ ಹೊರಟಿತು.

ಹೊಸ ಕಥೆಗಾಗಿ, ರಂಗಪ್ರವೇಶ ಮತ್ತು ಇತರ ತಾಂತ್ರಿಕ ವ್ಯವಸ್ಥೆಗಳಿಗೆಂದು ಒಂದೆರಡು 'ಅಭ್ಯಾಸ'ಗಳನ್ನು ಕೆಲವು ಗಂಟೆಗಳ ಹೊತ್ತಿನಲ್ಲಿ ಮಾಡಿ ಮುಗಿಸಿದರೆ ಸಾಕಾಗುತ್ತಿತ್ತು.

WD
ಆರಂಭದಿಂದಲೇ, ಅಭಿನಯದ ಪ್ರಾಮುಖ್ಯವನ್ನು ನಮ್ಮ ತಲೆಗೆ ತುರುಕಲಾಗಿತ್ತಾದ ಕಾರಣ ನಮಗೆ ಆ ದಿಸೆಯಲ್ಲಿ ತಬ್ಬಿಬ್ಬಾಗುವ ಸನ್ನಿವೇಶ ಎಂದೂ ಬರಲಿಲ್ಲ. ಹೆಚ್ಚಿನ ಪಾತ್ರಗಳಿಗೆ ನಮ್ಮ ಕುಟುಂಬದವರೇ- ದೊಡ್ಡಪ್ಪಂದಿರ ಮಕ್ಕಳು- ಆರೇಳು ಮಂದಿ ಒದಗುತ್ತಿದ್ದರೆ, ಮುಖ್ಯ ಪಾತ್ರಗಳ ಕೆಲವಕ್ಕೆ ತಂದೆಯವರು ತಮ್ಮ ಗೆಳೆಯರಾಗಿದ್ದ ಕೆಲವರು ಯಕ್ಷಗಾನ ಕಲಾವಿದರನ್ನು ಕೂಡಿಸಿಕೊಂಡಿದ್ದರು.

ಇನ್ನು ಕೆಲವು ಕಡೆಗಳಲ್ಲಿ 'ನಾಟಕ'ದಲ್ಲಿ ಭಾಗವಹಿಸುವ ಆಸಕ್ತಿ ತಡೆಯದೆ ಸ್ಥಳೀಯ ಕಲಾವಿದರೂ ನಾಟಕಗಳಲ್ಲಿ ಪಾತ್ರವಹಿಸಲು ಬರುತ್ತಿದ್ದರು.

ರಂಗದ ಮೇಲೆ ಶಿಕ್ಷೆ
ಗೆಳೆಯರಾಗಲಿ, ಆಸಕ್ತರಾಗಲಿ ಬರಿಯ ಘನತೆ-ಗೌರವ ಇವುಗಳ ಕಡೆಗಷ್ಟೇ ಗಮನ ಇರಿಸಿದ್ದವರು. ಅವರಲ್ಲಿ ಸಂಭಾವನೆಯ ಅತ್ಯಾಸೆಯನ್ನು ಮುಂದೊಡ್ಡಿದವರಿರಲಿಲ್ಲ.

ನಮ್ಮ ಖರ್ಚು-ವೆಚ್ಚ- ಪರಿಶ್ರಮಗಳೆಲ್ಲ ಆಡುವ ಜನರ ಕಡೆಗೆ ಬೇಕಾಗಲಿಲ್ಲ. ಸ್ಥಳ ಮತ್ತು ಸ್ಥಳಕ್ಕೆ ತಲುಪುವ ವ್ಯವಸ್ಥೆ ಇವುಗಳಿಗೇ ಅಗತ್ಯವಾದುವು.

ಮೊದಲಿನ ವರ್ಷ ನಾವು ಕೆಲವು ಪ್ರಸಂಗಗಳ ನಾಟಕಗಳನ್ನು ಆಡಿದೆವು. ಅವುಗಳಲ್ಲಿ ''ಪ್ರಹ್ಲಾದ ಚರಿತ್ರೆ''ಯ ಪ್ರಯೋಗವೇ ಬಹಳಮಟ್ಟಿಗೆ ಯಶಸ್ವಿಯಾಯಿತು. ಹೋದ ಊರುಗಳಲ್ಲಿ ಅದೇ ನಾಟಕಕ್ಕೆ ಬೇಡಿಕೆಗಳು ಬರುವಷ್ಟರ ಮಟ್ಟಿಗೂ ಅದರ ಖ್ಯಾತಿ ಹಬ್ಬಿತ್ತು.

ಪ್ರಹ್ಲಾದ ಚರಿತ್ರೆ ಜನತೆಗೆ ಬೇಕಾಯಿತೇನೋ ನಿಜ. ಆದರೆ ನನ್ನ ಮಟ್ಟಿಗೆ ಆ ಹೆಸರೆತ್ತಿದರೇ ಮೈ ನಡುಕ ಬರುತ್ತಿದ್ದ ಸಂದರ್ಭಗಳೂ ಇದ್ದುವು.

ಸ್ವತಃ ಪಾತ್ರವಹಿಸುತ್ತಿದ್ದ ತಂದೆಯವರ ತನ್ಮಯತೆಯೇ ಅದಕ್ಕೆ ಕಾರಣ.

ಹಿರಣ್ಯಕಶಿಪುವಾಗಿ ಅವರು ಪಾತ್ರ ವಹಿಸುತ್ತಿದ್ದರು. ನನ್ನ ದೊಡ್ಡಪ್ಪನವರ ಮಗ ರಾಮ ಹಿರಣ್ಯಾಕ್ಷನಾಗುತ್ತಿದ್ದ. ಇನ್ನೊಬ್ಬ ದೊಡ್ಡಪ್ಪನವರ ಮಗ ಕೃಷ್ಣ (ಪ್ರಾಯದಲ್ಲಿ ನನಗೆ ತಮ್ಮ ) ಕಯಾದುವಾಗುತ್ತಿದ್ದ. ನನ್ನ ಪಾಲಿಗೆ ಪ್ರಹ್ಲಾದನ ಪಾತ್ರ ಸಿಗುತ್ತಿತ್ತು.

ಹರಿಭಕ್ತನಾಗಿಯೇ ಉಳಿಯುವೆನೆನ್ನುವ ಪ್ರಹ್ಲಾದನಿಗೆ ತಂದೆಯಿಂದ ದೊರೆಯುವ ಶಿಕ್ಷೆ ನಾಟಕದ್ದಾಗುತ್ತಿರಲಿಲ್ಲ; ನಿಜ ಜೀವನದ್ದಾಗುತ್ತಿತ್ತು. ಆವೇಶದಲ್ಲಿ ತನ್ನನ್ನು ತಾನೇ ಮರೆಯುವ ತಂದೆಯವರ ಕಾಲುಗಳು- ನಿಂತಿರುವುದು ನಾಟಕರಂಗವೆಂಬುದನ್ನೂ ಮರೆಯುತ್ತಿದ್ದವು. ಅವರಿಂದ ಒದೆಸಿಕೊಂಡು ನನ್ನ ಮೈ ನಜ್ಜುಗುಜ್ಜಾಗುತ್ತಿತ್ತು.

ಸಾರ್ಥಕ
ಪ್ರಹ್ಲಾದನಾಗಿ ಪವಿತ್ರಾನುಭವದ ಪರಾಕಾಷ್ಠೆಯನ್ನು ಪಡೆದ ದಿನ ಮತ್ತು ಆ ದಿನದ ಅನುಭವ, ಇಂದಿಗೂ ನೆನಪು ಬರುತ್ತಿದೆ. ಈಗಲೂ ಮೈ ನವಿರೇಳಿಸುತ್ತಿದೆ.

ಕಟೀಲಿನಲ್ಲಿ ''ಪ್ರಹ್ಲಾದ ಚರಿತ್ರೆ'' ನಡೆದಿತ್ತು. ತಮ್ಮ ಕೃಷ್ಣ ಕಯಾದುವಾಗಿದ್ದ. ನಾನೇ ಪ್ರಹ್ಲಾದನಾಗಿದ್ದೆ.

ಹಡೆದ ಮಗನಿಗೆ ತಾಯಿ, ತನ್ನ ಕೈಯಾರೆ ವಿಷ ಕೊಡುವ ದೃಶ್ಯ...

ವಿಷದ ಪಾತ್ರೆಯನ್ನು ನಾನು ಸ್ವೀಕರಿಸಿದಾಗ ತಂದೆಯ ಒದೆತದ ನೋವು ಮರೆತು ಹೋಗಿತ್ತು. ನನ್ನನ್ನು ಹೆತ್ತ ತಾಯಿ ಕೊಡುತ್ತಿರುವುದು ವಿಷ-

ಪಾತ್ರೆಯಲ್ಲಿದ್ದುದನ್ನು ಕುಡಿದೆ. ಮೈಯಲ್ಲಾ ಉರಿಯುತ್ತಿರುವ ಅನುಭವವಾಯಿತು.

'' ನಾನು ಹರಿಯ ಭಕ್ತ- ಆ ವಿಷದಿಂದ ನನಗೇನೂ ಆಗಲಾರದು'' ಎಂದು ಪ್ರಾರ್ಥಿಸಿಕೊಂಡೆ. ಆಗ ನಾನೇ ಪ್ರಹ್ಲಾದನಂತಿದ್ದೆ.

ಮೈಯ ಉರಿ ಕಡಿಮೆಯಾಗ ತೊಡಗಿತು. ನೋವು ಅಲ್ಪ ಸ್ವಲ್ಪವಾಗಿ- ಉಳಿದು ನೆನಪು ಮಾಡಿಕೊಡುತ್ತಿತ್ತು.

ಮುಂದಿನ ದೃಶ್ಯದಲ್ಲೇ ''...ತಮಗೇ ತಾವೇ ಶತ್ರು'' ಎಂಬ ಪದದ ವಾಕ್ಕುಗಳು ಪ್ರಹ್ಲಾದನವು.

ಹಿರಣ್ಯಕಶಿಪುವಿನ ಕಣ್ಣಿನಿಂದ ನೀರು ಇಳಿಯುತ್ತಿತ್ತು!

ತಂದೆಯ ಎದುರು ಮಗ. ತಂದೆಯ ಕಣ್ಣಲ್ಲಿ ನೀರು!
WD
ಬದುಕು ಸಾರ್ಥಕವಾಯಿತು ಎಂದುಕೊಂಡೆ.

ಯಕ್ಷಗಾನದಿಂದ ಇಷ್ಟೊಂದು ಒದೆಗಳನ್ನು ತಿಂದು ಮಲಗಿದ ತರುವಾಯವೂ, ಇಂದು ಆ ಘಟನೆಯನ್ನು ಜ್ಞಾಪಿಸಿಕೊಂಡು ಹಾಗೇ ಹೇಳುತ್ತೇನೆ. [ಮುಂದಿನ ವಾರಕ್ಕ ೆ]
ನಿರೂಪಣೆ: ಪದ್ಯಾಣ ಗೋಪಾಲಕೃಷ್ಣ ( ಪ.ಗೋ. 1928 -1997)

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?