ಪಾರ್ಶ್ವನಾಥನ ನಂತರ ಬಂದ ಜೈನ ಧರ್ಮದ 24ನೇ ತೀರ್ಥಂಕರ ವರ್ಧಮಾನ ಮಹಾವೀರನ ಬೋಧನೆಗಳು ಹಿಂದಿನ ತೀರ್ಥಂಕರ ಬೋಧನೆಗಳಿಗಿಂತ ಭಿನ್ನವಾಗಿದ್ದವು.
ಪಾರ್ಶ್ವನಾಥನ ಬೋಧನೆಯಲ್ಲಿ ವಸ್ತ್ತ್ರ ಧರಿಸಲು ವಿರೋಧವಿರಲಿಲ್ಲ. ಆದರೆ, ಮಹಾವೀರನು ಜೈನ ಮುನಿಗಳು ವಸ್ತ್ತ್ರವನ್ನು ಧರಿಸುವಂತಿಲ್ಲ ಎಂಬ ನಿರ್ಬಂಧ ಹಾಕುತ್ತಾನೆ. ಸ್ವತಃ ಮಹಾವೀರನೇ ವಸ್ತ್ತ್ರವನ್ನು ತ್ಯಜಿಸುತ್ತಾನೆ. ಸುಮಾರು 12 ವರ್ಷಗಳ ಕಾಲ ನಗ್ನ ತಪಸ್ವಿಯಾಗಿ ಭಾರತದ ಅನೇಕ ಭಾಗಗಳಲ್ಲಿ ಕಠಿಣ ತಪ್ಪಸ್ಸನ್ನು ಆಚರಿಸಿದನು.
ಇದಾದ ನಂತರ ಜೈನ ಸ್ತ್ತ್ರೀಯರಿಗೆ ನಿರ್ವಾಣ ಇದೆಯೇ ಅಥವಾ ಇಲ್ಲವೇ ಎಂಬ ವಿಚಾರ, ಮತ್ತಿತರ ಆಚಾರ ಸಂಪ್ರದಾಯಗಳ ಬಗ್ಗೆ ಬೆಳೆದ ಭೇದವು ಈ ಧರ್ಮದ ವಿಂಗಡಣೆಗೆ ಕಾರಣವಾಯಿತು. ಜೈನ ಧರ್ಮದ ಮಹಾನ್ ತತ್ವಗಳಾದ ಅಹಿಂಸಾ, ಸತ್ಯ, ಆಸ್ತೇಯ (ಕಳ್ಳತನ ಮಾಡದಿರುವುದು), ಅಪರಿಗ್ರಹ (ಸಂಪತ್ತಿನ ವ್ಯಾಮೋಹ ಬಿಡುವುದು) ಇವುಗಳ ಜತೆಗೆ ಮಹಾವೀರನು ಬ್ರಹ್ಮ ಚರ್ಯ ಎಂಬ ಮತ್ತೊಂದು ತತ್ವವನ್ನು ಸೇರಿಸಿದನು.
ಈ ವಿಚಾರಗಳು ಜೈನ ಅನುಯಾಯಿಗಳಲ್ಲಿ ಭಿನ್ನಾಭಿಪ್ರಾಯಕ್ಕೆ ಎಡೆಮಾಡಿತು. ಮಹಾವೀರನ ತತ್ವವನ್ನು ಪಾಲಿಸಲು ವಸ್ತ್ತ್ರ ಧರಿಸದೆ ಬರೀ ಮೈಲಿರುವವರನ್ನು ದಿಗಂಬರರೆಂದು ಕರೆಯಲಾಯಿತು. ದಿಗಂಬರರು ಪ್ರತಿನಿಧಿಗಳನ್ನು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಕಾಣಬಹುದು.