ಆತ್ಮಶುದ್ಧಿಯ ಪ್ರತೀಕವಿದು ಈದ್ ಉಲ್ ಫಿತ್ರ್
ಅವಿನಾಶ್ ಬಿ. ಮನುಷ್ಯನೊಳಗೆ ಹುದುಗಿರುವ, ಮಾನವ ಸಹಜವಾದ ಪರನಿಂದನೆಯಂತಹಾ ಕೆಟ್ಟ ಗುಣಗಳನ್ನು ತೊರೆದು, ದಾನ ಧರ್ಮಗಳಲ್ಲಿ ತೊಡಗಿಕೊಂಡು ಸೌಹಾರ್ದತೆ, ಉತ್ತಮ ಸಮಾಜದ ನಿರ್ಮಾಣಕ್ಕೆ ಪೂರಕವಾಗುವಲ್ಲಿ ಈ ವ್ರತಗಳು ಮಹತ್ವದ ಪಾತ್ರ ವಹಿಸುತ್ತವೆ.ರಮ್ಜಾನ್ ಎಂದು ನಾವೆಲ್ಲ ಕರೆಯುವ ರಮದಾನ್ ಉಪವಾಸ ವ್ರತಾಚರಣೆಯ ಒಂದು ತಿಂಗಳು ಮುಕ್ತಾಯಗೊಳ್ಳುವ ಸಂಕೇತವಾಗಿ ಆಚರಿಸುವ ಹಬ್ಬ ಈದುಲ್-ಫಿತ್ರ್. ರಮ್ಜಾನ್ ಪದದ ವ್ಯುತ್ಪತ್ತಿಯಾಗಿದ್ದು ಅರೆಬಿಕ್ ಪದ 'ರಮಿದ್' ಅಥವಾ 'ರಮಜ್'ನಿಂದ. ಇದರರ್ಥ ನೆಲ ಕಾದು ಸುಡುವಂತಹಾ ತೀಕ್ಷ್ಣ ತಾಪಮಾನ ಎಂದು (ಮರಳುಗಾಡಿನಲ್ಲಿ ಕಂಡುಬರುವ). ಬದುಕಿನ ದೈನಂದಿನ ಜಂಜಾಟದ ಸುಡು ಬೇಗೆಯನ್ನು ತಣಿಸಲು ಈ ಉಪವಾಸ ವ್ರತ ನೆರವಾಗುತ್ತದೆ ಎಂಬುದು ನಂಬಿಕೆ.ಇಸ್ಲಾಮಿಕ್ ಕ್ಯಾಲೆಂಡರಿನ 9ನೇ ಮಾಸ ರಮದಾನ್ ಅಥವಾ ರಮಜಾನ್, ರಂಜಾನ್, ರಮ್ಜಾನ್. ನನ್ನ ಒಬ್ಬ ಮುಸಲ್ಮಾನ ಮಿತ್ರ ಹೇಳುವಂತೆ ಇದನ್ನು ರಮ್ಜಾನ್ ಅಂತಲೇ ಬರೆದರೆ ಹೆಚ್ಚು ಸೂಕ್ತವಂತೆ. ರಮ್ಜಾನ್ ಮಾಸದಲ್ಲೇ ಜನರಿಗೆ ಮಾರ್ಗದರ್ಶನ ಮಾಡಲು ಮತ್ತು ಜನರನ್ನು ಮೋಕ್ಷಮುಖಿಗಳಾಗಿಸಲು ಸ್ವರ್ಗದಿಂದ ಕುರಾನ್ ಎಂಬ ಪವಿತ್ರ ಗ್ರಂಥವು ಇಳಿದು ಬಂತೆಂಬುದು ಮುಸಲ್ಮಾನ ಬಾಂಧವರ ನಂಬಿಕೆ. ಇದೇ ಕಾರಣಕ್ಕೆ ರಮ್ಜಾನ್ ಮಾಸದಲ್ಲಿ ಕುರಾನ್ ಗ್ರಂಥಕ್ಕೆ ಹೆಚ್ಚಿನ ಮಾನ್ಯತೆ, ಗೌರವ. ಅದೇ ರೀತಿಯಾಗಿ, ಪ್ರವಾದಿಯವರಿಗೆ ದೇವದೂತರ ಮೂಲಕ ಕುರಾನ್ ಬೋಧನೆಯಾಗಿದ್ದು ಕೂಡ ಇದೇ ತಿಂಗಳಲ್ಲಿ ಎಂಬ ಪ್ರತೀತಿಯೂ ಇದೆ.
ನೈಜ ಮುಸಲ್ಮಾನರು ಪರಿಶುದ್ಧ ಮನದಿಂದ ಅಲ್ಲಾಹುವಿಗೆ ಪರಿಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡು ಪುನೀತರಾಗುವ ಅತ್ಯಂತ ಪರಿಣಾಮಕಾರಿ ವಿಧಾನ ಈ ರಮ್ಜಾನ್ ವ್ರತ. ಇಸ್ಲಾಂನ ಐದು ತತ್ವ ಅಥವಾ ಆಧಾರ ಸ್ತಂಭಗಳು ಎಂದು ಕರೆಯಲಾಗುವವುಗಳಲ್ಲಿ ಸೌಮ್ ಅಥವಾ ಉಪವಾಸ ಕೂಡ ಒಂದು. ಉಪವಾಸ ಮಾಡುವುದು ಎಲ್ಲ ಧರ್ಮಗಳಲ್ಲಿಯೂ ಇದ್ದದ್ದೇ. ಇದು ಆರೋಗ್ಯಕ್ಕೆ ಪೂರಕ ಎಂಬುದು ಒಂದು ಮಾತಾದರೆ, ತಿಂದುಂಡು ಸುಖವಾಗಿ ಜೀವಿಸುತ್ತಿರುವವರಿಗೆ, ಮೂರು ಹೊತ್ತು ಉಣಲು ಸಾಧ್ಯವಿಲ್ಲದ ಬಡ ಬಂಧುಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಇರುವ ಒಂದು ಅವಕಾಶವೂ ಹೌದು ಎಂಬುದು ತಾತ್ವಿಕ ಕಾರಣ.ಕುರಾನ್‌ನ ಒಂದು ವಚನ ಹೇಳುತ್ತದೆ: "... ನೀವು (ಜನರನ್ನು) ಕ್ಷಮಿಸಿರಿ ಮತ್ತು (ಅವರ ತಪ್ಪುಗಳನ್ನು) ಕಡೆಗಣಿಸಿರಿ. ಅಲ್ಲಾಹನು ನಿಮ್ಮನ್ನು ಕ್ಷಮಿಸಬೇಕೆಂದು ನೀವು ಅಪೇಕ್ಷಿಸುವುದಿಲ್ಲವೇ? ಅಲ್ಲಾಹನಂತೂ ಸದಾ ಕ್ಷಮಿಸುವವನು ಮತ್ತು ಕರುಣಾಮಯಿ". ದಯೆಯೇ ಧರ್ಮದ ಮೂಲ ಎಂಬ ಮಾತನ್ನೇ ಅಲ್ಲವೇ ಇದು ಪ್ರತಿಪಾದಿಸುವುದು?ಜಗತ್ತಿನ ಎಲ್ಲ ಧರ್ಮಗಳೂ ಶಾಂತಿ, ಸಹೋದರತೆ ಮತ್ತು ಭಾವೈಕ್ಯವನ್ನೇ ಬೋಧಿಸುತ್ತಿವೆ. ಹೀಗಾಗಿ ಯಾವ ಧರ್ಮವಾದರೇನು, ಅವರವರ ಧರ್ಮಾಚರಣೆ ಅವರವರ ಹಕ್ಕು. ಅದೇ ಕುರಾನ್‌ನಲ್ಲಿ ಒಂದು ವಾಕ್ಯವಿದೆ. "ಮಾನವರೆಲ್ಲರೂ ಒಂದೇ ಜನಾಂಗದವರಾಗಿದ್ದರು. ಕ್ರಮೇಣ ಅವರು ಭಿನ್ನತೆ ತೋರಿದರು". ಇದು ಭಾವೈಕ್ಯದ, ಮಾನವ ಕುಲವೊಂದೇ ಎಂಬುದರ ಸಂಕೇತ.ಕುರಾನ್ ದೇವವಾಣಿ. ದೇವದೂತರ ಮೂಲಕ ಮಹಮದ್ ಪೈಗಂಬರ್ ಅವರಿಗೆ ಇದು ಬೋಧಿಸಲ್ಪಟ್ಟಿತು. ಇದು ಮನುಕುಲದ ಮಾರ್ಗದರ್ಶಿ ಗ್ರಂಥವಾಗಿದ್ದು, ಪರರೊಂದಿಗೆ ಬದುಕುವ ರೀತಿ, ಧಾರ್ಮಿಕತೆ, ಆರ್ಥಿಕತೆ, ಸಮಾಜಶಾಸ್ತ್ರ, ನ್ಯಾಯಶಾಸ್ತ್ರ, ಬಡಬಗ್ಗರ ಬಗ್ಗೆ ಕಾಳಜಿ, ತಂದೆ ತಾಯಿಯ ಬಗೆಗೆ ಗೌರವ, ಜೀವನದ ನೀತಿ ಮುಂತಾದವುಗಳನ್ನೆಲ್ಲವನ್ನೂ ಬೋಧಿಸುತ್ತದೆ. ಜೀವನದ ವಿಶ್ವಕೋಶವೂ ಹೌದು.ದೇಹ ಮತ್ತು ಆತ್ಮ (ಮನೋ) ಶುದ್ಧಿಯಿಂದ ಅಲ್ಲಾಹುವಿಗೆ ಹತ್ತಿರವಾಗಿ, ಮನೋನಿಗ್ರಹದ ಮೂಲಕ, ಪರಿಶುದ್ಧ ಮನಸ್ಸಿನಿಂದ ಪರಿಪೂರ್ಣ ವ್ಯಕ್ತಿಯಾಗುವುದು ಈ ವ್ರತ ಆಚರಣೆಯ ಹಿಂದಿರುವ ಮೂಲ ಉದ್ದೇಶ. ಸ್ವರ್ಗದ ಬಾಗಿಲು ತೆರೆದಿರುವ ಪವಿತ್ರ ಮಾಸವೂ ಇದಾಗಿದ್ದು, ಸತ್ಕಾರ್ಯ, ಸನ್ಮಾರ್ಗ, ಸನ್ನಡತೆ, ಸದ್ಧರ್ಮಪಾಲನೆಯು ಸದಾನಂದಕ್ಕೆ ಕಾರಣವೂ ಆಗುತ್ತದೆ.ಸ್ವತಃ ಪ್ರವಾದಿಯವರೇ ದೊಡ್ಡ ಹೋರಾಟಗಾರರಾಗಿದ್ದರೂ, ಹಿಂಸೆಯನ್ನು ಅವರು ಒಪ್ಪಲಿಲ್ಲ. ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದರೂ, ಅವರ ಖಡ್ಗಕ್ಕೆ ಒಂದು ಹನಿ ರಕ್ತವೂ ಅಂಟಲಿಲ್ಲ ಎನ್ನುತ್ತದೆ ಕುರಾನ್. ಅಮಾಯಕರ ಒಂದು ಹನಿ ರಕ್ತವೂ ಚೆಲ್ಲಬಾರದು ಎಂಬುದು ಕುರ್ಆನ್ ಸ್ಪಷ್ಟೋಕ್ತಿ. ಅನ್ಯಾಯವಾಗಿ ಯಾರನ್ನೂ ಕೊಲ್ಲಬಾರದು ಎಂಬುದು ಅದರ ಆಗ್ರಹ. ಹೀಗಾಗಿ ಯಾವುದೇ ಧರ್ಮವು ಕೂಡ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ ಎಂಬುದಂತೂ ಸುಸ್ಪಷ್ಟ.ಇಂದಿನ ಕ್ಷೋಭೆಭರಿತ ದಿನಗಳಲ್ಲಿ, ಕಿರಿದಾಗಿಬಿಟ್ಟಿರುವ ಮನಸ್ಸುಗಳ ನಡುವೆ, ಶಂಕೆಯ ಕಾರ್ಮೋಡ ಹರಡಿರುವ ಎದೆಗೂಡುಗಳ ಮಧ್ಯೆ, ಮನುಕುಲದ ಏಳಿಗೆಗೆ ಇರುವ ಏಕೈಕ ಮಾರ್ಗ ಸರ್ವ ಧರ್ಮ ಸಮಾನ ಭಾವನೆ. ಪರಧರ್ಮ ಸಹಿಷ್ಣುತೆ ನಮ್ಮ ದೇಶದ ಅತಿದೊಡ್ಡ ಗುಣ. ಪರಧರ್ಮೀಯರೂ ನಮ್ಮ ಬಂಧುಗಳು ಅಂತ ತಿಳಿದುಕೊಂಡು, ಅವರೂ ನಮ್ಮ ಸಹೋದರರೆಂದು ತಿಳಿದುಕೊಂಡು ಶಾಂತಿ ಸೌಹಾರ್ದತೆಯಿಂದ ಬಾಳಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಇದೇ ಸಂದೇಶದೊಂದಿಗೆ ಓದುಗ ಬಾಂಧವರಿಗೆಲ್ಲರಿಗೂ ರಮ್ಜಾನ್ ಹಬ್ಬದ ಮತ್ತು ಶ್ರೀ ಗಣೇಶನ ಹಬ್ಬದ ಶುಭಾಶಯಗಳು.