ಅಶ್ವತ್ಥಾಮನು ದ್ವಾಪರ ಯುಗ ಕಾಲದ ಕಥೆಯನ್ನೊಳಗೊಂಡ ಮಹಾಕಾವ್ಯ ‘ ಮಹಾಭಾರತ’ ಕಾಲದ ವ್ಯಕ್ತಿ. ಈತ ಕೌರವರು ಹಾಗೂ ಪಾಂಡವರಿಗೆ ಯುದ್ಧ ವಿದ್ಯೆ ಕಲಿಸಿದ ಗುರುವೂ, ಕುರು ವಂಶದ ರಾಜಗುರುವೂ ಆದ ದ್ರೋಣಾಚಾರ್ಯರ ಪುತ್ರ.
ಅಶ್ವತ್ಥಾಮ ಚಿರಂಜೀವಿ ಎಂದು ಪುರಾಣಗಳು ವಿವರಿಸುತ್ತವೆ. ಈ ಕಾರಣದಿಂದ ಆತನಲ್ಲಿರುವ ಅತಿಮಾನುಷ ಶಕ್ತಿಯಿಂದಾಗಿ ಈಗಲೂ ಈತ ಬದುಕಿರುವುದಾಗಿ ಹಲವರು ನಂಬುತ್ತಾರೆ.
ದ್ರೋಣಾಚಾರ್ಯರು ರಾಜಗುರುವಾಗಿದ್ದ ಕಾರಣ, ಹಸ್ತಿನಾವತಿಯೊಂದಿಗಿನ ತನ್ನ ಬದ್ಧತೆಯಿಂದಾಗಿ ಮಹಾಭಾರತ ಯುದ್ಧ (ಕುರುಕ್ಷೇತ್ರ) ಕಾಲದಲ್ಲಿ ಪಾಂಡವರ ವಿರುದ್ಧ ಕೌರವರ ಪಕ್ಷವಹಿಸಿ ಯುದ್ಧ ನಡೆಸಿದರು. ಯುದ್ಧ ಸಂದರ್ಭದಲ್ಲಿ ದ್ರೋಣಾಚಾರ್ಯ ಹಾಗೂ ಪುತ್ರ ಅಶ್ವತ್ಥಾಮ ಸೇರಿ ಶತ್ರುಪಕ್ಷವಾದ ಪಾಂಡವರ ಸೇನೆಯನ್ನು ಬೃಹತ್ ಸಂಖ್ಯೆಯಲ್ಲಿ ಧ್ವಂಸಗೈದರು.
ಈ ಸಂದರ್ಭದಲ್ಲಿ ಪಾಂಡವ ಪಾಳಯದಲ್ಲಿ ಕೋಲಾಹಲವುಂಟಾದಾಗ ದ್ರೋಣಾಚಾರ್ಯರ ಶಕ್ತಿಯನ್ನು ತಡೆಯುವ ನಿಟ್ಟಿನಲ್ಲಿ ಪಾಂಡವ ಪಕ್ಷಪಾತಿ ಶ್ರೀಕೃಷ್ಣನು ಉಪಾಯವೊಂದನ್ನು ಹೂಡುತ್ತಾನೆ. ಆತನ ಯೋಜನೆಯ ಪ್ರಕಾರ, ದ್ರೋಣಪುತ್ರ ಅಶ್ವತ್ಥಾಮ ಸಾವನ್ನಪ್ಪಿದುದಾಗಿ ವದಂತಿ ಹಬ್ಬಿಸಲಾಗುತ್ತದೆ. ಸುದ್ದಿಯ ನಿಜಾವಸ್ಥೆಯನ್ನು ಅರಿಯಲು ದ್ರೋಣಾಚಾರ್ಯರು ಸತ್ಯಪಕ್ಷಪಾತಿಯಾದ ಯುಧಿಷ್ಠಿರನನ್ನು ಸಂಪರ್ಕಿಸಿ ವದಂತಿಯ ವಾಸ್ತವಾಂಶವನ್ನು ವಿಚಾರಿಸಿದರು. ಯುಧಿಷ್ಠಿರನು ಈ ರೀತಿಯಾಗಿ ಉತ್ತರಿಸಿದನು:
‘ಅಶ್ವತ್ಥಾಮಾ ಹತೋ ನರೋ ವ ಕುಂಜರೋ ವ’ ಅಂದರೆ, “ಅಶ್ವತ್ಥಾಮ ಸತ್ತಿರುವುದು ಹೌದು, ಆದರೆ ಅದು ಮನುಷ್ಯನೇ ಅಥವಾ ಆನೆಯೇ ಎಂಬುದು ನನಗೆ ತಿಳಿಯದು”
ಯುಧಿಷ್ಠಿರನಿಂದ ಈ ಉತ್ತರವನ್ನು ಆಲಿಸಿದ ದ್ರೋಣಾಚಾರ್ಯರು ತಮ್ಮ ಪುತ್ರ ಚಿರಂಜೀವಿ ಎಂಬುದನ್ನೂ ಮರೆತು, ಪುತ್ರವಿಯೋಗದ ಶೋಕದಿಂದ ಮೂರ್ಛಿತರಾದರು. ಇತ್ತ ರಣರಂಗದಲ್ಲಿ ಇದೇ ಸಂದರ್ಭದಲ್ಲಿ ಪಾಂಚಾಲ ದೊರೆ ಪುತ್ರ ದೃಷ್ಟದ್ಯುಮ್ನನು ಗುರು ದ್ರೋಣರನ್ನು ವಧಿಸುತ್ತಾನೆ.
ಆದರೆ, ವಾಸ್ತವ ಭಿನ್ನವಾಗಿತ್ತು. ದ್ರೋಣರ ಪುತ್ರ ಅಶ್ವತ್ಥಾಮ ಸತ್ತಿರಲಿಲ್ಲ.... ಯುದ್ಧರಂಗದಲ್ಲಿದ್ದ ‘ಅಶ್ವತ್ಥಾಮ’ ಆನೆಯೊಂದು ಮೃತಪಟ್ಟಿತ್ತು. ಆದರೆ ಪ್ರತಿಯೊಬ್ಬರೂ ದ್ರೋಣಪುತ್ರ ಅಶ್ವತ್ಥಾಮನೇ ಮೃತಪಟ್ಟಿರುವುದಾಗಿ ಭಾವಿಸಿದ್ದರು.
ತಂದೆಯ ಸಾವು ಅಶ್ವತ್ಥಾಮನನ್ನು ಭಾವನಾತ್ಮಕವಾಗಿ ಘಾಸಿಗೊಳಿಸಿತು. ರೋಷಾವಿಷ್ಟನಾದ ಅಶ್ವತ್ಥಾಮ, ಪಾಂಡವರನ್ನು ನಾಶಪಡಿಸಲು ಪಣತೊಟ್ಟ. ಆತ ಉತ್ತರೆಯ ಗರ್ಭದಲ್ಲಿದ್ದ ಪರೀಕ್ಷಿತನನ್ನು ಕೊಲ್ಲಲೆಂದು ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದಾಗ ಶ್ರೀಕೃಷ್ಣನು ಪರೀಕ್ಷಿತನನ್ನು ರಕ್ಷಿಸುತ್ತಾನೆ. ಈ ಸಂದರ್ಭದಲ್ಲಿ ಕೃಷ್ಣನು ಅಶ್ವತ್ಥಾಮನ ಶಿರದಲ್ಲಿದ್ದ ಮಣಿಯನ್ನು ಕಿತ್ತು, ನೀನು ಹಲವು ಯುಗ ಪರ್ಯಂತ ಭೂಲೋಕದಲ್ಲಿ ಅಡ್ಡಾಡುತ್ತಾ ಕಾಲ ಕಳೆಯುತ್ತಿರು ಎಂದು ಶಪಿಸುತ್ತಾನೆ.
ಅಸೀರಗಢ ಕೋಟೆಯವರಲ್ಲದೆ, ನರ್ಮದಾ ನದಿ ತೀರದ ಗೌರಿಘಾಟ್ ಸಮೀಪವಿರುವ ಜಬಲ್ಪುರದ ನಿವಾಸಿಗಳು ಕೂಡ ಅಶ್ವತ್ಥಾಮನು ಇನ್ನೂ ಆಗಾಗ ಆ ಪ್ರದೇಶದಲ್ಲಿ ಅಲೆದಾಡುತ್ತಿರುವುದಾಗಿ ವಾದಿಸುತ್ತಾರೆ. ತ
ನ್ನ ಶಿಖೆಯಲ್ಲಿನ ಮಣಿ ಕಿತ್ತುಹೋದ ಗಾಯದಿಂದ ರಕ್ತ ಸೋರದಂತೆ ತಡೆಯಲು, ಅಲ್ಲಿನ ನಿವಾಸಿಗಳಲ್ಲಿ ಆತ ಅರಸಿನ ಹಾಗೂ ಎಣ್ಣೆಗಾಗಿ ವಿನಂತಿಸುತ್ತಾನೆ ಎಂಬ ನಂಬಿಕೆ ಅಲ್ಲಿದೆ.