ಧ್ಯಾನಕ್ಕೆ ಧಾರ್ಮಿಕ ತಳಹದಿ ಇದೆ. ಧ್ಯಾನಕ್ಕೆ ಎಲ್ಲಾ ಧರ್ಮಗಳಲ್ಲೂ ಪ್ರಾಧಾನ್ಯವಿದೆಯಾದರೂ, ಹಿಂದೂ ಧರ್ಮದಲ್ಲಿ ಧ್ಯಾನವೇ ಪ್ರಧಾನವಾಗಿದೆ.
ಪ್ರಾರ್ಥನೆ, ತಪಸ್ಯೆ ಇತ್ಯಾದಿಗಳು ಧ್ಯಾನದ ಇತರ ವಿಭಾಗಗಳು. ಚಂಚಲವಾಗಿರುವ ಮನಸ್ಸನ್ನು ಏಕಾಗ್ರಗೊಳಿಸಲು ಧ್ಯಾನದಿಂದ ಮಾತ್ರ ಸಾಧ್ಯ. ಧ್ಯಾನದಿಂದ ವ್ಯಕ್ತಿಯ ಮನಃಸ್ಥೈರ್ಯ ವೃದ್ಧಿಸುತ್ತದೆ. ಮನೋಬಲವಿಲ್ಲದ ವ್ಯಕ್ತಿಯಿಂದ ಯಾವ ಸಾಧನೆಯೂ ಅಸಾಧ್ಯ. ಸಾಧಕನು ಪ್ರಥಮತಃ ಮಾಡಬೇಕಿರುವ ಕೆಲಸವೆಂದರೆ ಮಾನೋನಿಗ್ರಹ.
ಮನೋನಿಗ್ರಹ ಎಂದರೆ ಸಲ್ಲದ ವಿಷಯಗಳತ್ತ ಚಲಿಸುವ ಚಂಚಲ ಮನಸ್ಸಿಗೆ ದಂಡನೆ ನೀಡಿ ಗುರಿಯತ್ತ ಕೇಂದ್ರೀಕರಣಗೊಳಿಸುವುದು. ಧ್ಯಾನ ಭಕ್ತಿಪರವಾಗಿದ್ದಾಗ ಹೆಚ್ಚು ಶ್ರದ್ಧೆಯಿಂದ ನಡೆಯುತ್ತದೆ. ಧ್ಯಾನವು ಮನಸ್ಸನ್ನು ದೃಢಗೊಳಿಸುವುದರೊಂದಿಗೆ ಆದ್ಯಾತ್ಮದತ್ತ ಪ್ರಗತಿ ಸಾಧಿಸುವ ಮನಸ್ಸಿಗೆ ಬೆಂಬಲ ನೀಡಿವುದು.