ಮಹಾರಾಷ್ಟ್ರದ ನಾಸಿಕ್‌ನ ಕಲ್ವಾನ್ ತಾಲೂಕಿನ ನಂದೂರಿ ಬೆಟ್ಟದ ಮೇಲಿರುವ ಶ್ರೀ ಸಪ್ತಶೃಂಗಿ ದೇವಿ ಮಂದಿರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹೆಲ್ಮೆಟ್ ನೀಡಲು ದೇವಳದ ಆಡಳಿತ ಮಂಡಳಿ ನಿರ್ಧರಿಸಿದೆ.
ಅಚ್ಚರಿಯಾಯಿತೇ? ಕಾರಣವಿಲ್ಲಿದೆ ಕೇಳಿ. ಇತ್ತೀಚೆಗೆ ಈ ಪ್ರದೇಶದಲ್ಲಿ ಭೂಕುಸಿತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಮುನ್ನೆಚ್ಚರಿಕೆ ಕ್ರಮ. ಈಚೆಗೆ ಮೂರು ಭಕ್ತರು ಭೂಕುಸಿತದಿಂದಾಗಿ ಗಾಯಗೊಂಡಿರುವುದೇ ಇದಕ್ಕೆ ಪ್ರಧಾನ ಕಾರಣ.
ಈ ಕುರಿತು ಇತ್ತೀಚೆಗೆ ಸಭೆ ನಡೆಸಿರುವ ಶ್ರೀ ಸಪ್ತಶೃಂಗಿ ನಿವಾಸಿನಿ ದೇವಿ ಟ್ರಸ್ಟ್, ಮಂದಿರವನ್ನು ಸಂದರ್ಶಿಸುವ ಭಕ್ತರಿಗೆ ಹೆಲ್ಮೆಟ್ ನೀಡಲು ನಿರ್ಧರಿಸಿದೆ. ಮೊನ್ನೆ ಭಾನುವಾರ ರಾತ್ರಿ ಭೂಕುಸಿತ ಸಂಭವಿಸಿ ಮೂವರು ಗಾಯಗೊಂಡಿದ್ದರು. ಅಂದಿನಿಂದ ದುರಸ್ತಿಗಾಗಿ ಈ ಮಾರ್ಗವನ್ನು ಮುಚ್ಚಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆದರೆ, ನವರಾತ್ರಿ ಮತ್ತು ಚೈತ್ರ ಪೂರ್ಣಿಮಾದಂತಹಾ ವಿಶೇಷ ದಿನಗಳಲ್ಲಿ ಈ ನಿರ್ಧಾರವನ್ನು ಕಾರ್ಯಗತಗೊಳಿಸುವುದು ಕಷ್ಟದ ಸಂಗತಿಯೇ. ಯಾಕೆಂದರೆ ರಾಜ್ಯದ ವಿವಿಧೆಡೆಗಳಿಂದ ಈ ಮಂದಿರಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಲಕ್ಷ ಮೀರುತ್ತದೆ.
ಈ ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಧಾರಗಳಲ್ಲಿ ನಂದೂರಿ ಘಾಟಿಯ 10 ಕಿ.ಮೀ. ರಸ್ತೆಯಲ್ಲಿ ರಾತ್ರಿ ವೇಳೆ ಖಾಸಗಿ ಬಸ್‌ಗಳಿಗೆ ಪ್ರವೇಶ ನಿರ್ಬಂಧಿಸುವುದೂ ಸೇರಿದೆ. ರಾಜ್ಯ ರಸ್ತೆ ಸಾರಿಗೆ ನಿಗಮದ ವಿಶೇಷ ಬಸ್ಸುಗಳು ಯಾತ್ರಾರ್ಥಿಗಳನ್ನು ಮಂದಿರದವರೆಗೆ ಕರೆದೊಯ್ಯುತ್ತವೆ.
ಕಳೆದ ಜನವರಿ 20ರಂದು ಇಲ್ಲಿನ ಕಡಿದಾದ ಕಣಿವೆಗೆ ಬಸ್ಸೊಂದು ಬಿದ್ದು, 40ರಷ್ಟು ಮಂದಿ ಭಕ್ತರು ಸಾವನ್ನಪ್ಪಿದ್ದರು ಮತ್ತು ಅಷ್ಟೇ ಜನ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ದೇವಳದ ಆಡಳಿತ ಮಂಡಳಿ ಈ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.