ನವಂಬರ್ ತಿಂಗಳಲ್ಲಿ ತುಳಸಿ ಹಬ್ಬ ಅಂದರೆ ಉತ್ಥಾನ ದ್ವಾದಶಿ ಬರುತ್ತದೆ. ಈ ಹಬ್ಬದ ರಾತ್ರಿಯಲ್ಲಿ ಪ್ರತಿ ಮನೆ ಮುಂದಿರುವ ತುಳಸಿಗೆ ವಿಶೇಷ ಅಲಂಕಾರ ಪೂಜೆ ನಡೆಯುತ್ತದೆ.
ಅಮವಾಸ್ಯೆಯೊಂದಿಗೆ ಕಾರ್ತಿಕ ಮಾಸ ಆರಂಭವಾಗುತ್ತದೆ.ಕಾರ್ತಿಕ ಮಾಸವೆಂದರೆ ಸಾಲು ಬೆಳಕಿನ ಹಬ್ಬಗಳನ್ನಾಚರಿಸುವ ತ ಹಣ ತಿಂಗಳು. ಹಣತೆಗಳ ಸಾಲು ಸಾಲು ಬೆಳಗುವುದು ಕೂಡ ಇದೇ ತಿಂಗಳಲ್ಲಿ ಅನ್ನುವುದು ವಿಶೇಷ.
ಅಮವಾಸ್ಯೆಯ ಕತ್ತಲನ್ನು ಹೊಡೆದೋಡಿಸುವಜ್ಯೋತಿ ಅದು. ಅಂದು ಬೆಳಗಿದ ಜ್ಯೋತಿ ಮನೆ,ಮನವನ್ನು ಬೆಳಗುವುದು ಎಂಬುದು ಪ್ರತೀತಿ ಇದೆ. ತಮಸೋಮ ಜ್ಯೋತಿರ್ಗಮಯ ಎನ್ನುವ ನೀತಿ ವಾಕ್ಯವೂ ಇದರೊಂದಿಗೆ ಅರ್ಥಪೂರ್ಣವಾಗುತ್ತದೆ. ಕಾರ್ತಿಕ ಮಾಸವೆಂದರೆ ವರ್ಷದ ಎಂಟನೇ ತಿಂಗಳು. ದೀಪೋತ್ಸವಗಳೇ ಇದರಲ್ಲಿನ ವಿಶೇಷ. ಕೃತ್ತಿಕೆಯಿಂದ ಕಾರ್ತಿಕ ಎಂಬ ಪದ ನಿಷ್ಪನ್ನವಾಗಿದೆ. ಕೈಲಾಸ ನಾಥ ಶಿವನ ಸ್ವರೂಪ ಇದರಲ್ಲಿದೆ.
ಕಾರ್ತಿಕ ಮಾಸದ ವಿಶೇಷವೆಂದರೆ ತುಳಸೀಪೂಜೆ. ಹೊಸ ನೆಲ್ಲಿಕಾಯಿಯಿಂದ ಕೂಡಿದ ನೆಲ್ಲಿಕೊಂಬೆಯನ್ನೂ ತುಳಸೀ ಗಿಡವನ್ನೂ ಸೇರಿಸಿ ಮಧ್ಯದಲ್ಲಿ ತುಳಸೀ ಗಿಡವನ್ನು ಸೇರಿಸಿ ಶ್ರೀಕೃಷ್ಣ ಪ್ರತಿಮೆ ಇರಿಸಿ ಪೂಜಿಸುವ ಕ್ರಮ ವಿದೆ. ನೆಲ್ಲಿಯನ್ನು ಧಾತ್ರಿ ಎನ್ನುವರು. ತ್ರಿಮೂರ್ತಿಗಳ ಪತ್ನಿಯರು ವಿಷ್ಣುವನ್ನು ಎಚ್ಚರಿಸಲು ಬೀಜಗಳನ್ನೆರಚಿದ್ದರು. ಇದರಿಂದ ಜನಿಸಿದವಳೇ ದಾತ್ರಿ. ಗೌರಿ ದೇವಿ ಎಸೆದ ಬೀಜದಿಂದ ತುಲಸಿ ಜನಿಸಿದಳು ಎಂದು ಪುರಾಣಗಳು ತಿಳಿಸುತ್ತವೆ.
ವೈದ್ಯ ಶಾಸ್ತ್ರ ಹೇಳುವಂತೆ ನೆಲ್ಲಿಕಾಯಿ ಎಲ್ಲಾ ಅನ್ನಾಂಗಗಳಿಂದ ಕೂಡಿದ ಪುಷ್ಟಿಕರ ಆಹಾರ, ತ್ರಿದೊಷಗಳನ್ನು ಹತೋಟಿಯಲ್ಲಿಡುತ್ತದೆ. ಕಾರ್ತಿಕ ಮಾಸದ ಹುಣ್ಣಿಮೆ- ಅಮವಾಸ್ಯೆಯಂದು ದೀಪೋತ್ಸವ ನಡೆಸಲಾಗುತ್ತದೆ. ದೇವಾಲಯದ ಪರಿಸರವಿಡೀ ದೀಪಮಾಲೆಯನ್ನು ತೂಗಿಸ ನೋಟವು ವರ್ಣಿಸಲಸದಳ. ಲಕ್ಷದೀಪೋತ್ಸವ ಎಂದೇ ಇದು ಪ್ರಸಿದ್ಧಿ.
ಈ ಮಾಸದಲ್ಲಿ ಸಮುದ್ರ ಸ್ನಾನ, ಸಂಗಮ ಸ್ನಾನ ಮಾಡುವುದು ರೂಢಿ. ಭಜನೆ ಕೀರ್ತನೆಗಳು ನಡೆಯುತ್ತವೆ. ದೇವಾಲಯಗಳಲ್ಲಿ ರಥೋತ್ಸವಗಳು ಆರಂಭವಾಗುತ್ತ ಸೋಮವಾರಗಳಲ್ಲಿ ಶಿವನಿಗೆ ವಿಶೇಷ ಪೂಜೆಗಳು ನೆರವೇರುತ್ತವೆ. ಕಾರ್ತಿಕ ಶುದ್ಧ ಏಕಾದಶಿಯನ್ನು ಉತೈನೇಕಾದಶಿ ಎಂದು ಕರೆಯುತ್ತಾರೆ. ನಂತರ ಉತ್ಥಾನ ದ್ವಾದಶಿ. ಅಂದಿನಿಂದ 5 ದಿನಗಳ ವರೆಗೆ ಭೀಷ್ಮ ಪಂಚಕ ವ್ರತವನ್ನು ಆಚರಿಸುತ್ತಾರೆ. ಪರಮಾತ್ಮನು ಪಾಲ್ಗಡಲಲ್ಲಿ ವಿಶ್ರಾಂತಿಯಿಂದೇಳುವ ದಿನವಾದ್ದರಿಂದ ಕ್ಷೀರಾಭಿವದ್ಧಿ ದಿನವೆಂದೂ ಕರೆಯುತ್ತಾರೆ.
ಕೃತ್ತಿಕಾ ನಕ್ಷತ್ರಾಧಿಪತಿಯಾದ ಅಗ್ನಿದೇವರನ್ನು ಅಂದು ತುಪ್ಪದಿಂದ ನನೆಸಿದ ಎಂದು ಬಟ್ಟೆಯನ್ನು ಒಂದು ಕೋಲಿಗೆ ಕಟ್ಟಿ ಅದನ್ನು ಬೆಂಕಿಯಿಂದ ಸುಟ್ಟು ಅಗ್ನಿ ದೇವನಿಗೆ ಸಮರ್ಪಿಸಿ ಭಸ್ಮವನ್ನು ಭಕ್ತಾದಿಗಳು ಧರಿಸುತ್ತಾರೆ. ವೇದೋಕ್ತವಾದ ಎಲ್ಲಾ ಆಚರಣೆಗಳಲ್ಲಿ ತುಳಸಿಗೆ ಪ್ರಥಮ ಪ್ರಾಶಸ್ತ್ಯ. ಇದು ಪವಿತ್ರ ಪರಿಶುದ್ಧತೆಗಳ ಸಂಕೇತ. ತುಳಸಿ ಕಟ್ಟೆಗಳಿರುವ ಮನೆಯನ್ನು ಸದಾಚಾರ ಸಂಪನ್ನರ ಮನೆಯೆಂದೇ ಪರಿಗಣಿಸಲಾಗುತ್ತದೆ.
- ವಿ. ಬಿ.