ಮಹಾಮಜ್ಜನ ಸಂಭ್ರಮದಲ್ಲಿ ಮೈಸೂರು ನಂದಿ
ಮೈಸೂರಿನ ಚಾಮುಂಡಿ ಬೆಟ್ಟ ಅಂದೊಡನೆಯೇ ನೆನಪಾಗುವುದು ಮಹಾನಂದಿಯ ಭವ್ಯ ವಿಗ್ರಹ. ವೀಕ್ಷಕರಿಗೆ ಈ ಬೃಹನ್ವಿಗ್ರಹ ನೋಡಿದೊಡನೆಯೇ ಒಂದೆಡೆ ಶತಮಾನ ಕಂಡ ಅದರ ಭವ್ಯತೆ, ಇನ್ನೊಂದೆಡೆ , ಪೌರಾಣಿಕ ತೇಜಸ್ಸಿನಿಂದಾಗಿ ಭಕ್ತಿ ಭಾವ ಸ್ಫುರಿಸುತ್ತದೆ.ಸುಮಾರು ಮೂರೂವರೆ ಶತಮಾನಗಳಷ್ಟು ಕಾಲ ಚಾಮುಂಡಿ ಬೆಟ್ಟದ ಸೆರಗಿನಲ್ಲಿ ಮಲಗಿರುವ ಮಹಾನಂದಿಗೆ ನವೆಂಬರ್ 6ರಂದು ಮಹಾ ಮಜ್ಜನ. ಬೆಟ್ಟ ನಿತ್ಯ ಭೇಟಿ ನೀಡುವವರ ಸಂಘಟನೆ ಬೆಟ್ಟದ ಬಳಗದ ತಂಡ ಈಮಹಾಮಜ್ಜನದ ಕೈಂಕರ್ಯ ನಡೆಸಿ , ಸಾಧನೆ-ಸಾರ್ಥಕ್ಯ ಹೊಂದಲಿದ್ದಾರೆ.ಸುಮಾರು 30-40 ವರ್ಷಗಳಿಂದ ಮೈ ತೊಳೆಯದ ನಂದೀಶನಿಗೆ ಪರಿಮಾರ್ಜನ ವ್ಯವಸ್ಥೆಯನ್ನು ಬೆಟ್ಟದ ಬಳಗ ಮಾಡಿದೆ. ಕೆಲವು ದಶಕಗಳ ಹಿಂದೆ ಹಾಲುತ್ಪಾದಕರ ಸಂಘಟನೆಗಳ ನೆರವಿನಿಂದ ಹಾಲಿನಲ್ಲಿ ಮೈ ತೊಳೆದಿದ್ದ ನಂದೀಶ ಈಗ ಮತ್ತೆ ಸಾಲಂಕೃತನಾಗಿ, ಶುಚಿರ್ಭೂತನಾಗುತ್ತಿದ್ದಾನೆ. ನಾಡಿನಹಿರಿಮೆ, ಮೈಸೂರು ಅರಸರ ಗರಿಮೆಗೆ ತಕ್ಕಂತೆ ಖ್ಯಾತ ಶಿಲ್ಪಿ ಕೇಶವಾಚಾರ್ ನೇತೃತ್ವದಲ್ಲಿ ಮಹಾನಂದಿಯ ಶುಚೀಕರಣ ಕಾರ್ಯ ಪೂರ್ಣವಾಗಿ ಮಹಾಜ್ಜನ ಅಂತಿಮಹಂತದಲ್ಲಿದೆ.ಈ ಮಹಾನಂದಿ 340 ವರ್ಷಗಳಷ್ಟು ಹಳೆಯದು. ಹದಿನೇಳನೆಯ ಶತಮಾನದಲ್ಲಿ ಮೈಸೂರು ಪ್ರಾಂತ್ಯವನ್ನಾಳಿದ ದೊಡ್ಡ ದೇವರಾಜ ಒಡೆಯರ್ ಅವರು ಸುಮಾರು 1664ರ ಕಾಲದಲ್ಲಿ ಈ ವಿಗ್ರಹ ಸ್ಥಾಪನೆಗೆ ಸಿದ್ಧತೆ ಆರಂಭಿಸಿ ಕೆಲವರ್ಷಗಳಲ್ಲಿ ಪೂರ್ಣಗೊಳಿಸಿದರು. ಬೆಟ್ಟದಲ್ಲಿ ನೆಲೆಗೊಂಡಿದ್ದ ಬೃಹತ್ ಬಂಡೆಯ ಏಕಶಿಲಾ ವಿಗ್ರಹವಿದು. ಚಾಂಮುಂಡೇಶ್ವರಿ ದರ್ಶನಕ್ಕೆ ತೆರಳುವವರಿಗೆ ಅರ್ಧದಾರಿಯಲ್ಲಿ ವಿಶ್ರಾಂತಿ ಹಾಗೂ ಆರಾಧನೆಗಾಗಿ ಈ ವಿಗ್ರಹ ಸ್ಥಾಪನೆಯಾಗುವುದರೊಂದಿಗೆ, ಮೆಟ್ಟಿಲುಗಳ ವ್ಯವಸ್ಥೆಯನ್ನೂ ಅಳವಡಿಸಲಾಯಿತು.ಮಹಾನಂದಿಯ ಮಹಾಭಿಷೇಕಕ್ಕೆ 6 ಲಕ್ಷ ರೂ. ಅಂದಾಜಿಸಲಾಗಿದೆ.ಹತ್ತು ಸಾವಿರಕ್ಕೂ ಅಧಿಕ ಭಕ್ತಾದಿಗಳು ಸೇರುವ ನಿರೀಕ್ಷೆ ಇದೆ. ಸುತ್ತೂರು ಮಠಾಧೀಶರು, ಒಡೆಯರ್ ಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಾನಿಧ್ಯದಲ್ಲಿ ಅರ್ಚಕ ಸೋಮಶೇಖರ್ ಅಭಿಷೇಕ ವಿಧಿ ಪೂರೈಸುವರು. ಭವಿಷ್ಯದ ಯೋಜನೆಯಂತೆ ಪ್ರತೀ ಐದು ವರ್ಷಕ್ಕೊಮ್ಮೆ ನಂದಿ ಮಜ್ಜನ ನಡೆಯಲಿದೆ.