ಮಧ್ವರ ಜನ್ಮಸ್ಥಾನವಾದ ಪಾಜಕದ ಅಭಿವೃದ್ದಿಗೆ ಕಾಣಿಯೂರು ಮಠ ಮುಂದಾಗಿದೆ. ಐತಿಹಾಸಿಕ ಪಾಜಕ ಕ್ಷೇತ್ರವನ್ನು ಧಾರ್ಮಿಕ ಪ್ರವಾಸೀ ತಾಣವನ್ನಾಗಿ ರೂಪಿಸುವುದು ಮಠದ ಉದ್ದೇಶ ಎಂದು ಕಾಣಿಯೂರು ಮಠದ ಪರಮಪೂಜ್ಯ ಶ್ರೀಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಧಾರ್ಮಿಕ ಆಚರಣೆಗಳ ನೆಲೆವೀಡಾಗಿ ಇಂದು ಉಡುಪಿ ಪ್ರಸಿದ್ದಿ ಪಡೆದಿದೆ. ಈ ಅಭಿವೃದ್ಧಿಯ ಹಿಂದೆ ಅನೇಕ ಮಂದಿಯ ಶ್ರದ್ಧೆಯಿದೆ. ನಾಡಿಗೆ ದ್ವೈತ ಸಿದ್ದಾಂತ ಸಾರಿದ ಮಧ್ವರ ಜನ್ಮಸ್ಥಳ ಉಡುಪಿ ಬಳಿ ಇರುವ ಪಾಜಕವು ಕರ್ನಾಟಕದ ಪಾಲಿಗೆ ಹೆಮ್ಮೆ ಎಂದವರು ನುಡಿದರು.
ಪಾಜಕದಲ್ಲಿ ಈಗೇನಿದೆ?
ಪಾಜಕ ಹಲವು ಕುತೂಹಲಕರ ಅಂಶಗಳಿಗೆ ಕಾರಣವಾಗಿದೆ. ಆಚಾರ್ಯ ಮಧ್ವರ ಬಾಲ್ಯದ ಮೇಲೆ ಬೆಳಕು ಚೆಲ್ಲಬಲ್ಲ ಹಲವಾರು ಸ್ಮಾರಕಗಳನ್ನು ಪಾಜಕದಲ್ಲಿ ಕಾಣಬಹುದು. ಆಚಾರ್ಯರ ಪಾದ ಚಿಹ್ನೆ, ಅಕ್ಷರಾಭ್ಯಾಸ ಮಾಡಿದ ಶಿಲೆ, ಹಾಲು ಮತ್ತು ಮೊಸರಿನ ಪಾತ್ರೆಗಳ ಮೇಲೆ ಇಟ್ಟ ದೊಡ್ಡ ಕಲ್ಲಿನ ಚಪ್ಪಡಿಗಳು ಹಾಗೂ ಮಣಿವಂತ ಎಂಬ ದೈತ್ಯನನ್ನು ಕಾಲ ಕಿರುಬೆರಳಿನಿಂದ ಸಂಹಾರ ಮಾಡಿದ ಸ್ಥಳ ಇತ್ಯಾದಿಗಳನ್ನು ಪಾಜಕದಲ್ಲಿ ಕಾಣಬಹುದು.
ಮಧ್ವರ ಈ ಪುಣ್ಯ ಸ್ಮರಣಿಕೆಗಳನ್ನು ಮುಂದಿನ ಪೀಳಿಗೆ ಕೂಡಾ ನೋಡುವಂತಾಗಬೇಕೆಂಬ ಉದ್ದೇಶದಿಂದ ಅದನ್ನು ಕಾಯ್ದುಕೊಂಡು ಬರುವ ಜವಾಬ್ದಾರಿಯನ್ನು ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಕಾಣಿಯೂರು ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೊತ್ತುಕೊಂಡಿದ್ದಾರೆ. ಇವುಗಳ ರಕ್ಷಣೆಗೆ ಬದ್ಧರಾಗಿರುವ ಇವರು, ಆಚಾರ್ಯ ಮಧ್ವರ ಮನೆ ಹಾಗೂ ಪಾದ ಚಿಹ್ನೆ ಇರುವ ಗುಂಡಿಗಳ ನವೀಕರಣವನ್ನು ಭಕ್ತರ ನೆರವಿನಿಂದ ಮಾಡಿದ್ದಾರೆ.
ಪಾಜಕ ಕ್ಷೇತ್ರದಲ್ಲಿ ಪ್ರಾಚೀನ ಗುರುಕುಲ ಮಾದರಿಯ ಪಾಠಶಾಲೆ ಇರಬೇಕೆಂದು ಮನಗಂಡ ಶ್ರೀಪಾದರು 'ಆನಂದತೀರ್ಥ ಗುರುಕುಲ' ಪಾಠಶಾಲೆ ಆರಂಭಿಸುವ ಮೂಲಕ ಅನೇಕ ವಿದ್ಯಾರ್ಥಿಗಳ ಜ್ಞಾನದಾಹವನ್ನು ತಣಿಸುತ್ತಿದ್ದಾರೆ. ಇಲ್ಲಿನ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗಿ ಸದಾ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುವ ಒಂದು ಕೇಂದ್ರವಾಗಬೇಕೆಂದು ಶ್ರೀಪಾದರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಪೂಜಾ ಮಂದಿರದ ನವೀಕರಣ, ಗೋಶಾಲೆ, ಪಾಕಶಾಲೆ ತುಲಸೀವನ ಯಾಗಶಾಲೆಗಳು ಇನ್ನೂ ನಿರ್ಮಾಣವಾಗಬೇಕಷ್ಟೇ. ಮುಂದಿನ ದಿನಗಳಲ್ಲಿ ಭಕ್ತರ ಸಹಕಾರದೊಂದಿಗೆ ಇವೆಲ್ಲವನ್ನೂ ಕೂಡಾ ಶ್ರೀಪಾದರು ನಿರ್ಮಿಸಲಿದ್ದಾರೆ.