Select Your Language

Notifications

webdunia
webdunia
webdunia
webdunia

ದಶರಥನ ಪುತ್ರಶೋಕದ ಹಿನ್ನೆಲೆ

ದಶರಥನ ಪುತ್ರಶೋಕದ ಹಿನ್ನೆಲೆ

ಇಳಯರಾಜ

ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ ಹೋಗಿದ್ದಾಗ, ಸರಯೂ ನದಿಯಲ್ಲಿ ಪ್ರಾಣಿಯೊಂದು ನೀರು ಕುಡಿಯುವಂತೆ ಸದ್ದಾಯಿತು.

ಶಬ್ದವೇಧಿ ವಿದ್ಯಾಪಾರಂಗತನಾದ ದಶರಥನು ತಕ್ಷಣವೇ ತನ್ನ ಬಿಲ್ಲು ಬಾಣಗಳನ್ನು ಸಜ್ಜುಗೊಳಿಸಿಕೊಂಡು ಶಬ್ದ ಬಂದೆಡೆಗೆ ಬಾಣವನ್ನು ಪ್ರಯೋಗಿಸಿದನು. ದಶರಥನ ಬಾಣ ಗುರಿಯನ್ನು ತಲುಪಿದರೂ, ಆತನ ಊಹೆ ಸುಳ್ಳಾಗಿತ್ತು. ನದಿಯಲ್ಲಿ ನೀರು ಕುಡಿಯುತ್ತಿದ್ದದ್ದು ಯಾವುದೋ ಪ್ರಾಣಿಯಾಗಿರದೆ, ಮನುಷ್ಯನಾಗಿದ್ದನು.

ದಶರಥನ ಬಾಣ ಗುರಿ ತಲುಪುತ್ತಿದ್ದಂತೆ, ಅತ್ತ ಕಡೆಯಿಂದ ಅಯ್ಯೋ! ಅಮ್ಮಾ! ಎನ್ನುವ ಧ್ವನಿ ಕೇಳಿಸಿತು. ತಕ್ಷಣವೇ ಎಚ್ಚೆತ್ತ ದಶರಥ ನದೀ ತೀರಕ್ಕೆ ಹೋಗಿ ನೋಡಿದಾಗ, ಒಬ್ಬ ಋಷಿಕುಮಾರನು ಬಾಣದ ಪೆಟ್ಟನ್ನು ತಾಳಲಾರದೆ, ನರಳುತ್ತ ನೆಲದ ಮೇಲೆ ಬಿದ್ದಿದ್ದನು. ಸಾವಿನಂಚಿನಲ್ಲಿದ್ದ ಆತನನ್ನು ಸಂತೈಸುತ್ತ ದಶರಥನು ಆತನ ಕ್ಷಮೆ ಯಾಚಿಸುತ್ತ, "ಋಷಿಕುಮಾರ, ನಾನು ದಶರಥ ಮಹಾರಾಜ, ನನ್ನಿಂದಾದ ಈ ಪ್ರಮಾದವನ್ನು ದಯವಿಟ್ಟು ಕ್ಷಮಿಸು, ತಿಳಿಯದೆ ಅಪಚಾರವೆಸಗಿಬಿಟ್ಟನು.
ನನ್ನಿಂದೇನಾದರೂ ಸೇವೆ ಆಗಬೇಕೆಂದಿದ್ದಲ್ಲಿ ತಿಳಿಸು ಖಂಡಿತ ನೆರವೇರಿಸುತ್ತೇನೆ" ಎಂದು ಕೋರಿಕೊಂಡನು.

ಸದ್ಗುಣ ಸಂಪನ್ನನಾದ ಋಷಿಕುಮಾರನು ದಶರಥನು ತನ್ನ ಪ್ರಾಣಕ್ಕೆ ಕುತ್ತು ತಂದಿದ್ದರೂ ಸಹ, ಆತನನ್ನು ಕ್ಷಮಿಸಿ "ಮಹಾರಾಜ, ನಾನು ಶ್ರವಣಕುಮಾರ. ವೃದ್ಧರೂ, ಕುರುಡರೂ ಆದ ನನ್ನ ತಂದೆ ತಾಯಿಗಳನ್ನು ತೀರ್ಥಯೂತ್ರೆಗೆಂದು ಇಲ್ಲಿಗೆ ಕರೆತಂದಿದ್ದೆ. ಅವರಿಗೆ ನೀರು ತರಲೆಂದು ನದಿಗೆ ಬಂದಿದ್ದಾಗ, ಹೀಗಾಯಿತು. ಇನ್ನು ಅವರಿಗೆ ಯೂರು ದಿಕ್ಕು? ಎಂದು ದುಃಖಿಸಿದನು. ಆಗ ದಶರಥನು ಋಷಿಕುಮಾರ, ಚಿಂತಿಸಬೇಡ, ನಾನು ನಿನ್ನ ತಂದೆ ತಾಯಿಯನ್ನು ನೋಡಿಕೊಳ್ಳುತ್ತೇನೆ ಎಂದು ವಚನವನ್ನಿತ್ತಾಗ, ಶ್ರವಣಕುಮಾರ ನಿಶ್ಚಿಂತೆಯಿಂದ ಪ್ರಾಣಬಿಟ್ಟನು.

ಶ್ರವಣಕುಮಾರನ ತಂದೆ ತಾಯಿಯರಿಗೆ ನೀರನ್ನು ತೆಗೆದುಕೊಂಡು ಹೊರಟ ದಶರಥನ ಹೆಜ್ಜೆಯ ಸಪ್ಪಳ ಕೇಳಿ ಅವರು ಗುರುತಿಸಿದ ಅವರು "ಮಗೂ ಶ್ರವಣ, ಯೂಕಿಷ್ಟು ತಡವಾಯಿತು? ಎಂದು ಕೇಳಿದರು. ಆಗ ದಶರಥನು ದುಃಖದಿಂದ, ಕ್ಷಮಿಸಿ, ನಾನು ನಿಮ್ಮ ಮಗ ಶ್ರವಣನಲ್ಲ, ದಶರಥ ಮಹಾರಾಜ ಎಂದನು. ಆಗ ತಮ್ಮ ಮಗ ಶ್ರವಣನ ನಿರೀಕ್ಷೆಯಲ್ಲಿದ್ದ ಅವರು ಗಾಬರಿಗೊಂಡು, ಯಾಕೆ, ಏನಾಯಿತು ನಮ್ಮ ಕುಮಾರನಿಗೆ, ಕ್ಷೇಮವಿದ್ದಾನೇನು? ಎಂದು ದಶರಥನನ್ನು ಪ್ರಶ್ನಿಸಿದರು. ಆಗ ಎಲ್ಲವನ್ನು ವಿವರಿಸಿದ ದಶರಥ ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಭಾವದಿಂದ ವೃದ್ಧದಂಪತಿಗಳ ಕ್ಷಮೆ ಯಾಚಿಸಿದನು.

ಆಗ ಪುತ್ರ ಶೋಕ ನಿರಂತರ ಎನ್ನುವ ಹಾಗೆ, ಶೋಕತಪ್ತರಾದ ಅವರು ನಿನಗೂ ಪುತ್ರ ಶೋಕದಿಂದಲೇ ಸಾವಾಗಲಿ ಎಂದು ದಶರಥನಿಗೆ ಶಾಪವನ್ನು ನೀಡಿದರು.

Share this Story:

Follow Webdunia kannada