ಉತ್ತರಾಯಣದ ಪುಣ್ಯಕಾಲ ಮಕರ ಸಂಕ್ರಾಂತಿ
, ಶನಿವಾರ, 14 ಜನವರಿ 2012 (11:04 IST)
ಇದು ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ. ಇದನ್ನು ಪೊಂಗಲ್ ಎಂದು ಕರೆಯಲಾಗುತ್ತದೆ. ಪೊಂಗಲ್ ಎಂದರೆ ಅಕ್ಕಿ, ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯಮಾಡಲಾಗುವುದು. ಕರ್ನಾಟಕದಲ್ಲಿ ಎಳ್ಳು, ಸಕ್ಕರೆ - ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ ಈ ಹಬ್ಬದ ಒಂದು ವಿಶೇಷ. ದನಕರುಗಳಿಗೆ ಮೈ ತೊಳೆದು - ಭೂತಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ - ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸುವುದು ಉಂಟು.ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ, ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯಾರಾಧನೆ. ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ ಸೂರ್ಯದೇವ ವಿಶ್ವದ ಆತ್ಮ; ಜಗತ್ತಿನ ಕಣ್ಣು; ಮಳೆ ಬೀಳಲು, ಬೆಳೆ-ಬೆಳೆಯಲು, ಇಳೆ ಬೆಳಗಲು ಸೂರ್ಯನೇ ಕಾರಣ ಆ ಸವಿತೃ ದೇವನ ದಿವ್ಯ ತೇಜಸ್ಸು ನಮಗೆ ಸಿದ್ದಿ ಬುದ್ದಿ ಸಮೃದ್ದಿಗಳನ್ನು ನೀಡಬಲ್ಲದು. ಉತ್ತರಾಯಣ ಪುಣ್ಯ ಕಾಲ : ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ (ಜನವರಿ 14 ಅಥವಾ 15 ರಂದು) ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.ಸೂರ್ಯನು ಇದೇ ಜನವರಿ 14 ರಂದು ರಾತ್ರಿ 12 ಗಂಟೆ 57 ನಿಮಿಷಕ್ಕೆ ನಿರಯಣ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ವೇಳೆಗೆ ರಾತ್ರಿಯಾಗಿದ್ದರಿಂದ ಜನವರಿ 15ರಂದು ಮಕರ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. 15ರಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನ, ಜನ್ಮ ಜನ್ಮದಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು - ಬೆಲ್ಲ ಹಂಚುವುದು.ಜನವರಿ 15 ರಂದು, ಎಳ್ಳು - ಬೆಲ್ಲವನ್ನು ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ, ಮಕರ ಸಂಕ್ರಾಂತಿಯ ಒಂದು ವಿಶೇಷ.ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಎಂದು ಹೆಸರು. ಈ ಸಂಕ್ರಾಂತಿಯ ಕಾಲ, ಪುಣ್ಯ ಕಾಲವಾಗಿರುತ್ತದೆ. ಮೇಷ ಸಂಕ್ರಾಂತಿ - ವಿಷುವತ್ ಪುಣ್ಯಕಾಲ, ವೃಷಭ ಸಂಕ್ರಾಂತಿ - ವಿಷ್ಣುಪದ ಪುಣ್ಯಕಾಲ, ಮಿಥುನ ಸಂಕ್ರಾಂತಿ - ಷಡಶೀತಿ ಪುಣ್ಯಕಾಲ, ಕಟಕ ಸಂಕ್ರಾಂತಿ - ದಕ್ಷಿಣಾಯನ ಪುಣ್ಯಕಾಲ, ಸಿಂಹ ಸಂಕ್ರಾಂತಿ ವಿಷ್ಣುಪದ ಪುಣ್ಯಕಾಲ, ಕನ್ಯಾ ಸಂಕ್ರಾಂತಿ - ಷಡಶೀತಿ ಪುಣ್ಯಕಾಲ, ತುಲಾ ಸಂಕ್ರಾಂತಿ - ವಿಷುವತ್ ಪುಣ್ಯಕಾಲ, ವೃಶ್ಚಿಕ ಸಂಕ್ರಾಂತಿ - ವಿಷ್ಣುಪದ ಪುಣ್ಯಕಾಲ, ಧನಸ್ಸು ಸಂಕ್ರಾಂತಿ - ಷಡಶೀತಿ ಪುಣ್ಯಕಾಲ, ಮಕರ ಸಂಕ್ರಾಂತಿ - ಉತ್ತರಾಯಣ ಪುಣ್ಯಕಾಲ, ಕುಂಭ ಸಂಕ್ರಾಂತಿ - ವಿಷ್ಣುಪದ ಪುಣ್ಯಕಾಲ, ಮೀನ ಸಂಕ್ರಾಂತಿ - ಷಡಶೀತಿ ಪುಣ್ಯಕಾಲವೆಂದು ಪ್ರಸಿದ್ದಿಯಾಗಿದೆ.ವಿಷ್ಣುಪದ ಪುಣ್ಯಕಾಲಕ್ಕಿಂತಲೂ, ಷಡಶೀತಿ ಪುಣ್ಯಕಾಲ ಶ್ರೇಷ್ಠವಾಗಿದೆ. ಷಡಶೀತಿ ಪುಣ್ಯ ಕಾಲಕ್ಕಿಂತಲೂ, ವಿಷ್ಣುವತ್ ಪುಣ್ಯಕಾಲ ಶ್ರೇಷ್ಠವಾಗಿದೆ. ವಿಷ್ಣುವತ್ ಪುಣ್ಯಕಾಲಕ್ಕಿಂತಲೂ ಆಯನ ಪುಣ್ಯ ಕಾಲ ಅತ್ಯಂತ ಶ್ರೇಷ್ಠವಾಗಿದೆ. ದಕ್ಷಿಣಾಯನ ಕಾಲಕ್ಕಿಂತಲೂ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.ಸಂಕ್ರಾಂತಿ ಪುಣ್ಯ ಕಾಲದಲ್ಲಿ, ನದಿ ಸ್ನಾನ, ದೇವತೆಗಳಿಗೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ಪ್ರಶಸ್ತವೆನಿಸಿದ್ದು, ವಿದ್ಯುಕ್ತವಾಗಿ ನಡೆಸಬೇಕಾದ ಕಾರ್ಯಗಳು.ಆಯನವೆಂದರೆ ಸೂರ್ಯನು ಚಲಿಸುವಮಾರ್ಗ, ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಈ ದಿನ ಶ್ರೀರಾಮ ರಾವಣನನ್ನು ಸಂಹರಿಸಿ ಸೀತೆಯನ್ನು ತಂದ ದಿನವೆಂದು ಹೇಳುತ್ತಾರೆ. ಅಲ್ಲದೆ ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಈ ದಿನ ತಮ್ಮ-ತಮ್ಮ ಮನೆಯಂಗಳಕ್ಕೆ ಬರುತ್ತಾರೆಂದು ಹೇಳಲಾಗುತ್ತದೆ. ಶಾಸ್ತ್ತ್ರ ದೃಷ್ಟಿಯಲ್ಲಿ ಸಂಕ್ರಾಂತಿ : ನಿರ್ಣಯಸಿಂಧುವಿನಲ್ಲಿ ಈ ಹಬ್ಬದ ವಿಚಾರವಾಗಿ ಹೀಗೆ ಹೇಳಿದೆ.ಶಿತಸ್ಯಾಂ ಕೃಷ್ಣತೈಲೈಃ ಸ್ನಾನ ಕಾರ್ಯಂ ಚೋದ್ವರ್ತನಂ ಶುಭೈಃತಿಲಾ ದೇಯಾಶ್ಚ ವಿಪ್ರೇಭ್ಯೌ ಸರ್ವದೇವೋತ್ತರಾಯಣೇತಿಲ ತೈಲೇನ ದೀಪಾಶ್ಚ ದೇಯಾಃ ದೇವಗೃಹೇ ಶುಭಾಃಷಿಅಂದರೆ ಸಂಕ್ರಾಂತಿಯಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಬ್ರಾಹ್ಮಣರಿಗೆ ಎಳ್ಳು ದಾನ ಕೊಡಬೇಕು. ದೇವಾಲಯಗಳಲ್ಲಿ ಎಳ್ಳೆಣ್ಣೆಯ ದೀಪ ಬೆಳಗಬೇಕು. ಧರ್ಮ ಸಿಂಧುವಿನಲ್ಲಿ ಹೀಗೆ ಹೇಳಿದೆ.ಶಿಸಂಕ್ರಾಂತೌ ಯಾನಿ ದತ್ತಾನಿ ಹವ್ಯ - ಕವ್ಯಾನಿ ದಾತೃಭಿಃತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ |ತಿಲಾ ದೇಯಾಶ್ಚ ಹೋತವ್ಯಾ ಭಕ್ಷಾಶ್ಚೈವೋತ್ತರಾಯಣೇಷಿಅಂದರೆ ಉತ್ತರಾಯಣದ ಪುಣ್ಯಕಾಲದಂದು ನಾವು ಮಾಡಿದ ದಾನ ಧರ್ಮಗಳು ಜನ್ಮ ಜನ್ಮದಲ್ಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಈ ಶುಭದಿನ ತಿಲದಾನ, ತಿಲಹೋಮ, ತಿಲಭಕ್ಷಣಗಳಿಗೆ ವಿಶೇಷ ಪ್ರಾಶಸ್ತ್ಯವಿದೆ.ಹೀಗೆ ಈ ಹಬ್ಬಕ್ಕೂ ಎಳ್ಳಿಗೂ ನಿಕಟ ಸಂಬಂಧವಿದೆ. ಎಳ್ಳು-ಚಿಗಳಿ ಸಂಕ್ರಾಂತಿ ಎಳ್ಳು, ಎಳ್ಳು ಬೀಸಿ ಬೆಲ್ಲ ಹಾಕಿ ಮಾಡಿದ ಎಳ್ಳು ನೀರು ಅಪ್ಯಾಯಮಾನವಾಗಿರುತ್ತದೆ. ಶೀತ-ವಾತ ಜನ್ಯವಾದ ಜಡ್ಡು ಅಲಸ್ಯಗಳನ್ನು ದೂರ ಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವೆನೆ, ದಾನ-ಧರ್ಮ ಈ ಹಬ್ಬದ ವೈಶಿಷ್ಟ್ಯ. ಯುಗಾದಿಯಂದು ಬೇವು-ಬೆಲ್ಲ ಹಂಚುವಂತೆ, ಇಲ್ಲಿ ಎಳ್ಳು-ಬೆಲ್ಲ ಹಂಚುವುದು, ಮನಸ್ಸಿನ ಕಹಿ ಭಾವನೆ ಮರೆತು ಸಿಹಿ ಭಾವ ತುಂಬಿ ಅಮೃತ ಪುತ್ರರಾಗೋಣ ಎಂಬುದರ ದ್ಯೌತಕವಾಗಿದೆ. ಗಣೇಶಚತುರ್ಥಿ, ದೀಪಾವಳಿಗಳಂದು ಕಂಡುಬರುವ ಬಾಹ್ಯಾಡಂಬರ, ಬಾಣ ಬಿರುಸುಗಳೇ ಮುಂತಾದ ವ್ಯರ್ಥವಾದ ಖರ್ಚು-ವೆಚ್ಚಗಳು ಇಲ್ಲದಿರುವುದು ಈ ಹಬ್ಬದ ಅಗ್ಗಳಿಕೆಯೆನ್ನಬಹುದು.ಎಳ್ಳು - ಬೆಲ್ಲ, ಶೀತ - ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ. ಶಿಎಳ್ಳು - ಬೆಲ್ಲ ತಿಂದು ಒಳ್ಳೆ ಮಾತಾಡುಷಿ ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ.ಆರ್. ಸೀತಾರಾಮಯ್ಯ,ಜ್ಯೋತಿಷಿ.'
ಕಮಲ' 5ನೇ ಕ್ರಾಸ್, ಬಸವನಗುಡಿ,ಶಿವಮೊಗ್ಗ.