Select Your Language

Notifications

webdunia
webdunia
webdunia
webdunia

ಸಂದ ವರುಷವಿಡೀ ಕಾಡಿದ ಅಣುಬಂಧ

ಯುಪಿಎ ನಿದ್ದೆಗೆಡಿಸಿದ ಎಡಪಕ್ಷಗಳು, ನಂದಿಗ್ರಾಮ, ಮೋದಿ ಮತ್ತು ನಿತಾರಿ

ಸಂದ ವರುಷವಿಡೀ ಕಾಡಿದ ಅಣುಬಂಧ
ಚಂದ್ರಾವತಿ ಬಡ್ಡಡ್ಕ
WD
ಇತಿಹಾಸದ ಪಟ್ಟಿಗೆ 2007 ಸೇರುತ್ತಿದೆ. ಎಲ್ಲ ವರ್ಷಗಳಂತೆಯೆ ಈ ವರ್ಷವೂ ಹರ್ಷ-ದುಃಖ, ಏರು-ಪೇರುಗಳನ್ನು ತನ್ನ ಉದರದಲ್ಲಿ ತುಂಬಿಸಿಕೊಳ್ಳುತ್ತಾ ಮುನ್ನಡೆದಿದೆ. ಕಾಲದ ತೆಕ್ಕೆಗೆ ಜಾರುತ್ತಿರುವ 2007ರ ಕೊನೆಯ ಮೆಟ್ಟಿಲಲ್ಲಿ ನಿಂತು ಹಿಂತಿರುಗಿ ನೋಡಿದರೆ ಸುದ್ದಿಗಳ ಬುತ್ತಿಯೊಳಗೆ ಹಲವಾರು 'ಐಟಂ'ಗಳಿವೆ. ರಾಜಕೀಯ, ಸಾಮಾಜಿಕ, ವೈಜ್ಞಾನಿಕ ಹೀಗೆ ಎಲ್ಲ ರಂಗಗಳಲ್ಲೂ ಏಳು ಬೀಳುಗಳಿವೆ.

ಈ ವರ್ಷ ದೇಶದ ಘಟನೆಗಳ ಕುರಿತು ಅವಲೋಕಿಸಿದಾಗ ತಟ್ಟೆಂದು ಗೋಚರವಾಗುವುದು, ಉತ್ತರ ಪ್ರದೇಶದ ನಿತಾರಿ ಸರಣಿ ಕೊಲೆ ಪ್ರಕರಣ, ಪಶ್ಚಿಮ ಬಂಗಾಳದ ನಂದಿಗ್ರಾಮ ಹಿಂಸಾಚಾರ, ಭಾರತ-ಅಮೆರಿಕ ಅಣುಒಪ್ಪಂದ ಕುರಿತು ರಾಜಕೀಯ ಪಕ್ಷಗಳ ಹಗ್ಗಜಗ್ಗಾಟ, ರಾಷ್ಟ್ರ ಕಂಡ ಪ್ರಥಮ ಮಹಿಳಾ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಕಂಡ ಪ್ರಥಮ ದಲಿತ ಮುಖ್ಯ ನ್ಯಾಯಾಧೀಶ, ಉಪಗ್ರಹ ತಂತ್ರಜ್ಞಾನದಲ್ಲಿ ಬರೆದ ಹೊಸ ಇತಿಹಾಸ, ಕ್ಷಿಪಣಿ ತಂತ್ರಜ್ಞಾನದ ಉನ್ನತಿ, ಪಂಜಾಬ್, ಗುಜರಾತ್, ಉತ್ತರ ಖಂಡ, ಹಿಮಾಚಲ ಪ್ರದೇಶಗಳ ಚುನಾವಣೆ, ರಾಜ್ಯ ಹಿಂದೆಂದೂ ಕಾಣದ ಕರ್ನಾಟಕದ ಕೆಟ್ಟಾ-ಕೊಳಕಾ 'ರಾಡಿಕೀಯ'....... ಹೀಗೆ ಸಾಗುತ್ತದೆ.

ನಿತಾರಿ ಸರಣಿ ಕೊಲೆ
ಕಳೆದ 2006ರ ಕೊನೆಯಲ್ಲಿ ಬಯಲಿಗೆ ಬಂದ ಉತ್ತರ ಪ್ರದೇಶದ ನೋಯ್ಡಾದ ನಿತಾರಿ ಎಂಬಲ್ಲಿನ ಸರಣಿ ಕೊಲೆ ಪ್ರಕರಣ ರಾಷ್ಟ್ರವನ್ನೇ ತಲ್ಲಣಗೊಳಿಸಿತ್ತು. ಚರಂಡಿಯಲ್ಲಿ ಮಾನವಮೂಳೆ ಪತ್ತೆಯಾದಾಗ ಈ ಅಮಾನುಷ ಪ್ರಕರಣ ಹೊರಜಗತ್ತಿಗೆ ಗೊತ್ತಾಗಿತ್ತು. ನಿತಾರಿಯ ನಿವಾಸಿ ಮೋನಿಂಧರ್ ಸಿಂಗ್ ಪಂಧೇರ್ ಹಾಗೂ ಆತನ ಕೆಲಸದಾಳು ಸುರೀಂದರ್ ಕೋಲಿ ಸುಮಾರು 20ಕ್ಕಿಂತಲೂ ಅಧಿಕ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಪಂಧೇರ್‌ನ ಒಂಟಿ ಬಂಗಲೆಯ ಹಿಂದಿನ ಚರಂಡಿಯಲ್ಲಿ ಗೋಣಿಚೀಲದಲ್ಲಿ ಕಟ್ಟಿ ಎಸೆದ ಮೂಳೆಗಳು ಪತ್ತೆಯಾಗಿದ್ದವು. ಈ ಪ್ರದೇಶದ ಮಕ್ಕಳು ಕಾಣೆಯಾಗುತ್ತಿದ್ದ ಬಗ್ಗೆ ದೂರುಗಳು ದಾಖಲಾಗುತ್ತಿದ್ದರೂ, ಅವರು ಎಲ್ಲಿ ಹೋಗುತ್ತಿದ್ದರೆಂಬ ಅಂಶ ಪತ್ತೆ ಆಗಿರಲಿಲ್ಲ. ಬಾಲಕಿಯರನ್ನು ಮತ್ತು ಮಹಿಳೆಯರನ್ನು ಆಮಿಷ ಒಡ್ಡಿ, ಕೋಲಿ ಬಂಗಲೆಗೆ ಕರೆದೊಯ್ಯುತ್ತಿದ್ದ. ಈ ಧೂರ್ತರ ಕುಕೃತ್ಯಕ್ಕೆ ಬಲಿಯಾದ ಹೆಚ್ಚಿನ ಬಾಲಕಿಯರು ಮತ್ತು ಮಹಿಳೆಯರು ಕೊಳಗೇರಿ ನಿವಾಸಿಗಳು.

ಈ ಪ್ರಕರಣದ ಕುರಿತಂತೆ ರಂಗುರಂಗಿನ ವಿಷಯಗಳು ಬಿತ್ತರಗೊಂಡಿದ್ದರೂ ನಿಖರವಾದ ವಿಚಾರಗಳು ಇನ್ನೂ ಗೊತ್ತಾಗಿಲ್ಲ. ಉದ್ಯಮಿ ಪಂಧೇರ್ ಮತ್ತು ಆತನ ಆಳು ಕೋಲಿ ಮಹಿಳೆಯರನ್ನು ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದರು, ಅಂಗಾಂಗ ಮಾರಾಟಕ್ಕಿಳಿದಿದ್ದರು, ದೊಡ್ಡದೊಡ್ಡ ವ್ಯಕ್ತಿಗಳ ಮೋಜಿಗೆ ಮಹಿಳೆಯರನ್ನು ಒಪ್ಪಿಸುತ್ತಿದ್ದರು, ಕೋಲಿ ಒಬ್ಬ ನರಮಾಂಸ ಭಕ್ಷಕ, ವಿಕೃತ ಕಾಮಿ - ಎಂಬೆಲ್ಲ ಸುದ್ದಿಗಳು ಬಿತ್ತರವಾಗಿದ್ದವು.

ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಬಿಐ ಸಲ್ಲಿಸಿರುವ ಎರಡು ಕಂತಿನ ದೋಷಾರೋಪಣೆ ಪಟ್ಟಿಯಲ್ಲೂ ಪಂಧೇರ್ ಮೇಲೆ ಯಾವುದೇ ದೋಷ ಹೊರಿಸದಿರುವುದು ವ್ಯವಸ್ಥೆಯ ವ್ಯಂಗ್ಯ. ಈ ಮಧ್ಯೆ, ಆತ ಬಣ್ಣದ ಬದುಕಿಗೆ ಅಡಿ ಇಡಲು ಸಜ್ಜಾಗುತ್ತಿದ್ದಾನೆ ಎಂದು ವರದಿಯಾಗಿದೆ. ಪಂಧೇರ್ ವಿರುದ್ಧ ದೂರು ನೀಡಿದ್ದ, ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ, ಕೊಲೆಯಾದ ಹುಡುಗಿ ಪಾಯಲ್ ಎಂಬಾಕೆಯ ತಂದೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಹಿಂಜರಿದು ತಿರುಗಿ ಬಿದ್ದಿದ್ದಾನೆ.

ಇಷ್ಟರಲ್ಲಿ ಸಮಾಧಾನಕರ ವಿಚಾರವೆಂದರೆ, ಪಂಧೇರ್ ಮೇಲೆ ಯಾವುದೇ ಆರೋಪ ಹೊರಿಸದಿರಲು ಕಾರಣವೇನು ಎಂಬುದಾಗಿ ಸುಪ್ರೀಂ ಕೋರ್ಟ್ ಸಿಬಿಐಯನ್ನು ಪ್ರಶ್ನಿಸಿದೆ.

ನಂದಿಗ್ರಾಮ ಹಿಂಸಾಚಾರ
ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಸರ್ಕಾರದ ವಿಶೇಷ ಆರ್ಥಿಕ ವಲಯಕ್ಕೆ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾದಾಗ ರೈತರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿದ್ದು, ಪ್ರತಿಭಟನೆ ವಿಕೋಪಕ್ಕೆ ಹೋಗಿತ್ತು. ತೃಣಮೂಲ ಕಾಂಗ್ರೆಸ್ ಪಕ್ಷದ ಬೆಂಬಲದ ಭೂಮಿ ಉಚ್ಚಡ್ ಪ್ರತಿರೋಧ್ ಸಮಿತಿ ವತಿಯಿಂದ ನಡೆದ ಪ್ರತಿಭಟನೆ ಆಡಳಿತಾರೂಢ ಸಿಪಿಎಂನೊಂದಿಗೆ ತಿಕ್ಕಾಟ ಉಂಟು ಮಾಡಿದ್ದು, ಮಾರ್ಚ್ ತಿಂಗಳಲ್ಲಿ ನಡೆದ ಗೋಲಿಬಾರ್‌ನಲ್ಲಿ 14 ಮಂದಿ ಹತರಾಗಿದ್ದರು.

ವಿಶೇಷ ಆರ್ಥಿಕ ವಲಯಕ್ಕೆ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ತೃಣಮೂಲ ಕಾಂಗ್ರೆಸ್ಸಿನ ನಾಯಕಿ ಮಮತಾ ಬ್ಯಾನರ್ಜಿ 25 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಡಳಿತಾರೂಢ ಸಿಪಿಎಂ ಕಾರ್ಯಕರ್ತರು ವಿವಾದಿತ ಭೂಮಿಯಲ್ಲಿ ಸಾಕಷ್ಟು ಹಿಂಸಾಚಾರ ನಡೆಸಿದ್ದು, ಗ್ರಾಮಸ್ಥರಿಗೆ ಇನ್ನಿಲ್ಲದ ಹಿಂಸೆ ನೀಡಿ ಮನಬಂದಂತೆ ವರ್ತಿಸಿರುವುದು ರಾಷ್ಟ್ರವ್ಯಾಪಿ ಟೀಕೆಗೆ ಗುರಿಯಾಗಿದೆ.

ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಸರ್ಕಾರ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸಿದೆ. ಈ ವಿಚಾರ ಸಂಸತ್ತಿನ ಹಲವು ಗಂಟೆಗಳನ್ನು ತಿಂದು ಹಾಕಿತ್ತು. ಎಲ್ಲವೂ ಆದ ಬಳಿಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನಂದಿಗ್ರಾಮ ವಿಚಾರದಲ್ಲಿ ಸರ್ಕಾರದ ವೈಫಲ್ಯದ ಕುರಿತು ತಪ್ಪೊಪ್ಪಿಕೊಂಡಿದ್ದರು.

ಸಂಬಂಧ ಕಡಿದ ಅಣುಬಂಧ
ಈ ವರ್ಷ ರಾಷ್ಟ್ರದ ಗಮನ ಸೆಳೆದ ಇನ್ನೊಂದು ಪ್ರಮುಖ ವಿಚಾರವೆಂದರೆ, ಉದ್ದೇಶಿತ ಭಾರತ-ಅಮೆರಿಕ ಅಣುಒಪ್ಪಂದ. ಈ ಒಪ್ಪಂದದ ಅಂಶಗಳು ಪಾರದರ್ಶಕವಾಗಿಲ್ಲ, ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆಯುಂಟುಮಾಡುವಂತಹವು ಮತ್ತು ಇದಕ್ಕೆ ಸಹಿಮಾಡಿದಲ್ಲಿ ನಮ್ಮ ಅಣುನೀತಿಯ ಜುಟ್ಟನ್ನು ಅಮೆರಿಕದ ವಶಕ್ಕೆ ಒಪ್ಪಿಸಿದಂತಾಗುತ್ತದೆಂದು ಕೇಂದ್ರದ ಆಡಳಿತಾರೂಢ ಯುಪಿಎ ಮೈತ್ರಿಕೂಟದ ಮಿತ್ರಪಕ್ಷ, ಬಾಹ್ಯ ಬೆಂಬಲ ನೀಡುತ್ತಿರುವ ಎಡಪಕ್ಷಗಳು ಕೇಂದ್ರದ ಕ್ರಮಕ್ಕೆ ತೀವ್ರ ದಾಳಿಮಾಡಿವೆ. ಕನಿಷ್ಠ ಹತ್ತು ಬಾರಿಯಾದರೂ, ಬೆಂಬಲ ವಾಪಾಸು ಪಡೆಯುವ ಬೆದರಿಕೆ ಹಾಕಿದ್ದವು.

ಈ ಅಣುಒಪ್ಪಂದವು ವಿರೋಧ ಪಕ್ಷಗಳಿಂದಲೂ ಟೀಕೆಗೆ ಒಳಗಾಗಿದ್ದು, ಮನಮೋಹನ್ ಸಿಂಗ್ ಸರ್ಕಾರ, ಹಾಗೂ ವೈಯಕ್ತಿಕವಾಗಿ ಮನಮೋಹನ್ ಸಿಂಗ್ ಅವರೂ ನಿರಾಸೆಗೊಂಡಿದ್ದರು. ಅಣು ಒಪ್ಪಂದದ ಕುರಿತಂತೆ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯೊಂದಿಗೆ ಮಾತುಕತೆಯೇ ನಡೆಸಬಾರದು ಎಂಬ ವಿರೋಧ ವ್ಯಕ್ತಪಡಿಸಿದ್ದ ಎಡಪಕ್ಷಗಳು, ಸಂಸತ್‌ನ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಪಟ್ಟು ಸಡಿಲಿಸಿ ಕೊಂಚ ಮೃದು ಧೋರಣೆ ವ್ಯಕ್ತಪಡಿಸಿದ್ದವು.

ನಂದಿಗ್ರಾಮ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಚಾ..ಚೂ ಎಂದಿರಲಿಲ್ಲ. ಅಧಿವೇಶನ ಮುಗಿಯುತ್ತಲೇ ಮತ್ತೆ ಕಟುನಿಲುವು ತಳೆದ ಕಮ್ಯೂನಿಸ್ಟ್ ಪಕ್ಷ, ಒಂದು ಹಂತದಲ್ಲಿ ಮಧ್ಯಂತರ ಚುನಾವಣೆಗೆ ಸಿದ್ಧ ಎಂದು ಹೇಳಿತು. ಬಳಿಕ ಹಾಗೆ ಹೇಳಿಯೇ ಇಲ್ಲ, ಮಾಧ್ಯಮಗಳು ತನ್ನ ಹೇಳಿಕೆಯನ್ನು ತಿರುಚಿವೆ ಎಂದು ತಿಪ್ಪೆ ಸಾರಿತ್ತು. ಅದೇನಿದ್ದರೂ, ಈ ಅಣುಬಂಧ ಯಾವ ಕ್ಷಣದಲ್ಲೂ ರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆಯನ್ನು ತಂದಿಕ್ಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಹಿಂದುತ್ವ ಮೀರಿಸಿದ ಮೋದಿತ್ವ
webdunia
PTI
ಈ ವರ್ಷದಲ್ಲಿ ರಾಷ್ಟ್ರದ ಹಲವು ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆಗಳು ನಡೆದಿದ್ದು, ಉತ್ತರಖಂಡ, ಪಂಜಾಬ್, ಗುಜರಾತ್‌ಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಣಿಪುರದಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ದೊರೆಯದೆ, ಕಾಂಗ್ರೆಸ್ ನೇತೃತ್ವದ ಚೌಚೌ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಈ ಎಲ್ಲ ವಿಧಾನ ಸಭಾ ಚುನಾವಣೆಗಳಲ್ಲಿ ರಾಷ್ಟ್ರದ, ಹಾಗೂ ಅಂತಾರಾಷ್ಟ್ರೀಯ ಗಮನ ಸೆಳೆದದ್ದು ಗುಜರಾತ್ ಚುನಾವಣೆ. ಮುಸ್ಲಿಂ ವಿರೋಧಿ, ಕೋಮುವಾದಿ, ನಿರಂಕುಶ ಆಡಳಿತಗಾರ ಎಂಬೆಲ್ಲ ಟೀಕೆಗಳು ಏನೇ ಇರಲಿ, ಮೋದಿ ಮಾತ್ರ ಯಾವುದೇ ಎಗ್ಗಿಲ್ಲದೆ, ಹ್ಯಾಟ್ರಿಕ್ ಸಾಧನೆ ಮಾಡಿದ್ದು, ತೃತೀಯ ಬಾರಿಗೆ ಅಧಿಕಾರಕ್ಕೇರಿದ್ದಾರೆ.

ಬಿಜೆಪಿಯನ್ನೂ ಮೀರಿ ಬೆಳೆದಿರುವ ಮೋದಿಯ ನಿರ್ಭಿಡೆ, ಕೇಂದ್ರೀಯ ಬಿಜೆಪಿ ನಾಯಕರಲ್ಲಿ ಪಶ್ಚಾತ್ ಕಂಪನ ಉಂಟುಮಾಡಿದೆ. ಮೋದಿ ಗೆಲ್ಲುತ್ತಲೇ ಉಳಿದ ನಾಯಕರು ಮೋದಿಯವರನ್ನು ಹಾಡಿಹೊಗಳಿ ಅಟ್ಟದಿಂದಲೂ ಮೇಲೇರಿಸುತ್ತಿದ್ದರೆ, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ "ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ" ಎಂಬ ಹೇಳಿಕೆ ನೀಡಿದರು.

ಅಫ್ಜಲ್ ಗುರು ಮರಣದಂಡನೆ
ಆರು ವರ್ಷಗಳ ಹಿಂದೆ ಸಂಸತ್‌ಭವನದ ಮೇಲೆ ದಾಳಿ ನಡೆಸಿದ ಪ್ರಕರಣದ ಪ್ರಮುಖ ರೂವಾರಿ ಅಫ್ಜಲ್ ಗುರು ಮರಣ ದಂಡನೆ ವಿಚಾರವು ಅಂತಿಮ ನಿರ್ಧಾರ ಕಾಣದೆ, ಪರ - ವಿರೋಧ, ಕಾನೂನು ಜಿಜ್ಞಾಸೆಯೊಂದಿಗೆ ಧಾರಾವಾಹಿಯಾಗಿ ಮುಂದುವರಿದೆ.

ರಾಷ್ಟ್ರದ ಪವಿತ್ರ ದೇಗುಲದಂತಿರುವ ಸಂಸತ್ತಿನ ಮೇಲೆ ದಾಳಿ ನಡೆಸಿದ ವ್ಯಕ್ತಿಗೆ ಪರಮೋಚ್ಛ ಶಿಕ್ಷೆ ಜಾರಿಯಾಗಬೇಕು ಎಂದು ಒಂದು ವರ್ಗ ವಾದಿಸುತ್ತಿದ್ದರೆ, ಮಾನವಹಕ್ಕುಗಳನ್ನು ಗೌರವಿಸುವ ವರ್ಗ, ಆತನಿಗೆ ಕ್ಷಮಾದಾನ ನೀಡಬೇಕು ಎಂದು ವಾದಿಸುತ್ತಿದೆ. ತನಗೆ ವಿಧಿಸಿರುವ ಮರಣದಂಡನೆಯ ವಿರುದ್ಧ ಕ್ಷಮಾದಾನ ಕೋರಿ ಅಫ್ಜಲ್ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಿದ್ದಾನೆ. ಕಾನೂನು ಸಮಾಲೋಚನೆಯ ಕಾರಣದಿಂದ ಆತನ ಮರಣ ದಂಡನೆ ವಿಚಾರ ಇನ್ನೂ ನಿರ್ಧಾರವಾಗದೆ ಈ ವರ್ಷದಲ್ಲೂ ಧಾರಾವಾಹಿಯಂತೆ ಸಶೇಷವಾಗಿದೆ.

ಸಂಜಯ್ ದತ್‌ಗೆ ಶಿಕ್ಷೆ
webdunia
PTI
ಅಪರಾಧ ಪ್ರಕರಣಗಳಲ್ಲಿ ಸಿಲುಕಿರುವ ಕೆಲವು ಪ್ರಮುಖ ವ್ಯಕ್ತಿಗಳಿಗೆ ಈ ವರ್ಷದಲ್ಲಿ ಶಿಕ್ಷೆಯಾಗಿದೆ. 1993ರ ಮುಂಬಯಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಕಾಯ್ದೆಯಡಿ ಬಾಲಿವುಡ್ ನಟ ಸಂಜಯ್‌ದತ್ ವಿರುದ್ಧದ ಆರೋಪ ಸಾಬೀತಾಗಿದ್ದು, ಅವರಿಗೆ ಮುಂಬಯಿ ಟಾಡಾ ನ್ಯಾಯಾಲಯ ಆರು ವರ್ಷಗಳ ಕಠಿಣ ಸಜೆ ವಿಧಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಖಾಯಂ ಜಾಮೀನು ಪಡೆಯುವಲ್ಲಿ ಸಂಜುಬಾಬು ಸಫಲರಾಗಿದ್ದಾರೆ.

ತನ್ನ ಪತ್ನಿ ನೈನಾಸಹಾನಿಯನ್ನು ಕೊಂದು ತಂದೂರಿ ಒಲೆಯಲ್ಲಿ ಸುಟ್ಟ 1995ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಯುವಕಾಂಗ್ರೆಸ್ ನಾಯಕ ಸುಶೀಲ್ ಶರ್ಮಾಗೆ ವಿಧಿಸಿದ್ದ ಮರಣದಂಡನೆಯನ್ನು ದೆಹಲಿ ಹೈಕೋರ್ಟ್ ಖಾಯಂ ಮಾಡಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ಮಾಜಿ ಸಚಿವ ಪ್ರಮೋದ್ ಮಹಾಜನ್‌ರನ್ನು ಹತ್ಯೆ ಮಾಡಿದ್ದ ಅವರ ಸಹೋದರ ಪ್ರವೀಣ್ ಮಹಾಜನ್‌ ವಿಚಾರಣೆ ಪೂರ್ಣಗೊಂಡಿದ್ದು, ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಮಾಜಿ ಕ್ರಿಕೆಟಿಗ ,ಹಾಲಿ ರಾಜಕಾರಣಿ ನವಜೋತ್ ಸಿಂಗ್ ಸಿಧುಗೆ ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಯಾಗಿದ್ದರೂ, ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿರುವ ಅವರು ಮತ್ತೆ ಸಂಸದರಾಗಿ ಆಯ್ಕೆಯಾಗಿದ್ದಾರೆ.

ತಮಿಳುನಾಡು ಧರ್ಮಪುರಿ ಬಸ್‌ಗೆ ಬೆಂಕಿ ಇಕ್ಕಿದ ಪ್ರಕರಣದ 3 ಅಪರಾಧಿಗಳಿಗೆ ಸೇಲಂ ನ್ಯಾಯಾಲಯ ಮರಣದಂಡನೆ ವಿಧಿಸಿದ್ದು, ಮದ್ರಾಸ್ ಹೈಕೋರ್ಟ್ ಈ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಮೈಲಿಗಲ್ಲಾದ ತೀರ್ಪು
ಸಂವಿಧಾನದ 9ನೇ ಪರಿಚ್ಛೇದದಲ್ಲಿ 1973ರ ಎಪ್ರಿಲ್ 24ರ ಬಳಿಕ ಸೇರಿಸಲಾದ ಕಾಯ್ದೆಗಳು ನ್ಯಾಯಾಂಗ ಪರಾಮರ್ಶೆ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ಜನವರಿ 11ರಂದು ನೀಡಿದೆ. ಕಾಮನ್ ಕಾಸ್ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವೈ.ಕೆ.ಸಬರ್‌ವಾಲ್ ನೇತೃತ್ವದ 9 ಮಂದಿ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಉಪಗ್ರಹ ತಂತ್ರಜ್ಞಾನದ ಸಾಧನೆ
ಈ ವರ್ಷದಲ್ಲಿ ಭಾರತವು ಮರುಬಳಕೆಯ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಹಾರಿಬಿಟ್ಟಿದ್ದು, ಅದನ್ನು ಕಕ್ಷೆಯಿಂದ ಭೂಮಿಗೆ ಮರಳಿ ಕರೆ ತರುವಲ್ಲಿ ಯಶಸ್ವಿಯಾಗಿದೆ. ಈ ತಂತ್ರಜ್ಞಾನದಲ್ಲಿ ಭಾರತವೀಗ ಅಮೆರಿಕ, ಚೀನ ಮತ್ತು ರಷ್ಯಾಗಳ ಸರಿಸಮವಾಗಿ ನಿಂತಿದೆ.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹಾರಿಬಿಡಲಾದ ಧ್ರುವಗಾಮಿ ಉಪಗ್ರಹವಾಹನ ಪಿಎಸ್ಎಲ್‌ವಿ-ಸಿ7, ನಾಲ್ಕು ಉಪಗ್ರಹಗಳನ್ನು ಏಕಕಾಲಕ್ಕೆ ಕಕ್ಷೆ ಸೇರಿಸಿತ್ತು. ಮರುಬಳಕೆ ಉಪಗ್ರಹ ಎಸ್ಆರ್ಇ-1 ಸೇರಿದಂತೆ ಎರಡು ದೇಶಿಯ ಉಪಗ್ರಹಗಳು ಮತ್ತು ಅರ್ಜೆಂಟಿನಾ ಮತ್ತು ಇಂಡೊನೇಶ್ಯಾದ ತಲಾ ಒಂದೊಂದು ಉಪಗ್ರಹಗಳನ್ನು ಪಿಎಸ್ಎಲ್‌ವಿ-ಸಿ7 ಹೊತ್ತೊಯ್ದಿತ್ತು.

ಪ್ರಥಮ ಮಹಿಳಾ ರಾಷ್ಟ್ರಪತಿ 'ಪ್ರತಿಭೆ'
ಭಾರತ ಸ್ವತಂತ್ರವಾಗಿ 60 ವರ್ಷದ ಬಳಿಕ ವಜ್ರಮಹೋತ್ಸವದ ವೇಳೆ ರಾಷ್ಟ್ರ ಪ್ರಥಮವಾಗಿ ಮಹಿಳಾ ರಾಷ್ಟ್ರಪತಿಯನ್ನು ಕಂಡಿತು. ಪ್ರಥಮ ಮಹಿಳಾ ರಾಜ್ಯಪಾಲರಾದ ಕೀರ್ತಿಯನ್ನು ಮಡಿಲಲ್ಲಿರಿಸಿಕೊಂಡಿರುವ ಪ್ರತಿಭಾ ಪಾಟೀಲ್, ಮಹಾರಾಷ್ಟ್ರದ ಜಲಗಾಂವ್‌ನವರು. ಜುಲೈ 25ರಂದು ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾರ್ಪೊರೆಟ್ ವಲಯದ ಇಂದ್ರಾ ನೂಯಿ ಅಂತಾರಾಷ್ಟ್ರೀಯ ಪತ್ರಿಕೆಗಳಾದ ಫೋರ್ಬ್ಸ್ ಮತ್ತು ಟೈಮ್ಸ್ ನಿಯತಕಾಲಿಕೆಗಳು ಪಟ್ಟಿ ಮಾಡಿದ ಪ್ರಭಾವಿ ಮಹಿಳೆಯರ ಸಾಲಿನಲ್ಲಿ ಕಂಡುಬಂದರು.

ಪ್ರಥಮ ದಲಿತ ಮುಖ್ಯನ್ಯಾಯಾಧೀಶ
ಇದೇ ವರ್ಷದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಉನ್ನತ ಸ್ಥಾನಕ್ಕೆ ದಲಿತ ವರ್ಗದ ನ್ಯಾಯಾಧೀಶರೊಬ್ಬರ ನೇಮಕವಾಯಿತು. ಕೇರಳದ ತಲಯೋಲಪರಂಬು ಎಂಬಲ್ಲಿನ ಕೊನಕುಪ್ಪಕಟ್ಟಿಲ್ ಗೋಪಿನಾಥನ್ ಬಾಲಕೃಷ್ಣನ್ ರಾಷ್ಟ್ರದ ನ್ಯಾಯಾಂಗದಲ್ಲಿ ಈ ವರ್ಷದ ಜನವರಿ 14ರಂದು ಹೊಸ ಇತಿಹಾಸ ಬರೆದರು. ಇವರು ಒಟ್ಟು ಮೂರು ವರ್ಷ ನಾಲ್ಕು ತಿಂಗಳು ಅಧಿಕಾರಾವಧಿಯಲ್ಲಿ ಇರುತ್ತಾರೆ.

ಐಶ್ವರ್ಯಾ ವಿವಾಹ
ಈ ವರ್ಷದ ಭಾರೀ ವಿವಾಹ ಅಭೈಶ್ ವಿವಾಹ. ಬಾಲಿವುಡ್ ಮಿಂಚುಳ್ಳಿಗಳಾದ ಐಶ್ವರ್ಯಾ ರೈಮತ್ತು ಅಭಿಶೇಕ್ ಬಚ್ಚನ್ ಅವರ ವಿವಾಹ ಏಪ್ರಿಲ್ ತಿಂಗಳಲ್ಲಿ ಮುಂಬೈಯಲ್ಲಿ ಅಮಿತಾಭ್ ಬಚ್ಚನ್ ನಿವಾಸದಲ್ಲಿ ಅದ್ದೂರಿಯಾಗಿ ನಡೆಯಿತು. ಅಮಿತಾಭ್ ಬಚ್ಚನ್ ಅವರ ತಾಯಿಯವರ ಅನಾರೋಗ್ಯದ ನಿಮಿತ್ತ ಆಡಂಬರ ಕಡಿಮೆ ಎನ್ನಲಾಗಿದ್ದರೂ, ವಿವಾಹ ಅತ್ಯಂತ ಖಾಸಗಿಯಾಗಿ ಆದರೆ, ಅದ್ದೂರಿಯಾಗೇ ನಡೆಯಿತು.

ಈ ವಿವಾಹದಲ್ಲಿ ಪಾಲ್ಗೊಳ್ಳಲು ಮಾಧ್ಯಮದವರಾಗಲಿ ಇತರರಿಗಾಗಲೀ ಅವಕಾಶ ಇರಲಿಲ್ಲ. ಮದುವೆಯ ಕುರಿತ ದೊಡ್ಡ ಸಂಖ್ಯೆಯ ಕುತೂಹಲಿಗಳು ಬಚ್ಚನ್ ಬಂಗ್ಲೆಯ ಹೊರಗಡೆ ಜಮಾಯಿಸಿದ್ದು ಎಲ್ಲಿ ಯಾವ ದೃಶ್ಯ ಕಾಣುತ್ತದೆ, ಯಾವ್ಯಾವ ಸೆಲೆಬ್ರಿಟಿಗಳು ಬಂದರು, ಹೋದರು ಎಂಬುದನ್ನು ಕತ್ತುದ್ದ ಮಾಡಿ ಇಣುಕಿದ್ದೇ ಇಣುಕಿದ್ದು. ಮೊಮ್ಮಗನ ಮದುವೆ ಕಾದಿದ್ದಂತೆ ಅಮಿತಾಬ್ ಅವರ ತಾಯಿ ತೇಜಿ ಬಚ್ಚನ್, ಡಿಸೆಂಬರ್ 21ರಂದು ಇಹಲೋಕ ತ್ಯಜಿಸಿದರು.

ಶಿಲ್ಪಾ ಶೆಟ್ಟಿ ಬಿಗ್ ಶೋ
ಅತ್ತ ಐಶ್ವರ್ಯಾ ರೈ ಮದುವೆಯಾಗಿ ಸುದ್ದಿಮಾಡಿದಲ್ಲಿ, ದಕ್ಷಿಣ ಕನ್ನಡದ ಇನ್ನೊಬ್ಬ ಬಂಟರ ಹುಡುಗಿ ಶಿಲ್ಪಾಶೆಟ್ಟಿ ಬೇರೆ ಕಾರಣಕ್ಕೆ ಸುದ್ದಿಗೆ ಗುದ್ದು ನೀಡಿದ್ದರು.
ತನ್ನ ನೀಳಕಾಯದ ಥಳುಕಿನಿಂದಾಗಿ 'ಕಾಣೆ ಮೀನು' ಎಂದು ಕರೆಸಿಕೊಂಡಿರುವ ಶಿಲ್ಪಾ, ಬ್ರಿಟನ್ನಿನ ಚಾನೆಲ್‌ 4 ವಾಹಿನಿಯ ಸೆಲೆಬ್ರಿಟಿ ಬಿಗ್ ಬ್ರದರ್- ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹ ಸ್ಪರ್ಧಿಗಳಿಂದ ಜನಾಂಗೀಯ ನಿಂದನೆಗೊಳಪಟ್ಟದ್ದು ಜಾಗತಿಕ ಇಶ್ಯೂ ಆಗಿತ್ತು. ಸಹಸ್ಪರ್ಧಿ ಜೇಡ್ ಗೂಡಿ ಈಕೆಯನ್ನು 'ಕರಿಯಳು, ನಾಯಿ' ಎಂದೆಲ್ಲ ಜರೆದು ಶಿಲ್ಪಾ ಕಣ್ಣೀರಿಳಿಸುವಂತೆ ಮಾಡಿದ್ದರೆ, ಶಿಲ್ಪಾ ಪರನಿಂತ ಬೆಂಬಲಿಗರು ಗೂಡಿಯ ನೀರಿಳಿಸಿದ್ದು, ಆಕೆ ಕಾರ್ಯಕ್ರಮದಿಂದಲೇ ಔಟ್ ಆಗಿದ್ದಳು.

ಈ ಕಾರ್ಯಕ್ರಮದಿಂದಾಗಿ ಸಾಕಷ್ಟು ದುಡ್ಡು ಹಾಗೂ ಪ್ರಚಾರ ಗಿಟ್ಟಿಸಿಕೊಂಡ ಶಿಲ್ಪಾ, ಅವಕಾಶವನ್ನು ಚೆನ್ನಾಗೆ ಬಳಸಿಕೊಂಡರು.
ಇದಲ್ಲದೆ ಏಡ್ಸ್ ವಿರುದ್ಧ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಹಾಲಿವುಡ್ ನಟ ರಿಚರ್ಡ್ ಗೇರ್, ಶಿಲ್ಪಾ ಶೆಟ್ಟಿ ಕೆನ್ನೆಗೆ ನೀಡಿದ ಮುತ್ತು ಸಾಕಷ್ಟು ಕಾವೇರಿಸಿತ್ತು. ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ವರ್ತನೆಯ ಆರೋಪ ಕಂಡ ಈ ಪ್ರಕರಣ ನ್ಯಾಯಾಲಯದ ಕಟಕಟೆ ಏರಿದೆ.

ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ
ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ವೃದ್ಧಿಯ ನಿಟ್ಟಿನಲ್ಲಿ ಆರಂಭಿಸಲಾಗಿದ್ದ ದೆಹಲಿ ಹಾಗೂ ಪಾಕಿಸ್ತಾನದ ಅಟಾರಿ ನಡುವಣ ಓಡಾಟದ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು. ಉಭಯ ದೇಶದ ಬಾಂಧವ್ಯಕ್ಕೇ ಕೊಳ್ಳಿ ಇಟ್ಟ ಈ ಬಾಂಬ್‌ ಸ್ಫೋಟದಿಂದಾಗಿ 67 ಮಂದಿ ಸಾವಿಗೀಡಾಗಿದ್ದರು.

ಈ ವರ್ಷದಲ್ಲೂ ಉಗ್ರರು ತಮ್ಮ ಅಟ್ಟಹಾಸವನ್ನು ಮುಂದುವರಿಸಿದ್ದಾರೆ. ಸಾರ್ವಜನಿಕ ಸ್ಥಳಗಳು, ರೈಲು ಹಾಗೂ ಧಾರ್ಮಿಕ ಸ್ಥಳಗಳನ್ನು ಇದುವರೆಗೆ ಗುರಿಯಾಗಿಸಿಕೊಂಡಿದ್ದ ದುರುಳರು, ಉಗ್ರರ ಪರ ವಕಾಲತ್ತಿಗೆ ಯಾವುದೇ ವಕೀಲರು ಮುಂದಾಗದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳನ್ನು ಗುರಿಯಾಗಿಸಿ, ಉತ್ತರ ಪ್ರದೇಶದ ಮೂರು ನಗರಗಳ ನ್ಯಾಯಾಲಯಗಳಲ್ಲಿ ವಿಧ್ವಂಸಕ ಕೃತ್ಯವನ್ನು ನಡೆಸಿದರು.

ಪ್ರಕೃತಿ ವಿಕೋಪ
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಪ್ರಕೃತಿ ಮಾತೆ ದೊಡ್ಡಮಟ್ಟದಲ್ಲಿ ಕೆರಳಿದ್ದಿಲ್ಲ. ಪ್ರವಾಹ, ಲಘುಕಂಪನಗಳಂತಹ ಸಣ್ಣಪುಟ್ಟ ಪ್ರಕರಣಗಳು ದಾಖಲಾಗಿದ್ದರೂ, ದೊಡ್ಡಮಟ್ಟದಲ್ಲಿ ಹೇಳಿಕೊಳ್ಳುವಂತಹ ವಿಕೋಪಗಳು ನಡೆದಿಲ್ಲ ಎಂದೇ ಹೇಳಬಹುದು. ಚಂಡಮಾರುತ ಸಿಡ್ರ್ ರಾಷ್ಟ್ರದ ಪಶ್ಚಿಮ ಕರಾವಳಿಯನ್ನು ಹಾದು ಹೋಗಿತ್ತಾದರೂ, ಬಾಂಗ್ಲಾದೇಶದ ಮೇಲೆ ತನ್ನ ಮುನಿಸು ತೋರಿತ್ತು.

ದೋಣಿದುರಂತಗಳು
ಕೇರಳದಲ್ಲಿನ ಎರ್ನಾಕುಲಂನ ಕೋಥಮಂಗಲಂ ಸಮೀಪ ಪೆರಿಯಾರ್‌ನಲ್ಲಿ ಪ್ರವಾಸಿ ಮಕ್ಕಳ ದೋಣಿ ದುರಂತ ಹಾಗೂ ಆಂಧ್ರ ಪ್ರದೇಶದ ಕೃಷ್ಣಾನದಿಯಲ್ಲಿ ಜನತೆ ದೋಣಿಯಲ್ಲಿ ಜಾತ್ರೆಗೆ ತೆರಳುತ್ತಿರುವಾಗ ಸಂಭವಿಸಿದ್ದ ದೋಣಿದುರಂತಗಳಲ್ಲಿ ಹಲವಾರು ಸಾವುನೋವುಗಳು ಸಂಭವಿಸಿವೆ. ಈ ಎರಡೂ ಪ್ರಕರಣಗಳಲ್ಲೂ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಂದಿಯನ್ನು ತುಂಬಿದ್ದೇ ಅವಘಡಕ್ಕೆ ಕಾರಣವಾಗಿತ್ತು.

ರಾಮಸೇತು ವಿವಾದ
ರಾಮೇಶ್ವರಂ ಹಾಗೂ ಶ್ರೀಲಂಕಾದ ತಲೈಮಾನ್ ಕರಾವಳಿ ತೀರವನ್ನು ಸಂಪರ್ಕಿಸುವ ರಾಮಸೇತುವೆಯ ಧ್ವಂಸದ ಕುರಿತು ಹುಟ್ಟಿದ್ದ ವಿವಾದದ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಭಗವಾನ್ ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದು ಮತ್ತು ರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದ ಎಂಬ ಅವಹೇಳನಕಾರಿ ಮಾತುಗಳು ತೀವ್ರ ವಿವಾದವನ್ನು ಹುಟ್ಟುಹಾಕಿದ್ದು, ಕರುಣಾನಿಧಿ ವಿರುದ್ಧ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ.
ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿರುವ ಸುಪ್ರೀಂ ಕೋರ್ಟ್ ರಾಮಸೇತುವೆಯನ್ನು ಧ್ವಂಸ ಮಾಡದಂತೆ ತಡೆಯಾಜ್ಞೆ ನೀಡಿದೆ.

ಏಮ್ಸ್ ನಿರ್ದೇಶಕರ ನಿವೃತ್ತಿ ವಯಸ್ಸು
ಕೇಂದ್ರ ಸರ್ಕಾರವು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರ ನಿವೃತ್ತಿ ವಯಸ್ಸನ್ನು ಅರುವತ್ತೈದು ವರ್ಷಗಳೆಂದು ನಿರ್ಧರಿಸಿ ಸಂಸತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸಿ, ಸಂಸ್ಥೆಯ ನಿರ್ದೇಶಕರಾಗಿದ್ದ ಡಾ| ವೇಣುಗೋಪಾಲ್ ಅವರನ್ನು ಅವರ ಸ್ಥಾನದಿಂದ ಕಿತ್ತೆಸೆಯುವಲ್ಲಿ ಯಶಸ್ವಿಯಾಗಿದೆ. ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಮತ್ತು ಏಮ್ಸ್ ನಿರ್ದೇಶಕರ ದೀರ್ಘಕಾಲದ ತಿಕ್ಕಾಟ ಈ ಮಸೂದೆಯೊಂದಿಗೆ ಪರ್ಯಾವಸಾನವಾಯಿತು. ಆದರೆ, ಇದರ ವಿರುದ್ಧ ವೇಣುಗೋಪಾಲ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಅವಸರದ ಕ್ರಮಕ್ಕೆ ಛೀಮಾರಿ ಹಾಕಿದೆ.

ಹಣದುಬ್ಬರ
ಜಾಗತೀಕರಣರಕ್ಕೆ ಭಾರತ ತನ್ನನ್ನು ತೆರೆದುಕೊಂಡಿರುವುದರ ಫಲವಾಗಿ ಔದ್ಯಮಿಕ ರಂಗ ನಾಗಾಲೋಟದ ಏರು ಗತಿಯನ್ನು ಕಂಡಿವೆ. ಮಾಹಿತಿತಂತ್ರಜ್ಞಾನ ರಂಗದೊಂದಿಗೆ ಉಳಿದ ವಲಯಗಳು ದಾಪುಗಾಲಿಕ್ಕಿವೆ. ಪರಿಣಾಮ ಶೇರು ಮಾರುಕಟ್ಟೆಯ ವಹಿವಾಟುಗಳು ಆಕಾಶಕ್ಕೆ ಚಿಮ್ಮಿವೆ. ಈ ವರ್ಷದಲ್ಲಿ ಶೇರು ಮಾರುಕಟ್ಟೆಯ ಸಂವೇದಿ ಶೇರು ಸೂಚ್ಯಂಕವು 20 ಸಾವಿರ ಅಂಕಗಳ ಗಡಿ ತಲುಪಿತ್ತು.

ಅಂತೆಯೇ ಇದೇ ವರ್ಷದಲ್ಲಿ ಶೇರು ಮಾರುಕಟ್ಟೆಯ ಇತಿಹಾಸದಲ್ಲೇ, ಒಂದೇ ದಿನದ ಎರಡನೆ ಅತಿ ದೊಡ್ಡ 769.48 ಅಂಕಗಳ ಕುಸಿತ ಡಿಸೆಂಬರ್ 17,ರಂದು ದಾಖಲಾಯಿತು.
ಹಣದುಬ್ಬರ ಶೇ 5ರ ಗಡಿಯನ್ನು ದಾಟಿತ್ತು. ಹಣದುಬ್ಬರದಿಂದ ಇಕ್ಕಟ್ಟಿಗೆ ಸಿಲುಕಿದ್ದ ಕೇಂದ್ರ ಸರ್ಕಾರ ಯುದ್ಧೋಪಾದಿಯ ಕಾರ್ಯಕೈಗೊಂಡಿದ್ದು, ಬಳಿಕ ಹಣದುಬ್ಬರ ಇಳಿದಿದ್ದು, ಕನಿಷ್ಠ ಶೇ.2.9ರ ಸುತ್ತಮುತ್ತ ತುಯ್ದಾಡಿತ್ತು.

ತಸ್ಲಿಮಾ ವಿವಾದ
ಬಾಂಗ್ಲಾದೇಶದಿಂದ ಗಡಿಪಾರುಗೊಂಡಿರುವ ವಿವಾದಾಸ್ಪದ ಲೇಖಕಿ ತಸ್ಲಿಮಾ ನಸ್ರೀನ್ ಅವರನ್ನು ಮುಸ್ಲಿಂ ಮೂಲಭೂತವಾದಿಗಳ ಪ್ರತಿಭಟನೆಗೆ ಮಣಿದು ಅವರು ನೆಲೆಸಿದ್ದ ಕೋಲ್ಕತದಿಂದ ಎತ್ತಂಗಡಿ ಮಾಡಲಾಯಿತು. ಕೇಂದ್ರ ಸರ್ಕಾರದ ಆಶ್ರಯದಲ್ಲಿ ಅವರನ್ನು ದೆಹಲಿಯ ಗೌಪ್ಯ ಸ್ಥಳದಲ್ಲಿ ಇರಿಸಲಾಗಿದ್ದು, ಯಾರದೇ ಭಾವನೆಗಳಿಗೆ ನೋವುಂಟುಮಾಡದಂತೆ ನಡೆದುಕೊಳ್ಳಲು 'ತಾಕೀತು' ಮಾಡಲಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಸರಾದ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಆಶ್ರಯ ಪಡೆದ ತಸ್ಲಿಮಾ ತನ್ನ ಪುಸ್ತಕದ ಕೆಲಭಾಗಗಳನ್ನು ಹಿಂತೆಗೆದುಕೊಂಡರು!

ಮಾತಿಗೆ ತಪ್ಪಿದ ಜೆಡಿಎಸ್
ಕ್ಷಿಪ್ರಕ್ರಾಂತಿಯ ಮೂಲಕ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಕರ್ನಾಟಕ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಕುಮಾರ ಸ್ವಾಮಿ, ತನ್ನ ಆಡಳಿತ ವೈಖರಿಯಿಂದ ಭರವಸೆಯ ನಾಯಕನಾಗಿ ತೋರಿಬಂದಿದ್ದರು. 20:20 ಆಡಳಿತದ ಒಪ್ಪಂದದಂತೆ ತನ್ನ ಅವಧಿ ಮುಗಿದ ಬಳಿಕ ಮಿತ್ರಪಕ್ಷ ಬಿಜೆಪಿಗೆ ಅಧಿಕಾರ ನೀಡದ ವಿಶ್ವಾಸ ದ್ರೋಹ ಹಾಗೂ ಬಳಿಕದ ರಾಜಕೀಯ ವಿದ್ಯಮಾನಗಳು ಕುಮಾರಸ್ವಾಮಿಯವರ ಪಾಲಿಗೆ, ಎಲ್ಲಬಣ್ಣ ಮಸಿನುಂಗಿತು ಎಂಬಂತಾಯಿತು.

ಕೊನೆಗೆ, ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಬಿಜೆಪಿಯ ಪ್ರಯತ್ನ ಫಲಿಸಿತಾದರೂ, ಜೆಡಿಎಸ್‌ ಷರತ್ತುಗಳನ್ನು ಮುಂದಿಟ್ಟು ಛಾಪಾ ಕಾಗದದ ಒಪ್ಪಂದ ಬಯಸಿದ್ದರಿಂದ, ಸರ್ಕಾರದ ಆಯಸ್ಸು ಏಳೇ ದಿನಗಳಿಗೆ ತೀರಿಹೊಯಿತು. ರಾಜ್ಯದಲ್ಲಿ ಮತ್ತೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದ್ದು, ಮಧ್ಯಂತರ ಚುನಾವಣೆ ಯಾವುದೇ ಸಮಯದಲ್ಲೂ ನಡೆಯಬಹುದಾಗಿದೆ.

ಕರ್ನಾಟಕ ರಾಜಕೀಯದಲ್ಲಿ ಹಿಂದೆಂದೂ ಕಂಡುಕಾಣರಿಯದ ರಾಜಕೀಯ ಡೊಂಬರಾಟಗಳು ನಡೆದು, ಜನಸಾಮಾನ್ಯರಲ್ಲಿ ರಾಜಕೀಯ ಮತ್ತಷ್ಟು ಹೇಸಿಗೆ ಹುಟ್ಟಿಸಿದವು. ಎಲ್ಲವನ್ನೂ ವೀಕ್ಷಿಸಿದ ಮತದಾರ ಹೀಗೂ ಉಂಟೆ ಅನ್ನುತ್ತಾ ಮೂಗಿನ ಮೇಲೆ ಬೆರಳೇರಿಸಿದ್ದಾನೆ.

ಇವಲ್ಲದೆ ಇನ್ನೂ ಹತ್ತು ಹಲವು ವಿಚಾರಗಳು, ಘಟನೆಗಳು 2007ರ ಚಕ್ರದಡಿಗೆ ಸಿಲುಕಿವೆ. 2008ಕ್ಕೆ ಅಡಿ ಇಡುತ್ತಿರುವ ಈ ಸಂದರ್ಭದಲ್ಲಿ ಸರ್ವರಿಗೂ ಒಳಿತಾಗಲಿ, ಹೊಸವರ್ಷ ಶುಭತರಲಿ, ಅಭ್ಯುದಯ ನೀಡಲಿ ಎಂಬ ಹಾರೈಕೆ.

Share this Story:

Follow Webdunia kannada