Select Your Language

Notifications

webdunia
webdunia
webdunia
webdunia

ವರ್ಷದ ರಾಜ್ಯ ರಾಜಕಾರಣ: ಶೂನ್ಯ ಸಂಪಾದನೆಗೆ ಬರೆದ ಮುನ್ನುಡಿ

ವರ್ಷದ ರಾಜ್ಯ ರಾಜಕಾರಣ: ಶೂನ್ಯ ಸಂಪಾದನೆಗೆ ಬರೆದ ಮುನ್ನುಡಿ
ಯಗಟಿ ರಘು ನಾಡಿಗ್
PTI
ಸಮಾಜದ ಯಾವುದೇ ವಲಯದ ಕಡೆಗೆ ಗಮನವಿಟ್ಟು ನೋಡಿ, ವರ್ಷಾಂತ್ಯದ ವೇಳೆಗೆ ಈ ವರ್ಷದ ಸಾಧನೆಯೇನು ಎಂಬ ಅವಲೋಕನ ಅಲ್ಲಿ ಕಂಡುಬರುತ್ತದೆ. ವ್ಯಕ್ತಿಯಾದರೆ ಈ ವರ್ಷ ಏನೆಲ್ಲಾ ತಪ್ಪು ಮಾಡಿದೆ, ಏನೆಲ್ಲಾ ಸಾಧಿಸಿದೆ, ಮುಂಬರುವ ವರ್ಷದಲ್ಲಿ ನನ್ನ ನಡೆ-ನುಡಿಯನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂಬುದರ ಕಡೆ ಚಿಂತನೆ ನಡೆಸುತ್ತಾನೆ. ಈ ವರ್ಷ ಬಾಸ್‌ನಿಂದ ಆದಷ್ಟೂ ಕಡಿಮೆ ಬೈಸಿಕೊಳ್ಳಬೇಕು, ಕಚೇರಿಗೆ ತಡವಾಗಿ ಹೋಗುವುದನ್ನು ಕಡಿಮೆ ಮಾಡಬೇಕು ಇತ್ಯಾದಿ ಇತ್ಯಾದಿ ಅಲಿಖಿತ ನಿರ್ಣಯಗಳನ್ನು ಮಾಡಿಕೊಳ್ಳುತ್ತಾನೆ. ಒಂದು ವೇಳೆ ವ್ಯಾವಹಾರಿಕ ಸಂಸ್ಥೆಯಾದರೆ, ಈ ವರ್ಷದ ಲಾಭವೆಷ್ಟು ನಷ್ಟವೆಷ್ಟು? ವ್ಯವಹಾರ ವರ್ಧಿಸಲು ಏನು ಕ್ರಮ ತೆಗೆದುಕೊಳ್ಳಬೇಕು? ಹೊಸ ಶಾಖೆಯನ್ನು ಎಲ್ಲಿ ತೆರೆಯುವುದು? ಇವೇ ಮೊದಲಾದ ರೀತಿಯಲ್ಲಿ ತನ್ನನ್ನು ಅದು ಅವಲೋಕನೆಗೆ ಒಡ್ಡಿಕೊಳ್ಳಬಹುದೇನೋ?

ಆದರೆ, ರಾಜಕಾರಣವನ್ನು-ರಾಜಕಾರಣಿಗಳನ್ನು ಯಾವ ಗುಂಪಿಗೆ ಸೇರಿಸುವುದು? ಇವರು ಯಾವುದೇ ಉದ್ಯೌಗ ಸಂಬಂಧಿ ಪರೀಕ್ಷೆಯನ್ನು ಪಾಸು ಮಾಡಿರುವುದಿಲ್ಲ; ರಾಜಕಾರಣಿಗಳಾಗಲು ಲೈಸೆನ್ಸ್ ತೆಗೆದುಕೊಳ್ಳಬೇಕಿಲ್ಲ, ಬಿಲ್ಬುಕ್ ಹರಿಯಬೇಕಿಲ್ಲ. ಆದರೂ ಶಿಪ್ರಜೆಗಳೇ ಪ್ರಭುಗಳುಷಿ ಎಂಬ ಅನಾದಿ ಕಾಲದ ಸವಕಲು ಹೇಳಿಕೆಯ ಪ್ರಜಾಭುತ್ವ ವ್ಯವಸ್ಥೆಯ ನಿಜವಾದ ಪ್ರಭುಗಳು ಇವರೇ ಆದ್ದರಿಂದ ಹಾಗೂ ಸರ್ಕಾರದ ಪ್ರಭುತ್ವವು ವ್ಯವಸ್ಥೆಯ ಅಂಗವೇ ಆಗಿರುವುದರಿಂದ ಇದನ್ನೊಂದು ಉದ್ಯೌಗವೆಂದೇ ಪರಿಗಣಿಸಿ ಇಲ್ಲಿನ ಗುಣಾವಗುಣಗಳ ಅವಲೋಕನದೆಡೆಗೆ ಇದೊಂದು ಪುಟ್ಟ ಕ್ಷ-ಕಿರಣ...

ವರ್ಷ ಹೇಗೆ ಪ್ರಾರಂಭವಾಯಿತು, ಹೇಗೆ ಅಂತ್ಯವಾಯಿತು ಎಂಬುದಕ್ಕಿಂತ ಅನಿಶ್ಚಿತತೆಯಿಂದ ಪ್ರಾರಂಭವಾದ ರಾಜಕೀಯ ಅನಿಶ್ಚಿತತೆಯಲ್ಲಿಯೇ ಅಂತ್ಯವಾಯಿತು ಎಂದು ಸ್ಪಷ್ಟವಾಗಿ ಹೇಳಬಹುದು. ಯಾರಲ್ಲೂ ನಿಶ್ಚಿತ ಭಾವನೆಯೇ ಇಲ್ಲ. ಎಲ್ಲರ ಸುತ್ತ ಅನುಮಾನಗಳ ಹುತ್ತ. ಅಧಿಕಾರ ಹಸ್ತಾಂತರ ಆಗುವುದೋ ಇಲ್ಲವೋ ಎಂಬ ಅನುಮಾನದ ಹುಳ ಹೆಚ್ಚೂ ಕಮ್ಮಿ ವರ್ಷದ ಪ್ರಾರಂಭದಲ್ಲಿಯೇ ಶುರುವಾದರೆ, ಬಂಡಾಯ ನಾಯಕ ಎಂ.ಪಿ.ಪ್ರಕಾಶ್ ಬಿಜೆಪಿಗೆ ಸೇರುವರೋ ಕಾಂಗ್ರೆಸ್ ಸೇರುವರೋ ಎಂಬ ಅನುಮಾನದೊಂದಿಗೆ ವರ್ಷ ಅಂತ್ಯವಾಯಿತು. ಸ್ವತಃ ಪ್ರಕಾಶರಿಗೂ ಈ ಕುರಿತು ಅನಿಶ್ಚಿತತೆ ಇದ್ದದ್ದು ಅವಕಾಶವಾದಿ ರಾಜಕಾರಣಕ್ಕೆ ಜ್ವಲಂತಸಾಕ್ಷಿಯಾಯ್ತು.

ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಅಧಿಕಾರದ ಗದ್ದುಗೆಯೇರುವ ಅನೀರೀಕ್ಷಿತ ಅದೃಷ್ಟ ಬಿಜೆಪಿಗೆ ಒದಗಿ ಬಂದಾಗ ಕಾಂಪ್ರೊಮೈಸ್ ಮೈಮನಸ್ಸುಗಳನ್ನು ಒಗ್ಗಿಸಿಕೊಳ್ಳಬೇಕಾಗಿ ಬಂತು ಈ ಕೇಸರಿ ಪಾರ್ಟಿಗೆ. ಹೆಚ್ಚಿನ ಸ್ಥಾನಗಳನ್ನು ಗಳಿಸಿಯೂ, ಕಡಿಮೆ ಸ್ಥಾನವನ್ನು ಗಳಿಸಿದ್ದ ರಾಜಕೀಯ ಪಕ್ಷದ ಹಿರಿಯಣ್ಣ ಹೇಳಿದ್ದಕ್ಕೆಲ್ಲಾ ವಿನಾಕಾರಣ ಎಸ್ ಎಂದು ಹೇಳಬೇಕಾಗಿ ಬಂದದ್ದು ಅವಕಾಶವಾದಿ ರಾಜಕಾರಣದ ಮತ್ತೊಂದು ಮುಖವಾಗಿ ಕಂಡುಬಂತು. ಈ ಮಧ್ಯೆ, ಅಧಿಕಾರ ಹಸ್ತಾಂತರವಾಗದು ಈಗಿರುವ ನಾಯಕರೇ ಮುಂದುವರೆಯಲಿ ಎಂದು ಶಾಸಕರು, ಜನರು ಆಸೆಪಡುತ್ತಿದ್ದಾರೆ ಎಂದು ಪಕ್ಷದ ಸಚಿವರಿಂದ, ಶಾಸಕರಿಂದ ಒಗ್ಗರಣೆ ಹಾಕಿಸುವ ಕುಯುಕ್ತಿ ಬೇರೆ. ಈ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರದ ಪಾಲುದಾರರು ಪರಸ್ಪರರನ್ನು ಅನುಮಾನದ ದೃಷ್ಟಿಯಲ್ಲಿಯೇ ನೋಡುವಂತಾಗಿ ಒಂದು ಹಂತದಲ್ಲಿ ಅಭಿವೃದ್ದಿ ಕಾರ್ಯಗಳು ನಿಂತನೀರಾಗಿದ್ದವು.

ಅಧಿಕಾರ ಹಸ್ತಾಂತರ ಆಗುವುದೇ ಇಲ್ಲ ಎಂಬ ಹಂತ ಸೃಷ್ಟಿಯಾದಾಗಲಂತೂ ಬಿಜೆಪಿಯ ಯಡಿಯೂರಪ್ಪ ತೀರಾ ಅವಸರಕ್ಕೆ ಬಿದ್ದವರಂತೆ ತಮ್ಮ ಪಟಾಲಂನ ರಾಜೀನಾಮೆ ಸಲ್ಲಿಸಿ, ನಮ್ಮ ಮಾತನ್ನು ನಾವು ಉಳಿಸಿಕೊಂಡಿದ್ದೇವೆ, ಈಗ ನಿಮ್ಮ ಸರದಿ, ಕುರ್ಚಿ ಬಿಟ್ಟುಕೊಡಿ ಎಂಬ ಧಾಟಿಯಲ್ಲಿ ಒತ್ತಡ ಹೇರಿದ್ದು ಪ್ರಾಯಶಃ ಜೆಡಿಎಸ್ ಹಿರಿಯಣ್ಣನಿಗೆ ಪಥ್ಯವಾಗಲಿಲ್ಲ ಎನಿಸುತ್ತದೆ.

ಎಲ್ಲಾದರೂ ಉಂಟೇ? ಬುಗುರಿ ಆಡಿಸುವವನಿಗೇ ಚಾಟಿ ಸುತ್ತುವುದನ್ನು ಹೇಳಿಕೊಡಲು ಹೋಗುವುದೇ? ಎಂಬ ಭಾವಕ್ಕೆ ಅಥವಾ ನಮ್ಮ ಪಡ್ಡೆ ಹುಡುಗರು ಹೇಳುವಂತೆ ಸೂರ್ಯಂಗೇ ಟಾರ್ಚಾ?, ಸರಸ್ವತಿಗೇ ಟ್ಯೂಷನ್ನಾ ಎಂಬಂತಹ ಅಭಿಪ್ರಾಯಗಳಿಗೋ ಚಾಲನೆ ಸಿಕ್ಕಿದ್ದು ಈ ಸನ್ನಿವೇಶದಲ್ಲಿಯೇ. ಯಡಿಯೂರಪ್ಪನವರ ಇಂಥ ನಡಾವಳಿಕೆಗಳಿಗೆ ಜೆಡಿಎಸ್ ಹಿರಿಯಣ್ಣನಿಂದ ಅನುಮೋದನೆಯ ಮುದ್ರೆ ಬೀಳದೆ ಹೋದದ್ದು ಒಂದು ಪುಟವಾದರೆ, ಅಧಿಕಾರ ಹಸ್ತಾಂತರವಾಗದ್ದು ವಿಧಿಯ ವೈಚಿತ್ರ್ಯ ಎಂದು ಹೇಳಿ ಕೈತೊಳೆದುಕೊಳ್ಳಹೊರಟಿದ್ದು ಅವರ ಸಂತಾನ ಕುಮಾರ ಕಂಠೀರವನ ಸಾಧನೆಯಾಯ್ತು. ಇದು ಕೊನೆಗೆ ಪತ್ರಿಕಾಗೋಷ್ಠಿಯಲ್ಲಿ ಕೊಂಚ ಕಣ್ಣೀರುಹಾಕಿ ಅಪರಾಧಿ ಪ್ರಜ್ಞೆ ತಾಳುವ ಅತಿರೇಕಕ್ಕೂ ಹೋಯ್ತು.

ಯಾವಾಗ ಮುಖ್ಯಮಂತ್ರಿ ಕುರ್ಚಿ ಗಗನ ಕುಸುಮ ಎಂದು ಅರಿವಾಯಿತೋ ಆಗ ಶುರುವಾಯ್ತು ನೋಡಿ ಬಿಜೆಪಿ ಪಾಳಯದಿಂದ ವಾಗ್ಬಾಣಗಳ ದಾಳಿ. ನಗರದ ಎಂ.ಜಿ.ರಸ್ತೆಯ ಗಾಂಧಿ ಪ್ರತಿಮೆಯ ಬಳಿ ಯಡಿಯೂರಪ್ಪ ಮತ್ತು ಅವರ ಪಕ್ಷಸ್ಥರು ಜೆಡಿಎಸ್ ಕಡೆಗೆ ಹಾಗೂ ಅದರ ಮುಖಂಡರ ಕಡೆಗೆ ಮಾಡಿದ ಟೀಕಾಪ್ರಹಾರ ಎಷ್ಟು ತೀಕ್ಷ್ಣವಾಗಿತ್ತೆಂದರೆ ಮುಂದೆಂದೂ ಇವರು ಮಾತಾಡುವುದಿರಲಿ ಪರಸ್ಪರ ಮುಖವನ್ನೂ ನೋಡಲಾರರು ಎಂದು ಜನಸಾಮಾನ್ಯರು ಮಾತಾಡಿಕೊಳ್ಳುವಂತಾಯ್ತು. ಇದರ ಮುಂದಿನ ಹೆಜ್ಜೆಯಾಗಿ ಊರೂರಲ್ಲಿ ಯಾತ್ರೆ ಹಮ್ಮಿಕೊಳ್ಳುವ ನಿರ್ಧಾರಕ್ಕೆ ಮೊರೆಹೋಯ್ತು ಬಿಜೆಪಿ. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶುರುವಾಯ್ತು ಯಾತ್ರೆಗೆ ನಾಂದಿ. ಮಧ್ಯದಲ್ಲಿಯೇ ಕುರ್ಚಿ ನೀಡುವ ಸಂದೇಶ ಬಂದಿದ್ದೇ ತಡ ಹೆಲಿಕಾಪ್ಟರಿನಲ್ಲಿ ಪುರ್ರೆಂದು ಬೆಂಗಳೂರಿಗೆ ಹಾರಿಬಂತು ಬಿಜೆಪಿಯ ಕಮಲ. ಆದರೆ ಮಾತುಕತೆ ಕೈಗೂಡದೆ, ಕೆಸರಿನಲ್ಲಿ ಹುಟ್ಟಿದ ಕಮಲ ತನ್ನ ಮುಖಕ್ಕೆ ನಿಸ್ಸಂದೇಹವಾಗಿ ಕೆಸರು ಬಳಿಸಿಕೊಂಡಂತಾಯ್ತು.

ತದನಂತರ ರಾಷ್ಟ್ತ್ರಪತಿ ಅಡಳಿತದ ಹೇರಿಕೆ, ಆಮೇಲೆ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸಲ್ಲಿಸುವ ಅಫಿಡವಿಟ್ ಸಲ್ಲಿಕೆ, ರಾಷ್ಟಪತಿಗಳ ಎದುರು ಶಾಸಕರ ಪೆರೇಡು, ರಾಷ್ಟ್ತ್ರಪತಿಗಳ ಆಳ್ವಿಕೆಯ ತೆರವುಗೊಳಿಸುವಿಕೆ, ಬಾಯಾರಿದ್ದ ಯಡ್ಡಿಗೆ ಏಳು ದಿನಗಳ ಸಿಂಹಾಸನದ ರಾಜ್ಯಾಭಿಷೇಕ ನಡೆದದ್ದು, ಆ ಸಮಯದಲ್ಲಿ ಬಿಜೆಪಿಯ ಪ್ರದರ್ಶನ ರಾಜಕಾರಣ ನೋಡಿದ ಜೆಡಿಎಸ್ ಹಿರಿಯಣ್ಣ ಕೊಂಚ ಹಿಂದೇಟು ಹಾಕಿ ಅಫಿಡವಿಟ್ ಸಲ್ಲಿಸಿದ ನಂತರವೂ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿ ಬೆಂಬಲ ವಾಪಸ್ ತೆಗೆದುಕೊಂಡಿದ್ದು ಇವೆಲ್ಲಾ ಅವಕಾಶವಾದಿ ರಾಜಕಾರಣಕ್ಕೆ ಪುಟಗಳನ್ನು ಸೇರಿಸುತ್ತಲೇ ಹೋದವು. ಕೊನೆಗೇನಾಯ್ತು? ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬ ಮಾತಿನಂತೆ ಬಿಜೆಪಿಗೆ ಅಧಿಕಾರ ದಕ್ಕಲೇ ಇಲ್ಲ. ಆಗ ಮತ್ತೊಮ್ಮೆ ಹೇರಿಕೆಯಾಗಿದ್ದೇ ರಾಷ್ಟ್ತ್ರಪತಿಗಳ ಆಳ್ವಿಕೆ.

ಇದರ ಜೊತೆ ಜೊತೆಗೇ ಜನರ ಮನ ಸೆಳೆದದ್ದು ಬೆಂಗಳೂರಿನ ಸುತ್ತಮುತ್ತಲ ಭೂ ಒತ್ತುವರಿಗೆ ಸಂಬಂಧಿಸಿ ಎ.ಟಿ.ರಾಮಸ್ವಾಮಿ ನೀಡಿದ ವರದಿಯನ್ನು ನೆಪವಾಗಿರಿಸಿಕೊಂಡು ಕಾಂಗ್ರೆಸ್‌ನ ಉಗ್ರಪ್ಪ ಸ್ಪೀಕರ್ ಕೋಣೆಗೆ ನುಗ್ಗಿ ತಮ್ಮ ಉಗ್ರಪ್ರತಾಪವನ್ನು ಮೆರೆದದ್ದು, ಎಂ.ಪಿ.ಪ್ರಕಾಶರು ಹಾಗೂ ಅವರ ಸಹಚರರು ಬಂಡೆದ್ದದ್ದು, ಜೆಡಿಎಸ್‌ನಿಂದ ಹೊರಬಂದರೂ ಮುಂದಿನ ನೆಲೆ ಯಾವುದು ಎಂಬುದರ ಸ್ಪಷ್ಟ ನಿಲುವು ಇಲ್ಲದಿರುವುದು, ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಂ.ಮಹದೇವ್ ಮೈಸೂರು ಸಮಾವೇಶದಲ್ಲಿ ಜಟಾಪಟಿ ಮಾಡಿದ್ದು, ಇವೆಲ್ಲವನ್ನೂ ಜನ ಇನ್ನೂ ಮರೆತಿಲ್ಲ.

ಇದರ ಮಧ್ಯೆ ರಾಜ್ಯಕ್ಕೆ ಆಗಮಿಸಿದ ಬಿಎಸ್ಪಿ ನಾಯಕಿ ಮಾಯಾವತಿಯವರ ಸಮ್ಮುಖದಲ್ಲಿ ಆ ಪಕ್ಷಕ್ಕೆ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಸೇರಿರುವುದು, ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ಸಾಧ್ಯತೆಗಳ ಕಡೆಗೆ ಜನರು ಕಣ್ಣು ಹಾಯಿಸುವಂತಾಗಿದೆ. ಕಾರಣ ಬಿಎಸ್ಪಿಯ ಬಹುಜನ ಹಿತಾಯ, ಬಹುಜನ ಸುಖಾಯ ಎಂಬ ಧ್ಯೇಯವಾಕ್ಯ ಉತ್ತರ ಪ್ರದೇಶದಲ್ಲಿ ಮಾಯಾವತಿಗೆ ಸಿಂಹಾಸನ ನೀಡುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದಲ್ಲಿಯೂ ಮಾಯಾಮೋಡಿ ನಡೆಯಲಿದೆಯೇ? ಅಥವಾ ಗುಜರಾತ್-ಹಿಮಾಚಲ ಪ್ರದೇಶಗಳ ವಿಕೆಟ್ ಗಳಿಕೆಗೆ ಕರ್ನಾಟಕವೂ ಸೇರಿ ಬಿಜೆಪಿ ಹ್ಯಾಟ್ರಿಕ್ ಗಳಿಸಲಿದೆಯೇ? ಈ ಎಲ್ಲದಕ್ಕೂ ಉತ್ತರ ನೀಡಬೇಕಿರುವುದು ಮಾನ್ಯ ಮತದಾರ ಬಂಧು.

ಒಂದಂತೂ ನಿಜ. ಮಾಧ್ಯಮಗಳು ಮತದಾರನನ್ನು ಈಗ ಮುಂಚಿಗಿಂತ ಹೆಚ್ಚು ಸೂಕ್ಷ್ಮ ಪ್ರವೃತ್ತಿಯವನನ್ನಾಗಿಸಿದೆ. ಐದು ವರ್ಷಕ್ಕೊಮ್ಮೆ ಮೋಸಹೋಗುವುದು ನಮ್ಮ ಮತದಾರ ಬಂಧುಗಳ ಅನಿವಾರ್ಯ ಕರ್ಮವಾದರೂ, ಅವರನ್ನು ಮೊದಲಿನಂತೆ ಸುಲಭವಾಗಿ ಮೋಸಮಾಡುವುದು ಸಾಧ್ಯವಾಗಲಾರದು. 2007ರ ವರ್ಷದ ಆರಂಭದಿಂದಲೂ ರಾಜಕಾರಣಿಗಳು ಬರೆದ ರಾಜಕೀಯ ಮುನ್ನುಡಿಯನ್ನು ಗಮನದಲ್ಲಿರಿಸಿಕೊಂಡು ಮತದಾರರು ಸ್ಪಷ್ಟ ಜನಾದೇಶವೆಂಬ ಮಹಾಕೃತಿಯೊಂದನ್ನು ರಚಿಸಬೇಕಿದೆ. ಅದು ಮುನ್ನುಡಿಯಷ್ಟು ಅಪಸವ್ಯಗಳನ್ನು ಒಳಗೊಳ್ಳದಿರಲಿ ಎಂಬುದೇ ಎಲ್ಲರ ಆಶಯ.

Share this Story:

Follow Webdunia kannada