2007.
ಭಾರತೀಯ ಫುಟ್ಬಾಲ್‌ಗೆ ಸವಿನೆನಪಿನ ವರುಷ, ಸೋಲಿನ ಸುಳಿಯಲ್ಲಿ ಸಿಲುಕಿ ಎಲ್ಲಿಯೂ ಕಾಣದಿದ್ದ ತಂಡವೊಂದು ದಿಢೀರನೆ ಅಟ್ಟಕ್ಕೇರಿದರೆ ಆಗುವ ಖುಷಿ ಇದೆಯಲ್ಲ ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕೆನಿಸುತ್ತದೆ. ಹಾಗೇ ನೋಡಿದರೆ ನೆಹರು ಕಪ್ ಗೆಲುವು ಇತರರಿಗೆ ಹೋಲಿಸಿದರೆ ಚಿಕ್ಕದೇ. ನಮಗೆ ಮಾತ್ರ ದೊಡ್ಡದು. ಇದ್ದೂ ಇಲ್ಲದಂತೆ ಇದ್ದ ಭಾರತೀಯ ಫುಟ್ಬಾಲ್ ತಂಡವು ಭಾರತೀಯರಿಗೆ ಅಪರಿಚಿತವಾಗಿತ್ತು. ಸುನಿಲ್ ಚೇತ್ರಿಗಿಂತ ರೋಮಾರಿಯೊ, ಲಿಯೋನಲ್ ಮೆಸ್ಸಿ ಹೆಸರುಗಳು ಭಾರತೀಯ ಯುವಕರ ಮನದಲ್ಲಿ ಕುಳಿತುಕೊಂಡಿದ್ದವು. ಅಲ್ಲಲ್ಲಿ ಬೈಚುಂಗ್ ಭೂತಿಯಾ ಹೆಸರು ಕೇಳಿಬರುತ್ತಿತ್ತು. ಅದು ಅಲ್ಲಿಗೆ ಮಾತ್ರ ಸೀಮಿತ. ಬೆಡ್ ರೂಂನ ಗೋಡೆಗಳವರೆಗೆ ಮಾತ್ರ ಆ ಹೆಸರು ಬರಲಿಲ್ಲ, ಇನ್ನೂ ಬಂದಿಲ್ಲ ಬಿಡಿ, ಅದು ಬೇರೆ ಮಾತು.
ದೆಹಲಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 113ನೇ ಶ್ರೇಯಾಂಕ ಪಡೆದ ಸಿರಿಯಾ ತಂಡವನ್ನು ಬೈಚುಂಗ್ ಭೂತಿಯಾ ತಂಡ ಸೋಲಿಸಿ ಗೆಲುವಿನ ಮೊದಲಕ್ಷರವನ್ನು ಭಾರತೀಯ ಫುಟ್ಬಾಲ್ ಇತಿಹಾಸದಲ್ಲಿ ಬರೆಯಿತು. ಈ ಗೆಲುವಿಗೆ ಕೋಚ್ ಬಾಬ್ ಹ್ಯೂಟನ್ ಅವರ ಮಾರ್ಗದರ್ಶನ ಕಾರಣ ಎಂದು ತಮ್ಮ ಗುರು ವಿಧೇಯತೆಯನ್ನು ಮೆರೆದರು. ಈ ಸಣ್ಣದೊಂದು ಗೆಲುವಿಗೆ ಪೋರ್ತುಗಲ್‌ಗೆ ತೆರಳಿ ಹದಿನೈದು ದಿನಗಳ ಕಾಲ ನಡೆಸಿದ ಅಭ್ಯಾಸ ಮತ್ತು ಅಲ್ಲಿನ ಡಿವಿಜನ್ ಲೀಗ್ ಟೂರ್ನಿಗಳಲ್ಲಿ ಆಡಿದ್ದು ಕಾರಣ.
2010ರ ವಿಶ್ವ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡುವುದಕ್ಕೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ. ಲೆಬನಾನ್ ವಿರುದ್ಧ ನಡೆದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ 1-4 ರ ಅಂತರದಲ್ಲಿ ಸೋತಿದ್ದು ವಿಷಾದಕರ. ಈ ವಿಷಾದದ ನಡುವೆ ಗೋವಾದಲ್ಲಿ ನಡೆದ ಪಂದ್ಯವನ್ನು 2-2 ರ ಅಂತರದಲ್ಲಿ ಡ್ರಾ ಮಾಡಿಕೊಂಡ ಸಮಾಧಾನವೂ ಇದೆ. ಶ್ರೇಯಾಂಕ ಪಟ್ಟಿಯಲ್ಲಿ ಭಾರತ 157ರಿಂದ 143ಕ್ಕೆ ತಲುಪಿದ್ದು ಸಂತಸದ ಸಂಗತಿ.