Select Your Language

Notifications

webdunia
webdunia
webdunia
webdunia

ನವರಂಗಿ ದುನಿಯಾದಲ್ಲಿ ಮುಂಗಾರು ಮಳೆ ಬಿಡಿಸಿತು ಚೆಲುವಿನ ಚಿತ್ತಾರ

ನವರಂಗಿ ದುನಿಯಾದಲ್ಲಿ ಮುಂಗಾರು ಮಳೆ ಬಿಡಿಸಿತು ಚೆಲುವಿನ ಚಿತ್ತಾರ
ಎಂದಿನಂತೆ ಮತ್ತೊಂದು ವರ್ಷ ಕಳೆದು ಹೋಗಿದೆ. ಓಹೋ ಎನ್ನುವಂಥ ಸಾಧನೆಯಾಗಿದೆ ಎಂದು ಹೆಮ್ಮೆಪಟ್ಟುಕೊಳ್ಳುವಂತಿಲ್ಲವಾದರೂ ಆಹಾ ಎಂಬ ಆಹ್ಲಾದತೆಯನ್ನು, ತಾಜಾತನವನ್ನು ಮೂಡಿಸಿದ ವರ್ಷವಿದೆಂದು ಧೈರ್ಯವಾಗಿ ಹೇಳಬಹುದು.

ಕನ್ನಡ ಚಿತ್ರಗಳು ಎಂದರೆ ಬೆಂಗಳೂರು ಮಾತ್ರ, ಅದರಲ್ಲೂ ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳು ಮಾತ್ರ ಎಂಬ ಆಣಿಮುತ್ತುಗಳನ್ನು ಉದುರಿಸುವ ಕಾಲವೊಂದಿತ್ತು. ಇಲ್ಲಿ ಹಾಕಿದ ದುಡ್ಡು ಮತ್ತೆ ವಾಪಸ್ ಬರುವುದು ಮತ್ತಾವಾಗಲೋ ಎಂದು ಮೂಗು ಮುರಿಯುವ ಸೋ ಕಾಲ್ಡ್ ಉದ್ಯಮಿಗಳಿಗೇನೂ ಇಲ್ಲಿ ಕಮ್ಮಿಯಿರಲಿಲ್ಲ. ಆದರೆ ಕನ್ನಡ ಚಿತ್ರಗಳಿಗೂ ಒಂದು ದಮ್ ಇದೆ, ರಿದಮ್ ಇದೆ ಎಂದು ಇತರ ರಾಜ್ಯಗಳಿಗೆ ಮತ್ತು ರಾಜ್ಯದಲ್ಲಿರುವ ಇತರ ರಾಜ್ಯದವರಿಗೆ ಅರ್ಥವಾಗಿದ್ದು ಪ್ರಾಯಶಃ ಈ ವರ್ಷದಲ್ಲಿಯೇ ಅನ್ನಬಹುದು.

ಹಾಗಾದರೆ ಪುಟ್ಟಣ್ಣ ಕಣಗಾಲರ ಕಾಲದಲ್ಲಿ ಕನ್ನಡ ಚಿತ್ರಗಳ ಹಿರಿಮೆ-ಗರಿಮೆ ಹೊರಗಿನವರಿಗೆ ಗೊತ್ತಾಗಿರಲಿಲ್ಲವೇ? ಗೀರೀಶ್ ಕಾಸರವಳ್ಳಿ ಸಾಲು ಸಾಲಾಗಿ ರಾಷ್ಟ್ತ್ರಪ್ರಶಸ್ತಿಗಳನ್ನು ಗಳಿಸಿದ್ದು ವಿಶ್ವದ ಗಮನಕ್ಕೆ ಬಂದಿಲ್ಲವೇ ಎಂದು ನೀವು ಕೇಳಬಹುದು. ಆದರೆ ಅಂದಿನ ಸಾಂಸ್ಕ್ಕತಿಕ ಸಂತೋಷಕ್ಕೂ ಇಂದಿನ ವ್ಯಾವಹಾರಿಕ ಸಂತೋಷಕ್ಕೂ ದಟ್ಟ ವ್ಯತ್ಯಾಸವಿದೆ.

2007ರಲ್ಲಿ ಒಟ್ಟು 95 ಚಿತ್ರಗಳು ಬಿಡುಗಡೆಯಾಗಿದ್ದರೂ ಅವುಗಳಲ್ಲಿ 18 ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದವು. ಅವುಗಳ ಪೈಕಿ ಜಾಕ್ಪಾಟ್ ಹೊಡೆದದ್ದು ಮುಂಗಾರುಮಳೆ, ದುನಿಯಾ ಮತ್ತು ಚೆಲುವಿನ ಚಿತ್ತಾರ ಚಿತ್ರಗಳು ಎಂದೇ ಹೇಳಬಹುದು. ಈ ಮೂರು ಚಿತ್ರಗಳಿಂದ ನೂರು ಕೋಟಿಗೂ ಮೀರಿದ ವಹಿವಾಟು ಸಾಧ್ಯವಾಗಿದ್ದು, ಕನ್ನಡ ಚಿತ್ರಗಳಿಗೆ ಮಾರುಕಟ್ಟೆಯಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದವರ ಬಾಯಿಗೆ ಲಾಲಿಪಾಪ್ ಇಲ್ಲದ ಕಡ್ಡಿಯಿಟ್ಟಂತಾಗಿದೆ ಎಂದರೆ ಅದು ಕುಹಕವಲ್ಲ, ವಸ್ತುಸ್ಥಿತಿ. ಹೀಗಾಗಿ ಕನ್ನಡ ಸಿನಿಮಾ ಎಂದರೆ ಆ......ಕಳಿಸುತ್ತಿದ್ದವರೂ ಈ ವರ್ಷ ಮೈಕೊಡವಿ ಎದ್ದು ಕುಳಿತದ್ದು ಈ ವರ್ಷದ ವಿಶೇಷ.

ಮುಂಗಾರು ಮಳೆ ಚಿತ್ರದ ನಿರ್ದೇಶಕ ಯೋಗರಾಜಭಟ್ಟರು ನಿಜಕ್ಕೂ ಈ ವರ್ಷ ನಿಜವಾದ ಅರ್ಥದಲ್ಲಿ ಯೋಗರಾಜರಾಗಿಯೇಬಿಟ್ಟರು!! ತಮ್ಮ ಖಾತೆಯಲ್ಲಿ ಮಣಿ ಮತ್ತು ರಂಗ (ಎಸ್.ಎಸ್.ಎಲ್.ಸಿ.)ಳಿ ಎಂಬೆರಡು ವಿಫಲ ಚಿತ್ರಗಳನ್ನು ಜಮೆ ಮಾಡಿಕೊಂಡಿದ್ದ ಭಟ್ಟರಿಗೆ ಮುಂಗಾರು ಮಳೆ ಈ ಪರಿಯಾಗಿ ಜಡಿಮಳೆಯಾಗುತ್ತದೆ ಎಂದು ಪ್ರಾಯಶಃ ಗೊತ್ತಿರಲಿಲ್ಲ ಎನಿಸುತ್ತದೆ. ಆದರೆ ಹಲವು ವೈಫಲ್ಯಗಳು ಓರ್ವ ವ್ಯಕ್ತಿಯನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಬಿಟ್ಟರೂ ಆತನ ಅಂತಸ್ಥೈರ್ಯ ಕುಸಿಯದಿದ್ದರೆ ಆತನಿಂದ ಎಂತಹ ಸಾಧನೆ ಸಾಧ್ಯ ಎಂಬುದಕ್ಕೆ ಭಟ್ಟರು ಉದಾಹರಣೆಯಾಗಿದ್ದಾರೆ. ಇದೇ ಮಾತು ದುನಿಯಾ ನಿರ್ದೇಶಕ ಸೂರಿಯವರಿಗೂ ಅನ್ವಯವಾಗುತ್ತದೆ. ಇನ್ನು ಚೆಲುವಿನ ಚಿತ್ತಾರವಂತೂ ರಿಮೇಕ್ ಆಗಿ ಕೂಡಾ ಯಶಸ್ಸಿನ ಉತ್ತುಂಗಕ್ಕೇರಿತು. ರಿಮೇಕ್ ಅನ್ನುವುದನ್ನು ಬಿಟ್ಟರೆ, ಒಂದು ರೀತಿಯಲ್ಲಿ ಇದರದು ಮುಂಗಾರಿನ ಮಳೆಗೆ ಸರಿಸಮನಾದ ಯಶಸ್ಸು. ಇದರ ಹವಿರ್ಭಾಗ ಸಲ್ಲಬೇಕಾದ್ದು ಸಂಗೀತ ನಿರ್ದೇಶಕ ಮನೋಮೂರ್ತಿಯವರಿಗೆ ಎಂಬುದೀಗ ನಿರ್ವಿವಾದ.

ಯಶಸ್ಸು ಸಾಧಿಸಿದ ಚಿತ್ರಗಳ ಪಟ್ಟಿಯಲ್ಲಿ ಅರಸು, ಮಿಲನ, ಕೃಷ್ಣ, ಹುಡುಗಾಟ, ಆ ದಿನಗಳು ಮೊದಲಾದ ಚಿತ್ರಗಳೂ ಇವೆ. ಇವೆಲ್ಲಾ ಸದಭಿರುಚಿಯ ಚಿತ್ರಗಳು ಎಂಬುದಿಲ್ಲಿ ವಿಶೇಷ. ಅಶ್ಲೀಲ ಸಂಭಾಷಣೆ, ಹುಚ್ಚಾಬಟ್ಟೆ ಬಿಚ್ಚಾಟ ಇತ್ಯಾದಿ ಅಂಶಗಳಿದ್ದರೆ ಮಾತ್ರ ಚಿತ್ರಗಳು ಗೆಲ್ಲುತ್ತವೆ ಎಂಬ ಚಿತ್ರನಿರ್ಮಾತೃಗಳ ಜನಮೇಜಯರಾಯನ ಕಾಲದ ಹುಸಿ ಕಲ್ಪನೆಗಳಿಗೆ ಇಂಥ ಚಿತ್ರಗಳು ಫುಲ್ಸ್ಟಾಪ್ ಹಾಕುತ್ತವೆ ಎಂಬುದು ಸಾರ್ವಕಾಲಿಕ ಸತ್ಯ.

ಆದರೆ ಸದಭಿರುಚಿ, ತಪಸ್ಸು, ಕಥೆಯನ್ನು ಕಟ್ಟಿಕೊಡುವ ಪ್ರಾಮಾಣಿಕತೆ ಇವೆಲ್ಲಾ ಇದ್ದೂ ಸಹ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರ ಸೋತದ್ದು ಆ ತಂಡದವರಿಗಷ್ಟೇ ಅಲ್ಲ ಚಿತ್ರ ರಸಿಕರಿಗೂ ಕೊಂಚ ಬೇಸರವನ್ನುಂಟುಮಾಡಿತು. ರೈತನ ಒಳತೋಟಿಯನ್ನು ಹೊರಹೊಮ್ಮಿಸಬೇಕಿದ್ದ ಹೂವಯ್ಯ ಪಾತ್ರಧಾರಿ ಡಾ. ವಿಷ್ಣುವರ್ಧನ್‌ರವರು ಜುಬ್ಬಾ, ಪೇಟವನ್ನು ಧರಿಸಿದ್ದು ಅಸಹಜವಾಗಿತ್ತು ಎಂಬ ಕೊಂಕೂ ಈ ಸಂದರ್ಭದಲ್ಲಿ ಕೇಳಿಬಂತು. ಒಂದರ್ಥದಲ್ಲಿ, ಕಮರ್ಷಿಯಲ್ ಲೆಕ್ಕಾಚಾರದಲ್ಲಿ ಇದು ಹೌದೆನಿಸಿದರೂ ಇದಕ್ಕಿಂತ ಹೆಚ್ಚಿನ ಅಸಹಜತೆ-ಅಪಸವ್ಯಗಳನ್ನು ಹೊಂದಿರುವ ಚಿತ್ರಗಳನ್ನು ಪ್ರೇಕ್ಷಕ ಈ ಹಿಂದೆ ಗೆಲ್ಲಿಸಿದ್ದಾನಲ್ಲಾ? ಹಳ್ಳಿಗಳ ಮೇಲಿನ ಜಾಗತೀಕರಣದ ದುಷ್ಪರಿಣಾಮಗಳನ್ನು ಪ್ರಾಮಾಣಿಕ ದನಿಯಿಂದ ಹೇಳಹೊರಟಿದ್ದ ನಾಗತಿಹಳ್ಳಿಯವರಿಗೆ ಮಾತ್ರವೇ ಹೀಗೇಕಾಯಿತು ಎಂಬುದೀಗ ಶೇಷಪ್ರಶ್ನೆ.

ಚಿತ್ರರಂಗದ ಸಾಂಪ್ರದಾಯಿಕ ನಾಯಕರ ಜೊತೆಜೊತೆಗೇ ಈ ಬಾರಿ ನಾಯಕ ಪಟ್ಟವನ್ನೇರಿದವರು ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ಸಂಗೀತ ನಿರ್ದೇಶಕ ಮನೋಮೂರ್ತಿ ಎನ್ನಬಹುದು. ಸಾಹಿತ್ಯ ಹಾಗೂ ಸಂಗೀತಕ್ಕೆ ಮಾರ್ಕೆಟ್ ಸೃಷ್ಟಿಮಾಡುವುದರಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು ಎಂಬುದು ಹೆಮ್ಮೆಯ ಸಂಗತಿಯಾಗಿ ಕಂಡಿತು.

ಆದರೆ ಉತ್ತಮ ಕಥೆ-ಚಿತ್ರಕಥೆ-ಅಭಿನಯ-ಹಾಡು-ಸಂಗೀತ-ನಿರ್ದೇಶನವನ್ನು ಹೊಂದಿದ್ದೂ ಕಲ್ಲರಳಿ ಹೂವಾಗಿ ಚಿತ್ರ ಸಂತೋಷ್ ಚಿತ್ರಮಂದಿರದಿಂದ ಎತ್ತಂಗಡಿಯಾದಾಗ, ಟಿ.ಎನ್.ಸೀತಾರಾಮ್‌ರವರ ಬಹು ನೀರೀಕ್ಷಿತ ಚಿತ್ರ ಮೀರಾ ಮಾಧವ ರಾಘವ ನಿರೀಕ್ಷೆಯ ಮಟ್ಟಕ್ಕೂ ಏರದಿದ್ದಾಗ ಏಕೆ ಹೀಗಾಯ್ತೋ ನಾನು ಕಾಣೆನೂ... ಎಂದು ಪರಿಸ್ಥಿತಿಯ ಅರಿವಿಲ್ಲದವರು ಗೊಣಗುವಂತಾಯ್ತು. ಜೀವನವೇ ಅನೀರೀಕ್ಷಿತ ಸಂಗತಿಗಳ ಮೂಟೆಯಲ್ಲವೇ?

ಅನಗತ್ಯ ವಿವಾದಗಳಿಗೆ ಕನ್ನಡ ಚಿತ್ರರಂಗ ಈ ಬಾರಿ ಚಾದರ ಹಾಸಬೇಕಾಗಿ ಬಂತು. ಎಸ್.ನಾರಾಯಣ್ ಮತ್ತು ನಾಯಕನಟ ವಿಜಯ್ ಅವರ ನಡುವೆ ನಡೆದ ಮನಸ್ತಾಪ ಕೊಂಚ ಅತಿರೇಕ ಎನಿಸುವಷ್ಟು ಮಟ್ಟವನ್ನು ಮುಟ್ಟಿತು. ನಾಲ್ಕು ಜನ ಇರುವ ಮನೆಯಲ್ಲಿಯೇ ಕೆಲವೊಮ್ಮೆ ಅಸಮಾಧಾನದ ಹೊಗೆಯೇಳುತ್ತದೆ, ಇಗೋವಿನ ಗುಮ್ಮ ಕಾಡುತ್ತದೆ. ಅಂಥಾದ್ದರಲ್ಲಿ ನೂರಾರು ಮಂದಿಯನ್ನೊಳಗೊಂಡ ಚಿತ್ರಸಂಸಾರದ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು, ಇಗೋ ಮುಂತಾದವು ಸಹಜ. ಆದರೆ ನಾಲ್ಕುಗೋಡೆಯ ನಡುವೆ ಮುಗಿದು ಹೋಗಬಹುದಿದ್ದ ಸಂಧಾನ ನಾಲ್ಕು ದಿಕ್ಕಿಗೂ ಪಸರಿಸುವಂತಾಗಿದ್ದು ಪ್ರಚಾರದ ಹುಚ್ಚು ವ್ಯಾಮೋಹದಿಂದಲೋ, ನಾನೇಕೆ ಬಗ್ಗಬೇಕು? ಎಂಬ ಹಮ್ಮಿನ ಕಾರಣದಿಂದಲೋ ಎಂಬುದು ಅರಿವಾಗಲಿಲ್ಲ. ಒಟ್ಟಿನಲ್ಲಿ ಹೊಂದಾಣಿಕೆಯ ಗೂಡಾಗಿದ್ದ ಕನ್ನಡ ಚಿತ್ರರಂಗದ ತಳಪಾಯ ಈ ಅವಧಿಯಲ್ಲಿ ಕೊಂಚ ಅಲುಗಿದ್ದಂತೂ ಸತ್ಯ.

ಈ ಮಧ್ಯೆ ಪತ್ರಕರ್ತ ರವಿ ಬೆಳಗೆರೆ ಮುಖ್ಯಮಂತ್ರಿ ಐ ಲವ್ ಯೂ ಚಿತ್ರ ನಿರ್ಮಾಣ-ನಿರ್ದೇಶನಕ್ಕೆ ಇಳಿದಿದ್ದು, ಅದರ ಕೆಲ ಅಂಶಗಳು ವಿವಾದಕ್ಕೆ ಕಾರಣವಾಗಿದ್ದು; ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ಸುಳ್ಳೇ ಸುಳ್ಳು.. ಹಾಡು ಶ್ರೀರಾಮಸೇನಾದ ಕೆಂಗಣ್ಣಿಗೆ ಗುರಿಯಾಗಿದ್ದು ಮೊದಲಾದವೆಲ್ಲಾ ಹಾಗೊಮ್ಮೆ ಹೀಗೊಮ್ಮೆ ಬಂದುಹೋದವು.

ಹೇಳುತ್ತಾ ಹೋದರೆ, ಹೇಳಿದ್ದಕ್ಕಿಂತ ಬಾಕಿ ಉಳಿದದ್ದೇ ಹೆಚ್ಚಾಗುತ್ತದೆ. ಅದರೂ ಸಹ, 2007ರಲ್ಲಿ ಕನ್ನಡ ಚಿತ್ರರಂಗದ ಸಾಧನೆ ಏನು ಎಂದು ಯಾರಾದರೂ ಕೇಳಿದರೆ ಥಟ್ಟನೇ ನೆನಪಿಗೆ ಬರುವುದು ಈ ಲೇಖನದ ತಲೆಬರಹದಲ್ಲಿ ಸೇರಿರುವ ಮೂರು ಚಿತ್ರಗಳು ಹಾಗೂ ಅದರಲ್ಲಿ ದುಡಿದ ವಿವಿಧ ವಿಭಾಗಗಳ ತಪಸ್ವಿಗಳು. ಸಾಫ್ಟ್ವೇರ್ ಜಗತ್ತಿನ ಉಸಿರಾಟವೇ ತುಂಬಿರುವ ಬೆಂಗಳೂರಿನ ಪಿವಿಆರ್ ಚಿತ್ರಮಂದಿರದಲ್ಲಿ ಗಾರೆ ಕೆಲಸದ ತಮಿಳಿಗ ಮುನಿಸ್ವಾಮಿ ದುನಿಯಾ ಚಿತ್ರದ ಕರಿಯಾ ಐ ಲವ್ ಯೂ ಹಾಡಿನ ರಿಂಗ್ಟೋನ್ ಇಟ್ಟುಕೊಳ್ಳುವುದು ಸಾಮಾನ್ಯದ ಮಾತಲ್ಲ. ಮುಂಗಾರುಮಳೆಯಂಥ ಚಿತ್ರ ಒಂದು ವರ್ಷ ಓಡುವುದು ಸಾಮಾನ್ಯ ಸಂಗತಿಯಲ್ಲ. ರಾಜಣ್ಣನವರ ಬಂಗಾರದ ಮನುಷ್ಯ, ಶಂಕರ್‌ಗುರು ಚಿತ್ರಗಳಿಗಷ್ಟೇ ಈ ಭಾಗ್ಯ ಒದಗಿಬಂದಿತ್ತು ಎಂಬುದು ಚಿತ್ರರಸಿಕರ ನೆನಪಿನ ಪುಸ್ತಕದ ಪುಟಗಳಲ್ಲಿ ಹಸಿರಾಗಿ ನಿಂತಿದೆ.

ಆದರೆ ಇದನ್ನೇ ಸಾಧನೆ ಎಂದುಕೊಳ್ಳದೆ, ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳದೆ ಚಲನಚಿತ್ರ ಪ್ರಭೃತಿಗಳು ಇನ್ನಷ್ಟು ಸಾಧನೆಗೆ ಹೃದಯ ಹರಡಿ ಕೂರಬೇಕಿದೆ, ಮನಬಿಚ್ಚಿ ಮಾತಾಡಬೇಕಿದೆ. ಸಾಧನೆಯ ಹಾದಿಯಲ್ಲಿ ಅಡೆತಡೆಗಳು ಇರುವುದು ಸಹಜ. ಅದರೆ, ಸಮಸ್ಯೆಯೆಂಬ ಕಡ್ಡಿಯನ್ನೇ ಗುಡ್ಡ ಮಾಡಿಕೊಂಡು ಇನ್ನೊಬ್ಬರ ಬುಡಕ್ಕೆ ಬಿಸೀನೀರು ಕಾಯಿಸುವ ದುಷ್ಟಪ್ರಯತ್ನ ಬೇಡ, ಅದರಿಂದ ವ್ಯತಿರಿಕ್ತ ಪರಿಣಾಮಗಳೇ ಹೊರಬೀಳುತ್ತವೆ ಎಂಬುದು ಚಿತ್ರರಸಿಕರ ಆಶಯ. ಚಿತ್ರರಸಿಕರ ಆಶಯ ಆಶಾಪಲ್ಲವಿಯಾಗಿ ಚಿತ್ರಕುಟುಂಬಕ್ಕೆ ಕೇಳಿಸಲಿ.

Share this Story:

Follow Webdunia kannada