ಇರಾಕ್‌ನಲ್ಲಿ ಸರ್ವಾಧಿಕಾರಿಯಂತೆ ಮೆರೆದ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ ಅವರನ್ನು ಗಲ್ಲಿಗೇರಿಸಿದ ಬಳಿಕ ಭುಗಿಲೆದ್ದಿರುವ ಹಿಂಸಾಚಾರ, ಭಾರತೀಯ ಸಂಜಾತೆ ಅಮೆರಿಕದ ಬಾಹ್ಯಾಕಾಶ ಯಾನಿ ಸುನೀತಾ ವಿಲಿಯಮ್ಸ್ ಅಭೂತಪೂರ್ವ ಸಾಧನೆ, ಶ್ರೀಲಂಕಾ ವಾಯುಪಡೆಯ ಬಾಂಬ್ ದಾಳಿಯಿಂದ ಎಲ್‌ಟಿಟಿಇಯ ನಾಯಕ ತಮಿಳು ಸೆಲ್ವನ್ ನಿಧನದ ಬಳಿಕ ಎಲ್‌ಟಿಟಿಇಗೆ ತೀವ್ರ ಹಿನ್ನಡೆ, ಜಾಗತಿಕ ತಾಪಮಾನದ ಬದಲಾವಣೆ ಕುರಿತು ಇಂಡೋನೇಶಿಯ ಬಾಲಿಯ ಹವಾಮಾನ ಸಮಾವೇಶದಲ್ಲಿ ವ್ಯಕ್ತವಾದ ಕಳವಳ, ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಅಲ್‌ಕೈದಾ ನಾಯಕ ಒಸಾಮಾ ಬಿನ್ ಲಾಡೆನ್ ಎಚ್ಚರಿಕೆ, ಹೀಗೆ ಹತ್ತುಹಲವು ಘಟನೆಗಳೊಂದಿಗೆ ಇತಿಹಾಸದ ಕಾಲಗರ್ಭಕ್ಕೆ ಸೇರಿಹೋದ 2007 ನೇ ವರ್ಷ ಸಿಹಿನೆನಪುಗಳಿಗಿಂತ ಹೆಚ್ಚಾಗಿ ಕಹಿನೆನಪುಗಳನ್ನು ಉಳಿಸಿಹೋಗಿದೆ.
ಹೊಸ ವರ್ಷವನ್ನು ಸಂಭ್ರಮ, ಸಡಗರದಿಂದ ಸ್ವಾಗತಿಸುವ ನಡುವೆ ಸರಿದು ಹೋದ ವರ್ಷದ ಘಟನಾವಳಿಗಳ ಬಗ್ಗೆ ಹಿನ್ನೋಟ ಹರಿಸಿದಾಗ, ನಿರುದ್ಯೋಗ, ಬಡತನ ವಿಶ್ವವ್ಯಾಪಿ ಕರಾಳಹಸ್ತವನ್ನು ವಿಸ್ತರಿಸಿರುವುದು ನಿಚ್ಚಳವಾಗಿದೆ. ಜತೆಗೆ ಏಡ್ಸ್ ಮುಂತಾದ ಮಾರಕ ಕಾಯಿಲೆಗಳು ಜಗತ್ತಿನ ಸಾವಿರಾರು ಜನರನ್ನು ಅಪೋಷನ ತೆಗೆದುಕೊಳ್ಳುತ್ತಾ, ನನ್ನ ನಾಮಾವಶೇಷ ನಿಮಗೆ ಸಾಧ್ಯವೇ ಎಂದು ಮಾನವಪೀಳಿಗೆಯನ್ನು ಅಣಕಿಸುತ್ತಿದೆ. 2008 ಹೊಸ ವರ್ಷವನ್ನು ಸಂಭ್ರಮ, ಉಲ್ಲಾಸದಿಂದ ಸ್ವಾಗತಿಸುವ ನಡುವೆ 2007ರಲ್ಲಿ ಸಂಭವಿಸಿದ ಘಟನಾವಳಿಗಳ ಒಂದು ಸಿಂಹಾವಲೋಕನ.
ಜನವರಿ 7: ಲಂಡನ್ ಸಂಡೇ ಟೈಮ್ಸ್ ಇರಾನಿನ ಯುರೇನಿಯಂ ಸಂಸ್ಕರಣೆ ಸೌಲಭ್ಯಗಳ ಮೇಲೆ ಇಸ್ರೇಲ್ ಸರ್ಕಾರ ದಾಳಿ ಮಾಡಲು ಯೋಜಿಸುತ್ತಿದೆ ಎಂಬ ವರದಿಯನ್ನು ಪ್ರಕಟಿಸಿತು. ಇಸ್ರೇಲನ್ನು ಭೂಪಟದಿಂದ ಅಳಿಸಿಹಾಕಬೇಕು ಎಂದು ಇರಾನ್ ಅಧ್ಯಕ್ಷ ಮಹ್ಮದ್ ಅಹ್ಮದಿ ನೆಜಾದ್ ಹೇಳಿಕೆ ನೀಡಿದ್ದರು. ಇಸ್ರೇಲ್‌ಗೆ ಬಹಿರಂಗ ಬೆದರಿಕೆ ಹಾಕುವ ಮೂಲಕ ಅಹ್ಮದಿ ನೆಜಾದ್ ಇರಾನ್ ಮೇಲೆ ಪೂರ್ವನಿಯೋಜಿತ ದಾಳಿಗೆ ಪ್ರೇರೇಪಣೆ ನೀಡಿದೆಯೆಂದು ಪತ್ರಿಕೆಗಳು ಬರೆದವು.
ಟೈಮ್ಸ್ ಪತ್ರಿಕೆ ಇಸ್ರೇಲ್ ದಾಳಿಯ ಬಗ್ಗೆ ವರ್ಣರಂಜಿತವಾಗಿ ಬಣ್ಣಿಸಿತು. ದಾಳಿಯಲ್ಲಿ ಸಾಂಪ್ರದಾಯಿಕ ಲೇಸರ್ ನಿರ್ದೇಶಿತ ಬಾಂಬ್‌ಗಳು, ಒಂದು ಕಿಲೊಟನ್ ಅಣ್ವಸ್ತ್ರ ಬಂಕರ್ ಬಸ್ಟರ್‌ಗಳನ್ನು ಬಳಸಲಾಗುವುದೆಂದು ಬರೆಯಿತು. ಹಸಿರು ದೀಪ ಹೊತ್ತಿಕೊಂಡ ಕೂಡಲೇ ಒಂದೇ ಒಂದು ಕಾರ್ಯಾಚರಣೆ, ಒಂದೇ ದಾಳಿ ಇರಾನಿನ ಅಣ್ವಸ್ತ್ರ ಯೋಜನೆ ನೆಲಸಮ ಎಂದೆಲ್ಲಾ ಬರೆಯಿತು.
ಇಷ್ಟೆಲ್ಲಾ ಊಹಾಪೋಹಗಳ ನಡುವೆ ವಿಶ್ವಸಂಸ್ಥೆಯ ಶಸ್ತ್ರಾಸ್ತ್ರ ತಪಾಸಕರು 1994ರ ಬಳಿಕ ಇರಾಕ್‌ನಲ್ಲಿ ಅಂತಹ ಮಹತ್ವದ ಸಮೂಹ ವಿನಾಶಕಾರಿ, ರಾಸಾಯನಿಕ ಅಸ್ತ್ರಗಳು ಇಲ್ಲವೆಂದು ಬಿಡುಗಡೆ ಮಾಡಿದ ವರದಿಯಿಂದ ಇರಾನ್ ಮೇಲೆ ಕಣ್ಣಿರಿಸಿದ್ದ ಅಮೆರಿಕದ ಎಲ್ಲ ಪ್ರಯತ್ನಗಳು ಠುಸ್ಸೆಂದಿತು.
ಜನವರಿ 22: ಇರಾಕ್‌ನಲ್ಲಿ ಸದ್ದಾಹುಸೇನ್ ಅವರನ್ನು ಗಲ್ಲಿಗೇರಿಸಿದ ಬಳಿಕ ಉಗ್ರಗಾಮಿಗಳ ಅಟ್ಟಹಾಸ ಮೇರೆ ಮೀರಿತು. ಉಗ್ರರ ಅಟಾಟೋಪಕ್ಕೆ ನೂರಾರು ನಾಗರಿಕರು, ಸೈನಿಕರು ಬಲಿಯಾದರು. ಬಾಗ್ದಾದ್‌ನಲ್ಲಿ ಶಿಯಾ ಮುಸ್ಲಿಮ್ ಪಂಗಡದವರೇ ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಶಕ್ತಿಶಾಲಿ ಎರಡು ಬಾಂಬ್‌ಗಳು ಸ್ಫೋಟಿಸಿ ಕನಿಷ್ಠ ಪಕ್ಷ 72 ಮಂದಿ ಬಲಿಯಾದರು. ಸುಮಾರು 160 ಮಂದಿ ಗಾಯಗೊಂಡರು. ಬಾಗ್ದಾದ್ ಮಾರುಕಟ್ಟೆಯ ಸ್ಫೋಟವು ಶಿಯಾ ಪಂಗಡದವರನ್ನು ಗುರಿಯಾಗಿಸಿತ್ತು. ಇರಾಕ್ ರಕ್ತಲೇಪಿತ ಇತಿಹಾಸಕ್ಕೆ ಸಾಕ್ಷಿಯಾಯಿತು.
IFM
ಜನವರಿ 29:ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬ್ರಿಟನ್ ಸೆಲಿಬ್ರಿಟಿ ಬಿಗ್ ಬ್ರದರ್ ಶೋನಲ್ಲಿ ವಿಜೇತರಾಗುವ ಮೂಲಕ ದೇಶ, ವಿದೇಶಗಳಲ್ಲಿ ಮನೆಮಾತಾದರು. ಬಿಗ್ ಬ್ರದರ್ ಷೋನಲ್ಲಿ ಸಹಸ್ಪರ್ಧಿಗಳು ಶಿಲ್ಪಾಳ ಆಹಾರ ಸೇವಿಸುವ ಧಾಟಿ ಮತ್ತು ಭಾರತೀಯ ಹಿನ್ನೆಲೆಯನ್ನು ಕುರಿತು ಅಪಹಾಸ್ಯ ಮಾಡಿದ ಘಟನೆ ವಿವಾದದ ಕಿಡಿಯನ್ನು ಸ್ಫೋಟಿಸಿತ್ತು. ನಾಯಿ ಮುಂತಾದ ಹೀನ ಪದಗಳನ್ನು ಸಹ ಸ್ಪರ್ಧಿಗಳು ಶಿಲ್ಪಾ ವಿರುದ್ಧ ಪ್ರಯೋಗಿಸಿದ್ದರು.
ಆದರೆ ಶಿಲ್ಪಾ ಜನಾಂಗೀಯ ನಿಂದನೆಗೆ ಒಳಗಾದ ಬಗ್ಗೆ ಚಾನಲ್ 4 ನಿರಾಕರಿಸುತ್ತಾ ಬಂದಿತು. ಅಂತಿಮವಾಗಿ ಬಿಗ್ ಬ್ರದರ್ ಶೋನಲ್ಲಿ ಶಿಲ್ಪಾ ಕಿರೀಟಧಾರಿಣಿಯಾಗಿ ಒಂದು ಲಕ್ಷ ಪೌಂಡ್ ಹಣವನ್ನು ಗೆದ್ದುಕೊಂಡರು. ಈ ಸ್ಪರ್ಧೆಯಲ್ಲಿ ಸಹಸ್ಪರ್ಧಿ ಜೇಡ್ ಗೂಡಿಯಿಂದ ಜನಾಂಗೀಯ ನಿಂದನೆಗೆ ಒಳಗಾದ ಶಿಲ್ಪಾ ಗೆಲ್ಲುವ ಫೇವರಿಟ್ ಎನಿಸಿದ್ದರು.
PTI
ಜೂನ್ 16: ಭಾರತೀಯ ಸಂಜಾತ ಅಮೆರಿಕದ ಮಹಿಳೆ ಸುನೀತಾ ವಿಲಿಯಮ್ಸ್ ಮಹಿಳೆಯೊಬ್ಬರು ಬಾಹ್ಯಾಕಾಶದಲ್ಲಿ ದೀರ್ಘಕಾಲಾವಧಿ ಉಳಿದ ನೂತನ ದಾಖಲೆ ಸೃಷ್ಟಿಸಿದರು. ಭಾರತೀಯ ಕಾಲಮಾನ ಬೆಳಿಗ್ಗೆ 11.27ಕ್ಕೆ 1996ರಲ್ಲಿ ಬಾಹ್ಯಾಕಾಶಯಾನಿ ಶಾನನ್ ಲೂಸಿಡ್ ಅವರ 188 ದಿನ ನಾಲ್ಕು ಗಂಟೆಗಳ ದಾಖಲೆಯನ್ನು ಮುರಿದ ಹೆಗ್ಗಳಿಕೆಗೆ ಅವರು ಪಾತ್ರರಾದರು. ಕಳೆದ ಡಿ.10ರಂದು ಸುನೀತಾ ಅಟ್ಲಾಂಟಿಸ್ ನೌಕೆಯಲ್ಲಿ ಬಾಹ್ಯಾಕಾಶ ಯಾತ್ರೆ ಆರಂಭಿಸಿದ್ದರು. ಇದಕ್ಕೆ ಮುಂಚೆ ನಾಲ್ಕು ಬಾಹ್ಯಾಕಾಶ ನಡಿಗೆಗಳಲ್ಲಿ 29 ಗಂಟೆ ಮತ್ತು 17 ನಿಮಿಷಗಳನ್ನು ಕಳೆಯುವ ಮೂಲಕ ಮಹಿಳಾ ಯಾನಿ ಕ್ಯಾಥರೀನ್ ಥಾರ್ನ್‌ಟನ್ ಅವರ ದಾಖಲೆ ಮುರಿದರು.
ಜೂನ್ 30-ಲಂಡನ್ ಗ್ಲಾಸ್ಗೊ ವಿಮಾನನಿಲ್ದಾಣದ ಸ್ಫೋಟ ಯತ್ನದಲ್ಲಿ ಕರ್ನಾಟಕದ ಮೂವರು ಭಾಗಿಯಾಗಿದ್ದಾರೆಂದು ತನಿಖೆದಾರರು ಬಹಿರಂಗಪಡಿಸಿದರು. ಗ್ಲಾಸ್ಗೊ ದಾಳಿಯ ಸೂತ್ರದಾರನೆಂದು ಶಂಕಿಸಿ ಬೆಂಗಳೂರಿನ ವೈದ್ಯ ಮೊಹಮದ್ ಹನೀಫ್ ಎಂಬವರನ್ನು ಆಸ್ಟ್ರೇಲಿಯ ಪೊಲೀಸರು ಬಂಧಿಸಿದರು. ಎಂಜಿನಿಯರಿಂಗ್ ವಿದ್ಯಾರ್ಥಿ ಕಫೀಲ್ ಮತ್ತು ಅವನ ಸೋದರನ ಕೈವಾಡ ಸಾಬೀತಾದರೂ, ಹನೀಫ್ ನಿರ್ದೋಷಿ ಎಂದು ಪೊಲೀಸರು ತೀರ್ಮಾನಿಸಿ ಬಿಡುಗಡೆ ಮಾಡಿದರು. ಹನೀಫ್ ಬಂಧನದಿಂದ ಅನುಭವಿಸಿದ ಮಾನಸಿಕ ಯಾತನೆಗೆ ಕೊನೆಗೂ ಮುಕ್ತಿ ಸಿಕ್ಕಿ, ನಿಟ್ಟುಸಿರು ಬಿಟ್ಟರು.
PTI
ಜುಲೈ 7-ಹಿಂದಿನ ವಿಶ್ವದ ಏಳು ಅದ್ಭುತಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುವ ದೃಷ್ಟಿಯಿಂದ ವಿಶ್ವದ 7 ಹೊಸ ಅದ್ಭುತಗಳ ಶೋಧನೆ ಸಲುವಾಗಿ ಜನಾಭಿಮತ ಸಂಗ್ರಹಿಸುವ ಪ್ರಕ್ರಿಯೆಯು 2000ನೇ ಇಸವಿಯಲ್ಲಿ ಆರಂಭವಾಯಿತು. 18 ತಿಂಗಳ ಕಾಲ ಜಾಗತಿಕ ಅಂತಿಮ ಮತಗಳ ಮೂಲಕ ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ಜುಲೈ 7ರಂದು ಅಧಿಕೃತ ಘೋಷಣೆ ಮಾಡಿದಾಗ ಏಳು ಅದ್ಭುತಗಳ ಪಟ್ಟಿಯಲ್ಲಿ ವಿಶ್ವವಿಖ್ಯಾತ, ಪ್ರೇಮದ ಸಂಕೇತವಾದ ಆಗ್ರಾದ ತಾಜ್‌ಮಹಲ್ ಕೂಡ ಸೇರಿದ್ದು ಭಾರತೀಯರು ಸಂತಸ ಪಡುವ ಸಂಗತಿಯಾಯಿತು. ಮೊಗಲ್ ದೊರೆ ಷಹಜಹಾನ್ ತನ್ನ ಪತ್ನಿಯ ಸ್ಮರಣೆಗಾಗಿ ನಿರ್ಮಿಸಿದ ಅದ್ಭುತ ಸೌಂದರ್ಯದ ಗಣಿ ತಾಜ್‌ಮಹಲ್ ಇಂದಿಗೂ ದೇಶವಿದೇಶಗಳ ಜನರನ್ನು ಆಕರ್ಷಿಸುತ್ತಿದೆ.
ಅಕ್ಟೋಬರ್ 12 : ಜಾಗತಿಕ ತಾಪಮಾನ ಕುರಿತ ವಿಶ್ವಸಂಸ್ಥೆ ಸಮಿತಿ ಮತ್ತು ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್ ಗೋರ್ ನೊಬೆಲ್ ಶಾಂತಿ ಪ್ರಶಸ್ತಿಗೆ ಪಾತ್ರರಾದಾಗ ವಿಶ್ವಸಂಸ್ಥೆ ಸಮಿತಿಯ ನೇತೃತ್ವ ವಹಿಸಿರುವ ಭಾರತೀಯ ವಿಜ್ಞಾನಿ ರಾಜೇಂದ್ರ ಪಚೌರಿ ಆಶ್ಚರ್ಯಚಕಿತರಾದರು. ತಾವೊಂದು ಸಂಕೇತ ಮಾತ್ರವಾಗಿದ್ದು, ತಮ್ಮ ಸಂಘಟನೆ ಮತ್ತು ಅದರ ಪ್ರಯತ್ನಗಳಿಗೆ ಈ ಗೌರವ ಸಲ್ಲುತ್ತದೆ ಎಂದು ಅವರು ನುಡಿದರು.
ಐಪಿಸಿಸಿಯು ಜಾಗತಿಕ ತಾಪಮಾನದ ಬಗ್ಗೆ ಉನ್ನತಾಧಿಕಾರದ ಸಮಿತಿಯಾಗಿದ್ದು. ಹವಾಮಾನ ಬದಲಾವಣೆ ಕುರಿತ ಪ್ರಮುಖ ವಿಜ್ಞಾನಿಗಳು ಮತ್ತು ತಜ್ಞರನ್ನು ಒಳಗೊಂಡಿದೆ. .ಹವಾಮಾನ ಬದಲಾವಣೆಯಿಂದ ತೀವ್ರ ಪೀಡಿತವಾಗಿರುವ ಭಾರತ ಮತ್ತು ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳ ಬಗ್ಗೆ ಪಚೌರಿ ಕಳವಳ ವ್ಯಕ್ತಪಡಿಸುತ್ತಾ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಾಮಾನ ಬದಲಾವಣೆ ನಿಭಾಯಿಸಲು ಸೂಕ್ತ ಪರಿಸ್ಥಿತಿಯನ್ನು ಸೃಷ್ಟಿಸಿದರೆ ಅಭಿವೃದ್ಧಿಶೀಲ ರಾಷ್ಟ್ರಗಳು ಅವನ್ನು ಅನುಸರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
PTI
ನವೆಂಬರ್ 2: ತಮಿಳು ಈಳಂ ವ್ಯಾಘ್ರಪಡೆಯ ರಾಜಕೀಯ ವಿಭಾಗದ ಮುಖಂಡ 40 ವರ್ಷದ ಸುಪ್ಪಯ್ಯ ಪರಮು ತಮಿಳ್ ಸೆಲ್ವನ್ ಶ್ರೀಲಂಕಾ ವಾಯುಪಡೆಯ ಜೆಟ್ ಬಾಂಬರ್ ವಿಮಾನಗಳ ಗುಂಡಿನ ದಾಳಿಗೆ ನಸುಕಿನಲ್ಲೇ ಬಲಿಯಾದರು. ವಾನ್ನಿ ಪ್ರದೇಶದ ಕಿಲ್ಲಿನೋಚಿ ಪಟ್ಟಣದ ತಿರುವಾಯೂರು ಬಳಿ ತಮಿಳ್ ಸೆಲ್ವನ್ ಬಂಕರ್‌ವೊಂದರಲ್ಲಿ ಗಾಢ ನಿದ್ರೆಯಲ್ಲಿದ್ದಾಗಲೇ ಮರಣಶಯ್ಯೆಗೆ ತುತ್ತಾದರು. ಎಲ್‌ಟಿಟಿಇ ಮುಖಂಡ ಪ್ರಭಾಕರನ್ ತಮಿಳ್ ಸೆಲ್ವನ್ ಸಾವಿನ ಕುರಿತ ಸಂದೇಶದಲ್ಲಿ ಶ್ರೀಲಂಕಾ ಕಳಿಸಿದ ಬೃಹತ್ ಬಾಂಬ್‌ಗಳನ್ನು ಎಸೆಯುವ ಸಮರ ಹದ್ದುಗಳು ನಮ್ಮ ಶಾಂತಿ ಸಂದೇಶದ ಪಾರಿವಾಳವನ್ನು ಕ್ರೂರವಾಗಿ ಕೊಂದಿತೆಂದು ವಿಶ್ಲೇಷಿಸಿದ್ದಾರೆ.
PTI
ನವೆಂಬರ್ 3 :ಪಾಕಿಸ್ತಾನದ ಇತಿಹಾಸದಲ್ಲಿ ಅಚ್ಚಳಿಯದೇ ನೆನಪಿನಲ್ಲಿ ಉಳಿಯುವ ದಿನ. ಅಧ್ಯಕ್ಷ ಮುಷರ್ರಫ್ ಅವರು ತುರ್ತುಪರಿಸ್ಥಿತಿ ರಾಷ್ಟ್ರದ ಮೇಲೆ ಹೇರಿ, ಸಂವಿಧಾನವನ್ನು ಅಮಾನತಿನಲ್ಲಿ ಇರಿಸಿದರು. ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಇಫ್ತಿಕರ್ ಚೌಧರಿ ಅವರನ್ನು ವಜಾ ಮಾಡಿದರು. ಖಾಸಗಿ ಟಿವ ಚಾನಲ್‌ಗಳ ಪ್ರಸಾರ ಸ್ಥಗಿತಗೊಳಿಸಲಾಯಿತು. ದೂರವಾಣಿ ಮತ್ತು ಮೊಬೈಲ್‌ಗಳು ಸ್ತಬ್ಧವಾದವು. ಮುಷರ್ರಫ್ ಘೋಷಿಸಿದ ತುರ್ತುಪರಿಸ್ಥಿತಿ ದೇಶ, ವಿದೇಶಗಳಿಂದ ವ್ಯಾಪಕ ಟೀಕೆಗೆ ಗುರಿಯಾಯಿತು. ತುರ್ತುಪರಿಸ್ಥಿತಿ ಹೇರಿ 6 ವಾರಗಳಾದ ಬಳಿಕಡಿಸೆಂಬರ್ 15ರಂದು ಅದನ್ನು ತೆರವು ಮಾಡಿದ ಮುಷರ್ರಫ್ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿ ಜನರಲ್ ಹುದ್ದೆಯನ್ನು ಇನ್ನೊಬ್ಬರಿಗೆ ಹಸ್ತಾಂತರಿಸಿದರು.
ನವೆಂಬರ್ 15: ಉಗ್ರಗಾಮಿಗಳಿಗೆ ಆಶ್ರಯ, ತರಬೇತಿ ಮುಂತಾದ ಪ್ರಕ್ರಿಯೆಗಳಿಂದ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಪಾಕಿಸ್ತಾನಕ್ಕೆ ಸ್ವತಃ ಭಯೋತ್ಪಾದನೆಯ ಬಿಸಿ ತಟ್ಟಿತು. ಬೇನಜೀರ್ ಭುಟ್ಟೊ ಅವರಿದ್ದ ಬೆಂಗಾವಲು ಪಡೆಯ ಮೇಲೆ ಆತ್ಮಹತ್ಯೆ ಬಾಂಬರ್ ಸ್ಫೋಟಿಸಿ ಸುಮಾರು 130 ಜನರು ಬಲಿಯಾದರು ಮತ್ತು 400 ಮಂದಿ ಗಾಯಗೊಂಡರು. ಭುಟ್ಟೊ ಅದೃಷ್ಟವಷಾತ್ ಅಪಾಯದಿಂದ ಪಾರಾದರು. ಪಾಕಿಸ್ತಾನ ಅತ್ಯಂತ ಅಪಾಯಕಾರಿ ದೇಶ ಎಂಬ ಹಣೆಪಟ್ಟಿಗೆ ಪಾತ್ರವಾಯಿತು.
PTI
ನವೆಂಬರ್ 15: ಅಪಾಯಕಾರಿ ಸಿಡರ್ ಚಂಡಮಾರುತ ಬಾಂಗ್ಲಾದೇಶಕ್ಕೆ ಅಪ್ಪಳಿಸಿ ಸುಮಾರು 3000 ಮಂದಿ ಬಲಿಯಾದರು.. ಸುಮಾರು 4 ಲಕ್ಷ ಜನರು ಸಿಡರ್ ಹಾವಳಿಯಿಂದ ಸಂತ್ರಸ್ತರಾದರು. ಹಾನಿಗೊಂಡ ಮನೆಗಳು, ಉರುಳಿಬಿದ್ದ ಮರಗಳು, ನೆಲಸಮವಾದ ಶಾಲೆಗಳು, ಬೆಳೆ ನಾಶ, ಚಂಡಮಾರುತದ ವಿನಾಶಕ್ಕೆ ಸಾಕ್ಷಿಯಾಗಿ ಉಳಿಯಿತು. ಸತ್ತವರಲ್ಲಿ ಶೇ. 40 ಮಂದಿ ಮುಗ್ಧ ಮಕ್ಕಳು. ಬದುಕುಳಿದ ಅನೇಕ ಮಕ್ಕಳು ಈಗ ತಬ್ಬಲಿಯಾಗಿವೆ.
ಡಿಸೆಂಬರ್ 20: ಶ್ರೇಷ್ಠತಮವಾದ ಹಾಗೂ ಕೌಶಲ್ಯಯುತವಾದ ನಾಯಕತ್ವದಿಂದ ದೇಶದಲ್ಲಿದ್ದ ಅರಾಜಕತೆಯನ್ನು ಹೊಡೆದೊಡಿಸಿ, ದೇಶದಲ್ಲಿ ಸ್ಥಿರತೆ ನೆಲೆಸುವಂತೆ ಮಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಟೈಮ್ ನಿಯತಕಾಲಿಕೆ ಪತ್ರಿಕೆಯು ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿತು. ಅಮೆರಿಕದ ಮಾಜಿ ಉಪಾಧ್ಯಕ್ಷ ಹಾಗೂ ಈ ಬಾರಿ ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ಪುರಸ್ಕೃತರಾಗಿರುವ ಅಲ್ ಗೊರೆ ಅವರು ಟೈಮ್ ನಿಯತಕಾಲಿಕೆಯ ರನ್ನರ್ಸ್ ಅಪ್ ಆಗಿ ಆಯ್ಕೆಗೊಂಡರು. 1927 ರಿಂದಲೂ ಈ ಪ್ರಶಸ್ತಿಯನ್ನು ಟೈಮ್ ನಿಯಲಕಾಲಿಕೆಯು ಕೊಡುತ್ತಲೇ ಬರುತ್ತಿದ್ದು, ಇದನ್ನು ಪಡೆದುಕೊಂಡವರು ವಿಶೇಷ ಗೌರವ ಪಾತ್ರಕ್ಕೆ ಅರ್ಹರಾಗಿರದಿದ್ದರೂ, ಜಾಗತಿಕ ಮಟ್ಟದಲ್ಲಿ ಆ ವ್ಯಕ್ತಿಗಳು ಮಾಡಿರುವ ಸಾಧನೆಗಳನ್ನು ಪರಿಗಣಿಸಿ ಎತ್ತಿ ತೋರಿಸುವುದೇ ಪ್ರಮುಖ ಉದ್ದೇಶವಾಗಿದೆ ಎಂದು ಟೈಮ್ಸ್ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ರಿಚರ್ಡ್ ಸ್ಟೆಂಗೆಲ್ ಹೇಳಿದ್ದಾರೆ.
ಡಿಸೆಂಬರ್ 21:ಪಾಕಿಸ್ತಾನದ ಪೇಶಾವರದಲ್ಲಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 54 ಜನರು ಬಲಿಯಾಗಿದ್ದು, ಪಾಕಿಸ್ತಾನ ಅಪಾಯಕಾರಿ ದೇಶ ಎಂಬ ಹಣೆಪಟ್ಟಿಗೆ ಮತ್ತೊಮ್ಮೆ ಸಾಕ್ಷಿಯಾಯಿತು, ಮಸೀದಿಯಲ್ಲಿ ಈದ್-ಉಲ್ -ಝುವಾ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಮಾನವ ಬಾಂಬ್ ಸ್ಫೋಟ ಸಂಭವಿಸಿದೆ.
ಡಿಸೆಂಬರ್ 21: ಕೆಲಸದ ವೀಸಾ ಮೇಲೆ ಆಸ್ಟ್ರೇಲಿಯಕ್ಕೆ ವಾಪಸಾಗುವ ಕುರಿತು ಕಾನೂನು ಸಮರದಲ್ಲಿ ಮಹಮದ್ ಹನೀಫ್ ಜಯಗಳಿಸಿದ್ದಾರೆ. ಆಸ್ಟ್ರೇಲಿಯದ ಫೆಡರಲ್ ಕೋರ್ಟ್ ತೀರ್ಪು ಭಾರತೀಯ ಮೂಲದ ವೈದ್ಯರಾದ ಹನೀಫ್‌ಗೆ ಕಾನೂನಿನ ದೊಡ್ಡ ಜಯ ಎಂದು ಬಣ್ಣಿಸಲಾಗಿದೆ.
ಡಿಸೆಂಬರ್ 27: ಹೊಸ ವರ್ಷವನ್ನು ಸಂಭ್ರಮದಿಂದ ಎದುರುಗೊಳ್ಳಲು ಜಗತ್ತು ಸಿದ್ಧತೆ ನಡೆಸುತ್ತಿರುವಾಗಲೇ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರ ಹತ್ಯೆ ಪಾಕಿಸ್ತಾನದ ಮೇಲೆ ಬರಸಿಡಿಲಿನಂತೆ ಎರಗಿತು. ಇತಿಹಾಸದಲ್ಲಿ ಅಚ್ಚಳಿದಯೇ ನೆನಪಿನಲ್ಲಿ ಉಳಿಯುವ ಕರಾಳ ದಿನ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೊ ಅವರ ಅಮಾನುಷ ಹತ್ಯೆ, ಬೇನಜೀರ್ ಭುಟ್ಟೊ ಅವರು ಪೇಶಾವರದ ಪ್ರಚಾರ ಸಭೆಯಲ್ಲಿ ಭಾಷ|ಣ ಮಾಡಿದ ಬಳಿಕ ಬಂಧೂಕುದಾರಿಯ ಗುಂಡು ಅವರ ಕುತ್ತಿಗೆಯನ್ನು ಸೀಳಿಕೊಂಡು ಹೋಯಿತು. ಬೇನಜೀರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ನಿರೀಕ್ಷಿಸಿದ್ದ ಬಹುಜನರ ಕನಸು ಕಮರಿಹೋಯಿತು. ಬೇನಜೀರ್ ಗುಂಡೇಟು ತಾಗಿದ ಮರುಕ್ಷಣದಲ್ಲೇ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 20 ಜನರು ಬಲಿಯಾದರು. ಪಾಕಿಸ್ತಾನದ ರಕ್ತಸಿಕ್ತ ಕರಾಳ ಇತಿಹಾಸದ ಪುಟಗಳಲ್ಲಿ ಭುಟ್ಟೊ ಹತ್ಯೆ ಸೇರಿಕೊಂಡಿತು.