2007ರ ಜನಪ್ರಿಯ ಅಂತರ್ಜಾಲ ಶೋಧದಲ್ಲಿ ಮಹಾತ್ಮಗಾಂಧಿ ಪ್ರಥಮ ಸ್ಥಾನದಲ್ಲಿದ್ದರೆ, ಕಲಾಂ ದ್ವಿತೀಯ ಸ್ಥಾನದಲ್ಲಿದ್ದಾರೆ. ತೃತೀಯ ಸ್ಥಾನದಲ್ಲಿರುವ ಸೋನಿಯಾಗಾಂಧಿ ಇಲ್ಲಿ ತನ್ನ ಅತ್ತೆ ಇಂದಿರಾಗಾಂಧಿಯವರನ್ನು ಹಿಂದೂಡಿದ್ದಾರೆ. ಹಾಗಾಗಿ ಇಲ್ಲಿ ಇಂದಿರಾಗಾಂಧಿ ನಾಲ್ಕನೆ ಸ್ಥಾನಕ್ಕೆ 'ತೃಪ್ತಿ'ಪಟ್ಟುಕೊಳ್ಳ ಬೇಕಾಗಿದೆ.
ಮುನ್ನಾಭಾಯಿ ಮತ್ತು ಆತನ ಗಾಂಧಿಗಿರಿಯಿಂದಾಗಿ, ಅತ್ಯಂತ ಜನಪ್ರಿಯ ರಾಜಕೀಯ ನಾಯಕನ ಅಂತರ್ಜಾಲ ಹುಡುಕಾಟದಲ್ಲಿ ಮಹಾತ್ಮಾಗಾಂಧಿ ಎಲ್ಲರನ್ನು ಹಿಂದಿಕ್ಕಿ ಮುಂಚೂಣಿಯಲ್ಲಿದ್ದಾರೆ. ಅವರ ನಂತರದ ಸ್ಥಾನದಲ್ಲಿ 'ಕನಸುಗಾರ', ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಇದ್ದಾರೆ.
ರವೀಂದ್ರನಾಥ್ ಠಾಗೂರ್ ಐದನೆ ಸ್ಥಾನದಲ್ಲಿದ್ದರೆ ಹಾಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಆರನೆ ಸ್ಥಾನದಲ್ಲಿದ್ದಾರೆ. ಸುಭಾಶ್ಚಂದ್ರ ಬೋಸ್ ಏಳನೆ ಜಾಗ ಆಕ್ರಮಿಸಿದ್ದಾರೆ. ಸ್ಟಾರ್ ವರ್ಚಸ್ಸಿನ ಕಾಂಗ್ರೆಸ್ಸಿಗ ರಾಹುಲ್ ಗಾಂಧಿ 8ರ ಸ್ಥಾನದಲ್ಲಿದ್ದರೆ, ಸರೋಜಿನಿ ನಾಯ್ಡು ಒಂಭತ್ತು ಮತ್ತು ಮಾಯಾವತಿಯವರು ಹತ್ತನೆ ಸ್ಥಾನದಲ್ಲಿದ್ದಾರೆ.
ಕ್ರೀಡಾರಂಗದಲ್ಲಿ ಸೆನ್ಸೇಶನ್ ತಾರೆ ಸಾನಿಯಾ ಮಿರ್ಜಾ ಮಿನುಗು ತಾರೆಯಾಗಿದ್ದಾರೆ. ರಷ್ಯಾದ ಮರಿಯಾ ಶರಪೋವಾ, ಸಚಿನ್, ರಾಹುಲ್, ಗಂಗೂಲಿ ಎಲ್ಲರೂ ಸಾನಿಯಾರಿಗಿಂತ ಹಿಂದೆ ಬಿದ್ದಿದ್ದಾರೆ. ಟೆನ್ನಿಸ್, ಕ್ರಿಕೆಟ್ ಮತ್ತು ಫುಟ್ಬಾಲ್ ತಾರೆಯರು ಕ್ರಿಡಾರಂಗದಲ್ಲಿ ಭಾರತೀಯರ ಅತಿಹೆಚ್ಚು ಹುಡುಕಾಟಕ್ಕೆ ಒಳಗಾದವರು.
ರಜತಪರದೆಯ ವಿಚಾರಕ್ಕೆ ಬಂದರೆ ನಟಿಯರ ಹುಡುಕಾಟವೇ ಜೋರು. ಮಾಜಿ ವಿಶ್ವಸುಂದರಿ, ಪಡ್ಡೆ ಹೈಕಳಿಗೆ ನಿದ್ದೆ ಇಲ್ಲದಂತೆ ಮಾಡಿರುವ ಐಶ್ವರ್ಯಾ ಇಲ್ಲೂ ಪ್ರಥಮಸ್ಥಾನ ಬಿಟ್ಟುಕೊಟ್ಟಿಲ್ಲ. ಮೊನ್ನೆ ಮೊನ್ನೆ ಬಂದಿರುವ ಪೋರಿ ಓಂ ಶಾಂತಿ ಓಂನ ದೀಪಿಕಾ ಪಡುಕೋಣೆ ಹತ್ತೊರಳಗಿನ ಸ್ಥಾನ ಪಡೆದುಕೊಂಡಿದ್ದಾರೆ.
ರೈಯ ಒಂದುಕಾಲದ ಪ್ರಿಯಕರ ಸಲ್ಮಾನ್ ಖಾನ್ ಇಲ್ಲಿ ರೈ ಹಿಂದಿದ್ದಾರೆ. ಅಂದರೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಹೃತಿಕ್, ಕತ್ರಿನಾ, ಹಾಗೂ ಶಾರೂಕ್ ಟಾಪ್ ಫೈವ್ ಪಟ್ಟಿಯಲ್ಲಿದ್ದಾರೆ. ಐಶ್ ಪತಿ ಅಭಿಷೇಕ್ ಹಾಗೂ ಮಾವ ಅಮಿತಾಬಚ್ಚನ್ ಪಟ್ಟಿಯಲ್ಲಿಲ್ಲ.