2007: ಏರಿದ ಮೆಟ್ಟಿಲುಗಳ ಮರೆಯುವ ಮುನ್ನ...
ಅವಿನಾಶ್ ಬಿ.
ಎತ್ತರೆತ್ತರಕ್ಕೇರಿದ ಮೇಲೆ ಏರಿದ ಏಣಿಯ ಮೆಟ್ಟಿಲುಗಳನ್ನು ತಿರುಗಿ ನೋಡಲೇಬೇಕು. ಇಲ್ಲವಾದಲ್ಲಿ ಹಿಂದೇನು ನಡೆಯಿತೆಂದಾಗಲೀ, ಮುಂದೇನು ಎದುರಾಗಲಿದೆ ಎಂದಾಗಲೀ ಲೆಕ್ಕಾಚಾರ ಹಾಕುವುದು ಅಸಾಧ್ಯ. ಹಾಗಾಗಿಯೇ ಕಳೆದು ಹೋದ ಒಂದು ವರ್ಷದಲ್ಲಿ ನಾವೇನು ಮಾಡಿದ್ದೇವೆ, ನಾವೆಲ್ಲಿ ಎಡವಿದ್ದೇವೆ, ಎಲ್ಲೆಲ್ಲಿ ದೊರೆತ ಅವಕಾಶಗಳನ್ನು ಕಳೆದುಕೊಂಡಿದ್ದೇವೆ, ಎಷ್ಟು ಸ್ನೇಹ ಸಂಪಾದಿಸಿದ್ದೇವೆ, ಎಷ್ಟು ವಿರೋಧ ಕಟ್ಟಿಕೊಂಡಿದ್ದೇವೆ ಎಂಬಿತ್ಯಾದಿಗಳ ಬಗ್ಗೆ ಹಿನ್ನೋಟ ಹರಿಸುವುದು ವೈಯಕ್ತಿಕವಾಗಿಯೂ, ಸಾಂಘಿಕವಾಗಿಯೂ ಭವಿಷ್ಯದ ನಿಲುವುಗಳಿಗೆ ಪೂರಕವಾಗುತ್ತದೆ. ಇದಕ್ಕಾಗಿಯೇ "ವೆಬ್‌ದುನಿಯಾ ಕನ್ನಡ" ನಿಮಗೆ ಪರಿಚಯಿಸುತ್ತಿದೆ ಅವಲೋಕನ-2007 ಪುಟವನ್ನು."
ಲೋಕೋ ಭಿನ್ನ ರುಚಿಃ" ಎಂಬ ಲೋಕೋಕ್ತಿಯಂತೆ, ಒಬ್ಬೊಬ್ಬರ ಆಸಕ್ತಿ ಒಂದೊಂದು ರೀತಿಯಾಗಿರುವುದರಿಂದ ಯಾರನ್ನೇ ಕೇಳಿ ನೋಡಿ- ಕಳೆದ ವರ್ಷ ಏನಾಯಿತು ಅಂತ... ಒಬ್ಬೊಬ್ಬರಿಂದ ಒಂದೊಂದು ಉತ್ತರ ಬಂದೇ ಬರುತ್ತದೆ.ಹೀಗೇ ಹಿನ್ನೋಟ ಹರಿಸಿದಾಗ, ಕಳೆದ ವರ್ಷ ನೆನಪಿನಲ್ಲುಳಿಯುವ ಘಟನಾವಳಿಗಳಲ್ಲಿ ನೆಗೆಟಿವ್ ಅಂಶಗಳಿಗಿಂತಲೂ ಪಾಸಿಟಿವ್ ಅಂಶಗಳೇ ಹೆಚ್ಚು ಹಚ್ಚ ಹಸಿರಾಗಿರಲಿ ಎಂಬ ಆಶಯದೊಂದಿಗೆ ಒಂದಷ್ಟು ಮೆಲುಕು:ರಾಷ್ಟ್ರ:
ಸಂಸತ್ತಿನಲ್ಲಿ ಯಾವತ್ತೂ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸಲು ಹಿಂದೆ ಮುಂದೆ ನೋಡುತ್ತಿರುವ ರಾಜಕಾರಣಿಗಳೇ ತುಂಬಿರುವ ಈ ನಾಡಿನಲ್ಲಿ ಮಹಿಳೆಯೊಬ್ಬರು ದೇಶದ ಪರಮೋಚ್ಛ ಸಾಂವಿಧಾನಿಕ ಹುದ್ದೆ ರಾಷ್ಟ್ರಪತಿ ಪದವಿಗೆ ಏರಿರುವುದು ಮಹಿಳಾ ಬಳಗಕ್ಕೆ ಮರೆಯಲಾಗದ ಅನುಭವ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸ್ವಾತಂತ್ರ್ಯೋತ್ಸವದ ಸುವರ್ಣ ವರ್ಷದಲ್ಲಿ ನಡೆದ ಈ ಬೆಳವಣಿಗೆಯು ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಮ್ಮೆಯ ಸಂಗತಿಯಾಗಿ ದಾಖಲಾಯಿತು.
ಹಲವು ಪಕ್ಷಗಳ ಮಿಶ್ರಕೂಟ ಸರಕಾರವು ಆಗಾಗ್ಗೆ ಎಡಪಕ್ಷಗಳಿಂದ ಚುರುಕು ಮುಟ್ಟಿಸಿಕೊಳ್ಳುತ್ತಾ ತನ್ನ ದೋಣಿಯನ್ನು ನಿಧಾನವಾಗಿ ಸಾಗಿಸುತ್ತಿದೆ. ಭಾರತ-ಅಮೆರಿಕ ನಡುವೆ ಏರ್ಪಟ್ಟ ಪರಮಾಣು ಒಪ್ಪಂದದಲ್ಲಿ ದೇಶದ ಸಾರ್ವಭೌಮತೆಗೆ ಧಕ್ಕೆಯಾಗಿದೆ ಎಂಬ ಆರೋಪಗಳ ನಡುವೆ, ಎಡಪಕ್ಷಗಳಂತೂ ಕನಿಷ್ಠ 10 ಬಾರಿಯಾದರೂ "ಯುಪಿಎ ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುತ್ತೇವೆ" ಅಂತ ಘರ್ಜಿಸಿವೆ. ಘರ್ಜಿಸಿದಾಗ ಜೋರಾಗಿಯೇ ಸದ್ದು ಕೇಳುತ್ತಿತ್ತು. ಆದರೆ ಬೊಗಳುವ ನಾಯಿ ಕಚ್ಚುವುದಿಲ್ಲ ಎಂಬ ನಾಣ್ನುಡಿಯೊಂದಿದೆ. ಇದರ ಮೇಲೆ ಬಲವಾದ ನಂಬಿಕೆ ಇರಿಸಿದಂತಿರುವ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರವು ಬೆಂಬಲ ಹಿಂತೆಗೆತ ಬೆದರಿಕೆ ಒಡ್ಡುವವರ ಕಣ್ಣಿಗೆ ಬೆಣ್ಣೆ ಸವರುವಲ್ಲಿ ಯಶಸ್ವಿಯಾಗಿದೆ. ವರ್ಷವಿಡೀ ಕಾಡುತ್ತಲೇ ಇದ್ದ ಸಂಗತಿಗಳಲ್ಲಿ ನಂದಿಗ್ರಾಮ ಹಿಂಸಾಚಾರ ಮತ್ತು ರಾಮಸೇತು ವಿವಾದಗಳೂ ಪ್ರಮುಖವಾದವು.
ವರ್ಷಾಂತ್ಯದಲ್ಲಿ ಬಹುತೇಕ ಚರ್ಚೆಯಾದ ಸಂಗತಿ ಗುಜರಾತಿನಲ್ಲಿ ಮೋದಿ ಮಾಡಿದ ಮೋಡಿ. ಚುನಾವಣೆಗಳಲ್ಲಿ ನರೇಂದ್ರ ಮೋದಿ ಸರಕಾರ ಮತ್ತೊಮ್ಮೆ ಆರಿಸಿ ಬಂದಿದೆ. ಗುಜರಾತ್ ಅಭಿವೃದ್ಧಿ ಕಾರ್ಯಗಳು ದೇಶಕ್ಕೇ ಹೆಮ್ಮೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಅಭಿವೃದ್ಧಿಗಿಂತಲೂ ಮೋದಿತ್ವ-ಹಿಂದುತ್ವ ಮತ್ತು ಕೋಮುವಾದಿತ್ವ ವಿಷಯವೇ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದ್ದು ಆ ರಾಜ್ಯದ ಜನತೆಯ ದುರದೃಷ್ಟ. ಇದೀಗ ಮೋದಿಯ ಮೋಡಿಯು ರಾಷ್ಟ್ರ ರಾಜಕಾರಣದಲ್ಲೂ ತನ್ನ ಛಾಪು ಮೂಡಿಸಲು ಸಜ್ಜಾಗಿದೆ. ಆ ರಾಜ್ಯದಲ್ಲಿ ಕಾಂಗ್ರೆಸ್ ಕಂಡಿರುವ ಸೋಲು, ಲೋಕಸಭಾ ಚುನಾವಣೆಗೆ ಧುಮುಕಲು ತಯಾರಾಗಿದ್ದ ಕಾಂಗ್ರೆಸಿಗೆ ಬ್ರೇಕ್ ನೀಡಿದೆ. ಅಣ್ವಸ್ತ್ರ ಒಪ್ಪಂದಕ್ಕೆ ಸಂಬಂಧಿಸಿ ಎಡಪಕ್ಷಗಳನ್ನು ಎದುರು ಹಾಕಿಕೊಳ್ಳುವ ಧೈರ್ಯವೂ ಉಡುಗಿದೆ.ಉದ್ಯಮ:
ಭಾರತೀಯ ಶೇರು ಪೇಟೆಯಂತೂ ಎಂದೂ ಕಾಣದ ಏರುಗತಿಯನ್ನೂ ಎಂದೂ ಕಾಣದ ಕುಸಿತವನ್ನೂ ದಾಖಲಿಸಿದ ವರ್ಷವಿದು. ಹುಚ್ಚುಕುದುರೆಯಂತೆ ಓಡಿ 20 ಸಾವಿರದ ಆಕಾಶದೆತ್ತರಕ್ಕೆ ಏರಿದ ಸೆನ್ಸೆಕ್ಸ್ ಗೂಳಿ, ಭಾರತದತ್ತ ಎಲ್ಲ ವಿದೇಶೀ ಉದ್ಯಮಿಗಳ ಕಣ್ಣು ಹೊರಳಲು ಕಾರಣವಾಯಿತು. ಉದ್ಯಮಪತಿ ಮಿತ್ತಲ್‌ರಿಂದ ಆರ್ಸಿಲರ್ ಖರೀದಿ, ಜಗತ್ತಿನ ಅತ್ಯಂತ ಶ್ರೀಮಂತರ ಸಾಲಿಗೆ ಅಂಬಾನಿ ಸೇರ್ಪಡೆ, ಟಾಟಾದಿಂದ ಜಾಗುವಾರ್-ರೋವರ್ ಖರೀದಿ ಕಸರತ್ತು, ದೇಶಾದ್ಯಂತ ಅದ್ಭುತ ಪ್ರಗತಿ ಸಾಧಿಸಿದ ತಂತ್ರಜ್ಞಾನ ಕ್ಷೇತ್ರ... ಇವುಗಳೆಲ್ಲವೂ ಭಾರತದ ಆರ್ಥಿಕತೆಯನ್ನು ಮೇಲೆತ್ತಲು ಪೂರಕವಾದವು.ಜಾಗತಿಕ:
ತಾಜ್ ಮಹಲ್ ಜಗತ್ತಿನ ಏಳು ಅದ್ಭುತಗಳ ಸಾಲಿನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದ್ದು, ಇರಾನ್ ಮತ್ತು ಅಮೆರಿಕ ಮಧ್ಯೆ ಯುದ್ಧದ ಸ್ಥಿತಿ ಏರ್ಪಟ್ಟಿದ್ದು, ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಅತಿ ದೀರ್ಘಕಾಲ ಉಳಿದದ್ದು, ಲಂಡನ್ ಗ್ಲಾಸ್ಗೋ ವಿಮಾನ ನಿಲ್ದಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಸಂಜಾತರ ಕೈವಾಡ,
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ಶಶಿ ತರೂರ್ ಎದುರು ಬಾನ್ ಕಿ ಮೂನ್ ಆಯ್ಕೆ, ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ವಿಶ್ವದ ಕಣ್ಣು ತೆರೆದದ್ದು, ಪಾಕಿಸ್ತಾನದಲ್ಲಿ ಮೇರೆ ಮೀರಿದ ಮುಷರಫ್ ಆಟಾಟೋಪ-ತುರ್ತು ಪರಿಸ್ಥಿತಿ, ಸಮವಸ್ತ್ರ ಕಳಚಿದ ಮುಷರ್ರಫ್, ಮಾಜಿ ಪ್ರಧಾನಿಗಳಾದ ನವಾಜ್ ಶರೀಫ್, ಬೇನಜೀರ್ ಭುಟ್ಟೋ ಸ್ವದೇಶಕ್ಕೆ ಮರಳಿದ್ದು, ಇವುಗಳ ನಡುವೆ ಮುಗಿಯದ ಆಲ್ ಖಾಯಿದಾ ಅಟ್ಟಹಾಸ... ಇವೆಲ್ಲವೂ ಅಂತಾರಾಷ್ಟ್ರೀಯ ಮಟ್ಟದ ಸಂಗತಿಗಳು.
ಕರ್ನಾಟಕ:
ಕರ್ನಾಟಕದಲ್ಲಿ ನಡೆದ ಬೆಳವಣಿಗೆಗಳಲ್ಲಿ, ಇಡೀ ರಾಜ್ಯವೇ ತಲೆತಗ್ಗಿಸುವಂತಹ ರಾಜಕಾರಣ ನಡೆಯಿತು. ಮಿತ್ರದ್ರೋಹ, ವಚನಭ್ರಷ್ಟತೆ ಮುಂತಾದ ಶಬ್ದಗಳ ಅರ್ಥವು ರಾಜ್ಯದ, ದೇಶದ ಜನತೆಗೆ ಸರಿಯಾಗಿಯೇ ತಿಳಿಯಿತು! ಪತ್ರ-ಷರತ್ತು ರಾಜಕಾರಣಗಳೇ ಸದ್ದು ಮಾಡಿದವು, ಮಣ್ಣಿನ ಮಕ್ಕಳ ಪ್ರತಿಷ್ಠೆಯೂ ಮಣ್ಣು ಪಾಲಾಯಿತು. ದಕ್ಷಿಣ ಭಾರತದಲ್ಲಿ ಸರಕಾರ ಸ್ಥಾಪಿಸುವ ಬಿಜೆಪಿಯ ಕನಸು ಕೈಗೂಡಿತಾದರೂ, ಯಡಿಯೂರಪ್ಪ ಅವರು "ಸಾತ್ ದಿನ್ ಕಾ ಬಾದಷಾ" ಎಂದಷ್ಟೇ ಕರೆಸಿಕೊಂಡರು. ಏಳೇ ದಿನದಲ್ಲಿ ಅವರು ಮಾಜಿ ಮುಖ್ಯಮಂತ್ರಿ ಆಗಿಬಿಟ್ಟರು, ರಾಜ್ಯದಲ್ಲಿ ಮತ್ತೊಮ್ಮೆ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಬಿಜೆಪಿಯೊಳಗಿನ ವೈಮನಸ್ಸಿನ ಅಲೆಗಳು ತಾತ್ಕಾಲಿಕವಾಗಿ ಶಾಂತವಾಗಿದೆ. ಅದೇ, ಜೆಡಿಎಸ್ ಮತ್ತು ಕಾಂಗ್ರೆಸಿನೊಳಗೆ ಆಂತರಿಕ ಕಚ್ಚಾಟ ಹೊರಬೀಳಲಾರಂಭಿಸಿದೆ. ಜನತಾ ದಳ ಮತ್ತೆ ವಿದಳನೆಯಾಗಿದೆ. ಅಕಾಲ ಚುನಾವಣೆಗಾಗಿ ರಾಜಕಾರಣಿಗಳು ಸಿದ್ಧರಾಗುತ್ತಿದ್ದರೆ, ಅವರಿಗೆ ಪಾಠ ಕಲಿಸಲು ಮತದಾರರು ಸಜ್ಜಾಗುತ್ತಿದ್ದಾರೆ.ಕ್ರೀಡೆ:
ಕ್ರೀಡಾಕ್ಷೇತ್ರದತ್ತ ನೋಡಿದರೆ, ಐಪಿಎಲ್, ಐಸಿಎಲ್‌ಗಳ ಹುಟ್ಟು, ಬಿಸಿಸಿಐನ ಒಳ ರಾಜಕೀಯಗಳೆಲ್ಲಾ ಬಹುಚರ್ಚಿತ ಸಂಗತಿ. ಇತ್ತ, ಯಾವಾಗಲೂ ಸಚಿನ್-ಸೌರವ್ ಜಪ ಮಾಡುತ್ತಾ, ವನ್‌ಡೇ-ಟೆಸ್ಟ್ ಎನ್ನುತ್ತಲೇ, ತರಗತಿಯ ಟೆಸ್ಟ್‌ಗೆ ಚಕ್ಕರ್ ಹಾಕುತ್ತಿದ್ದ ಒಬ್ಬ ಕಟ್ಟಾ ಕ್ರಿಕೆಟ್ ಪ್ರೇಮಿ ಟ್ವೆಂಟಿ-20 ಅಂತ ಜಪ ಶುರು ಹಚ್ಚಿಕೊಂಡಿದ್ದಾನೆ. ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ನೆಲಕಚ್ಚಿದ್ದ ಟೀಂ ಇಂಡಿಯಾವು ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದು ಟ್ವೆಂಟಿ-20 ವಿಶ್ವ ಕಿರೀಟವನ್ನು ಧರಿಸಿ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ಹುಚ್ಚೆಬ್ಬಿಸಿತು, ಆಸ್ಟ್ರೇಲಿಯಾದಂತಹ ವಿಶ್ವ ಚಾಂಪಿಯನ್ ತಂಡಗಳೇ ಮೂಗಿನ ಮೇಲೆ ಬೆರಳಿಟ್ಟವು. ಹಲವು ದಾಖಲೆಗಳೂ ಬರೆಯಲ್ಪಟ್ಟವು. ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್ ತಮ್ಮ ಛಾಪು ಮೂಡಿಸಿದರು. ಹಾಕಿ, ಟೆನಿಸ್ (ಸಾನಿಯಾ ಮಿರ್ಜಾ), ಫುಟ್ಬಾಲ್, ಚೆಸ್ (ವಿಶ್ವನಾಥನ್ ಆನಂದ್), ಸ್ನೂಕರ್ (ಪಂಕಜ್ ಆಡ್ವಾಣಿ) ರಂಗದಲ್ಲೂ ಭಾರತವು ವಿಶ್ವಮಟ್ಟದಲ್ಲಿ ದಾಖಲೆ ಸ್ಥಾಪಿಸಿ ಸರ್ವರ ಗಮನ ಸೆಳೆಯಿತು.