Select Your Language

Notifications

webdunia
webdunia
webdunia
webdunia

ಭಾರತ- ಚೀನಾ ಬಾಂಧವ್ಯ ವೃದ್ಧಿ, ಪರಮಾಣು ಬಾಂಧವ್ಯದತ್ತ ಕೆಂಗಣ್ಣು

ಭಾರತ- ಚೀನಾ ಬಾಂಧವ್ಯ ವೃದ್ಧಿ, ಪರಮಾಣು ಬಾಂಧವ್ಯದತ್ತ ಕೆಂಗಣ್ಣು
ಕಳೆದ ವರ್ಷದತ್ತ ಹಿನ್ನೋಟ ಹರಿಸಿದರೆ, ಭಾರತ-ಚೀನಾಗಳು ಮತ್ತಷ್ಟು ಹತ್ತಿರಕ್ಕೆ ಬಂದ ವರ್ಷವಿದು ಎನ್ನಲಡ್ಡಿಯಿಲ್ಲ. ತಮ್ಮ ನಡುವಿನ ಸತತ ಕಾಡುತ್ತಲೇ ಇದ್ದ ಗಡಿ ವಿವಾದವನ್ನು ಪರಿಹರಿಸಿಕೊಳ್ಳುವಲ್ಲಿ ಪರಸ್ಪರ ಸಹಕಾರ, ಇಚ್ಛಾಶಕ್ತಿ ಪ್ರದರ್ಶಿಸಿದವು ಈ ಉಭಯ ರಾಷ್ಟ್ರಗಳು. ಚೀನಾದಲ್ಲಿ ರಾಜಕೀಯ ಸ್ಥಿತ್ಯಂತರವಾಗಿ ಅಲ್ಲಿ ಹೊಸ ನಾಯಕತ್ವದ ಉದಯವಾಯಿತಾದರೂ, ಭಾರತ-ಅಮೆರಿಕ ನಡುವಣ ಪರಮಾಣು ಒಪ್ಪಂದವಂತೂ ಬೀಜಿಂಗ್‌ಗೆ ಚಿಂತೆಗೀಡುಮಾಡಿದ ವಿಷಯವಾಯಿತು.

ಗಡಿ ವಿವಾದಕ್ಕೆ ಸಂಬಂಧಿಸಿ ಉಭಯ ರಾಷ್ಟ್ರಗಳೂ ಸರಣಿ ಮಾತುಕತೆಗಳನ್ನು ನಡೆಸಿದವು. ಉನ್ನತ ನಾಯಕರ ಪರಸ್ಪರ ಭೇಟಿ ಕಾರ್ಯಕ್ರಮಗಳೂ ನಡೆದವು. ವ್ಯಾಪಾರ ಮತ್ತು ಆರ್ಥಿಕ, ಸಾಂಸ್ಕೃತಿಕ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಉತ್ತಮ ನೆರೆಯ ರಾಷ್ಟ್ರಗಳಾಗಿ ಕೊಡು-ಕೊಳ್ಳುವಿಕೆಯೂ ನಡೆಯಿತು.

ಚೀನಾವು ಮುಂದಿನ 5 ವರ್ಷಗಳಲ್ಲಿ ಕಮ್ಯೂನಿಸ್ಟ್ ರಾಷ್ಟ್ರದ ಸ್ಥಿತಿಯನ್ನೇ ಬದಲಿಸಬಲ್ಲಂತೆ ನಾಯಕತ್ವದ ಸ್ಥಿತ್ಯಂತರ ಕಂಡಿತು. ಅದು ನಡೆದ ತಕ್ಷಣವೇ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಚೀನಾವನ್ನು ಸಂದರ್ಶಿಸಿದ ಮೊದಲ ವಿದೇಶೀ ನಾಯಕಿಯಾಗಿ ಗುರುತಿಸಿಕೊಂಡು, ದ್ವಿಪಕ್ಷೀಯ ಸಂಬಂಧಗಳತ್ತ ಹೊಸ ಭಾಷ್ಯ ಬರೆದರು.

ಪ್ರಧಾನಿ ಮನಮೋಹನ್ ಸಿಂಗ್ ಅವರ ಚೀನಾ ಭೇಟಿ ಸಂದರ್ಭದಲ್ಲೂ ಭಾರೀ ನಿರೀಕ್ಷೆ ಇತ್ತಾದರೂ 2007 ಕಳೆದಂತೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಮತ್ತೆ ಅವರು ಜನವರಿ ತಿಂಗಳಲ್ಲಿ ಚೀನಾ ಸಂದರ್ಶಿಸಲಿದ್ದಾರೆ.

ಭಾರತವು ಅಮೆರಿಕದೊಂದಿಗೆ ಮಹತ್ವದ ಪರಮಾಣು ಒಪ್ಪಂದವನ್ನು ಬೆಸೆದುಕೊಂಡದ್ದು ಮಾತ್ರ ಎಡಪಂಥೀಯ ರಾಷ್ಟ್ರವಾಗಿರುವ ಚೀನಾವನ್ನು ಮತ್ತಷ್ಟು ಕೆಂಪಗಾಗಿಸಿತು. ಬಹಿರಂಗವಾಗಿ ಅದು ಆಕ್ಷೇಪ ವ್ಯಕ್ತಪಡಿಸಿಲ್ಲವಾದರೂ, ಒಪ್ಪಂದದ ಬಗೆಗಿನ ತನ್ನ ಅಸಮಾಧಾನವನ್ನು ಮಾತ್ರ ಆಗಾಗ್ಗೆ ಹೊರಗೆಡಹುತ್ತಲೇ ಇತ್ತು. ಈ ಬಗ್ಗೆ ಕೇಂದ್ರಕ್ಕೆ ಭಾರತದಲ್ಲಿರುವ ಎಡಪಂಥೀಯ ನಾಯಕರು ಸಾಕಷ್ಟು ಬಿಸಿ ಮುಟ್ಟಿಸಿದರು.

Share this Story:

Follow Webdunia kannada