ಮಲೇಷ್ಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಜ್ವಾಲಾ ಗುತ್ತಾ ಮತ್ತು ವಿ. ದಿಜು ಜೋಡಿ ಶುಭಾರಂಭ ಮಾಡಿಕೊಂಡಿದ್ದಾರೆ. ಆದರೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚೇತನ್ ಆನಂದ್ ಆಘಾತ ಅನುಭವಿಸುವ ಮೂಲಕ ಕೂಟದಿಂದ ನಿರ್ಗಮಿಸಿದ್ದಾರೆ.
ಜರ್ಮನಿಯ ಜೊಹನ್ಸೆಸ್ ಶುಟ್ಲೆರ್ ಮತ್ತು ಸಾಂದ್ರಾ ಮರಿನೆಲ್ಲೊ ಜೋಡಿಯನ್ನು 21-12, 21-13ರ ಅಂತರದಲ್ಲಿ ಮಣಿಸಿದ ಜ್ವಾಲಾ-ದಿಜು ಜೋಡಿ ದ್ವಿತೀಯ ಸುತ್ತಿಗೆ ಮುನ್ನಡೆದರು. ಪಂದ್ಯದುದ್ಧಕ್ಕೂ ಅಮೋಘ ಆಟವಾಡಿದ ಭಾರತೀಯ ಜೋಡಿ ಪಂದ್ಯವನ್ನು 24 ನಿಮಿಷದಲ್ಲಿ ಕೊನೆಗೊಳಿಸಿತು.
ಆದರೆ ಮಹಿಳಾ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಸೋಲು ಅನುಭವಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಭಾರತೀಯ ಜೋಡಿ ಜಿಂಗ್ ಡು ಮತ್ತು ಪಾನ್ ಪಾನ್ ವಿರುದ್ಧ 11-21, 21-16, 5-21ರ ಅಂತರದಲ್ಲಿ ಸೋಲು ಅನುಭವಿಸಿದರು.
ಮತ್ತೊಂದೆಡೆ ಮೊದಲ ಸುತ್ತಿನಲ್ಲೇ ಆಘಾತ ಎದುರಿಸಿದ ಚೇತನ್ ಕೂಟದಿಂದ ಹೊರನಡೆದರು. ಕಜುಚಿ ಯಾಮಡಾ ವಿರುದ್ಧದ ಪಂದ್ಯವನ್ನು ಚೇತನ್ 14-21, 17-21ರ ಅಂತರದಲ್ಲಿ ಪಂದ್ಯ ಕಳೆದುಕೊಂಡರು. ಹಾಗೆಯೇ ದಿಟ್ಟ ಹೋರಾಟ ಪ್ರದರ್ಶಿಸಿ ಕ್ವಾಲಿಫೈಯರ್ ಆನಂದ್ ಪವಾರ್ ಕೂಡಾ ಅಂತಿಮವಾಗಿ ಸೋಲು ಅನುಭವಿಸುವ ಮೂಲಕ ನಿರಾಸೆ ಅನುಭವಿಸಿದರು.