Select Your Language

Notifications

webdunia
webdunia
webdunia
webdunia

ಭಾರತೀಯ ಹಾಕಿ ಸಂಪೂರ್ಣ ದುರಸ್ತಿ ಅಗತ್ಯವಿದೆ: ನೇಗಿ

ಭಾರತೀಯ ಹಾಕಿ ಸಂಪೂರ್ಣ ದುರಸ್ತಿ ಅಗತ್ಯವಿದೆ: ನೇಗಿ
ಕೊಲ್ಕತ್ತಾ , ಭಾನುವಾರ, 5 ಡಿಸೆಂಬರ್ 2010 (12:40 IST)
ಭಾರತದ ಹಾಕಿ ಆಡಳಿತವನ್ನು ಸಂಪೂರ್ಣವಾಗಿ ದುರಸ್ತಿ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿರುವ ಮಾಜಿ ಗೋಲ್ ಕೀಪರ್ ಮೀರ್ ರಂಜನ್ ನೇಗಿ, ರಾಷ್ಟ್ರೀಯ ಕ್ರೀಡೆಯ ಪ್ರಗತಿಗಾಗಿ ಶ್ರಮಿಸಲು ತಾನು ಸಿದ್ಧನಿದ್ದೇನೆ ಎಂದಿದ್ದಾರೆ.

ಕೊಲ್ಕತ್ತಾದಲ್ಲಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನೇಗಿ ಇದೇ ಸಂದರ್ಭದಲ್ಲಿ ಭಾರತ ಹಾಕಿ ತಂಡದ ತರಬೇತುದಾರ ಜೋಸ್ ಬ್ರಾಸಾ ಅವರ ದರ್ಪವನ್ನು ತೀವ್ರವಾಗಿ ಟೀಕಿಸಿದರು.

ಭಾರತದ ಹಾಕಿಯಲ್ಲಿ ಬದಲಾವಣೆಗಳ ಅಗತ್ಯವಿದೆ. ಪ್ರಸಕ್ತ ಹೊತ್ತಿನಲ್ಲಿ ಆಡಳಿತದಲ್ಲಿ ಸಂಪೂರ್ಣ ದುರಸ್ತಿಯಾಗಬೇಕು. ಹಾಕಿ ಇಂಡಿಯಾ ಅಡಿಯಲ್ಲೂ ಕೆಲವು ಸಮಸ್ಯೆಗಳಿವೆ. ಅಗತ್ಯ ಬಿದ್ದರೆ ಯಾವುದೇ ರೀತಿಯ ಸಹಾಯಕ್ಕೆ ನಾನು ಸಿದ್ಧನಿದ್ದೇನೆ ಎಂದು ಭಾರತೀಯ ಹಾಕಿಯ ಕುಸಿತಕ್ಕೆ ಫೆಡರೇಷನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ತಿಳಿಸಿದರು.

ಏಷಿಯನ್ ಗೇಮ್ಸ್‌ನಲ್ಲಿ ಭಾರತವು ಚಿನ್ನ ಗೆಲ್ಲಲು ವಿಫಲವಾಗಿರುವುದಕ್ಕೆ ಸ್ಪೇನ್ ಕೋಚ್ ಬ್ರಾಸಾ ಅವರೇ ಕಾರಣ. ಅವರ ವೈಫಲ್ಯದಿಂದಾಗಿ ಭಾರತ ಹಾಕಿ ತಂಡ ಸೋಲನುಭವಿಸಿತು ಎಂದು ಒಪ್ಪಂದ ಮುಗಿಸಿರುವ ಕೋಚ್ ಮೇಲೆ ಆರೋಪ ಹೊರಿಸಿದರು.

ನಮ್ಮ ಹುಡುಗರ ಜತೆ ಬ್ರಾಸಾ ಸಂವಹನ ನಡೆಸಲಿಲ್ಲ. ಸರಿಯಾಗಿ ಮಾತುಕತೆಗೆ ಮುಂದಾಗಲಿಲ್ಲ. ಆಟಗಾರರ ವೈಫಲ್ಯಕ್ಕೆ ತರಬೇತುದಾರರೇ ಕಾರಣ. ನಮ್ಮ ದೇಶೀಯ ಹುಡುಗರ ಬೇಕು-ಬೇಡಗಳನ್ನು ವಿದೇಶಿ ಕೋಚ್ ಒಬ್ಬರು ಅರ್ಥ ಮಾಡಿಕೊಳ್ಳಬೇಕೆಂದು ನಿರೀಕ್ಷಿಸುವುದೇ ತಪ್ಪು ಎಂದರು.

ನೇಗಿಯವರ ಕ್ರೀಡಾ ಜೀವನದ ಏಳು-ಬೀಳುಗಳಿಂದ ಸ್ಫೂರ್ತಿಗೊಂಡು ಶಾರೂಖ್ ಖಾನ್ ನಾಯಕರಾಗಿದ್ದ 'ಚಕ್ ದೇ ಇಂಡಿಯಾ' ಚಿತ್ರ ನಿರ್ಮಾಣವಾಗಿತ್ತು.

ಬ್ರಾಸಾ ಯಾವತ್ತೂ ತಂಡದಲ್ಲೊಬ್ಬರಾಗಿರಲಿಲ್ಲ. ಅವರ ಕೆಳಗಿರುವ ತರಬೇತುದಾರರ ಅಭಿಪ್ರಾಯ ಪಡೆಯದೇ ತಾನೊಬ್ಬನೇ ನೇರವಾಗಿ ನಿರ್ಧಾರಗಳಿಗೆ ಬರುತ್ತಿದ್ದರು. ಕೋಚ್ ಎಂದ ಮೇಲೆ ಯಾವತ್ತೂ ಅವರಿಗೆ ಅಹಂ ಇರಬಾರದು. ಸೂಕ್ತ ರೀತಿಯಲ್ಲಿ ಸ್ಪಂದಿಸುವ ಗುಣವಿರಬೇಕು ಎಂದು ಅಭಿಪ್ರಾಯಪಟ್ಟರು.

Share this Story:

Follow Webdunia kannada