Select Your Language

Notifications

webdunia
webdunia
webdunia
webdunia

ಕೊನೆಗೂ ಫ್ರೆಂಚ್ ಓಪನ್ ಪ್ರಶಸ್ತಿ ಫೆಡರರ್ ಮುಡಿಗೆ

ಕೊನೆಗೂ ಫ್ರೆಂಚ್ ಓಪನ್ ಪ್ರಶಸ್ತಿ ಫೆಡರರ್ ಮುಡಿಗೆ
ಪ್ಯಾರಿಸ್ , ಸೋಮವಾರ, 8 ಜೂನ್ 2009 (11:20 IST)
ಫ್ರೆಂಚ್ ಓಪನ್ ಗೆದ್ದುಕೊಂಡಿಲ್ಲ ಎಂಬ ಕೊರಗನ್ನು ಸರಿಸಿರುವ ಟೆನಿಸ್ ದಿಗ್ಗಜ ರೋಜರ್ ಫೆಡರರ್‌ರವರು ಎದುರಾಳಿ ರಾಬಿನ್ ಸೋದರ್ಲಿಂಗ್‌ರನ್ನು ಮಣಿಸುವ ಮೂಲಕ 14ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡು ದಾಖಲೆ ಸರಿಗಟ್ಟಿದ್ದಾರೆ.

27ರ ಹರೆಯದ ವಿಶ್ವದ ನಂ.2 ಆಟಗಾರ ಕೊನೆಗೂ ರೋಲೆಂಡ್ ಗ್ಯಾರೋಸ್ ಕಿರೀಟವನ್ನು 11ನೇ ಪ್ರಯತ್ನದಲ್ಲಿ ಪಡೆದುಕೊಂಡಿದ್ದಾರೆ. ಇದು ಅವರ ಸತತ ನಾಲ್ಕನೇ ಫೈನಲ್ ಪ್ರವೇಶವೂ ಹೌದು. ಕಳೆದ ಮೂರು ವರ್ಷಗಳಲ್ಲಿ ಫೆಡರರ್‌ರವರು ರಾಫೆಲ್ ನಡಾಲ್ ವಿರುದ್ಧ ಫೈನಲ್‌ನಲ್ಲಿ ಸೋಲುಂಡಿದ್ದರು.

ಸ್ವೀಡನ್‌ನ ರಾಬಿನ್‌ರನ್ನು 6-1, 7-6(7/1), 6-4ರಿಂದ ಸೋಲಿಸುವ ಮೂಲಕ ಸ್ವಿಟ್ಜರ್ಲೆಂಡ್ ಖ್ಯಾತ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ನಾಲ್ಕು ಬಾರಿಯ ಚಾಂಪಿಯನ್ ಸ್ಪೇನ್‌ನ ನಡಾಲ್‌ರನ್ನೇ ನಾಲ್ಕನೇ ಸುತ್ತಿನಲ್ಲಿ ಮಣಿಸಿ ಕೂಟದಿಂದ ಹೊರಗಟ್ಟಿದ್ದ ವಿಶ್ವದ ನಂ.23 ಆಟಗಾರ ರಾಬಿನ್ ವಿರುದ್ಧ ಜಯ ದಾಖಲಿಸುವ ಮೂಲಕ ತನ್ನ ಗೆಳೆಯನೇ ಆಗಿರುವ ಪೀಟ್ ಸಾಂಪ್ರಸ್‌ರವರ ದಾಖಲೆಯನ್ನು ಫೆಡರರ್ ಸರಿಗಟ್ಟಿದ್ದಾರೆ. ಸಾಂಪ್ರಸ್‌ ಹೆಸರಿನಲ್ಲಿ 14 ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗರಿಗಳಿವೆ.

ಅಲ್ಲದೆ ಎಲ್ಲಾ ನಾಲ್ಕು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿಕೊಂಡವರ ಸಾಲಿಗೂ ಫೆಡರರ್ ಸೇರ್ಪಡೆಗೊಂಡಿದ್ದಾರೆ. ಫ್ರೆಡ್ ಫೆರ್ರಿ, ಜಾನ್ ಬುಡ್ಜ್, ರೋಡ್ ಲೇವರ್, ರಾಯ್ ಎಮರ್ಸನ್ ಮತ್ತು ಆಂಡ್ರೆ ಅಗಸಿ ಈ ಸಾಧನೆಯನ್ನು ಹಿಂದೆ ಮಾಡಿದ್ದರು.

"ನಿಜಕ್ಕೂ ಇದೊಂದು ಶ್ರೇಷ್ಠವಾದ ಜಯ. ನಾನು ಭಾರೀ ಒತ್ತಡದಲ್ಲಿದ್ದೆ. ನಾನೇನು ಮಾಡಬೇಕಾಗಿತ್ತೋ ಅದನ್ನು ಮಾಡಿದ್ದೇನೆ" ಎಂದು 1999ರ ಚಾಂಪಿಯನ್ ಅಗಸಿಯವರಿಂದ ಪ್ರಶಸ್ತಿ ಸ್ವೀಕರಿಸಿದ ನಂತರ ಆನಂದಬಾಷ್ಪ ಸುರಿಸುತ್ತಾ ಫೆಡರರ್ ತಿಳಿಸಿದ್ದಾರೆ.

ಇದುವರೆಗೆ ಮುಖಾಮುಖಿಯಾಗಿರುವ ಹತ್ತು ಬಾರಿಯೂ ಫೆಡರರ್ ಎದುರು ಸೋಲು ಕಂಡಿರುವ ಸೋದರ್ಲಿಂಗ್ ಎದುರಾಳಿಯ ಆಟವನ್ನು ಮನಪೂರ್ತಿ ಮೀರಿ ಬಣ್ಣಿಸಿದರು.

"ಫೆಡರರ್ ನನಗಿಂತ ಅತ್ಯುತ್ತಮ ಆಟವನ್ನು ಇಂದು ಆಡಿದ್ದಾರೆ. ಗೆಲುವಿಗೆ ಅವರು ಅರ್ಹರಾಗಿದ್ದರು. ಫೆಡರರ್ ನಾನು ಕಂಡ ಶ್ರೇಷ್ಠ. ಟೆನಿಸ್ ಹೇಗೆ ಆಡಬೇಕೆನ್ನುವ ಪಾಠವನ್ನು ಅವರ ಕಲಿಸಿದ್ದಾರೆ" ಎಂದರು.

Share this Story:

Follow Webdunia kannada