Select Your Language

Notifications

webdunia
webdunia
webdunia
webdunia

ನನಗಿನ್ನೂ ಹದಿನಾರೇ ವರ್ಷ ಎನ್ನುವಂತಿದೆ: ಸಚಿನ್

ನನಗಿನ್ನೂ ಹದಿನಾರೇ ವರ್ಷ ಎನ್ನುವಂತಿದೆ: ಸಚಿನ್
ಡರ್ಬಾನ್ , ಶುಕ್ರವಾರ, 24 ಏಪ್ರಿಲ್ 2009 (16:27 IST)
ನಿರ್ವಿವಾದವಾಗಿ ವಿಶ್ವ ಕ್ರಿಕೆಟ್‌ನಲ್ಲಿನ ಅತಿ ಶ್ರೇಷ್ಠ ವ್ಯಕ್ತಿಯೆಂಬ ಕೀರ್ತಿಗೆ ಪಾತ್ರರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಇಂದು 36 ವರ್ಷ ತುಂಬಿದೆ. ಆದರೆ ತನಗಿನ್ನೂ 16 ವರ್ಷ ಎಂಬ ಭಾವನೆ ನನ್ನಲ್ಲಿದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ದಂತಕತೆ ಡಾನ್ ಬ್ರಾಡ್ಮನ್ ಜತೆ ಕ್ರಿಕೆಟಿಗರ ಮನಸ್ಸಿನಲ್ಲಿ ಸಮಾನ ಸ್ಥಾನವನ್ನು ಪಡೆದಿರುವ ಮುಂಬೈಯ ಬಲಗೈ ದಾಂಡಿಗ ಪ್ರಸಕ್ತ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

"ನನಗೀಗಲೂ ಹದಿನಾರು ಎಂಬಂತಿದ್ದೇನೆ. ಬಹುಶಃ ದೊರೆತಿರುವ ಶುಭ ಕಾಮನೆಗಳು ಮತ್ತು ಆಶೀರ್ವಾದಗಳೇ ಇದಕ್ಕೆ ಕಾರಣವಾಗಿರಬಹುದು" ಎಂದು ಸಚಿನ್ ತಿಳಿಸಿದರು.

"ಇಲ್ಲಿ ದಾಖಲೆಗಳನ್ನು ಮುರಿಯುವುದು ವಿಚಾರವೇ ಅಲ್ಲ. ಪಂದ್ಯಗಳನ್ನು ಗೆಲ್ಲುವುದು ಮುಖ್ಯ. ಅದೇನಿದ್ದರೂ ಪಂದ್ಯವನ್ನು ಗೆದ್ದ ನಂತರವಷ್ಟೇ ಅದ್ಭುತ ಭಾವನೆ ಮನಸ್ಸಿನಲ್ಲಿ ಮೂಡಲು ಸಾಧ್ಯ" ಎಂದು ಮುಂಬೈ ಇಂಡಿಯನ್ಸ್ ಸದಸ್ಯರ ಜತೆ ಹುಟ್ಟುಹಬ್ಬದ ಕೇಕ್ ಕತ್ತರಿಸಿದ ನಂತರ ಮಾತನಾಡುತ್ತಾ ಅವರು ಹೇಳಿದ್ದಾರೆ.

ಪಾಕಿಸ್ತಾನದ ವಿರುದ್ಧ ತನ್ನ 16ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ಜಗತ್ತಿನಾದ್ಯಂತದ ಬೌಲರುಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಭಾರತವೂ ಸೇರಿದಂತೆ ಕ್ರಿಕೆಟ್ ಜಗತ್ತಿನಲ್ಲಿ ಅವರಿಗೆ ಅಪಾರ ಮನ್ನಣೆ-ಗೌರವಗಳು ಸಿಗುತ್ತಿವೆ.

ಟೆಸ್ಟ್‌ನಲ್ಲಿ 12,000 ಹಾಗೂ ಏಕದಿನದಲ್ಲಿ 16,000ಕ್ಕೂ ಹೆಚ್ಚು ರನ್ ಗಳಿಸಿರುವುದನ್ನು ತಂಡದ ಗೆಲುವಿನಲ್ಲಿ ಭಾಗಿಯಾಗಿರುವುದಕ್ಕೆ ಹೋಲಿಸಲಾಗದು ಎಂದು ತಿಳಿಸಿದ್ದಾರೆ.

"ತಂಡಕ್ಕೆ ವೈಯಕ್ತಿಕವಾಗಿ ನೀಡಿರುವ ಕೊಡುಗೆಯ ಪ್ರತಿಫಲನವೇ ಅಂಕಿ-ಅಂಶಗಳು. ಅಂತಿಮವಾಗಿ ಇದೊಂದು ತಂಡದ ಸಾಧನೆ ಮತ್ತು ವೈಯಕ್ತಿಕ ಸಾಧನೆಗಳು ಅದಕ್ಕೆ ಸಹಕಾರಿಯಾಗಿರುತ್ತವೆ. ಇದಕ್ಕಿಂತ ಪಂದ್ಯಗಳನ್ನು ಗೆಲ್ಲುವುದೇ ಮುಖ್ಯ" ಎಂದು ಮಾಸ್ಟರ್ ಬ್ಲಾಸ್ಟರ್ ವಿವರಿಸಿದರು.

ಸಚಿನ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅವರ ಪತ್ನಿ ಮತ್ತು ಮಕ್ಕಳು ಕೂಡ ಭಾಗಿಗಳಾಗಿದ್ದರು. ಈ ಸಂಭ್ರಮದಲ್ಲಿ ಸಚಿನ್ ಟೀಮ್ ಇಂಡಿಯಾ ಸಹಪಾಠಿ ಯುವರಾಜ್ ಸಿಂಗ್, ಜಹೀರ್ ಖಾನ್ ಮತ್ತು ಹರಭಜನ್ ಸಿಂಗ್ ಕೂಡ ಭಾಗವಹಿಸಿದ್ದರು.

ಎಡಗೈ ದಾಂಡಿಗ ಯುವಿ ಮತ್ತು ಆಫ್-ಸ್ಪಿನ್ನರ್ ಹರಭಜನ್ ಸಿಂಗ್‌ರವರು ಕೇಕನ್ನು ತೆಂಡೂಲ್ಕರ್‌ರ ಮುಖಕ್ಕೆ ಹಚ್ಚಿ ಸಂಭ್ರಮಿಸಿದರು.

Share this Story:

Follow Webdunia kannada