Select Your Language

Notifications

webdunia
webdunia
webdunia
webdunia

ಧೋನಿ ಅತ್ಯುತ್ತಮ ನಾಯಕ: ಸಚಿನ್ ಗುಣಗಾನ

ಧೋನಿ ಅತ್ಯುತ್ತಮ ನಾಯಕ: ಸಚಿನ್ ಗುಣಗಾನ
ಮುಂಬೈ , ಸೋಮವಾರ, 4 ಏಪ್ರಿಲ್ 2011 (17:54 IST)
PTI
ಕಳೆದ 21 ವರ್ಷಗಳ ಕ್ರಿಕೆಟ್ ಕ್ಯಾರಿಯರ್‌ನಲ್ಲಿ ಆರು ನಾಯಕರುಗಳ ಅಡಿಯಲ್ಲಿ ಹಿರಿಯ ಅನುಭವಿ ಆಟಗಾರ ಸಚಿನ್ ತೆಂಡೂಲ್ಕರ್ ಆಡಿದ್ದಾರೆ. ಆದರೆ ತೀಕ್ಷ್ಣ ಮನೋಭಾವ ಹಾಗೂ ಶಾಂತ ನಡತೆ ಹೊಂದಿರುವ ಈಗಿನ ಭಾರತೀಯ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಶ್ರೇಷ್ಠ ಕಪ್ತಾನ ಎಂದು ಸಚಿನ್ ಬಣ್ಣಿಸಿದ್ದಾರೆ.

ಆರು ನಾಯಕರುಗಳ ಅಡಿಯಲ್ಲಿ ಆಡಿದ್ದರೂ ಧೋನಿ ಮುಂದಾಳತ್ವದಲ್ಲಿ ಸಚಿನ್ ಅವರ ವಿಶ್ವಕಪ್ ಕನಸು ನನಸಾಗಿತ್ತು. ಆ ಮೂಲಕ ತಮ್ಮ ಸುದೀರ್ಘವಾದ ಕ್ಯಾರಿಯರ್‌ನಲ್ಲಿ ವಿಶ್ವಕಪ್‌ಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದರು.

ನಾನು ಆಡಿದ ಶ್ರೇಷ್ಠ ನಾಯಕರುಗಳಲ್ಲಿ ಧೋನಿ ಮೊದಲಿಗರಾಗಿದ್ದಾರೆ. ಯಾಕೆಂದರೆ ಅವರು ಯಾವತ್ತೂ ಚುರುಕಿನಿಂದ ಹಾಗೂ ಎಚ್ಚರವಾಗಿರುತ್ತಾರೆ. ಪರಿಸ್ಥಿತಿಯನ್ನು ಬೇಗನೇ ಅರಿತುಕೊಳ್ಳುವ ಜಾಣತನ ಅವರಿಗಿದ್ದು ಯೋಜನೆಗಳನ್ನು ಹಂಚುತ್ತಾರೆ. ಪ್ರತಿ ಬಾರಿಯೂ ಹಿರಿಯ ಆಟಗಾರರು, ಬೌಲರುಗಳು ಮತ್ತು ಬ್ಯಾಟ್ಸ್‌ಮನ್‌ಗಳ ಜತೆ ಮಾತುಕತೆಯಲ್ಲಿ ಭಾಗಿಯಾಗುತ್ತಾರೆ ಎಂದು ಭಾರತೀಯ ನಾಯಕ ಬಗ್ಗೆ ಸಚಿನ್ ಗುಣಗಾನ ಮಾಡಿದರು.

ಮತ್ತೊಂದು ಸಕರಾತ್ಮಕ ಅಂಶವೆಂದರೆ ಧೋನಿ ಶಾಂತಚಿತ್ತ ಮನೋಭಾವ ಹೊಂದಿದ್ದು, ಯಾವತ್ತೂ ಹತಾಶೆಗೊಳ್ಳುವುದಿಲ್ಲ. ಇಂತಹ ಕೆಲವೊಂದು ಮಾನವೀಯ ಗುಣಗಳು ಧೋನಿರನ್ನು ಅತ್ಯುತ್ತಮ ನಾಯಕರನ್ನಾಗಿಸಿದ್ದು, ಅವರೊಬ್ಬ ಅದ್ಭುತ ಕಪ್ತಾನ ಎಂದು ಸಚಿನ್ ಸೇರಿಸಿದರು.

ಗ್ಯಾರಿ ಮುಂದುವರಿಯಬೇಕು...
ಇದೇ ಸಂದರ್ಭದಲ್ಲಿಯೂ ಭಾರತದ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ದಕ್ಷಿಣ ಆಫ್ರಿಕಾ ಮೂಲದ ಕೋಚ್ ಗ್ಯಾರಿ ಕರ್ಸ್ಟನ್, ತರಬೇತುದಾರನಾಗಿ ಮುಂದುವರಿಯುವ ಬಯಕೆಯನ್ನು ಸಚಿನ್ ವ್ಯಕ್ತಪಡಿಸಿದ್ದಾರೆ.

ಗ್ಯಾರಿ ಬದ್ಧತೆಯನ್ನು ನಾನು ಬಲ್ಲೆನು. ಆದರೂ ಗ್ಯಾರಿ ಮುಂದುವರಿಯಬೇಕೆಂಬುದು ನನ್ನ ವೈಯಕ್ತಿಕ ಬಯಕೆ. ಆದರೂ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದರು ಸಚಿನ್.

ಕರ್ಸ್ಟನ್ ಜತೆ ಕೆಲಸ ಮಾಡುವುದೇ ಹೆಮ್ಮೆಯ ಸಂಗತಿ. ಆಟಗಾರರ ಉತ್ತಮ ಪ್ರದರ್ಶನಕ್ಕಾಗಿ ಕಠಿಣ ಶ್ರಮ ವಹಿಸತ್ತಾರೆ. ಅವರೊಬ್ಬ ಬೌಲಿಂಗ್ ಮೆಷಿನ್ ಇದ್ದ ಹಾಗೆ; ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗೂ 200-300 ಎಸೆತಗಳನ್ನು ಎಸೆಯುತ್ತಾರೆ. ಅವರ ಜತೆ ಕೆಲಸ ಮಾಡುವುದೇ ಅದ್ಭುತ ಅನುಭವ. ಖಂಡಿತವಾಗಿಯೂ ನಾವು ಅವರನ್ನು ಮಿಸ್ ಮಾಡಿಕೊಳ್ಳಲಿದ್ದೇವೆ ಎಂದು ಸಚಿನ್ ಹೇಳಿದರು.

ಟೂರ್ನಿಯ ಬಗ್ಗೆ ಮಾತನಾಡಿದ ಮುಂಬೈಕರ್, ಕೆಲವೊಂದು ನಿಕಟ ಪಂದ್ಯಗಳನ್ನು ಆಡಿರುವ ಹೊರತಾಗಿಯೂ ತಂಡ ಸರಿಯಾದ ಸಂದರ್ಭದಲ್ಲಿಯೇ ಉತ್ತಮ ಪ್ರದರ್ಶನ ನೀಡಲು ಯಶಸ್ವಿಯಾಗಿದೆ ಎಂದರು.

ನಾಕೌಟ್ ಹಂತದಲ್ಲಿ ನಾವು ಯಶಸ್ಸನ್ನು ಕಂಡೆವು. ಆರಂಭದಲ್ಲಿ ಬ್ಯಾಟಿಂಗ್, ಬೌಲಿಂಗ್ ಅಥವಾ ಫೀಲ್ಡಿಂಗ್ ಕ್ಲಿಕ್ ಆಗುತ್ತಿತ್ತು. ಆದರೆ ಎಲ್ಲವೂ ಒಂದೇ ಸಂದರ್ಭದಲ್ಲಿ ಯಶಸ್ಸು ಕಾಣುತ್ತಿರಲಿಲ್ಲ. ಆದರೆ ಕೊನೆಯ ಮೂರು ಪಂದ್ಯದಲ್ಲಿ ಹಿರಿಯರಿಂದ ಆರಂಭಿಸಿ ಜೂನಿಯರ್ ಆಟಗಾರರು ಉತ್ತಮ ಪ್ರದರ್ಶನ ನೀಡಿದರು ಎಂದರು.

ಮಾತು ಮುಂದುವರಿಸಿದ್ದ ಲಿಟ್ಲ್ ಮಾಸ್ಟರ್, ವಿಶ್ವಕಪ್ ಗೆಲುವೇ ತನ್ನ ಜೀವನದ ಅತಿ ಶ್ರೇಷ್ಠ ದಿನ ಎಂದರು. ಎಪ್ರಿಲ್ 2, 2011 ನನ್ನ ಜೀವನದ ಬಹುದೊಡ್ಡ ದಿನ. ದೇವರ ದಯೆಯಿಂದಲೇ ಇದು ಸಾಧ್ಯವಾಗಿದ್ದು, ಇದರಿಂದಾಗಿ ದೇವರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತನೇನೆ ಎಂದರು.

ಒತ್ತಡ ಹಾಗೂ ನಿರೀಕ್ಷೆಗಳು ಅತಿಯಾಗಿತ್ತು. ಪ್ರತಿಯೊಬ್ಬರು ಅತ್ಯುತ್ತಮ ಪ್ರದರ್ಶನ ನೀಡಬೇಕೆಂಬ ಇರಾದೆಯಲ್ಲಿದರು. ಬ್ಯಾಟಿಂಗ್ ಕ್ಲಿಕ್ ಆಗದಿದ್ದಲ್ಲಿ ಬೌಲಿಂಗ್ ಉತ್ತವಾಗಿ ಮಾಡಬಲ್ಲೆವು ಎಂಬ ಯೋಚನೆಯಿರಲಿಲ್ಲ. ಯಾಕೆಂದರೆ ಪ್ರತಿಯೊಬ್ಬರು ಅತ್ಯುತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಿದ್ದರು ಎಂದರು.

ನಿಜವಾಗಿಯೂ ನಾನು ಭಾವುಕನಾಗಿದ್ದೆ. ಇಂತಹ ಸಂದರ್ಭವನ್ನು ನನ್ನ ಜೀವನದಲ್ಲಿ ಯಾವತ್ತೂ ಅನುಭವಿಸಿರಲಿಲ್ಲ. ತಂಡದ ಪ್ರತಿಯೊಬ್ಬ ಸದಸ್ಯನಿಗೂ ನಾನು ಧನ್ಯವಾದ ಹೇಳಲು ಬಯುಸುತ್ತೇನೆ ಎಂದು ಸಚಿನ್ ಹೇಳಿದರು.

Share this Story:

Follow Webdunia kannada