ಏಳು ಪಂದ್ಯಗಳಲ್ಲಿ ಇದೀಗಲೇ ನಾಲ್ಕು ಪಂದ್ಯಶ್ರೇಷ್ಠ ಬಗಲಿಗೇರಿಸಿರುವ ಯುವರಾಜ 113.66ರ ಸರಾಸರಿಯಲ್ಲಿ 341 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳು ಸೇರಿವೆ. ಬೌಲಿಂಗ್‌ನಲ್ಲಿಯೂ ಮಿಂಚಿನ ಪ್ರದರ್ಶನ ನೀಡಿರುವ ಯುವಿ 24.63ರ ಸರಾಸರಿಯಲ್ಲಿ 11 ವಿಕೆಟ್ ಕಬಳಿಸಿದ್ದಾರೆ.
ಯುವಿಗೆ ಪ್ರಮುಖ ಸವಾಲಾಗುತ್ತಿರುವ ಪಾಕ್ ನಾಯಕ ಆಫ್ರಿದಿ ಇದೀಗಲೇ 10.71ರ ಬೌಲಿಂಗ್ ಸರಾಸರಿಯಲ್ಲಿ 21 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿರುವ ಆಸ್ಟ್ರೇಲಿಯಾದ ಮಾಜಿ ಬೌಲರ್ ಗ್ಲೆನ್ ಮೆಕ್‌ಗ್ರಾಥ್ (26) ಸನಿಹಕ್ಕೆ ತಲುಪಿದ್ದಾರೆ. ಆದರೆ ಬ್ಯಾಟಿಂಗ್ ವೈಫಲ್ಯವು ಪಾಕ್ ನಾಯಕನನ್ನು ಹಿನ್ನಡೆಗೆ ತಳ್ಳುವಂತಾಗಿದೆ.
ಟೂರ್ನಮೆಂಟ್‌ನಲ್ಲಿ ಎರಡು ಶತಕಗಳ ಸಾಧನೆ ಮಾಡಿರುವ ದಿಲ್‌ಶಾನ್ 394 ರನ್ ಗಳಿಸುವ ಮೂಲಕ ತಾವು ಕೂಡಾ ಸರಣಿಶ್ರೇಷ್ಠ ಸ್ಪರ್ಧೆಯಲ್ಲಿದ್ದಾರೆಂಬುದನ್ನು ಖಚಿತಪಡಿಸಿದ್ದಾರೆ. ಇಂಗ್ಲೆಂಡ್‌ನ ಜಾನಥನ್ ಟ್ರಾಟ್ 422 ರನ್ ಗಳಿಸಿದ್ದರೂ ಆ ತಂಡ ಇದೀಗಲೇ ಕ್ವಾರ್ಟರ್‌ನಿಂದ ನಿರ್ಗಮಿಸಿದೆ.
ಮತ್ತೊಂದೆಡೆ ಕೊನೆಯ ಎರಡು ಪಂದ್ಯಗಳಲ್ಲಿ ಅಮೋಘ ನಿರ್ವಹಣೆಯನ್ನು ನೀಡುವ ಮೂಲಕ ಸಚಿನ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರೂ ಅಚ್ಚರಿಯೇನಿಲ್ಲ. ಬಹುತೇಕ ಎಲ್ಲ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿರುವ ಸಚಿನ್ 2003ರ ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಮತ್ತೆ ಸ್ಪರ್ಧಾ ಕಣದಲ್ಲಿರುವ ಲಿಟ್ಲ್ ಮಾಸ್ಟರ್ 54.14ರ ಸರಾಸರಿಯಲ್ಲಿ 379 ರನ್ ಗಳಿಸಿದ್ದಾರೆ.