ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯು ದ್ವಿತೀಯ ದಿನವಾದ ಭಾನುವಾರವೂ ಮುಂದುವರಿದಿದ್ದು, 18 ಭಾರತೀಯರು ಮತ್ತು 53 ವಿದೇಶಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ.
ಈ ನಡುವೆ ದಾವಣೆಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಕೊಚ್ಚಿ ತಂಡದ ಪಾಲಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ನೂತನ ಫ್ರಾಂಚೈಸಿ ಕೊಚ್ಚಿ ನಡುವೆ ಜಿದ್ದಾಜಿದ್ದಿನ ಬಿಡ್ ಪ್ರಕ್ರಿಯೆ ಕಂಡುಬಂದರೂ ಅಂತಿಮವಾಗಿ 2.18 ಕೋಟಿ ರೂಪಾಯಿಗಳಿಗೆ ಈ ಕನ್ನಡಿಗ ಆಟಗಾರನನ್ನು ಕೊಚ್ಚಿ ತನ್ನ ಬಗಲಿಗೆ ಹಾಕಿಕೊಂಡಿದೆ.
ಯುವ ಪ್ರಭಾವಿ ವೇಗಿ ಆಗಿರುವ ವಿನಯ್ ಅವರನ್ನು ಮತ್ತೊಮ್ಮೆ ಬೆಂಗಳೂರು ತಂಡ ಖರೀದಿಸಲಿದ್ದಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಬಿಡ್ ಬಿಟ್ಟುಕೊಡದ ನೂತನ ಕೊಚ್ಚಿ ಫ್ರಾಂಚೈಸಿಯೂ ಕನ್ನಡಿಗ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಇದರೊಂದಿಗೆ ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪರಂತಹ ಪ್ರಮುಖ ಆಟಗಾರರ ನಂತರ ವಿನಯ್ ಕೂಡಾ ಇನ್ನೊಂದು ತಂಡದ ಪಾಲಾಗಿರುವುದು ಆರ್‌ಸಿಬಿ ಅಭಿಮಾನಿಗಳಲ್ಲಿ ನಿರಾಸೆಗೆ ಕಾರಣವಾಗಿದೆ.