Select Your Language

Notifications

webdunia
webdunia
webdunia
webdunia

ಭಾರತ ತಂಡವೀಗ ಸಚಿನ್ ಅವಲಂಬಿಸಿಲ್ಲ: ಅಕ್ರಂ

ಭಾರತ ತಂಡವೀಗ ಸಚಿನ್ ಅವಲಂಬಿಸಿಲ್ಲ: ಅಕ್ರಂ
ನವದೆಹಲಿ , ಶುಕ್ರವಾರ, 31 ಡಿಸೆಂಬರ್ 2010 (12:59 IST)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ಡರ್ಬನ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಜಯ ದಾಖಲಿಸಿರುವ ಭಾರತ ತಂಡವೀಗ, ಕೇವಲ ಲಿಟ್ಲ್ ಮಾಸ್ಟರ್ ಅವರ ವೈಯಕ್ತಿಕ ಪ್ರದರ್ಶನವನ್ನು ಮಾತ್ರ ಅವಲಂಬಿಸಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಪಾಕಿಸ್ತಾನ ಮಾಜಿ ಯಶಸ್ವಿ ನಾಯಕ ವಾಸೀಮ್ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.

ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 25 ರನ್ ಅಂತರದಲ್ಲಿ ಕಳೆದುಕೊಂಡಿದ್ದ ಭಾರತ ಡರ್ಬನ್ ಪಂದ್ಯವನ್ನು 87 ರನ್ ಅಂತರದಲ್ಲಿ ವಶಪಡಿಸಿಕೊಳ್ಳುವ ಮೂಲಕ ತಿರುಗೇಟು ನೀಡಿತ್ತು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಡರ್ಬನ್‌ನಂತಹ ಕಠಿಣ ವಿಕೆಟ್‌ನಲ್ಲಿಯೂ ನಿಜಕ್ಕೂ ಭಾರತ ಅದ್ಭುತ ಆಟವನ್ನಾಡಿದೆ. ತಂಡ ಏಕತೆಯನ್ನು ಪ್ರದರ್ಶಿಸಿದ್ದು, ವೈಯಕ್ತಿಕ ಆಟಗಾರ ಪ್ರದರ್ಶನವನ್ನು ಅವಲಂಬಿಸಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ನಮ್ಮ ಕಾಲಘಟ್ಟದಲ್ಲಿ ಭಾರತ ಪ್ರತಿ ಸಲವೂ ಸಚಿನ್‌ ಅವರನ್ನು ಅವಲಂಬಿಸಿತ್ತು ಎಂದವರು ಮೆಲುಕು ಹಾಕಿದರು.

ಹತ್ತು ವರ್ಷಗಳ ಹಿಂದೆಯಂತೂ ಸಚಿನ್ ವಿಕೆಟ್ ಪಡೆಯಲು ಸಾಧ್ಯವಾದರೆ ಪಂದ್ಯದಲ್ಲಿ ಭಾರತದ ಕತೆ ಮುಗಿದಂತೆ; ಆದರೆ ಇದೀಗ ಚಿತ್ರಣ ಬದಲಾಗಿದೆ. ಎದುರಾಳಿ ತಂಡಗಳು ನಿಟ್ಟುಸಿರು ಬಿಡಬೇಕಾದರೆ ತಂಡದ ಎಲ್ಲ ಸದಸ್ಯರು ಪೆವಿಲಿಯನ್‌ ಸೇರಿಕೊಂಡಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಬೇಕಾಗಿದೆ ಎಂದವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಟೆಸ್ಟ್‌ನಲ್ಲಿ ನಂ.1 ಪಟ್ಟಕ್ಕೆ ಭಾರತ ಅರ್ಹ ತಂಡ ಎಂದು ನಿವೃತ್ತಿಯ ಬಳಿಕ ವೀಕ್ಷಕಾ ವಿವರಣೆಗಾರನ ವೃತ್ತಿಯಲ್ಲಿ ತೊಡಗಿಕೊಂಡಿರುವ ಅಕ್ರಮ್ ನುಡಿದರು.

ಭಾರತ ತಂಡ ನಾಯಕತ್ವ, ಸ್ಥಿರತೆ, ನಡತೆ ಮತ್ತು ಆತ್ಮವಿಶ್ವಾಸಗಳಂತ ಪ್ರಮುಖ ಘಟಕಗಳನ್ನು ಹೊಂದಿಗೆ. ಹಾಗಾಗಿ ಅಗ್ರಪಟ್ಟಕ್ಕೆ ಅರ್ಹ ಪಟ್ಟ. ಇದನ್ನು ಡರ್ಬನ್‌ನಲ್ಲಿ ಸಾಬೀತುಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ಪಿಚ್‌ನಲ್ಲಿ ಭಾರತ ವೈಫಲ್ಯ ಕಾಣಲಿದೆ ಎಂದು ನಾನು ಸೇರಿದಂತೆ ಕ್ರಿಕೆಟ್‌ನ ಹಲವಾರು ತಜ್ಞರು ವಿಶ್ಲೇಷಿಸಿದ್ದರು. ಆದರೆ ಎಲ್ಲರ ಲೆಕ್ಕಾಚಾರವು ತಪ್ಪು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ನುಡಿದರು.

ಇದೇ ಹೊತ್ತಿಗೆ ಭಾರತದ ವೇಗಿ ಜಹೀರ್ ಖಾನ್ ಅವರನ್ನು ಅಕ್ರಂ ಮುಕ್ತಕಂಠವಾಗಿ ಶ್ಲಾಘಿಸಿದರು. ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದ ಜಹೀರ್ ಡರ್ಬನ್‌ನಲ್ಲಿ ಭಾರತ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು.

ಜಹೀರ್ ಸಾನಿಧ್ಯವು ತಂಡದ ನೈತಿಕ ಬಲವನ್ನು ಹೆಚ್ಚಿಸಿದೆ. ನನ್ನ ಪ್ರಕಾರ ಪ್ರಸ್ತುತ ಜಹೀರ್ ಅವರೇ ವಿಶ್ವದ ಶ್ರೇಷ್ಠ ಬೌಲರ್. ಅವರೊಬ್ಬ ವಿಕೆಟ್ ಟೇಕರ್ ಬೌಲರ್. ಕೌಂಟಿ ಕ್ರಿಕೆಟ್ ಅವರ ಪ್ರದರ್ಶನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಹೊಸ ಚೆಂಡನ್ನು ಅತ್ಯುತ್ತಮವಾಗಿ ಬಾಲ್ ಮಾಡಬಲ್ಲ ಅವರು ಹಳೆಯ ಚೆಂಡನ್ನು ರಿವರ್ಸ್ ಮಾಡಬಲ್ಲರು ಎಂದು ವಿಶ್ವದ ಅತಿ ಶ್ರೇಷ್ಠ ಸ್ವಿಂಗ್ ಬೌಲರ್ ಎನಿಸಿಕೊಂಡಿದ್ದ ಅಕ್ರಂ ಹೊಗಳಿದರು.

ಕಲಾತ್ಮಕ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಬಗ್ಗೆಯೂ ಅಕ್ರಂ ಪ್ರಶಂಸೆಯ ಮಾತುಗಳನ್ನಾಡಿದರು. ಕಠಿಣ ಪರಿಸ್ಥಿತಿಯಲ್ಲಿಯೇ ಲಕ್ಷ್ಮಣ್ ಶ್ರೇಷ್ಠ ನಿರ್ವಹಣೆ ನೀಡುತ್ತಾರೆ ಎಂಬುದನ್ನು ಅವರ ದಾಖಲೆಗಳೇ ಸಾರುತ್ತಿವೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಷ್ಠ ನಿರ್ವಹಣೆ ನೀಡುವುದು ಮಾತ್ರವಲ್ಲ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜತೆ ನಿರ್ಣಾಯಕ ಜತೆಯಾಟದಲ್ಲಿ ಭಾಗಿಯಾಗುತ್ತಾರೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.

Share this Story:

Follow Webdunia kannada