Select Your Language

Notifications

webdunia
webdunia
webdunia
webdunia

ಕುಡಿದ ಮತ್ತಿನಲ್ಲಿದ್ದ ಅಂಪೈರ್ ಡೇವಿಸ್; ದ. ಆಫ್ರಿಕಾ ದೂರು

ಕುಡಿದ ಮತ್ತಿನಲ್ಲಿದ್ದ ಅಂಪೈರ್ ಡೇವಿಸ್; ದ. ಆಫ್ರಿಕಾ ದೂರು
ಡರ್ಬನ್ , ಶುಕ್ರವಾರ, 31 ಡಿಸೆಂಬರ್ 2010 (10:40 IST)
ಭಾರತ-ದಕ್ಷಿಣ ಆಫ್ರಿಕಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಂಪಾಯರುಗಳ ಕಳಪೆ ನಿರ್ಣಯಕ್ಕೆ ಕುಡಿತವೇ ಕಾರಣ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಆರೋಪಿಸಿದ್ದಾರೆ. ಡರ್ಬನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ಅಂಪಾಯರ್ ಸ್ಟೀವ್ ಡೇವಿಸ್ ಮದ್ಯದ ಅಮಲಿನಲ್ಲಿದ್ದರು ಎಂದು ಆರೋಪಿಸಿರುವ ದಕ್ಷಿಣ ಆಫ್ರಿಕಾ ಆಟಗಾರರು ಈ ಸಂಬಂಧ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ದೂರು ನೀಡಲು ಮುಂದಾಗಿದ್ದಾರೆ.

ಮೂಲಗಳ ಪ್ರಕಾರ ಡರ್ಬನ್ ಟೆಸ್ಟ್ ವೇಳೆ ಉಭಯ ಆಟಗಾರರು, ಅಂಪೈರುಗಳು ಮತ್ತು ಅಧಿಕಾರಿಗಳು ತಂಗಿದ್ದ ಉಮ್ಹಲಂಗ ಹೋಟೆಲ್‌ನಲ್ಲಿ ಆಸ್ಟ್ರೇಲಿಯಾದ 58 ವರ್ಷದ ಸ್ಟೀವ್ ಡೇವಿಸ್ ಪಾನಮತ್ತರಾಗಿ ಕಂಡುಬಂದಿದ್ದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಳೆದೊಂದು ವಾರದಿಂದ ಇದೇ ಹೋಟೆಲ್‌ನಲ್ಲಿ ಅಂಪೈರ್ ಡೇವಿಸ್ ಆಗಾಗ ಕುಡಿಯುತ್ತಿರುವುದನ್ನು ಎಲ್ಲರೂ ಗಮನಿಸಿದ್ದಾರೆ. ಅಲ್ಲದೇ ಸೆಂಚುರಿಯನ್‌ನಲ್ಲಿ ನಡೆದ ಮೊದಲ ಪಂದ್ಯದ ವೇಳೆಯೂ ಡೇವಿಸ್ ಸ್ಯಾಂಡ್‌ಟಾನ್ ಹೋಟೆಲ್‌ನಲ್ಲಿ ಮದ್ಯಪಾನ ಮಾಡಿದ್ದರು ಎಂದು ದಕ್ಷಿಣ ಆಫ್ರಿಕಾ ಆಟಗಾರರು ಆರೋಪಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ವ್ಯವಸ್ಥಾಪಕ ಮೊಹಮ್ಮದ್ ಮೂಸಜೆ ಈ ವಿಷಯ ಬಹಿರಂಗಪಡಿಸಿದ್ದು, ಇದೀಗ ಐಸಿಸಿ ರೆಫರಿ ಪ್ಯಾನೆಲ್‌ಗೆ ದೂರು ನೀಡಲು ಸಿದ್ಧರಾಗಿದ್ದಾರೆ. ಅಲ್ಲದೆ ಅಂಪಾಯರ್ ಡೇವಿಸ್ ವಿರುದ್ದ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಡೇವಿಸ್ ಜತೆ ಕಾರ್ಯ ನಿರ್ವಹಿಸಿದ್ದ ಮತ್ತೊಬ್ಬ ಅಂಪಾಯರ್ ಪಾಕಿಸ್ತಾನದ ಅಸಾದ್ ರೌಫ್ ಕೂಡಾ ಅಬ್ರಹಾಂ ಡಿವಿಲಿಯರ್ಸ್ ಮತ್ತು ಮಾರ್ಕ್ ಬೌಚರ್ ಅವರ ಎಲ್‌ಬಿಡಬ್ಲ್ಯು ಸೇರಿದಂತೆ ಕೆಲವು ತಪ್ಪು ನಿರ್ಣಯಗಳನ್ನು ನೀಡಿದ್ದರು.

ಡರ್ಬನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಡೇಲ್ ಸ್ಟೈನ್ ಮಾಡಿದ ಎಲ್‌ಬಿ ತೀರ್ಪನ್ನು ಅಂಪೈರ್ ತಿರಸ್ಕರಿಸಿದ್ದರು. ಆದರೆ ಟಿವಿ. ರಿಪ್ಲೇನಲ್ಲಿ ಅಂಪೈರ್ ನಿರ್ಣಯ ತಪ್ಪಾಗಿತ್ತು ಎಂಬುದು ಸ್ಪಷ್ಟವಾಗಿತ್ತು. ಇದರ ಪೂರ್ಣ ಲಾಭ ಪಡೆದಿದ್ದ ಭಾರತೀಯ ಬ್ಯಾಟ್ಸ್‌ಮನ್ ಜಹೀರ್ ಖಾನ್, ಕಲಾತ್ಮಕ ವಿವಿಎಸ್ ಲಕ್ಷ್ಮಣ್ ಜತೆ ಸೇರಿ ಎಂಟನೇ ವಿಕೆಟ್‌ಗೆ ಮಹತ್ವದ 70 ರನ್ ಜತೆಯಾಟದಲ್ಲಿ ಭಾಗಿಯಾಗಿದ್ದರು. ಭಾರತ 148ಕ್ಕೆ ಏಳು ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಈ ತಪ್ಪು ನಿರ್ಣಯ ಹೊರಬಂದಿತ್ತು.

ನಂತರ 303 ರನ್ನುಗಳ ಸವಾಲಿನ ಮೊತ್ತವನ್ನು ಆತಿಥೇಯ ತಂಡ ಬೆನ್ನತ್ತುವ ಸಂದರ್ಭದಲ್ಲಿಯೂ ಜಹೀರ್ ದಾಳಿಯಲ್ಲಿ ಬೌಚರ್ ತಪ್ಪು ನಿರ್ಣಯಕ್ಕೆ ಬಲಿಯಾದರು. ಇವೆಲ್ಲವೂ ದಕ್ಷಿಣ ಆಫ್ರಿಕಾ ಆಟಗಾರರನ್ನು ಕೆರಳಿಸುವಂತೆ ಮಾಡಿದೆ.

ಸರಣಿ ಆರಂಭಕ್ಕೂ ಮುನ್ನ ವಿವಾದಾತ್ಮಕ ಅಂಪಾಯರ್ ತೀರ್ಪು ಪರಿಶೀಲನಾ ಪದ್ಧತಿ (ಯುಡಿಆರ್ಎಸ್) ಆಳವಡಿಕೆ ಬಗ್ಗೆ ಭಾರಿ ಬೇಡಿಕೆ ಮುಂದಿಟ್ಟಿದ್ದ ಗ್ರೇಮ್ ಸ್ಮಿತ್ ಮನವಿಗೆ ಈ ತಪ್ಪು ತೀರ್ಪುಗಳು ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಆದರೆ ಶೇಕಡಾ 100ರಷ್ಟು ಗ್ಯಾರಂಟಿ ನೀಡದ ಹೊರತು ಈ ಪದ್ಧತಿ ಬಳಕೆಗೆ ಸಮ್ಮತಿ ಸೂಚಿಸುವುದಿಲ್ಲವೆಂದು ಭಾರತ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದರು. ಇದರಂತೆ ಈ ನಿಯಮ ಬಳಸಲು ಬಿಸಿಸಿಐ ವಿರೋಧ ವ್ಯಕ್ತಪಡಿಸಿತ್ತು.

Share this Story:

Follow Webdunia kannada