Select Your Language

Notifications

webdunia
webdunia
webdunia
webdunia

ಐಪಿಎಲ್‌ನಲ್ಲಿ 700ರ ಗಡಿ ದಾಟಿದ 2ನೇ ದಾಂಡಿಗ ಗಂಭೀರ್

ಐಪಿಎಲ್‌ನಲ್ಲಿ 700ರ ಗಡಿ ದಾಟಿದ 2ನೇ ದಾಂಡಿಗ ಗಂಭೀರ್
ಜೋಹಾನ್ಸ್‌ಬರ್ಗ್ , ಸೋಮವಾರ, 11 ಮೇ 2009 (15:17 IST)
ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಇಲ್ಲಿ ನಡೆದ ಐಪಿಎಲ್ 39ನೇ ಪಂದ್ಯದಲ್ಲಿ ದಾಖಲಾದ ಕೆಲವು ಪ್ರಮುಖ ಅಂಕಿ-ಅಂಶಗಳಿವು. ಈ ಪಂದ್ಯವನ್ನು ವೀರೇಂದ್ರ ಸೆಹ್ವಾಗ್ ಪಡೆ 7 ವಿಕೆಟುಗಳಿಂದ ಗೆದ್ದುಕೊಂಡಿತ್ತು.

- ಅಮಿತ್ ಮಿಶ್ರಾ 14ಕ್ಕೆ 3 ವಿಕೆಟ್ ಪಡೆಯುವ ಮೂಲಕ ಐಪಿಎಲ್ ಎರಡನೇ ಆವೃತ್ತಿಯಲ್ಲಿ ತನ್ನ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಐಪಿಎಲ್‌ನಲ್ಲಿ ಅವರ ಒಟ್ಟಾರೆ ಪ್ರದರ್ಶನದ ಸಾಲಿನಲ್ಲಿ ಇದು ಎರಡನೇ ಸ್ಥಾನ ಪಡೆಯುತ್ತದೆ. ಕಳೆದ ವರ್ಷ ನವದೆಹಲಿಯಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 17ಕ್ಕೆ 5 ವಿಕೆಟ್ ಪಡೆದದ್ದು ಅವರು ಇದುವರೆಗಿನ ಶ್ರೇಷ್ಠ ಸಾಧನೆ.

- ಐಪಿಎಲ್‌ನಲ್ಲಿ ಅಮಿತ್ ಮಿಶ್ರಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದು ಇದು ಎರಡನೇ ಬಾರಿ.

- 24 ಎಸೆತಗಳಿಂದ 18 ರನ್ ದಾಖಲಿಸುವ ಮೂಲಕ ಗೌತಮ್ ಗಂಭೀರ್ 700 ರನ್ ಗಡಿ ತಲುಪಿದ್ದಾರೆ. ಆರು ಅರ್ಧಶತಕಗಳೊಂದಿಗೆ 35.5ರ ಸರಾಸರಿಯಲ್ಲಿ 711 ರನ್ ಮಾಡಿರುವ ಗಂಭೀರ್, 700 ರನ್ ದಾಟಿದ ಐಪಿಎಲ್‌ನ ಎರಡನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಮೊದಲನೇ ಸ್ಥಾನ ಸುರೇಶ್ ರೈನಾರದ್ದು. ಅವರು 730 ರನ್ ದಾಖಲಿಸಿದ್ದಾರೆ.

- ಅಜಿತ್ ಅಗರ್ಕರ್ ಈ ಪಂದ್ಯದ ಮೂಲಕ ಐಪಿಎಲ್‌ನಲ್ಲಿ ತನ್ನ ಅತ್ಯುತ್ತಮ ಇನ್ನಿಂಗ್ಸ್ (39) ದಾಖಲಿಸಿದರು.

- ಅಬ್ರಹಾಂ ಡೇ ವಿಲ್ಲರ್ಸ್ ಐಪಿಎಲ್ ಎರಡನೇ ಆವೃತ್ತಿಯಲ್ಲಿ ಅತ್ಯುತ್ತಮ ಫೀಲ್ಡರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಈ ಪಂದ್ಯದ ಮೂಲಕ ಅವರು 10 ಕ್ಯಾಚುಗಳನ್ನು ಕೈಯೊಳಗೆ ಸೇರಿಸಿಕೊಂಡರು.

- ಎಂಟು ಪಂದ್ಯಗಳಿಂದ 16.14ರ ಸರಾಸರಿಯಲ್ಲಿ 14 ವಿಕೆಟ್ ಪಡೆದ ಆಶಿಶ್ ನೆಹ್ರಾ ಡೆಲ್ಲಿ ಡೇರ್‌ಡೆವಿಲ್ಸ್‌ನ ಅತ್ಯಂತ ಯಶಸ್ವೀ ಬೌಲರ್.

- ವಿಲ್ಲರ್ಸ್ 67.75ರ ಸರಾಸರಿಯಲ್ಲಿ 271 ರನ್ ಗಳಿಸುವ ಮೂಲಕ ಎರಡನೇ ಆವೃತ್ತಿ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಅತೀ ಹೆಚ್ಚು ರನ್ ಗಳಿಸಿದ ದಾಂಡಿಗನೆನಿಸಿಕೊಂಡಿದ್ದಾರೆ.

- ಐಪಿಎಲ್ ಎರಡನೇ ಆವೃತ್ತಿಯಲ್ಲಿ ಎಂಟು ಸೋಲುಗಳನ್ನು ಕಂಡ ಮೊದಲ ತಂಡ ಕೊಲ್ಕತ್ತಾ ನೈಟ್ ರೈಡರ್ಸ್.

- ಐಪಿಎಲ್ 2009ರಲ್ಲಿ ಸತತ ಮೂರು ಪಂದ್ಯಗಳನ್ನು ಎರಡು ಬಾರಿ ಗೆದ್ದುಕೊಂಡ ಖ್ಯಾತಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ್ದು. ಮೊದಲು ಏಪ್ರಿಲ್ 19ರಿಂದ 26ರೊಳಗೆ ವೀರೇಂದ್ರ ಸೆಹ್ವಾಗ್ ನಾಯಕತ್ವದಲ್ಲಿ ಹಾಗೂ ನಂತರ ಮೇ 5ರಿಂದ 10ರೊಳಗೆ ಗೌತಮ್ ಗಂಭೀರ್ ನೇತೃತ್ವದಲ್ಲಿ ತಲಾ ಸತತ ಮೂರು ಪಂದ್ಯಗಳನ್ನು ಡೆಲ್ಲಿ ಗೆದ್ದಿದೆ.

- ಬ್ರೆಂಡನ್ ಮೆಕಲಮ್ ನಾಯಕತ್ವದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಏಪ್ರಿಲ್ 27ರಿಂದ ಮೇ 10ರವರೆಗೆ ಸತತ ಆರು ಪಂದ್ಯಗಳನ್ನು ಕಳೆದುಕೊಂಡಿದೆ. ಮುಂದಿನ ಪಂದ್ಯವನ್ನೂ ಕೊಲ್ಕತ್ತಾ ಕಳೆದುಕೊಂಡರೆ ಡೆಕ್ಕನ್ ಚಾರ್ಜರ್ಸ್ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ. ಹೈದರಾಬಾದ್ ತಂಡವು 2008ರ ಐಪಿಎಲ್‌ನಲ್ಲಿ ಮೇ 9ರಿಂದ ಮೇ 27ರ ನಡುವೆ ಆಡಮ್‌ ಗಿಲ್‌ಕ್ರಿಸ್ಟ್ ನೇತೃತ್ವದಲ್ಲಿ ಸತತ ಏಳು ಸೋಲುಗಳನ್ನು ಕಂಡಿತ್ತು.

- ಏಳು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಒಟ್ಟಾರೆ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ 23 ಪಂದ್ಯಗಳಿಂದ 14 ಪಂದ್ಯಗಳನ್ನು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದುಕೊಂಡಂತಾಗಿದೆ.

- ಈ ಪಂದ್ಯದಲ್ಲಿ ಜಯಭೇರಿ ಬಾರಿಸುವ ಮೂಲಕ ಡೆಲ್ಲಿ ಡೇರ್‌ಡೆವಿಲ್ಸ್ ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಏಳು ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ದಾಖಲೆಗೆ ಪಾತ್ರವಾಗಿದೆ.

- ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ದಾಖಲಿಸಿದ 123/8 ಇದುವರೆಗಿನ ಅತೀ ಕಡಿಮೆ ಮೊತ್ತ. ಕಳೆದ ವರ್ಷ ಕೊಲ್ಕತ್ತಾವು ದೆಹಲಿ ವಿರುದ್ಧ 133/6 ದಾಖಲಿಸಿದ್ದು ಇದುವರೆಗಿನ ಅತೀ ಕಡಿಮೆ ಮೊತ್ತವೆಂದು ದಾಖಲಾಗಿತ್ತು.

Share this Story:

Follow Webdunia kannada