ಜಾನ್ ಬುಚನಾನ್‌ರ ಬಹುನಾಯಕತ್ವ ವಿವಾದದಿಂದ ದೂರವೇ ಉಳಿದುಕೊಂಡಿರುವ ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಂತಹ ಯಾವುದೇ ಪ್ರಯೋಗಗಳನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅವರೇನು ಮಾಡಲು ಬಯಸುತ್ತಿದ್ದಾರೋ ಮಾಡಲಿ ಬಿಡಿ ಎಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನುದ್ದೇಶಿಸಿ ಮಾತನಾಡಿದ ಸಚಿನ್, ಮುಂಬೈ ಇಂಡಿಯನ್ಸ್ ತಂಡದಲ್ಲಿ ನಮಗೇನು ಬೇಕೋ ಅದನ್ನು ಮಾಡುತ್ತೇವೆ ಎಂದು ಪತ್ರಕರ್ತರಿಗೆ ತಿಳಿಸಿದರು.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಬಹುನಾಯಕತ್ವ ಪ್ರಯೋಗವನ್ನು ಮಾಡಲು ಹೊರಟಿರುವ ಜಾನ್ ಬುಚನಾನ್ ಬಗ್ಗೆ ಈಗಾಗಲೇ ಹಲವು ಕ್ರಿಕೆಟ್ ಮಾಜಿಗಳು ಟೀಕೆ ವ್ಯಕ್ತಪಡಿಸಿದ್ದಾರೆ. ಆ ತಂಡದ ನಾಯಕನಾಗಿದ್ದ ಸೌರವ್ ಗಂಗೂಲಿಯವರಿಗೇ ಇದು ಅಸಮಾಧಾನ ತಂದಿತ್ತು. ನಂತರದ ದಿನಗಳಲ್ಲಿ ಸುನಿಲ್ ಗವಾಸ್ಕರ್ ಮತ್ತು ವೆಂಗಸರ್ಕಾರ್ ಕೂಡ ಬುಚನಾನ್ ನೀತಿಗಳನ್ನು ಟೀಕಿಸಿದ್ದರು. ಇದು ಕ್ರೀಡೆಯ ಅಣಕ, ಅಪಹಾಸ್ಯ ಮಾಡಲಾಗುತ್ತಿದೆ ಎಂದೂ ಹೀಗಳೆಯಲಾಗಿತ್ತು.
ಸಾಕಷ್ಟು ಟೀಕೆಗಳನ್ನೆದುರಿಸಿದ ಬುಚನಾನ್ ನಂತರ ಮತ್ತಷ್ಟು ವಿವರಣೆ ನೀಡುತ್ತಾ, "ಬಹುನಾಯಕತ್ವ ಎಂದರೆ ಹಲವು ರಣನೀತಿಗಳನ್ನು ಹೊಂದಿರುವುದು" ಎಂದಿದ್ದರು. ಈ ಬಗ್ಗೆ ಮಾತನಾಡಿದ ಸಚಿನ್, ಹಿರಿಯ ಆಟಗಾರರು ಯಾವತ್ತೂ ಸಲಹೆಗಳನ್ನು ನೀಡುತ್ತಿರುತ್ತಾರೆ ಎಂದು ಹೊಸತೇನಿಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
"ಇದು ಬಹುನಾಯಕತ್ವದ ರೀತಿಯಲ್ಲ. ಆದರೆ ಹಲವು ಕೌಶಲ್ಯಗಳನ್ನು ಹೊಂದಿರುವುದಾಗಿರುತ್ತದೆ. ತಂಡಕ್ಕೆ ಒಬ್ಬ ನಾಯಕನಿರುತ್ತಾನೆ ಎಂಬ ಮಾತ್ರಕ್ಕೆ ಎಲ್ಲಾ ಕೆಲಸಗಳನ್ನು ಏಕಾಂಗಿಯಾಗಿ ಮಾಡಬೇಕು ಎಂದರ್ಥವಲ್ಲ. ಇತರ ಆಟಗಾರರು ಕೂಡ ಆತನಿಗೆ ಸಲಹೆಗಳನ್ನು ನೀಡಬೇಕು" ಎಂದು ಜೇಪಿ ಸಿಮೆಂಟ್ಸ್ ಕಂಪನಿಯ ರಾಯಭಾರಿಯಾಗಿ ಆಯ್ಕೆಯಾದ ಸಚಿನ್ ತಿಳಿಸಿದರು.
"ಇಂತಹ ಹಲವು ಅವಕಾಶಗಳನ್ನು ಹೊಂದಿರುವುದು ನಾಯಕನಾದವನಿಗೆ ಉತ್ತಮವಾಗಿರುತ್ತದೆ. ಸಾಮಾನ್ಯವಾಗಿ ನಾವು ಮಾಡುತ್ತಿರುವುದೂ ಇದನ್ನೇ" ಎಂದ ಅವರು ಬುಚನಾನ್ ಬಗ್ಗೆ ಯಾವುದೇ ನೇರ ಹೇಳಿಕೆಗಳನ್ನು ನೀಡಲು ಮುಂದಾಗಲಿಲ್ಲ.
"ಇದು ಕೇವಲ ಅಭಿಪ್ರಾಯ ಮಾತ್ರ. ಒಂದು ನಾಣ್ಯದಲ್ಲಿ ಯಾವತ್ತೂ ಎರಡು ಮುಖಗಳಿರುತ್ತವೆ. ನೀವು ಎರಡನ್ನೂ ನೋಡಬಹುದು. ಇದು ಉತ್ತಮ" ಎಂದಷ್ಟೇ ಹೇಳಿ ವಿವಾದಗಳಿಂದ ಅವರು ದೂರವೇ ಉಳಿದಿದ್ದಾರೆ.