Select Your Language

Notifications

webdunia
webdunia
webdunia
webdunia

ಏ.13ರಂದು ಸಚಿನ್ ಪುತ್ಥಳಿ ಮುಂಬೈಯಲ್ಲಿ ಅನಾವರಣ

ಏ.13ರಂದು ಸಚಿನ್ ಪುತ್ಥಳಿ ಮುಂಬೈಯಲ್ಲಿ ಅನಾವರಣ
ಮುಂಬೈ , ಗುರುವಾರ, 9 ಏಪ್ರಿಲ್ 2009 (15:22 IST)
ಲಂಡನ್‌ನ ಮಾದಮೇ ತುಸೌಡ್ಸ್ ಮ್ಯೂಸಿಯಂನಲ್ಲಿಡಬೇಕಾಗಿರುವ ಬ್ಯಾಟಿಂಗ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೇಣದ ಪ್ರತಿಮೆಯನ್ನು ಸ್ವತಃ ಅವರೇ ಏಪ್ರಿಲ್‌ 13ರಂದು ಮುಂಬೈಯ ಹೊಟೇಲ್‌ನಲ್ಲಿ ಅನಾವರಣಗೊಳಿಸಲಿದ್ದಾರೆ.

ಜಗದ್ವಿಖ್ಯಾತ ಲಂಡನ್‌ನ ಮಾದಮೇ ತುಸೌಡ್ಸ್ ಮ್ಯೂಸಿಯಂನಲ್ಲಿ ಸ್ಥಾಪಿತವಾಗಲಿರುವ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಸಚಿನ್ ತೆಂಡೂಲ್ಕರ್‌ರವರಿಗೆ ಸಲ್ಲುತ್ತದೆ. ಅಲ್ಲದೆ ತುಸೌಡ್ಸ್ ಮ್ಯೂಸಿಯಂನ ಪ್ರತಿಮೆಯೊಂದು ವಿದೇಶದಲ್ಲಿ ಅನಾವರಣಗೊಳ್ಳುತ್ತಿರುವುದು ಕೂಡ ಇದೇ ಮೊದಲು.

ಸುಮಾರು 7000 ಕಿಲೋ ಮೀಟರ್ ದೂರದಿಂದ ಕ್ರಿಕೆಟ್ ದಂತಕಥೆಯ ತವರು ಮುಂಬೈಗೆ ಪ್ರತಿಮೆಯನ್ನು ಸಾಗಿಸುವ ನಿರ್ಧಾರಕ್ಕೆ ಬರಲಾಗಿದೆ. ಸಚಿನ್ ತೆಂಡೂಲ್ಕರ್‌ರ ಈ ಪ್ರತಿಮೆಯನ್ನು ಕೇವಲ ಮೂರು ತಿಂಗಳುಗಳೊಳಗೆ ತಯಾರಿಸಲಾಗಿತ್ತು. ಇದೀಗ ಸಿದ್ಧವಾಗಿರುವ ಪುತ್ಥಳಿಗೆ ಸ್ವತಃ ಸಚಿನ್ ಉಡುಗೊರೆಯಾಗಿ ನೀಡಿರುವ ಬಿಳಿ ಬಣ್ಣದ ಕ್ರಿಕೆಟ್ ಜಾಕೀಟನ್ನು ತೊಡಿಸಲಾಗುತ್ತದೆ.

ವಿಶ್ವ ಕ್ರಿಕೆಟ್‌ನಲ್ಲೇ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಜಗತ್‌ಪ್ರಸಿದ್ಧ ಮೇಣದ ವಸ್ತು ಸಂಗ್ರಹಾಲಯದಲ್ಲಿ ಸ್ಥಾಪಿತವಾಗುವ ಮೊದಲ ಭಾರತೀಯ ಕ್ರೀಡಾಪಟುವಾಗಿದ್ದು, ಇತರ ಕ್ರಿಕೆಟ್ ದಂತಕಥೆಗಳಾದ ಬ್ರಿಯಾನ್ ಲಾರಾ ಮತ್ತು ಶೇನ್ ವಾರ್ನೆಯವರನ್ನು ಸೇರಿಕೊಳ್ಳಲಿದ್ದಾರೆ ಎಂದು ಮ್ಯೂಸಿಯಂ ವಕ್ತಾರರು ತಿಳಿಸಿದ್ದಾರೆ.

ಏಪ್ರಿಲ್ 13ರಂದು ಮುಂಬೈಯಲ್ಲಿನ ಬಾಂದ್ರಾದ ಹೊಟೇಲ್ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ತನ್ನದೇ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನಟಿ ಐಶ್ವರ್ಯಾ ರೈ, ಅಮಿತಾಭ್ ಬಚ್ಚನ್, ಶಾರೂಖ್ ಖಾನ್, ಸಲ್ಮಾನ್ ಖಾನ್ ಲಂಡನ್ ಮ್ಯೂಸಿಯಂನಲ್ಲಿ ಇದುವರೆಗೆ ಜಾಗ ಪಡೆದಿದ್ದವರು. ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್‌‌ ಪುತ್ತಳಿ ರಚನೆ ಬಗ್ಗೆ ಕೇಳಿಕೊಳ್ಳಲಾಗಿತ್ತಾದರೂ ಅವರು ನಿರಾಕರಿಸಿದ್ದರು. ಮ್ಯೂಸಿಯಂ ಇತಿಹಾಸದಲ್ಲೇ ಪುತ್ತಳಿ ನಿರಾಕರಿಸಿದ ಮೊದಲ ನಟ ಎಂಬ ಖ್ಯಾತಿ ಆಮೀರ್‌ರದ್ದು.

ಕ್ರಿಕೆಟಿಗರಾದ ವಿವಿಯನ್ ರಿಚರ್ಡ್ಸ್, ಬ್ರಿಯಾನ್ ಲಾರಾ, ಶೇನ್ ವಾರ್ನೆ ಫುಟ್ಬಾಲ್ ಖ್ಯಾತರಾದ ಪೀಲೆ, ರೊನಾಲ್ಡಿನೋ, ಡೇವಿಡ್ ಬೆಕಮ್, ಝಿನೇದಿನ್ ಝಿದಾನೆ ಟೆನಿಸ್ ತಾರೆಗಳಾದ ಆಂಡಿ ಮುರ್ರೆ, ಮಾರ್ಟಿನಾ ನರ್ವಾಟಿಲೋವಾ, ಮಾರ್ಟಿನಾ ಹಿಂಗಿಸ್, ಸ್ಟೆಫಿ ಗ್ರಾಫ್, ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಆಲಿ, ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಮುಂತಾದ ಕ್ರೀಡಾಪಟುಗಳ ಪ್ರತಿಮೆಗಳು ಈ ಮ್ಯೂಸಿಯಂನಲ್ಲಿವೆ.

Share this Story:

Follow Webdunia kannada