Select Your Language

Notifications

webdunia
webdunia
webdunia
webdunia

ಟೀಮ್ ಇಂಡಿಯಾಕ್ಕೆ ಅಭೂತಪೂರ್ವ ಸ್ವಾಗತ

ಟೀಮ್ ಇಂಡಿಯಾಕ್ಕೆ ಅಭೂತಪೂರ್ವ ಸ್ವಾಗತ
ನವದೆಹಲಿ/ಮುಂಬೈ , ಗುರುವಾರ, 9 ಏಪ್ರಿಲ್ 2009 (12:18 IST)
ನ್ಯೂಜಿಲೆಂಡ್ ವಿರುದ್ಧದ ಐತಿಹಾಸಿಕ ಸರಣಿಯನ್ನು ಗೆದ್ದುಕೊಂಡು ತವರಿಗೆ ಮರಳಿರುವ ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಇಶಾಂತ್ ಶರ್ಮಾ, ಹರಭಜನ್ ಸಿಂಗ್, ಜಹೀರ್ ಖಾನ್, ಮುನಾಫ್ ಪಟೇಲ್, ಅಮಿತ್ ಮಿಶ್ರಾ ಮತ್ತು ಧವಳ್ ಕುಲಕರ್ಣಿಯವರಿಗೆ ಅಭೂತಪೂರ್ವ ಸ್ವಾಗತವನ್ನು ನೀಡಲಾಯಿತು.

ಧೋನಿ, ಗಂಭೀರ್, ಸೆಹ್ವಾಗ್, ಇಶಾಂತ್ ಮತ್ತು ಸ್ಪಿನ್ನರ್ ಮಿಸ್ರಾರವರು ಗುರುವಾರ ಮುಂಜಾನೆ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತಾಯ್ನೆಲಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಆಟಗಾರರನ್ನು ಎದುರ್ಗೊಳ್ಳಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.

ಸೆಹ್ವಾಗ್‌ರನ್ನು ಅವರ ಪತ್ನಿ ಆರತಿ ಹಾಗೂ ಇಶಾಂತ್‌ರನ್ನು ಅವರ ತಂದೆ ವಿಜಯ್ ಶರ್ಮಾ ವಿಮಾನ ನಿಲ್ದಾಣದಲ್ಲಿ ಎದುರ್ಗೊಂಡಿದ್ದಾರೆ. ಭದ್ರತಾ ಸಿಬಂದಿಗಳಿಂದ ಸುತ್ತುವರಿದಿದ್ದ ಕ್ರಿಕೆಟಿಗರು ಪತ್ರಕರ್ತರೊಂದಿಗೆ ಮಾತಿಗಿಳಿಯದೆ ಮೌನದಿಂದಲೇ ವಿಮಾನ ನಿಲ್ದಾಣದಿಂದ ಹೊರಟು ಹೋದರು.

ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಹರಭಜನ್ ಸಿಂಗ್, ಮುನಾಫ್ ಪಟೇಲ್ ಮತ್ತು ಧವಳ್ ಕುಲಕರ್ಣಿಯವರು ಮುಂಬೈಯ ಸಹರಾ ವಿಮಾನ ನಿಲ್ದಾಣದ ಮೂಲಕ ಭಾರತ ಪ್ರವೇಶಿಸಿದ್ದಾರೆ.

ತವರು ನೆಲವನ್ನು ಸ್ಪರ್ಶಿಸುತ್ತಿದ್ದಂತೆ ದೇಶ ಬಾಂಧವರಿಗೆ ಕೃತಜ್ಞತೆ ಅರ್ಪಿಸಿದ ಸಚಿನ್, "ಈ ಗೆಲುವಿನಿಂದ ಎಲ್ಲರೂ ಸಂತಸಗೊಂಡಿದ್ದಾರೆ. ಇಡೀ ರಾಷ್ಟ್ರ ನಮ್ಮನ್ನು ಬೆಂಬಲಿಸಿದೆ. 41 ವರ್ಷಗಳ ನಂತರ ಭಾರತದ ವಿಜಯಯಾತ್ರೆಯಿದು" ಎಂದು ಬಣ್ಣಿಸಿದರು.

ಮುಂಬೈಯಲ್ಲಿ ಕ್ರಿಕೆಟಿಗರ ಜತೆ ತಂಡದ ಸಹಾಯಕ ಸಿಬಂದಿ ಕೂಡ ತವರಿಗೆ ಮರಳಿದರು. ಉತ್ತರ ಭಾರತದ ಕ್ರಿಕೆಟ್ ಆಟಗಾರರು ದೆಹಲಿ ವಿಮಾನ ನಿಲ್ದಾಣದ ಮೂಲಕ, ದಕ್ಷಿಣ ಭಾಗದವರು ಸಂಬಂಧಪಟ್ಟ ವಿಮಾನ ನಿಲ್ದಾಣಗಳ ಮೂಲಕ ಭಾರತ ಪ್ರವೇಶಿಸಿದ್ದಾರೆ. ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ತಮಗೆ ಹತ್ತಿರವೆನಿಸುವ ವಿಮಾನ ನಿಲ್ದಾಣಗಳ ಮೂಲಕ ಹೊರಟಿದ್ದಾರೆಂದು ಕ್ರಿಕೆಟ್ ಮಂಡಳಿ ಮೂಲಗಳು ತಿಳಿಸಿವೆ.

ಮಂಗಳವಾರ ವೆಲ್ಲಿಂಗ್ಟನ್‌ನಲ್ಲಿ ಡ್ರಾಗೊಂಡ ಮೂರನೇ ಟೆಸ್ಟ್‌ ಮೂಲಕ ಭಾರತ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿತ್ತು. ಮೊದಲ ಟೆಸ್ಟನ್ನು ಹ್ಯಾಮಿಲ್ಟನ್‌ನಲ್ಲಿ 10 ವಿಕೆಟ್‌ಗಳಿಂದ ಗೆದ್ದುಕೊಂಡಿದ್ದರೆ, ಎರಡನೇ ಟೆಸ್ಟ್ ನೇಪಿಯರ್‌ನಲ್ಲಿ ಡ್ರಾಗೊಂಡಿತ್ತು.

1967-68ರಲ್ಲಿ ಮನ್ಸೂರ್ ಆಲಿ ಖಾನ್ ಪಟೌಡಿ ನಾಯಕರಾಗಿದ್ದಾಗ ಭಾರತ ಕೊನೆಯ ಬಾರಿ ನ್ಯೂಜಿಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. ಮತ್ತೆ ಅದನ್ನು 41 ವರ್ಷಗಳ ಬಳಿಕ ಧೋನಿ ಪಡೆ ಸಾಧಿಸಿರುವುದರಿಂದ ಈ ಸರಣಿ ಗೆಲುವು ಐತಿಹಾಸಿಕ ಎಂದು ಬಣ್ಣಿಸಲ್ಪಟ್ಟಿದೆ.

ಇದಕ್ಕೂ ಮೊದಲು ಭಾರತ ಏಕದಿನ ಸರಣಿಯನ್ನು 3-1ರಿಂದ ಗೆದ್ದುಕೊಂಡಿತ್ತು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ನ್ಯೂಜಿಲೆಂಡ್ ನೆಲದಲ್ಲಿ ಏಕದಿನ ಸರಣಿ ಗೆದ್ದಿರುವುದು ಇದೇ ಮೊದಲು ಎಂಬುದು ಗಮನಾರ್ಹ.

Share this Story:

Follow Webdunia kannada