Select Your Language

Notifications

webdunia
webdunia
webdunia
webdunia

ಹ್ಯಾಡ್ಲೀ ಹೇಳಿಕೆ ಆಪ್ಯಾಯಕರ ಅಚ್ಚರಿ ತಂದಿದೆ: ಸಚಿನ್

ಹ್ಯಾಡ್ಲೀ ಹೇಳಿಕೆ ಆಪ್ಯಾಯಕರ ಅಚ್ಚರಿ ತಂದಿದೆ: ಸಚಿನ್
ವೆಲ್ಲಿಂಗ್ಟನ್ , ಸೋಮವಾರ, 6 ಏಪ್ರಿಲ್ 2009 (16:04 IST)
ಸಚಿನ್ ತೆಂಡೂಲ್ಕರ್‌ರನ್ನು ಸಾರ್ವಕಾಲಿಕ ಶ್ರೇಷ್ಠ ದಾಂಡಿಗ ಎಂದಿದ್ದ ಖ್ಯಾತ ಮಾಜಿ ಆಲ್-ರೌಂಡರ್ ರಿಚರ್ಡ್ ಹ್ಯಾಡ್ಲೀ ಬಗ್ಗೆ ಪ್ರತಿಕ್ರಿಯಿಸಿರುವ ಮಾಸ್ಟರ್ ಬ್ಲಾಸ್ಟರ್, ಇಂತಹ ಪ್ರಶ್ನಾತೀತ ಶ್ರೇಷ್ಠ ಆಟಗಾರನಿಂದ ದೊರೆತಿರುವ ಈ ಮನ್ನಣೆಯು ನನಗೆ ಆಪ್ಯಾಯಕರ ಅಚ್ಚರಿಯನ್ನೊದಗಿಸಿತು ಎಂದಿದ್ದಾರೆ.

ಕ್ರಿಕೆಟ್‌ನ ದೀರ್ಘ ಮತ್ತು ಅಲ್ಪಾವಧಿಯ ಎರಡೂ ಪ್ರಕಾರಗಳಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಭಾರತೀಯ ಆಟಗಾರ ಸಚಿನ್ ತೆಂಡೂಲ್ಕರ್‌ರವರು ಡಾನ್ ಬ್ರಾಡ್ಮನ್‌ಗಿಂತಲೂ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಹ್ಯಾಡ್ಲೀ ಇತ್ತೀಚೆಗೆ ಬಣ್ಣಿಸಿದ್ದರು.

ತಾನು ಇದುವರೆಗೆ ಆಡಿರುವವರಲ್ಲಿ ಶ್ರೇಷ್ಠ ಆಲ್-ರೌಂಡರ್‌ಗಳಲ್ಲೊಬ್ಬರಾದ ಹ್ಯಾಡ್ಲೀಯವರಿಂದ ಇಂತಹ ಮಾತುಗಳು ಬಂದಿರುವುದು ಒಂದು ಅಪರೂಪದ ಗೌರವ ಎಂದು ಸಚಿನ್ ತಿಳಿಸಿದರು.

"ಈ ಹಿಂದೆಂದೂ ಹೀಗೆ ಯಾರೂ ಹೇಳಿರಲಿಲ್ಲ. ನಿಜಕ್ಕೂ ನಾನು ಸಂತೋಷಗೊಂಡಿದ್ದೇನೆ ಮತ್ತು ತೃಪ್ತನಾಗಿದ್ದೇನೆ" ಎಂದು ಮಾಸ್ಟರ್ ಬ್ಲಾಸ್ಟರ್ ಅತೀವ ಸಂತಸವನ್ನು ಹೊರಗೆಡವಿದ್ದಾರೆ.

"ಪ್ರಶ್ನಾತೀತ ಸಾಧನೆ ಮಾಡಿದ ಶ್ರೇಷ್ಠ ವ್ಯಕ್ತಿತ್ವ ಹೊಂದಿರುವವರಿಂದ ಇಂತಹ ಹೇಳಿಕೆಗಳು ಬಂದಾಗ ಅದು ನಿಜಕ್ಕೂ ಅಚ್ಚರಿ ಮತ್ತು ಆಪ್ಯಾಯಮಾನವಾಗುತ್ತವೆ. 1989ರಲ್ಲಿ ನಾನು ನನ್ನ ಮೊದಲ ನ್ಯೂಜಿಲೆಂಡ್ ಪ್ರವಾಸದ ಸಂದರ್ಭದಲ್ಲಿ ಅವರ ಜತೆ ಆಡಲು ಅವಕಾಶ ಸಿಕ್ಕಿರುವುದು ನಿಜಕ್ಕೂ ಸಂತಸ ನೀಡಿದೆ" ಎಂದು ವೆಬ್‌ಸೈಟ್‌ವೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ತೆಂಡೂಲ್ಕರ್ ಹೇಳಿದ್ದಾರೆ.

ಕಿವೀಸ್‌ನ ಸ್ಟಾರ್ ಆಟಗಾರನ ಜತೆಗಿನ ನೆನಪಿನ ಬುತ್ತಿಯನ್ನು ಬಿಚ್ಚಿರುವ ಸಚಿನ್, "ಅದನ್ನು ನಾನಿನ್ನೂ ನೆನಪಿನಲ್ಲಿಟ್ಟುಕೊಂಡಿದ್ದೇನೆ. ನೇಪಿಯರ್ ಟೆಸ್ಟ್ ನಂತರದ ಆ ಸಂದರ್ಭವನ್ನು ನಾನು ಮರೆತಿಲ್ಲ. ಅವರು 1973ರಲ್ಲಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಎಂಬುದು ನನಗೆ ಅವರು ಟೀವಿ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡುತ್ತಿದ್ದಾಗ ತಿಳಿದು ಬಂತು. ನಾನು ಅದೇ ವರ್ಷ ಹುಟ್ಟಿದ್ದೆ. ಅಂದರೆ ಹ್ಯಾಡ್ಲೀಯವರು ಟೆಸ್ಟ್‌ಗೆ ಪದಾರ್ಪಣೆ ಮಾಡುವಾಗ ನಾನು ಆಗಷ್ಟೇ ಹುಟ್ಟಿದ್ದೆ. ನಂತರ ಅವರ ಜತೆಯೇ ಆಡುವ ಅವಕಾಶ ನನಗೊದಗಿ ಬಂತು" ಎಂದು ವಿವರಿಸಿದರು.

ಪ್ರವಾಸದಲ್ಲಿ ಈಗಾಗಲೇ ಏಕದಿನ ಸರಣಿಯನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾ, ಬಹುತೇಕ ಟೆಸ್ಟ್ ಸರಣಿಯನ್ನೂ ಗೆಲ್ಲುವ ಹಂತದಲ್ಲಿದೆ. ಜತೆಗೆ ಸರ್ ರಿಚರ್ಡ್ ಹ್ಯಾಡ್ಲೀಯವರಿಂದ ಇಂತಹ ಅದ್ಭುತ ಮೆಚ್ಚುಗೆಯ ಮಾತುಗಳು ಬಂದಿವೆ. ಹಾಗಾಗಿ ನನಗಿದು ಸ್ಮರಣಾರ್ಹ ಪ್ರವಾಸ ಎಂದೂ ಸಚಿನ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ವಿದೇಶಗಳಲ್ಲಿ ಸತತ ಜಯ ದಾಖಲಿಸುತ್ತಿರುವ ಮಹೇಂದ್ರ ಸಿಂಗ್ ಧೋನಿ ಪಡೆಯನ್ನು 'ವಿಶೇಷ' ಎನ್ನಲು ಯಾವುದೇ ಸಂಶಯಗಳು ಬೇಕಾಗಿಲ್ಲ ಎಂದಿರುವ ಅವರು, ನಾವು ಹಿಂದೆ ತವರಿನಲ್ಲಿ ಮಾತ್ರ ಪಂದ್ಯಗಳನ್ನು ಜಯಿಸುತ್ತಿದ್ದೆವು. ಆದರೆ ಆಸ್ಟ್ರೇಲಿಯಾ, ವೆಸ್ಟ್‌ಇಂಡೀಸ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹೀಗೆ ಪ್ರತೀ ರಾಷ್ಟ್ರಗಳಲ್ಲೂ ಜಯ ದಾಖಲಿಸಿದ್ದೇವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮತ್ತೂ ಮಾತು ಮುಂದುವರಿಸಿದ ಅವರ, ನಾವು ಕಳೆದ 41 ವರ್ಷಗಳಿಂದ ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಸರಣಿ ಜಯಿಸಿರಲಿಲ್ಲ. ಇಲ್ಲಿಗೆ ಆಗಮಿಸುವ ಮೊದಲು ಇಡೀ ತಂಡಕ್ಕೆ ಈ ಗುರಿಯ ಬಗ್ಗೆ ಸ್ಪಷ್ಟತೆಯಿತ್ತು. ವಿಜಯಮಾಲೆಯೊಂದಿಗೆ ತವರಿಗೆ ಮರಳಲು ನಮಗೆ ಸಂತಸವಾಗುತ್ತಿದೆ ಎಂದಿದ್ದಾರೆ.

Share this Story:

Follow Webdunia kannada