Select Your Language

Notifications

webdunia
webdunia
webdunia
webdunia

ನಾಯಕತ್ವ ಜವಾಬ್ದಾರಿ; ಮತ್ತೆ ಎಡವಿದ ಸಚಿನ್

ನಾಯಕತ್ವ ಜವಾಬ್ದಾರಿ; ಮತ್ತೆ ಎಡವಿದ ಸಚಿನ್
- ನಾಗರಾಜ ಬೇಳ

ಬಹಳ ಹಿಂದಿನಿಂದಲೇ ಇಂತಹದೊಂದು ವಾದ ಕೇಳಿಬರುತ್ತಿದೆ. ಹಲವು ಬಾರಿ ಇದು ಕ್ರಿಕೆಟ್ ತಜ್ಞರಲ್ಲಿ ಬಲವಾದ ಚರ್ಚೆಗೆ ಕೂಡಾ ಗ್ರಾಸವಾಗಿದೆ. ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒಬ್ಬ ಬ್ಯಾಟ್ಸ್‌ಮನ್ ಆಗಿ ಶ್ರೇಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನಾಯಕರಾಗಿ ಎಡವುತ್ತಿದ್ದಾರೆಯೇ?

ಹೌದು, ಇಂಡಿಯನ್ ಪ್ರೀಮಿಯರ್ ಲೀಗ್‌ ನಾಲ್ಕನೇ ಆವೃತ್ತಿಯಲ್ಲಿ ಇದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಬಾರಿಯ ಪ್ರಶಸ್ತಿ ಸುತ್ತಿನಲ್ಲಿ ಎಡವಿದ್ದ ಮುಂಬೈ ಈ ಬಾರಿಯೂ ನಿರ್ಣಾಯಕ ಹಂತದಲ್ಲಿ ಸೋಲು ಅನುಭವಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

WD


ಸಚಿನ್ ಅವರ ಕೆಲವೊಂದು ನಿರ್ಧಾರಗಳು ಅವರ ನಾಯಕತ್ವ ವೈಫಲ್ಯಕ್ಕೆ ಪುಷ್ಠಿ ನೀಡುತ್ತಿವೆ. ಕಳೆದ ವರ್ಷ ಚೆನ್ನೈ ವಿರುದ್ಧದ ಫೈನಲ್ ಪಂದ್ಯದಲ್ಲಿ ಕಿರೋನ್ ಪೊಲಾರ್ಡ್‌ರನ್ನು 17ನೇ ಓವರ್‌ನಲ್ಲಿ ಬ್ಯಾಟಿಂಗ್‌ಗಿಳಿಸುವ ಮೂಲಕ ಸಚಿನ್ ತಪ್ಪು ನಿರ್ಣಯ ಕೈಗೊಂಡಿದ್ದರು. ಈ ಬಾರಿಯೂ ಚೆನ್ನೈನಂತಹ ಬ್ಯಾಟಿಂಗ್ ಪಿಚ್‌ನಲ್ಲಿ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದರೂ ಮೊದಲು ಫೀಲ್ಡಿಂಗ್ ಮಾಡಿರುವುದು ಮೂರ್ಖತನದ ನಿರ್ಧಾರವಾಗಿತ್ತು.

ಇದನ್ನೇ ಬೆಂಗಳೂರು ನಾಯಕ ಡ್ಯಾನಿಯಲ್ ವಿಟ್ಟೋರಿ ಕೂಡಾ ತಿಳಿಸಿದ್ದರು. ನಾವು ಮೊದಲು ಬ್ಯಾಟಿಂಗ್ ಮಾಡುವುದನ್ನು ಬಯಸಿದ್ದೆವು. ಸಚಿನ್ ಮೊದಲು ಫೀಲ್ಡಿಂಗ್ ತೆಗೆದುಕೊಳ್ಳುವ ಮೂಲಕ ನಮ್ಮ ಕೆಲಸವು ಸುಲಭವಾಗಿತ್ತು ಎಂದು ಆರ್‌ಸಿಬಿ ನಾಯಕ ನುಡಿದಿದ್ದರು.

ಆದರೆ ಸಚಿನ್ ಮಾಡಿರುವ ದೊಡ್ಡ ಪ್ರಮಾದವೆಂದರೆ ಇನ್ನಿಂಗ್ಸ್‌ನ ಮೊದಲ ಓವರನ್ನು ಅನನುಭವಿ ಅಬು ನೆಚಿಮ್‌ ಅವರಿಗೆ ನೀಡಿರುವುದು! ಕ್ರಿಸ್ ಗೇಲ್‌ರಂತಹ ದಿಗ್ಗಜ ದಾಂಡಿಗ ಅದು ಕೂಡಾ ಇನ್ ಫಾರ್ಮ್‌ನಲ್ಲಿರುವಾಗ ನೆಚಿಮ್‌ರಂತಹ ದುರ್ಬಲ ಬೌಲರ್‌ಗೆ ಪ್ರಥಮ ಓವರ್ ನೀಡಿರುವುದು ಎಷ್ಟು ಸರಿ ಎಂಬುದೀಗ ಟೀಕೆಗೆ ಕಾರಣವಾಗಿದೆ. ನೆಚಿಮ್ ಅವರ ಮೊದಲ ಓವರ್‌ನಲ್ಲೇ 27 ರನ್ ಹರಿದು ಬಂದಿದ್ದವು.

ತಂಡದಲ್ಲಿ ಮುನಾಫ್ ಪಟೇಲ್, ಲಿಸಿತ್ ಮಾಲಿಂಗ ಅವರಂತಹ ಘಟಾನುಘಟಿ ಬೌಲರುಗಳಿರುವಾಗ ಸಚಿನ್ ತೆಗೆದುಕೊಂಡ ನಿರ್ಧಾರವು ತಪ್ಪೆನಿಸಿತ್ತು. ಹಾಗೇನಿದ್ದರೂ ಬೌಲಿಂಗ್ ಬದಲಾವಣೆ ಮಾಡಲು ಬಯಸಿದ್ದರೆ ಸ್ಪಿನ್ ಮಾಂತ್ರಿಕ ಹರಭಜನ್ ಸಿಂಗ್ ಅವರಿಗೆ ಓವರ್ ನೀಡಬಹುದಾಗಿತ್ತು. ಇದೇ ಟೂರ್ನಿಯಲ್ಲಿ ಆಡಂ ಗಿಲ್‌ಕ್ರಿಸ್ಟ್‌ರಂಹತ ಬ್ಯಾಟ್ಸ್‌ಮನ್‌ಗಳನ್ನು ಮೊದಲ ಓವರ್‌ನಲ್ಲೇ ಔಟ್ ಮಾಡುವ ಮೂಲಕ ಭಜ್ಜಿ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದರು.

ಮತ್ತೊಂದೆಡೆ ಚೆನ್ನೈ ಕೂಲ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಫೈನಲ್‌ನಲ್ಲಿ ಆರ್. ಅಶ್ವಿನ್‌ರನ್ನು ಕಣಕ್ಕಿಳಿಸುವ ಮೂಲಕ ಗೇಲ್ ಓಟಕ್ಕೆ ಮೊದಲ ಓವರ್‌ನಲ್ಲೇ ಬ್ರೇಕ್ ಹಾಕಿದ್ದರು. ಇದರೊಂದಿಗೆ ಆರ್‌ಸಿಬಿ ಕನಸು ಕೂಡಾ ಅಸ್ತಮಿಸಿತ್ತು.

ಅದೇ ರೀತಿ ಚೇಸಿಂಗ್ ವೇಳೆ ಹರಭಜನ್ ಸಿಂಗ್ ಅವರಿಗೆ ಮೂರನೇ ಕ್ರಮಾಂಕಕ್ಕೆ ಭಡ್ತಿ ನೀಡಿರುವುದು ಕೂಡಾ ಸಚಿನ್ ಮಾಡಿರುವ ಮತ್ತೊಂದು ತಪ್ಪು ನಿರ್ಧಾರವಾಗಿತ್ತು. ರನ್ ಗತಿ ಏರಿಸುವ ಅಗತ್ಯವಿದ್ದ ಸಂದರ್ಭದಲ್ಲಿ ಭಜ್ಜಿ ಅವರಿಗೆ ಭಡ್ತಿ ನೀಡಿರುವುದು ಸೋಲಿಗೆ ಮತ್ತೊಂದು ಕಾರಣವಾಗಿತ್ತು.

ಒಟ್ಟಾರೆಯಾಗಿ ಸಚಿನ್ ಈ ಹಿಂದೆ ಭಾರತದ ಕಪ್ತಾನಗಿರಿ ವಹಿಸಿದ್ದ ಸಂದರ್ಭದಲ್ಲಿಯೂ ತಂಡ ವೈಫಲ್ಯವನ್ನು ಕಂಡಿತ್ತು. ಇದು ಸಚಿನ್ ಅವರ ವೈಯಕ್ತಿಕ ಪ್ರದರ್ಶನ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರಿತ್ತು. ಇಷ್ಟೆಲ್ಲ ಅಪವಾದಗಳಿದ್ದರೂ ಕಳೆದೆರಡು ಆವೃತ್ತಿಗಳಲ್ಲಿ ಮುಂಬೈ ತಂಡವನ್ನು ಚಾಂಪಿಯನ್ಸ್ ಲೀಗ್‌ಗೆ ತೇರ್ಗಡೆ ಮಾಡಿದ ಗೌರವ ಲಿಟ್ಸ್ ಮಾಸ್ಟರ್ ಅವರಿಗೆ ಸಲ್ಲುತ್ತದೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada